https://www.opticworld.net/
ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ವಾಗತ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದನಾ ಸಭೆಯನ್ನು ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಕನ್ನಡ ನಾಡು, ನುಡಿ ಬೆಳವಣಿಗೆಗೆ ಎಲ್ಲರೂ ಒಟ್ಟಾಗಿ ಕೈಜೋಡಿಸುವಂತೆ ಮನವಿ ಮಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿ, ಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹತ್ತೂರಿನಿಂದಲೂ ಸಾಹಿತ್ಯಾಭಿಮಾನಿಗಳು ಆಗಮಿಸಿದ್ದು, ಇದಕ್ಕಾಗಿ ಶ್ರಮಿಸಿದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಹಾಗೂ ಊರವರ ಸಹಕಾರ ಅನನ್ಯವೆಂದರು.
ಪ್ರಧಾನ ಸಂಯೋಜಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ರಸಾದ್ ರೈ ತಿರುವಾಜೆ ಮಾತನಾಡಿ ಸಮ್ಮೇಳನಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಸಮ್ಮೇಳನದ ಯಶಸ್ವಿಗಾಗಿ ದುಡಿದ ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಮಹಮ್ಮದ್ ಪಿ, ಕಸಾಪ ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಿಮಾನ್ ಹಾಗೂ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿಟ್ಲ ಅವರನ್ನು ಗುರುತಿಸಿ, ಗೌರವಿಸಲಾಯಿತು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಹರೀಶ್ ಮಾಂಬಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸವಿತಾ ಮತ್ತು ಸ್ವಾಗತ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಅಬ್ಬಾಸ್ ಆಲಿ, ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಜಯಪ್ರಕಾಶ್ ರೈ ಮೇರಾವು, ಹಮೀದ್ ಡಿ, ತಾರಾನಾಥ್ ಕೈರಂಗಳ ಸಮ್ಮೇಳನದ ಕುರಿತಾಗಿ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸ್ವಾಗತ ಸಮಿತಿ ಕೋಶಾಧಿಕಾರಿ ಸುಲೈಮಾನ್ ಜಿ ಸುರಿಬೈಲು ಅವರು ಲೆಕ್ಕಪತ್ರ ಮಂಡಿಸಿದರು. ಸಾಹಿತ್ಯ ಸಮ್ಮೇಳನದ ಸವಿನೆನಪಿಗೆ ಕೊಳ್ನಾಡು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶಾಶ್ವತ ಯೋಜನೆ ಯನ್ನು ರೂಪಿಸಲಾಗುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಗಣೇಶ್ ಪ್ರಭು, ಉಮ್ಮರ್ ಸಾಲೆತ್ತೂರು, ಮ್ಯಾಕ್ಸಿಮ್ ಫೆರ್ನಾಂಡಿಸ್, ಮಧು ಶಂಕರ್, ಉಪಸ್ಥಿತರಿದ್ದು, ಸ್ವಾಗತ ಸಮಿತಿಯಲ್ಲಿ ದುಡಿದವರು ಹಾಜರಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ನಿಶ್ಚಲ್ ಕುಮಾರ್ ಜಿ ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಂಚಿ ಕಾರ್ಯಕ್ರಮ ನಿರ್ವಹಿಸಿದರು.