ಪ್ರಮುಖ ಸುದ್ದಿಗಳು

BOOK RELEASE: ‘ಅರದರ್ ಬಿರದೆರ್’ – ಕೃತಿ ಲೋಕಾರ್ಪಣೆ

ಮಂಗಳೂರು: ತುಳು ಜಾನಪದ ಕ್ಷೇತ್ರವು ಅಕ್ಷಯವಾದ ಗಣಿ ಇದ್ದಂತೆ. ಜಾನಪದ ಕ್ಷೇತ್ರದಲ್ಲಿ ಸಂಸ್ಕೃತಿ ಅಧ್ಯಯನ ಮಾಡುವವರಿಗೆ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಬಹುಮುಖಿಯಾದ ವಸ್ತುವಿಷಯಗಳಿವೆ ಎಂದು ಕವಿ ಸಾಹಿತಿ ವಿದ್ವಾಂಸ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.

ಜಾಹೀರಾತು

ನಗರದ ಪ್ರೆಸ್ ಕ್ಲಬ್ ನಲ್ಲಿ ದಿನಾಂಕ 16ರ ಗುರುವಾರದಂದು ಬಂಟ್ವಾಳದ ಯುವ ಸಾಹಿತಿ ದಾ. ನಾ. ಉಮಾಣ್ಣ ಅವರ ಜಾನಪದ ಅಧ್ಯಯನ ಕೃತಿ ‘ಅರದರ್ ಬಿರದೆರ್’ ಎಂಬುದನ್ನು ಬಿಡುಗಡೆಗೊಳಿಸಿ ಅವರು ಮಾತಾಡಿದರು. ತುಳು ಪಾಡ್ದನದಲ್ಲಿ ಬರುವಂತೆ ‘ಅರದರ್ ಬಿರದೆರ್ ವರದರ್’ ಎಂದರೆ ಪಾಂಡವರು ಕೌರವರು ಮತ್ತು ಯಾದವರು. ಯಾದವರ ಪತನದ ಬಳಿಕ ಕೃಷ್ಣನು ಅಳಿದುಳಿದ ಕೊನೆಯ ಒಬ್ಬ ಪುರುಷನಿಗೆ ಮಹಾಭಾರತ ಕಥೆಯನ್ನು ಬರೆದಿಡುವಂತೆ ಹೇಳುತ್ತಾನೆ. ಅದರಂತೆ ಆತ ಬರೆದ ಕಥೆ ಪಾಡ್ದನದಲ್ಲಿ ವರ್ಣಿತವಾಗಿದೆ. ಇದೊಂದು ಅತ್ಯಂತ ವಿಶಿಷ್ಟವಾದ ಪಾಡ್ದನ. ಮಹಾಭಾರತದ ಬಗ್ಗೆ ಜನಪದರ ದೃಷ್ಟಿ ಇದರಲ್ಲಿ ಕಂಡುಬರುತ್ತದೆ. ಅದಕ್ಕೆ ಉಮಾಣ್ಣ ಅವರು ಅರ್ಥವಿವರಣೆಯನ್ನೂ ನೀಡಿದ್ದಾರೆ ಎಂದು ಡಾ. ಪೆರ್ಲ ಅವರು ಹೇಳಿದರು.

ತುಳುನಾಡಿದ ಅಪರೂಪದ ಇತರ ಹಲವಾರು ಜಾನಪದ ವಿಷಯಗಳನ್ನು ಕೈಗೆತ್ತಿಕೊಂಡು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಕೃತಿಕಾರರು ನಲಿಕೆ ಜನಾಂಗಕ್ಕೆ ಸೇರಿದವರಾಗಿರುವುದರಿಂದ ಬರವಣಿಗೆಗೆ ಅಧಿಕೃತತೆ ಪ್ರಾಪ್ತವಾಗಿದೆ ಎಂದೂ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.

ಯುವ ಸಾಹಿತಿ ರಘು ಇಡ್ಕಿದು ಕೃತಿ ಪರಿಚಯಿಸಿ ಮಾತಾಡಿದರು. ಇಲ್ಲಿನ ಹಲವು ಪಾಡ್ದನಗಳು ಈ ಹಿಂದೆ ಸಂಗ್ರಹಗೊಂಡವೇ ಆದರೂ ಅರ್ಥ ವಿವರಣೆಯಲ್ಲಿ ವಿನೂತನತೆ ಇದೆ. ಇದುವರೆಗೆ ಯಾರೂ ಹೇಳಿರದ ಹೊಸ ವಿವರಣೆ ಮತ್ತು ಅರ್ಥಗಳು ಈ ಕೃತಿಯಲ್ಲಿ ಕಂಡು ಬರುತ್ತದೆ. ಪಾಡ್ದನಗಳಲ್ಲದೆ ಜನಪದರ ನಿತ್ಯಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳು ಇಲ್ಲಿ ಸಂಗ್ರಹಗೊಂಡಿವೆ ಎಂದರು. ಕವಿ ಬರಹಗಾರ ಎನ್. ಸುಬ್ರಾಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರರ ಪತ್ನಿ ಶ್ರೀಮತಿ ಜ್ಯೋತಿ ವೇದಿಕೆಯಲ್ಲಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.