ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಿತಿಮೀರಿದ ಫ್ಲೆಕ್ಸ್ ಹಾವಳಿ ಹಾಗೂ ಫುಟ್ ಪಾತ್ ಅತಿಕ್ರಮಣ ಮಾಡಿ ಅನಧಿಕೃತ ರಚನೆಗಳನ್ನು ಹಾಕಿಕೊಂಡು ವಹಿವಾಟು ಮಾಡುವುದರ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ಮಾಡಲು ಅಧ್ಯಕ್ಷ ಬಿ.ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬುಧವಾರ ನಡೆದ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಸದಸ್ಯ ಹರಿಪ್ರಸಾದ್, ಫ್ಲೆಕ್ಸ್ ಹಾಗೂ ಬ್ಯಾನರ್ ಕಟ್ಟಲು ಸ್ಪಷ್ಟ ನಿಯಮಾವಳಿಗಳನ್ನು ಸಭೆಗೆ ತಿಳಿಸಬೇಕು, ಯಾವ ಮಾನದಂಡವನ್ನು ಅನುಸರಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆಹಿರಿಯ ಸದಸ್ಯ ಎ.ಗೋವಿಂದ ಪ್ರಭು ದನಿಗೂಡಿಸಿದರು.
ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಮಾತನಾಡಿ, ಬಟ್ಟೆಯಲ್ಲಿ ರಚಿಸಲಾದ ಬ್ಯಾನರ್ ಗೆ ಮಾತ್ರ ಅವಕಾಶವಿದೆ. ಉಳಿದಂತೆ ಫ್ಲೆಕ್ಸ್, ಬ್ಯಾನರ್ ಕುರಿತು ಸ್ಪಷ್ಟ ಮಾರ್ಗಸೂಚಿಯನ್ನು ಅದನ್ನು ತಯಾರಿಸುವವರಿಗೆ ನೀಡಲು ಮಾರ್ಗದರ್ಶನ ಕಾರ್ಯಕ್ರಮವನ್ನು ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸುಗಮವಾಗುವುದಕ್ಕೆ ಅಡಚಣೆ ಉಂಟಾಗುವ ಎಲ್ಲ ಫ್ಲೆಕ್ಸ್ ಮತ್ತು ಬ್ಯಾನರ್ ಗಳು ಹಾಗೂ ರಸ್ತೆ, ಬೀದಿ ಬದಿ ಫುಟ್ ಪಾತ್ ಗಳಲ್ಲಿ ಮಾಡು ಹಾಕಿ ಅಥವಾ ಅನಧಿಕೃತ ರಚನೆಗಳನ್ನು ಮಾಡಿಕೊಂಡು ವ್ಯಾಪಾರ, ವಹಿವಾಟು ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಫೆಬ್ರವರಿ 1ರಿಂದಲೇ ಗರುಡ ಕಾರ್ಯಾಚರಣೆ ಮೂಲಕ ಇದನ್ನು ಆರಂಭಿಸಲಾಗುತ್ತದೆ, ಸಾರ್ವಜನಿಕರು ಹಾಗೂ ಪುರಸಭಾ ಸದಸ್ಯರು ಇದಕ್ಕೆ ಸಹಕಾರ ನೀಡಬೇಕು ಎಂದರು
ಕುಡಿಯುವ ನೀರಿನ ಪೈಪ್ ಲೈನ್ ಸಂಬಂಧಿಸಿ ಹಿಂದೆ ವಿಶೇಷ ಸಭೆ ನಡೆಸಿ ಸುದೀರ್ಘ ಮಾತುಕತೆ ನಡೆಸಿದ್ದರೂ ಯಾವುದೇ ಅನುಷ್ಠಾನವಾಗಿಲ್ಲ ಎಂದು ಸದಸ್ಯರು ಪಕ್ಷಬೇಧ ಮರೆತು ದೂರಿದರು. ಕೊಟ್ರಮಣಗಂಡಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಿ ವರ್ಷಗಳೇ ಕಳೆದರೂ ಇನ್ನೂ ಅಲ್ಲಿಗೆ ಬಸ್ ಬರುತ್ತಿಲ್ಲ, ಅದನ್ನುಬಳಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ದೇವದಾಸ ಶೆಟ್ಟಿ ಬರೆದ ಪತ್ರಕ್ಕೆ ಸ್ಪಂದಿಸಿದ ಪುರಸಭಾಧ್ಯಕ್ಷ ವಾಸು ಪೂಜಾರಿ ಪೊಲೀಸ್ ಸಹಕಾರದಿಂದ ಅತಿ ಶೀಘ್ರದಲ್ಲಿ ಬಸ್ಸನ್ನು ಅಲ್ಲಿ ನಿಲ್ಲಿಸಲಾಗುವುದು ಎಂದರು. ವಿವಿಧ ವಿಷಯಗಳ ಕುರಿತು ನಡೆದ ಚರ್ಚೆಯಲ್ಲಿ ಸದಸ್ಯರಾದ ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಜನಾರ್ದನ ಚಂಡ್ತಿಮಾರ್, ಝೀನತ್ ಫಿರೋಜ್, ಮಹಮ್ಮದ್ ನಂದರಬೆಟ್ಟು, ಸಿದ್ದೀಕ್ ಗುಡ್ಡೆಯಂಗಡಿ, ಲುಕ್ಮಾನ್ ಬಂಟ್ವಾಳ, ವಿದ್ಯಾವತಿ ಪ್ರಮೋದ್ ಕುಮಾರ್, ಇದ್ರೀಸ್ ಪಿ.ಜೆ ಮತ್ತಿತರರು ಮಾತನಾಡಿದರು. ಉಪಾಧ್ಯಕ್ಷ ಮೊನೀಶ್ ಆಲಿ ವೇದಿಕೆಯಲ್ಲಿದ್ದರು.