ಕೋಮಾಲಿ
ಕೋಮಾಲಿ
ಪದೆಂಜಿಮಾರ್
ಇಲ್ಲಿ ಮಕ್ಕಳ ಕೊರತೆ ಇಲ್ಲ, ಸುಮಾರು 22 ಮಂದಿ ಪ್ರತಿ ದಿನ ಆಗಮಿಸುತ್ತಾರೆ. ರಸ್ತೆ ಬದಿಯೇ ಅಂಗನವಾಡಿ ಕೇಂದ್ರವಿದೆ. ಕಟ್ಟಡ ಮಾತ್ರ ಹೊರನೋಟಕ್ಕಷ್ಟೇ ಎದ್ದು ಕಾಣುತ್ತದೆ, ಒಳಗೆ ಕಾಲಿಟ್ಟರೆ ನಿಜದರ್ಶನವಾಗುತ್ತದೆ. ಸಜೀಪಮೂಡ ಗ್ರಾಮದ ಕೋಮಾಲಿ ಎಂಬಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜೋರಾಗಿ ಮಳೆ ಬಂದರೆ, ಗಾಳಿಯ ಹೊಡೆತ ಇಡೀ ಕಟ್ಟಡಕ್ಕೆ ತಟ್ಟುವುದಷ್ಟೇ ಅಲ್ಲ, ಒಳಗೂ ನುಗ್ಗುತ್ತದೆ. ಮಳೆ ಬರುವಾಗ ಬಾಗಿಲು ಹಾಕಿದರೆ ಆಯಿತು ಎಂದರೆ, ಮಳೆಯ ಗಾಳಿಯ ಹೊಡೆತ ಇದೆಲ್ಲವನ್ನೂ ಮೀರಿಸುತ್ತದೆ ಎನ್ನುತ್ತಾರೆ ಇಲ್ಲಿನ ಪೋಷಕರು.
ಬಂಟ್ವಾಳ ತಾಲೂಕಿನ ಇತರ ಕೆಲವು ಅಂಗನವಾಡಿ ಕೇಂದ್ರಗಳಂತೆ ಇಲ್ಲಿರುವ ಕಟ್ಟಡಕ್ಕೂ ವಯಸ್ಸಾಗಿದೆ. ಹೆಂಚಿನ ಮಾಡಿನ ಈ ಕಟ್ಟಡ ಸಣ್ಣದಾಗಿಯೂ ಇದೆ. ಗೋಡೆಗಳೂ ಗಟ್ಟಿ ಇಲ್ಲ. ಕಿಟಕಿ, ಬಾಗಿಲುಗಳೂ ದುರಸ್ತಿಗೆ ಕಾದಿದೆ. ಮಳೆ ಬಂದರೆ ರಕ್ಷಣೆಗಾಗಿ ಇಳಿಛಾವಣಿಯೂ ಇಲ್ಲಿಲ್ಲ.
ಕೋಮಾಲಿ ಕೇಂದ್ರದ ಸಮಸ್ಯೆ ಏನು?
ಕೋಮಾಲಿ ಕೇಂದ್ರದಲ್ಲಿ ಇರುವ ಅಂಗನವಾಡಿ ಕೇಂದ್ರ ರಸ್ತೆ ಬದಿಯೇ ಇರುವ ಕಾರಣ ಸುರಕ್ಷತೆಗೂ ಒತ್ತು ನೀಡಬೇಕಾಗುತ್ತದೆ. ಆವರಣ ಗೋಡೆ ನಿರ್ಮಾಣ, ಹೊಸದಾದ ಕಟ್ಟಡ ನಿರ್ಮಾಣವಾದರೆ ಸಮಸ್ಯೆ ಪರಿಹಾರವಾಗುತ್ತದೆ. ಸದ್ಯ ಮಳೆ ಬಂದಾಗ ನೀರು ಒಳಗೆ ನುಗ್ಗುವ ಕಾರಣ, ಗೋಣಿ ಹಾಕಿದ್ರೂ ಪ್ರಯೋಜನವಾಗುತ್ತಿಲ್ಲ. ಒದ್ದೆ ನೆಲದಲ್ಲಿ ಮಕ್ಕಳು ಮುದುಡಿ ಕುಳಿತುಕೊಳ್ಳುವ ಪರಿಸ್ಥಿತಿ. ಆಗಾಗ ಕೈಕೊಡುವ ಕರೆಂಟ್ ಇರುವ ಕಾರಣ ಪರ್ಯಾಯ ವ್ಯವಸ್ಥೆಗಳೂ ಆಗಬೇಕು. (ಮಾರ್ಗದ ಹತ್ತಿರವೇ ಇರುವ ಕಾರಣ ಇಲ್ಲಿ ಬಂದೋಬಸ್ತ್ ಆಗಬೇಕು. ಹೊಸದಾದ ಕಟ್ಟಡ ಮೂಲಸೌಕರ್ಯಗಳೊಂದಿಗೆ ಮಕ್ಕಳಸ್ನೇಹಿಯಾಗಿ ನಿರ್ಮಾಣವಾಗಬೇಕು. ಎನ್ನುತ್ತಾರೆ ಕೋಮಾಲಿ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ಅಧ್ಯಕ್ಷೆ ಬೇಬಿ.
ಪದೆಂಜಿಮಾರ್ ಕೇಂದ್ರದಲ್ಲೂ ಸಮಸ್ಯೆ
ಸಜೀಪಮೂಡ ಗ್ರಾಮದ ಇನ್ನೊಂದು ಭಾಗದಲ್ಲಿ ಪದೆಂಜಿಮಾರ್ ಎಂಬ ಪ್ರದೇಶವಿದೆ. ಇಲ್ಲಿರುವ ಅಂಗನವಾಡಿ ಕೇಂದ್ರದಲ್ಲೂ ಸಮಸ್ಯೆಗಳಿವೆ. ಇಲ್ಲಿ ಸುಮಾರು 30 ಮಕ್ಕಳು ಪ್ರತಿದಿನ ಆಗಮಿಸುತ್ತಾರೆ. ಒಳಭಾಗದಲ್ಲಿದ್ದರೂ ಇಲ್ಲಿ ಮಕ್ಕಳ ಕೊರತೆ ಇಲ್ಲ. ಆದರೆ ಕಟ್ಟಡ ಇಲ್ಲಿ ಗಟ್ಟಿಮುಟ್ಟಾಗಿಲ್ಲ. ಬಾಗಿಲು ತೆಗೆಯುವ ವೇಳೆ ಕೇರೆ ಹಾವುಗಳಂಥದ್ದನ್ನು ಹಲವು ಬಾರಿ ಕಂಡವರಿದ್ದಾರೆ. ಇಲ್ಲಿಗೆ ಆಗಮಿಸುವ ಮಕ್ಕಳಿಗೆ ಸರಿಯಾದ ರಕ್ಷಣೆ ನೀಡುವಂಥ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಬೇಡಿಕೆ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)