https://www.opticworld.net/
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಚಲಿತ ಭಾರತ: ಸತ್ಯ ಮಿಥ್ಯ ವಿಚಾರದ ಕುರಿತು ರಾಷ್ಟ್ರೀಯ ವಿಚಾರಸಂಕಿರಣ ಫೆ.25ರಂದು ನಡೆಯಲಿದೆ ಎಂದು ವಿದ್ಯಾಕೇಂದ್ರದ ಸಂಸ್ಥಾಪಕ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಚಲಿತ ಭಾರತದಲ್ಲಿ ನಡೆಯುವ ವಿದ್ಯಮಾನಗಳ ಸತ್ಯಾಂಶದ ಜ್ಞಾನವನ್ನು ಮೂಡಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ವಿಚಾರ ಸಂಕಿರಣದ ಅಗತ್ಯತೆ, ಅನಿವಾರ್ಯತೆ ಬಗ್ಗೆ ಪ್ರಸ್ತಾವನೆಗೈಯಲಿದ್ದಾರೆ. ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೆ. ಉದ್ಘಾಟಿಸಲಿದ್ದಾರೆ. ಇತಿಹಾಸ ಸಂಶೋಧಕ ಡಾ. ವಿಕ್ರಮ್ ಸಂಪತ್ ಕಲಿತ ಪಾಠಗಳು-ಅರಿಯದ ನೋಟಗಳು ನ್ಯಾಯವಾದಿಗಳಾದ ಬೆಂಗಳೂರಿನ ಕ್ಷಮಾ ನರಗುಂದ ನರೇಟಿವ್ (ಕಥನ) ಹಾಗೆಂದರೇನು ವಿಷಯದ ಕುರಿತು, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ಇಸ್ರೇಲ್ ನಾವರಿಯದ ಸತ್ಯಗಳು ಕುರಿತು ವಿಚಾರ ಮಂಡಿಸುವರು. ಮಂಗಳೂರು ವಿವಿ ಸೇರಿ ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ನೋಂದಣಿ ಮಾಡಿಸಿದ್ದು, ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಗಳಿರುತ್ತವೆ. ಕಳೆದ 12 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಈ ಬಾರಿ ಇನ್ನಷ್ಟು ವ್ಯಾಪಕತೆಯನ್ನು ಪಡೆದು ಸುಮಾರು 750ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಇಲ್ಲಿಯ ವರೆಗೆ ನಡೆದ ವಿಚಾರಸಂಕಿರಣಗಳಲ್ಲಿ ರಮೇಶ್ ಜಿಗಜಿಣಗಿ, ಡಿ..ಎಚ್ ಶಂಕರಮೂರ್ತಿ, ಸಿ. ಟಿ ರವಿ, ಮಾಲವಿಕಾ ಅವಿನಾಶ್, ಬಿ. ಎಲ್ ಸಂತೋಷ್, ಅಜಿತ್ ಹನಮಕ್ಕನವರ್, ಚಕ್ರವರ್ತಿ ಸೂಲಿಬೆಲೆ, ತೇಜಸ್ವಿನಿ ಅನಂತಕುಮಾರ್ ಸಹಿತ ಪ್ರಮಖರು ಭಾಗವಹಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ, ಉಪಪ್ರಾಂಶುಪಾಲರಾದ ಯತಿರಾಜ್ ಪೆರಾಜೆ ಮತ್ತು ಸುಕನ್ಯಾ ಉಪಸ್ಥಿತರಿದ್ದರು.