ಮಂಗಳೂರು – ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಸಂಬಂಧಪಟ್ಟಂತೆ ಅವೈಜ್ಞಾನಿಕ ಮತ್ತು ಅಸಮರ್ಪಕವಾದ ಟೋಲ್ ಸಂಗ್ರಹ ಕೇಂದ್ರ ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಹಾಗಾಗಿ ಟೋಲ್ ತೆರವು ಮಾಡಬೇಕು. ಸಮರ್ಪಕವಾದ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ತಿಳಿಸಿದ್ದಾರೆ.
ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ೧೦ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡು ಮಂಗಳೂರು ರಸ್ತೆ ಅಗಲೀಕರಣವಾಗಿದ್ದು ಆ ಬಳಿಕ ಯಾವುದೇ ರೀತಿಯ ನಿರ್ವಹಣೆಯಾಗುತ್ತಿಲ್ಲ. ಮಳೆಗಾಲದಲ್ಲಿ ತುಂಬೆ ತಿರುವು ಬಳಿ ಗುಡ್ಡದಿಂದ ಬರುವ ನೀರು ರಾಷ್ಟ್ರೀಯ ಹೆದ್ದಾರಿಯಲ್ಲೇ ಶೇಖರಣೆಯಾಗುತ್ತದೆ. ದಾರಿದೀಪದ ವ್ಯವಸ್ಥೆ ಇಲ್ಲ. ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಅವ್ಯವಸ್ಥೆಯಿಂದ ಕೂಡಿದೆ. ಕೈಕಂಬ ಜಂಕ್ಷನ್‌ನಿಂದ ಬ್ರಹ್ಮರಕೂಟ್ಲು ಟೋಲ್‌ಗೇಟ್ ತನಕ ಶುಕ್ರವಾರ ಸಂಜೆ 3ಗಂಟೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮತ್ತು ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೊನಿಷ್ ಅಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಬೇ ವ್ಯವಸ್ಥೆ ಇಲ್ಲ, ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಬಳಿ ಜಾಗದ ವ್ಯವಸ್ಥೆ ಇಲ್ಲ. ಟೋಲ್‌ನ ಸುಂಕ ವಸೂಲಿ ಮಾಡುವ ಗುತ್ತಿಗೆಯನ್ನು ಶ್ರೀಮಂತರು ಮಾಡುತ್ತಾರೆ. ನಿರಂತರವಾಗಿ ಮೂರು ವರ್ಷಕ್ಕೊಮ್ಮೆ ರಿನೀವಲ್ ಆಗುತ್ತದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್, ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಉಪಸ್ಥಿತರಿದ್ದರು.