https://www.opticworld.net/
ಬಂಟ್ವಾಳದ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಜೋಡುಮಾರ್ಗದ ಅಭಿರುಚಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಭಾರತ ಮಾರುತಿ ಎಂಬ ಏಕವ್ಯಕ್ತಿ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಅನಂತ ಹೆಗಡೆ ದಂತಳಿಗೆ ಭಾಗವತಿಕೆಯಲ್ಲಿ ಮಹಾಭಾರತದ ಭೀಮಸೇನನ ಪಾತ್ರದ ಮೂಲಕ ದಿವಾಕರ ಹೆಗಡೆಯವರು ಇಡೀ ಮಹಾಭಾರತದ ಕಥಾಸಾರವನ್ನು ಕಟ್ಟಿಕೊಟ್ಟರು. ಕಲಾವಿದ ಎ.ಪಿ.ಪಾಠಕ್ ಮದ್ದಳೆಯಲ್ಲಿ ಸಹಕರಿಸಿದರು. ಕಲಾವಿದರ ಪರಿಚಯವನ್ನು ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಬಾರ ಮಾಡಿದರು. ಭೀಮಸೇನನ ಪಾತ್ರದ ಮಾತಿನಲ್ಲಿ ಇಡೀ ಸನ್ನಿವೇಶವನ್ನು ಕಟ್ಟಿಕೊಡುವ ಏಕವ್ಯಕ್ತಿ ತಾಳಮದ್ದಳೆಯೊಂದು ವಿಶಿಷ್ಟ ಪ್ರಯೋಗವಾಗಿದ್ದು, ಬಿ.ಸಿ.ರೋಡಿನಲ್ಲಿ ಇಂಥ ಕಾರ್ಯಕ್ರಮಗಳು ವಿರಳ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಪ್ರಧಾನ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ವಿ.ಸು.ಭಟ್, ಅಭಿರುಚಿಯ ಸುಂದರ ರಾವ್, ಹಿರಿಯ ರಂಗಕರ್ಮಿ ಮೂರ್ತಿ ದೇರಾಜೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.