ಜಿಲ್ಲಾ ಸುದ್ದಿ

ಬಂಟ್ವಾಳದಲ್ಲಿ ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಜಿಲ್ಲಾ ಮಟ್ಟದ ಜನತಾ ದರ್ಶನ – 121 ಅರ್ಜಿ ಸ್ವೀಕಾರ

ಜಾಹೀರಾತು

 

https://www.opticworld.net/

ಬಂಟ್ವಾಳ: ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ  ಬುಧವಾರ ನಡೆಯಿತು.

ಬಂದ ಒಟ್ಟು ಅರ್ಜಿಗಳು 121.ಬಂಟ್ವಾಳ ತಾಲೂಕಿಗೆ ಸಂಬಂಧಿಸಿದ ಅರ್ಜಿಗಳದ್ದೇ ಸಿಂಹಪಾಲು. ಬಂಟ್ವಾಳ ತಾಲೂಕಿನ 103, ಕಡಬದ 1, ಬೆಳ್ತಂಗಡಿಯ 6, ಮಂಗಳೂರಿನ 6, ಸುಳ್ಯದ 5 ಅರ್ಜಿಗಳು ಬಂದಿದ್ದವು.ಇವುಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 35, ತಾಪಂಗೆ ಸಂಬಂಧಿಸಿ 23 ಅರ್ಜಿಗಳು ಇದ್ದವು. ದಕ್ಷಿಣ ಕನ್ನಡ ದ ವಿವಿಧ ಇಲಾಖೆಗಳ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ವಿದ್ಯುತ್ ಸಬ್ ಸ್ಟೇಶನ್ ನಿರ್ಮಾಣ, ಟೋಲ್ ಗೇಟ್ ಸಮಸ್ಯೆ, ಭೂಮಿಯ ವ್ಯಾಜ್ಯ, ಹಕ್ಕುಪತ್ರ, ರಸ್ತೆ ನಿರ್ಮಾಣ, ಸ್ತಳೀಯ ತಕರಾರು, ಸೇತುವೆ, ಆಸ್ಪತ್ರೆ, ಶಾಲೆಗಳಲ್ಲಿ ಶಿಕ್ಷಕರು ಇಲ್ಲದೇ ಇರುವುದೇ ಮೊದಲಾದ ವಿಷಯಗಳೂ ಸೇರಿದಂತೆ ವೈವಿಧ್ಯಮಯ ಅಹವಾಲುಗಳು ಬಂದವು. ಎಲ್ಲವನ್ನೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಏನು ಮಾಡಬೇಕು ಎಂಬುದರ ಕುರಿತು ಸಚಿವರು ಸೂಚನೆ ನೀಡಿದರು.

ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಸಚಿವರು, ಶಾಸಕರು

ಸರಕಾರ ಜನರಿಗೋಸ್ಕರ ಇದೆ ಎಂಬುದನ್ನು ಮರೀಬೇಡಿ. ಅಧಿಕಾರಿಗಳು ದರ್ಪದಿಂದ ವರ್ತಿಸಬೇಡಿ, ಜನಸ್ನೇಹಿಯಾಗಿ. ನಿಮ್ಮ ಕಚೇರಿಗೆ ನಡ್ಕೊಂಡು ಬರುವ ಸಾಮಾನ್ಯ ಜನರು, ಬಡವರಿಗೆ ಆದ್ಯತೆ ನೀಡಿ, ಬಳಿಕ ಕಾರಿನಲ್ಲಿ ಬರುವ ಶ್ರೀಮಂತರನ್ನು ನೋಡಿಕೊಳ್ಳಿ, ಜನರ ಬಾಯಲ್ಲಿ ಒಳ್ಳೆಯ ಹೆಸರು ಬರುವಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಆ ಬದ್ಧತೆ ಅಧಿಕಾರಿಗಳಿಗೆ ಇರಬೇಕು ಎಂದು ಉದ್ಘಾಟನಾ ಸಮಾರಂಭದಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರೆ, ಬಳಿಕ ಮಾತನಾಡಿದ ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಅದನ್ನು ಅನುಮೋದಿಸಿ ತಮಗಾದ ಅನುಭವವನ್ನು ವಿವರಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರೂ ಮಾತನಾಡುವ ವೇಳೆ ಜನಪ್ರತಿನಿಧಿಗಳು ಸಾರ್ವಜನಿಕ ಪ್ರತಿನಿಧಿಗಳು ಎಂಬುದು ಅಧಿಕಾರಿಗಳ ಗಮನದಲ್ಲಿರಲಿ ಎಂದು ಹೇಳಿದರು.

ಬಳಿಕ ಸಾರ್ವಜನಿಕ ಅಹವಾಲು ಸ್ವೀಕರಿಸಲಾಯಿತು. ಈ ಸಂದರ್ಭ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ಎಸ್ಪಿ ಯತೀಶ್ ಕುಮಾರ್, ಜಿಪಂ ಸಿಇಒ ಆನಂದ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಬಂಟ್ವಾಳ ಪುರಸಭಾ ಅಧ್ಯಕ್ಷ ಬಿ.ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ  ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷೆ ಜಯಂತಿ ಪೂಜಾರಿ, ಪುರಸಭಾ ಉಪಾಧ್ಯಕ್ಷ ಮೊನೀಶ್ ಆಲಿ, ಸಹಾಯಕ ಕಮೀಷನರ್ ಹರ್ಷವರ್ಧನ್, ತಹಸೀಲ್ದಾರ್ ಡಿ.ಅರ್ಚನಾ ಭಟ್, ತಾಪಂ ಇಒ ಸಚಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.   ಈ ಸಂದರ್ಭ ೧೭೭ ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ಹಲವು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಶಿಕ್ಷಕ ಜಯರಾಮ ಕಾರ್ಯಕ್ರಮ ನಿರ್ವಹಿಸಿದರು

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.