ಪ.ಗೋ. ಅಂಕಣ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು ಮರುಓದು – ಕೊನೆಯ ಕಂತು

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು: ನಿರೂಪಣೆ: ಪ.ಗೋಪಾಲಕೃಷ್ಣ, ಕರ್ನಾಟಕ ಸಂಘ, ಪುತ್ತೂರು, 575202 (ದ.ಕ.) ಕ್ಯಾರಿಕೇಚರ್ ಬಿಡಿಸಿದವರು: ಹರಿಣಿ…. ಪದ್ಯಾಣ ಗೋಪಾಲಕೃಷ್ಣ ಅವರು ಬರೆದ ಕುರಿಯ ವಿಠಲ ಶಾಸ್ತ್ರೀ ಆತ್ಮಕಥನ ಬಣ್ಣದ ಬದುಕು ಎಂಬ ಕೃತಿಯ ಮರುಓದು. ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಣೆಗಾಗಿ ಅವರ ಪುತ್ರ ಪದ್ಯಾಣ ರಾಮಚಂದ್ರ ನೀಡಿದ್ದಾರೆ. ಇದು ಕೊನೆಯ ಕಂತು ಇಲ್ಲಿ ಪ್ರಕಟವಾದ ಬರೆಹ, ಚಿತ್ರಗಳೆಲ್ಲವೂ ಕೃತಿಕಾರರ ಕೊಡುಗೆ. =  ಪ.ರಾಮಚಂದ್ರ ಅವರಿಗೆ ಕೃತಜ್ಞತೆ

ಕುರಿಯ ವಿಠಲ ಶಾಸ್ತ್ರಿ: ಜನನ: 8-9-1912, ನಿಧನ: 18-11-1972

 

ಆಸಕ್ತರಿಗಾಗಿ ಮೊದಲ ಮೂರು ಕಂತುಗಳ ಲಿಂಕ್ ಇಲ್ಲಿದೆ.

 

ಯುದ್ಧಕಾಲದ ಅಭಾವಗಳ ಬಿಸಿ

“ಈ ವರ್ಷವಾದರೂ ನಮ್ಮ ಮೇಳಕ್ಕೆ ಬನ್ನಿ.” ಶೆಟ್ಟರು ಮನೆಗೆ ಬಂದ ಕಾರಣ ನನಗೆ ಅರ್ಥವಾಯಿತು.

“ನಿಮ್ಮಂತಹ ಕಲಾವಿದರು ಹೀಗೆ ಸುಮ್ಮನಿರುವುದು ಸರಿಯಲ್ಲ. ನೀವು ಮೇಳದಲ್ಲಿದ್ದರೆ ಉಳಿದವರಿಗೂ ಮಾರ್ಗದರ್ಶನ ಆದೀತು.”

ನಾನು ಮೇಳದ ತಿರುಗಾಟಕ್ಕೆ ಹೋಗುವುದನ್ನು ನಿಲ್ಲಿಸಿದ ಕಾರಣವನ್ನು ಅವರಿಗೆ ವಿವರಿಸಲೇ ಬೇಕಾಯಿತು. ಆದರೆ, ಆ ತಲೆನೋವಿಗೂ ಅವರು ಚಿಕಿತ್ಸೆ ಬಲ್ಲವರಾಗಿದ್ದರು.

“ನಾನು ಈ ವರ್ಷ ಎರಡು ಮೇಳಗಳನ್ನು ನಡೆಸಬೇಕೆಂದಿದ್ದೇನೆ. ಒಂದು ಮೇಳಕ್ಕಂತೂ ಸರಿಯಾದ ವ್ಯವಸ್ಥಾಪಕನ ಅಗತ್ಯವಿದೆಯಲ್ಲ!” ಎಂದರವರು.

“ಅಂದರೆ?”

“ಅಂದರೆ, ಒಂದು ಮೇಳದ ವ್ಯವಸ್ಥಾಪಕನ ಕೆಲಸವನ್ನು ನೀವು ವಹಿಸಿಕೊಳ್ಳಿ. ಲಾಭ ನಷ್ಟಕ್ಕೆ ಮಾತ್ರ ನಾನು. ಉಳಿದ ಎಲ್ಲ ವಿಚಾರಗಳಿಗೂ ನೀವೇ ಅದರ ಯಜಮಾನರಾಗಿ. ನಿಮ್ಮ ಮನಸ್ಸಿನಂತೆ ಆಟಗಳನ್ನು ಆಡಿ ಪ್ರದರ್ಶಿಸುವ ಅನುಕೂಲ; ನನಗೆ ಒಬ್ಬ ವ್ಯವಸ್ಥಾಪಕನ ಸೌಕರ್ಯ. ನೀವೇ ಹೊಸ ಮೇಳವನ್ನು ನಡೆಸಿರಿ. ಆಗದೇ?”

ವ್ಯವಹಾರಶೂನ್ಯನಾದ ನನ್ನನ್ನು ನಂಬಿ ಸಾವಿರಾರು ರೂ.ಗಳನ್ನು ಸುರಿಯುವುದೆ? ನನ್ನ ಅಸಮರ್ಥತೆಯನ್ನು ಸ್ಪಷ್ಟವಾಗಿ ಹೇಳಿದೆ.

“ಮೊದಲೇ ಹೇಳಿದೆನಲ್ಲ. ನಷ್ಟವಾದರೆ ನನಗೇ ಇರಲಿ.”

“ಆಗಲಿ ನೋಡೋಣ.”

ಹಾರಿಕೆಯ ಮಾತಿನಿಂದ ಅವರು ತೃಪ್ತರಾಗಲಿಲ್ಲ.

“ಹಾರಿಕೆಯ ಮಾತು ಸಾಲದು. ನಿಮ್ಮನ್ನು ಒಪ್ಪಿಸುವುದಕ್ಕೆಂದೇ ನಾನು ಈಗ ಬಂದುದು. ನೀವು ಒಬ್ಬರೇ ಹೀಗೆಇದ್ದು ಮರೆದರೆ ಸಾಲದು. ನಿಮ್ಮಂತಹವರು ಇನ್ನೂ ಕೆಲವರು ಮುಂದೆ ಬರಬೇಕೆಂಬ ಆಸೆ ನಿಮಗಿದೆಯಲ್ಲವೇ? ಈ ಕೆಲಸವೂ ಆಗುತ್ತದೆ. ನಿಮ್ಮ ಗೆಳೆಯನಿಗೆ ಉಪಕಾರವೂ ಆಗುತ್ತದೆ. ಆ ದೃಷ್ಟಿಯಿಂದಲಾದರೂ ಒಪ್ಪಿಕೊಳ್ಳಿ” ಎಂದುದಲ್ಲದೆ, “ನೀವು ಕರೆದಲ್ಲಿಗೆ ಮಾತ್ರ ಹೋಗಿ ವೇಷ ಹಾಕಿದರೆ, ಯಕ್ಷಗಾನ ಕಲೆಯ ಉದ್ಧಾರವಾಗಲಾರದು. ಇತರರನ್ನೂ ಅಣಿಗೊಳಿಸಿದರೆ ಮಾತ್ರವೇ ಅದು ಸಾಧ್ಯವಾಗಬಹುದು” ಎಂದೂ ಹೇಳಿದರು.

ಆ ‘ದೊಡ್ಡ ಮಾತು’ ಅವರಿಂದ ಬಂದಾಗ ನಾನು ತಲೆ ಬಾಗಲೇ ಬೇಕಾಯಿತು.

ಅಲ್ಲಿಂದ ಮುಂದಿನ ಕೆಲಸ ದೊಡ್ಡದು. ಆದರೆ, ಹೇಳುವ ವಿಚಾರಗಳು ಹೆಚ್ಚಿರಲಿಲ್ಲ. ಹೊಸದಾಗಿ ಒಂದು ಸಂಸ್ಥೆಯನ್ನು ಕಟ್ಟಲು ಯಾವ ರೀತಿಯ ಓಡಾಟವೆಲ್ಲ ಆಗಬೇಕಾಯಿತೋ, ಅದು ಆಯಿತು.

ಬೇಕಾದ ವೇಷಧಾರಿಗಳನ್ನು ಹುಡುಕಿ, ಅವರಿಗೆ ಮುಂಗಡ ತೆತ್ತು, ಅವರನ್ನು ಒಟ್ಟು ಗೂಡಿಸುವುದರ ಜತೆಗೆ ಅಗತ್ಯವಾಗಿದ್ದ ವೇಷ- ಭೂಷಣಗಳನ್ನು ಜೋಡಿಸುವ ಕೆಲಸವೂ ಆಯಿತು.

ಕಂಬಗಳ ರಂಗಸ್ಥಳ

ಹಾಗೆ, ಆ ವರ್ಷದಲ್ಲಿ ಹಣದ ಹೊಣೆಗಲ್ಲದಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ನಾನು ಇರಾ ಶ್ರೀ ಸೋಮನಾಥೇಸ್ವರ ಮೇಳದ ಯಜಮಾನನೆನಿಸಿಕೊಂಡೆ. ನನ್ನ ಮನಸ್ಸಿಗೆ ಆಗ ತೋರಿಬಂದಂತೆ ಕೆಲವು ಮಾರ್ಪಾಡುಗಳನ್ನು ಮಾಡುವ ಸಾಹಸಕ್ಕೆ ಕೈಯಿಕ್ಕಿದೆ.

ಮಹಾಯುದ್ಧದ ಬಿಸಿಯಲ್ಲಿ, ಸಿಗಬೇಕಾದ ಅಗತ್ಯ ವಸ್ತುಗಳು ಸಿಗದಾಗಿ, ಜನರ ಕೈಯಲ್ಲಿ ಹಣ ಮಾತ್ರವೇ ಓಡಾಡುವಂತೆ ಆಗತೊಡಗಿದ ಸಮಯ ಅದು.

ದಕ್ಷಿಣ ಕನ್ನಡದ ಪ್ರಮುಖ ಕಲೆಯಾದ ಯಕ್ಷಗಾನ ಬಯಲಾಟದ ಮೇಳಗಳೆಲ್ಲ ಸುಸಂಘಟಿತ ಮನರಂಜನಾ ಸಂಸ್ಥೆಗಳಾಗಿ ಪರಿವರ್ತನೆಗೊಂಡಿರಲಿಲ್ಲ. ಜನರೂ, “ಹೋದರಾಯಿತು-ಟಿಕೇಟು ಕೊಂಡರಾಯಿತು. ಎಂಬ ಹಂತಕ್ಕೆ ಬಂದಿರಲಿಲ್ಲ. ಊರೂರುಗಳಿಗೆ ಭೇಟಿಕೊಟ್ಟು, ಗಣ್ಯರ ನೆರವು ಪಡೆದು, ಅವರಿಂದ ವೀಳ್ಯ ದೊಕಿಸಿ, ಗದ್ದೆಗಳಲ್ಲೂ, ಶಾಲೆಗಳ ಆಟದ ಬಯಲುಗಳಲ್ಲೂ, ನಾಲ್ಕುಕಂಬಗಳ ‘ರಂಗಸ್ಥಳ’ ಹಾಕಿ ಆಟವಾಡಬೇಕಷ್ಟೆ. ಸ್ವಂತದ ನೆಲೆ ಎಂದು ಹೇಗೂ ಹೇಳಿಕೊಳ್ಳುವಂತೆ ಇಲ್ಲದೆ, ಆರು ತಿಂಗಳ ಕಾಲ ಪರಾಶ್ರಯದಲ್ಲಿ ಪಡೆದ ಹಣದಲ್ಲಿ ವೇಷಧಾರಿಗಳಿಗೆ ವೇತನ ವಿತರಣೆ ಇತ್ಯಾದಿಗಳು ಆಗಬೇಕಾಗಿದ್ದುವು.

ವೀಳ್ಯಗಳ ಆಟ ನಿಶ್ಚಯವಾಗಿದ್ದ ದಿನಗಳಲ್ಲೇನೋ ಹೆಚ್ಚು ತೊಂದರೆಯಾಗುತ್ತಿರಲಿಲ್ಲ. ಯುದ್ಧಕಾಲದ ಅಭಾವಗಳ ಬಿಸಿಗೆ ಸಿಕ್ಕಿ, ಅಕ್ಕಿ ಮತ್ತು ಸೀಮೆಎಣ್ಣೆ ಇವುಗಳು ಮಾತ್ರ ಇಲ್ಲವಾಗಿದ್ದುವು. ಮೂವತ್ತಕ್ಕೂ ಹೆಚ್ಚು ಮಂದಿಗೆ ಅಕ್ಕಿಯೊದಗಿಸಬೇಕು; 10-15 ಪೆಟ್ರೋಮಾಕ್ಸ್ ಗಳಿಗೆ ಸೀಮೆಎಣ್ಣೆ ತುಂಬಿಸಬೇಕು. ಕೆಲವು ಊರುಗಳಲ್ಲಿ ಅದು ಅವನ್ನು ನಿಶ್ಚಯಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಪ್ರಯಾಸ ತಂದೊಡ್ಡುತ್ತಿತ್ತು. ನಾವು ನಿಂತಲ್ಲಿ ನಿಲ್ಲದೆ ತಿರುಗುವವರಾದ ಕಾರಣ, ನಮಗಾಗಿ ರೇಷನ್ ಕಾರ್ಡುಗಳ ವ್ಯವಸ್ಥೆ ಮಾಡುಕೊಳ್ಳುವ ದಾರಿಯೂ ಇರಲಿಲ್ಲ.

ಮೊದಲೇ ನಿಶ್ಚಯವಾಗಿಲ್ಲದ (ವೀಳ್ಯ ಸಿಗದಿದ್ದ) ಆಟಗಳು ಇಲ್ಲದ ದಿನಗಳಿಗೆ ಏನು ಮಾಡಲಿ ಎಂದು ಯೋಚಿಸುವ ತಾಪತ್ರಯ ನನಗೊಬ್ಬನಿಗೆ ಮಾತ್ರ ಬೀಳುತ್ತಿತ್ತು. ನಮ್ಮ ಮೇಳ ಆ ವರ್ಷವಷ್ಟೇ ರೂಪುಗೊಂಡಿತ್ತಾದ ಕಾರಣ, ಮೇಳದ ಖ್ಯಾತಿಯಿಂದ ಕರೆಯುವವರು ಯಾರೂ ಇರಲಿಲ್ಲ.

ಇಲ್ಲದ ದಿನಗಳಿಗಾಗಿ, ಬಂಧುಗಳ ಮತ್ತು ಸ್ನೇಹಿತರ ಮನೆ ಬಾಗಿಲುಗಳಿಗೆ ಅಲೆದು “ಈ ದಿನಕ್ಕೆ ನಮಗೆ ಬೇರೆಲ್ಲಿಯೂ ಆಟವಿಲ್ಲ. ನಿಮ್ಮ ಹೆಸರಿನಲ್ಲಿ ಒಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ” ಎಂದು ಕಾಡಿಬೇಡಿ ಒತ್ತಾಯದಿಂದ ಪ್ರದರ್ಶನ ಮಾಡುವಂತಾಗುತ್ತಿತ್ತು. ಆ ವರ್ಷ ಸ್ನೇಹದ ಕಾಟಾಚಾರಕ್ಕಾಗಿಯೇ 25 ಆಟಗಳಾದರೂ ಆಗಿದ್ದುವೆಂದರೆ ಹೆಚ್ಚಲ್ಲ.

ಮೇಳದೊಳಗೇ ಗುಂಪು

ಅಂತಹ ಕಿರುಕುಳ, ಸಮಸ್ಯೆಗಳಿಂದಾಗಿ ನಾನೆಣಿಸಿಕೊಂಡಿದ್ದಂತೆ, ಮಾಡಬೇಕೆಂದು ಭಾವಿಸಿದ, ಪ್ರಯೋಗಗಳಲ್ಲಿ ಹೆಚ್ಚಿನವು ತಲೆಯಲ್ಲೇ ಉಳಿದುಕೊಂಡುವು. ಇತರರ ತರಬೇತಿ ಮಾಡಿಕೊಳ್ಳುವ ಅವಕಾಶ ಬಹಳ ಕಡಿಮಯಾಯಿತು. ಏನಿದ್ದರೂ, ನನ್ನ ವೇಷಗಳ ಕಡೆಗಷ್ಟೇ ಗಮನ ಕೊಡಲು ಸಾಧ್ಯವಾಯಿತಷ್ಟೆ. ಇತರರನ್ನು ಹಗಲು ಒಟ್ಟುಗೂಡಿಸಿ, ಏನನ್ನಾದರೂ ಚರ್ಚಿಸಿ ತಿಳಿಯ ಹೇಳಲು, (ಇತರರಿಗೆ ಸಮಯ ಸಿಗಬಹುದಿತ್ತಾದರೂ ನಾನು ಸಮಯದ ಅಭಾವದಿಂದ ತೊಳಲುತ್ತಿದ್ದ ಕಾರಣ) ಅಸಾಧ್ಯವೇ ಎನಿಸಿತು.

ವೀಳ್ಯವಿಲ್ಲದ ಕಾರಣ ಆಟವಾಡಲಿಲ್ಲ ಎಂದರೆ ವರಮಾನ ಇಲ್ಲದಾದರೂ ತುಂಬಿಸಿಕೊಡಲು ಒಪ್ಪಿದವರು ಇದ್ದರು ನಿಜ. ಆದರೆ ಸ್ನೇಹದ ದುರುಪಯೋಗವನ್ನು ಮಾಡಲು ನಾನು ಅಷ್ಟು ಸುಲಭವಾಗಿ ಮುಂದುವರಿಯಬಾರದು ಎಂದು ಕೊಂಡಿದ್ದೆ. ಆದರೆ, ನಾನು ಕೆಟ್ಟವನು ಎಂದು ಸಾರುವ ಅವಕಾಶ ಸಿಗಬೇಕು ಎಂದು ಕಾಯುವವರ ಸಣ್ಣದೊಂದು ಗುಂಪು ಮೇಳದ ಒಳಗೇ ಬೆಳೆಯತೊಡಗಿತು.

ಅದಕ್ಕೆ, ಬರಿಯ ಸೂತ್ರಚಾಲನೆಯ ಕೆಲಸವನ್ನು ಮಾತ್ರವೇ ಮಾಡದೆ, ನನ್ನ ಸ್ವಭಾವದಂತೆ ವೇಷಗಳನ್ನು ಧರಿಸಲೂ ನಾನು ಆಸಕ್ತಿ ತೋರುತ್ತಿದ್ದುದೂ ಕಾರಣ ಎಂದು ಈಗ ಅನಿಸುತ್ತಾ ಇದೆ.

ಮಾಡಿದ ವೇಷ ಸರಿಯಾಗಿರಬೇಕು; ಯಾರೂ ಕುಂದು ಹೇಳುವಂತಿರಬಾರದು, ಎಂದೇ ನನ್ನ ವಾದ. ಅಂಗೈಯಲ್ಲಿ ಬಣ್ಣವನ್ನು ಕಲಸಿ ಹಿಡಿದು, ಬೆರಳುಗಳಿಂದ ಅದನ್ನು ಮುಖಕ್ಕೆ ಉಜ್ಜುವ ಧೈರ್ಯ ಬಂದ ಮೇಲೆ, ರಾಮಾಯಣದ ರಾಮ ನಾನೇ ಆಗಬಹುದಿತ್ತು. ಕರ್ಣಪರ್ವದ ಕರ್ಣನ ಪಾತ್ರ ನನಗೇ ಸಿಗಬೇಕು, ವಾಲಿ ಸಂಹಾರದಲ್ಲಿ ನಾನೇ ವಾಲಿಯಾದರೆ ಭಲೆ-ಭೇಷ್ ಎನಿಸುತ್ತಿದ್ದೆ- ಎಂದು ಹೇಳಿಕೊಳ್ಳುವ ಕಲಾವಿದರು ಎಲ್ಲ ಮೇಳಗಳಲ್ಲೂ ಇದ್ದರು. ನಮ್ಮಲ್ಲೂ ಇದ್ದರು.

ಅವರ ಬಯಕೆಯ ಪೂರೈಕೆಗಾಗಿ ಎಲ್ಲಾದರೂ ಅವರು ಬಯಸಿದ ವೇಷವನ್ನೇ ಅವರಿಗಿತ್ತರೆ, ಮರುದಿನ ನಾನು ಮುಖ ತಗ್ಗಿಸುವಂತಾಗುತ್ತಿತ್ತು.

ನಾಟ್ಯದಲ್ಲಿ ಅನುಭವವಿದೆ ಎಂದು ಅಯ್ಕೆ ಮಾಡಿದ ಪಾತ್ರಧಾರಿ- ಮುಖ್ಯವಾದ ವೇಷ ದೊರೆತಾಗ, ನಾಟ್ಯದಿಂದಲೇ ತನ್ನ ಚಾತುರ್ಯವನ್ನು ತೋರಿಸುವುದರ ಬದಲು ಎಂದೂ ಇಲ್ಲದ ಪಾಂಡಿತ್ಯದಿಂದ ಮೈಲುಗಟ್ಟಲೆ ಮಾತನಾಡಲು ಹೊರಡುತ್ತಿದ್ದ. ಅಲ್ಪಪ್ರಾಣ- ಮಹಾಪ್ರಾಣಗಳ ಭೇದವನ್ನೂ ಮರೆತುಬಿಡುತ್ತಿದ್ದ. ಕಥಾ ಸಂದರ್ಭ ಕೂಡಾ ಮನಸ್ಸಿನಿಂದ ಮರೆಯಾಗಿ “ಪಂಚವಟಿಯಲ್ಲಿದ್ದ ರಾಮನ ಕೀರ್ತಿ ಆಸೇತು ಹಿಮಾಚಲ ಪರ್ಯಂತ” ಹರಡಿ ಹೋಗುತ್ತಿತ್ತು. ಅರ್ಥವೇ ತಿಳಿಯದ ಸಂಸ್ಕೃತ ಶ್ಲೋಕಗಲ ಉರುಳಿಕೆ ನಡೆದು, ತಿಳಿದ ಮಹನೀಯರಿಂದ ಮುಂಜಾನೆ (ನಾನು) ಬೈಸಿಕೊಳ್ಳಬೇಕಾಗುತ್ತಿತ್ತು.

ನಾಲಿಗೆ ನಯವಾಗಿದೆ- ಪದ ಹೇಳುವಾಗ ಗೊಂಬೆಯ ಹಾಗೆ ನಿಂತರೂ, ಅರ್ಥದಲ್ಲಿ ಏನಾದರೂ ಮಾತನಾಡಿ, ಪಾತ್ರ ನಿರ್ವಹಿಸಬಲ್ಲ ಎಂದು ಇನ್ನೊಬ್ಬನ ಆಯ್ಕೆ ಆದಾಗ, ಕುಣಿಯಲಾರದ ಕಾಲುಗಳನ್ನು ಕುಣಿಸಹೋಗಿ ಅವನ ಅಪಹಾಸ್ಯವೂ ಆದುದೂ ಇತ್ತು.

ಅಂತಹ ಘಟನೆಗಳಾದಾಗ, ನನ್ನ ಕೋಪವನ್ನು ತಡೆದಿಟ್ಟುಕೊಳ್ಳುತ್ತಿದ್ದೆ. ಇನ್ನೊಂದು ಬಾರಿ ನನಗೇ ಆ ವೇಷ ಬೇಕು ಎಂದವರೊಡನೆ “ಈ ದಿನ ಬೇಡ. ಇನ್ನೊಮ್ಮೆ ನೋಡೋಣ” ಎನ್ನುತ್ತಿದ್ದೆ.

ಗುಂಪು ಬೆಳೆಯಲು ಅದೊಂದು ಕಾರಣ ಮುಖ್ಯವಾಗಿತ್ತು. ಪ್ರಾಮುಖ್ಯವಲ್ಲದ ಇತರ ಕೆಲವು ಕಾರಣಗಳೂ ಸೇರಿಕೊಂಡು ನನ್ನ ‘ಗರ್ವ’ವನ್ನು ಮುರಿದು ಬಗ್ಗುಬಡಿಯಬೇಕು ಎನ್ನುವವರೂ ಸಿದ್ಧರಾದರು.

ಆ ವರ್ಷದ ಮೇ ತಿಂಗಳಲ್ಲಿ ಹಲವಾರು ಕಡೆಯ ಆಟಗಳಿಗೆ ಮೊದಲಾಗಿಯೇ ವೀಳ್ಯ ಪಡೆದಿದ್ದೆ. ಇನ್ನೇನು, ಅದೊಂದು ತಿಂಗಳು ನಿಶ್ಚಿಂತೆಯಿಂದ ಸಾಗುತ್ತದೆ ಎಂದಿರುವಾಗ ಮುಂಗಾರು ಮಳೆ ಬೇಗನೆ ಆರಂಭವಾಯಿತು. ಪ್ರತಿ ರಾತ್ರೆಯೂ ಮಳೆ ಬೇಗನೆ ಆರಂಭವಾಯಿತು. ಪ್ರತಿ ರಾತ್ರೆಯೂ ಮಳೆ ಸುರಿದು ನಿಶ್ಚಯಿಸಿದ್ದ ಆಟದ ಕಾರ್ಯಕ್ರಮಗಳೆಲ್ಲ ಒಂದೊಂದಾಗಿ ಕೈ ಬಿಡತೊಡಗಿದುವು. ಅದರೊಂದಿಗೇ ಮೇಳದಲ್ಲಿ (ವೇಷ-ಭೂಷಣಗಳ) ಪೆಟ್ಟಿಗೆಗಳನ್ನು ಹೊರುತ್ತಿದ್ದ 3-4 ಮಂದಿ ಕೂಲಿಯಾಳುಗಳು ಒಂದು ದಿನ ಹೇಳದೆ ಕೇಳದೆ ಪರಾರಿಯಾದರು.

15ಮೈಲು ದೂರದ ಮುಂದಿನ ‘ಕ್ಯಾಂಪಿ’ಗೆ ಪೆಟ್ಟಿಗೆಗಲು ಕೆಲವನ್ನು ಸೈಕಲಿನಲ್ಲಿ ಕಟ್ಟಿ ಸಾಗಿಸಬೇಕಾದ ಪರಿಸ್ಥಿತಿ ಬಂದಿತು.

ಅನಂತರ ಪತ್ತನಾಜೆಗೆ 10 ದಿನವಿದೆ ಎನ್ನುವಾಗ, ಎಲ್ಲೂ ವೀಳ್ಯ ನಿಶ್ಚಯವಾದ ಆಟಗಳು ಇಲ್ಲ ಎಂಬಂತಾಯಿತು. ಮಳೆ ಬರುವ ಭಯವಿದ್ದ ಕಾರಣ ಆಟ ಆಡಿಸಲೆಂದು ಮುಂದೆ ಬರುವ ಮನಸ್ಸಿದ್ದವರೂ ಹಿಂಜರಿಯುತ್ತಿದ್ದರು. ಹುಡುಕಿ ಹೋಗಿ ಕೇಳಿದವರು ಕೂಡಾ ಏನಾದರೊಂದು ಕುಂಟುನೆಪ ಹೇಳಿ ತಪ್ಪಿಸಿಕೊಂಡರು.

ಮೇಳವನ್ನು ನಿಲ್ಲಸಿದ್ದರೆ, ಯಾರೂ ಬೇಡವೆನ್ನುತ್ತಿರಲಿಲ್ಲವೆಂಬುದು ನಿಜವಾದರೂ ‘ಪತ್ತನಾಜೆಗೆ ಮೊದಲೇ ಗೆಜ್ಜೆ ಬಿಚ್ಚಿದರಂತೆ’ ಎಂಬ ಕುಹಕ ನುಡಿ ಸಾಯುವವರೆಗೂ ಕೇಳುತ್ತಲಿರಬೇಕಾಗಬಹುದೆಂಬ ಭಯವಿತ್ತು. ಅಂತಹ ಅಗೌರವದ ಹೆಜ್ಜೆಯನ್ನು ಇಡಲು ಮನಸ್ಸು ಹಿಂಜರಿಯುತ್ತಿತ್ತು.

ಅದದ್ದಾಗಲಿ ಎಂದುಕೊಂಡು ಎಲ್ಲರನ್ನೂ ಕರೆದುಕೊಂಡು ಊರಿಗೇ ಬಂದೆ. ಮನೆಯ ಸಮೀಪದ ಕುರುಡಪದವಿನಲ್ಲೇ ಆಟದ ರಂಗಸ್ಥಳದ ಕಂಬಗಳನ್ನು ಊರಿಸಿದೆ. ಎಡೆಬಿಡದೆ ಕೆಲವು ದಿನಗಳ ಆಟ ನಡೆಯುವುದು ಎಂತಹ ಸಹಿಷ್ಣುವಿಗಾದರೂ ತಾಳ್ಮೆ ಕೆಡಿಸುವ ರೀತಿಯ ಖರ್ಚಿಗೆ ದಾರಿ. ಆದರೆ ಊರಿನವರೆಲ್ಲ ತುಂಬು ಮನಸ್ಸಿನಿಂದ ಸಹಕರಿಸಿದರು.

ಆಟಗಳಲ್ಲಿ ಕೆಲವು ಸಂತೆ ಅಂಗಡಿಗಳನ್ನು ಇಡುವುದು ಕ್ರಮ. ಕಾಫಿ ಹೋಟಲಂತೂ ಅಗತ್ಯವಾಗಿ ಬೇಕಾಗುತ್ತದೆ. ಇತರ, ಬೀಡಾ, ಬೀಡಿ ಮೊದಲಾದುವುಗಳೂ ಮಲ್ಲಿಗೆ ಹೂವೂ ಮಾರಾಟವಾಗುತ್ತದೆ.

ಕುರುಡಪದವಿನಲ್ಲಿ ಅವುಗಳೆಲ್ಲವನ್ನೂ ನನ್ನ ಲೆಕ್ಕದಲ್ಲೇ ಇರಿಸಿದೆ. ಅವುಗಳಿಂದ ದೊರೆತ ಲಾಭವೂ ಮೇಳದ ಖರ್ಚಿಗೆ ಬಿದ್ದಿತು.

ಅಂತೂ ಇಂತೂ ಮೇ 24ರ ವರೆಗೂ ಊರಿನಲ್ಲೇ ಎಳೆದು ಪತ್ತನಾಜೆಯ ದಿನ ಮೇಳವನ್ನು ಇರಾ ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಿಯಲ್ಲಿ ಬಿಡಿಸಿಕೊಂಡು (ಅಂದರೆ ಸೇವೆಯ ಆಟವಾಡಿ) ಶೆಟ್ಟರ ಶುಭಾಕಾಂಕ್ಷೆಗಳೊಂದಿಗೆ ಮನೆಗೆ ಮರಳಿದೆ.

ಅದೇ ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ ಇಂದಿಗೂ ಶ್ರೀ ಕಲ್ಲಾಡಿ ಕೊರಗಪ್ಪ ಶೆಟ್ಟಿಯವರ ಆಡಳಿತದಲ್ಲೇ ಇದೆ. ಆ ಹೆಸರನ್ನು ಜ್ಞಾಪಿಸಿಕೊಂಡಾಗಲೆಲ್ಲಾ ನನ್ನ- ಅವರ ಸ್ನೇಹದ ಸವಿನೆನಪುಗಳೂ ಉಂಟಾಗುತ್ತವೆ.

 

ಮನಸ್ಸಿಗೆ ಒಂದಷ್ಟು ವಿಶ್ರಾಂತಿ ಅಗತ್ಯ ಎನಿಸಿತ್ತು. ಈ ವರ್ಷವಂತೂ ‘ಮೇಳಕ್ಕೆ ಹೋಗುವುದಿಲ್ಲ’ ಎಂದು ತೀರ್ಮಾನಿಸಿಯೇ ಮನೆಯಲ್ಲಿ ಉಳಿದೆ.

ಆದರೆ ದೀಪಾವಳಿಯ ನಂತರ ಮೇಳಗಳ ತಿರುಗಾಟ ಪ್ರಾರಂಭವಾದಾಗ ಕರೆಗಳು ಬರತೊಡಗಿದವು. ಒಲ್ಲೆ ಎನ್ನಲಾಗಲಿಲ್ಲ.

ಇರಾ ಶ್ರೀ ಸೋಮನಾಥೇಶ್ವರ ಮೇಳದ ಆಡಳಿತವನ್ನು ಶ್ರೀ ಶೆಟ್ಟರೇ ನೋಡಿಕೊಳ್ಳುತ್ತಿದ್ದರಾದ ಕಾರಣ ಆ ದಿಸೆಯ ಯೋಚನೆಯನ್ನು ಮಾಡಬೇಕಾಗಿರಲಿಲ್ಲ.

ತಿರುಗಾಟದ ಅವಧಿಯೆಲ್ಲ ಹೆಚ್ಚಾಗಿ, ಕರೆ ಕಳುಹಿಸಿದ ಕಟೀಲು ಮತ್ತು ಧರ್ಮಸ್ಥಳ ಮೇಳಗಳಲ್ಲಿ ಆಗಾಗ ವೇಷಗಳನ್ನು ನಿರ್ವಹಿಸಿಯೇ ಕಳೆಯಿತು. ಶ್ರೀ ಧರ್ಮಸ್ಥಳಕ್ಕೆ ಮಂಜುನಾಥ ಸ್ವಾಮಿಯ ದರ್ಶನಕ್ಕೆ, ಯಕ್ಷಗಾನ ಕಲಾವಿದನಾಗಿಯೇ-ಹೋಗುವ ಸುಸಂದರ್ಭವೂ ಆ ವರ್ಷ ದೊರೆತಿತ್ತು.

ಆ ವರ್ಷ ಧರ್ಮಸ್ಥಳ ಮೇಳದ ಸಂಚಾಲಕರಾಗಿದ್ದ ಪಟೇಲ್ ಶ್ರೀ ಸೋಮನಾಥಯ್ಯನವರ ವಿಶೇಷ ಆಹ್ವಾನದ ಮೇಲೆ ಬೆಳ್ತಂಗಡಿಯಲ್ಲಿ ಅವರ ಥಿಯೇಟರ್ ಕಟ್ಟಿಸಿ ಟಿಕೇಟ್ ಇಟ್ಟು ಆಡಿಸಿದ ಎಲ್ಲ ಆಟಗಳಲ್ಲೂ ಭಾಗವಹಿಸಿದೆ. (ಆಗಲೇ ಶ್ರೀ ಧರ್ಮಸ್ಥಳಕ್ಕೆ ಹೋಗಿ ಬಂದುದು) ಮಳೆಗಾಲದಲ್ಲಿ ಕನ್ಯಾನದ ಯಕ್ಷಗಾನ ಕೂಟಗಳನ್ನು  ಸಂಘಟಿಸುವುದರಲ್ಲೇ ಸಮಯ ಕಳೆಯಿತು.

ಪ್ರತಿ ಆದಿತ್ಯವಾರದ ಕೂಟಗಳನ್ನು ಏರ್ಪಡಿಸುವುದರಲ್ಲಿ ಮಳೆಗಾಲವೂ ಮೆಲ್ಲ ಮೆಲ್ಲನೆ ಸರಿಯಿತು.

ನವರಾತ್ರಿ ಹೊತ್ತಿಗೆ, ಶ್ರೀ ಧರ್ಮಸ್ಥಳಕ್ಕೆ ಬರುವಂತೆ ಶ್ರೀ ಕುಂಜಾರು ರಾಮಕೃಷ್ಣಯ್ಯನವರು ಪ್ರೋತ್ಸಾಹಿಸಿದರು. ಪ್ರತಿ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಧರ್ಮಸ್ಥಳದಲ್ಲಿ ನಡೆಯುವ ಕ್ರಮ ಅದಾಗಲೇ ಪ್ರಾರಂಭವಾಗಿ ಕೆಲವು ವರ್ಷಗಳ ಸಂದಿದ್ದುವು. ನವರಾತ್ರಿಯಲ್ಲಿ 4-5ದಿನಗಳಲ್ಲಿ ಬಯಲಾಟಗಳೂ ಜರುಗುತ್ತಿದ್ದವು. ಕಲಾವಿದರ ಪ್ರೋತ್ಸಾಹ- ಕಲೆಗಳ ಆಶ್ರಯದ ಬೀಡಾಗಿದ್ದ ಶ್ರೀ ಧರ್ಮಸ್ಥಳದಲ್ಲಿ ಕಲಾವಿದನೆನಿಸಿಕೊಂಡವನು ಕಾರ್ಯಕ್ರಮಗಳಲ್ಲಿ ಭಾಗವಹಿಸಲು- ಮನಸ್ಸಿದ್ದರೆ, ಕಷ್ಟವಾಗುತ್ತಿರಲಿಲ್ಲ. ಅವೆಲ್ಲ ಕಾರಣಗಳಿಂದಲೇ ಶ್ರೀ ರಾಮಕೃಷ್ಣಯ್ಯನವರು ನನ್ನನ್ನು “ಧರ್ಮಸ್ಥಳಕ್ಕೆ ಬಾ” ಎಂದುದು.

ಧರ್ಮಸ್ಥಳದಲ್ಲಿ….

ಆ ನವರಾತ್ರಿಯ ಐದು ಆಟಗಳಲ್ಲೂ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು. ಕ್ಷೇತ್ರಪಾಲರಾಗಿದ್ದ ಮಾತನಾಡುವ ಮಂಜುನಾಥ ಶ್ರೀ ಮಂಜಯ್ಯ ಹೆಗ್ಗಡೆಯವರ ದರ್ಶನ ಲಾಭವೂ ಆಯಿತು.

ನನಗೆ ಭೇಟಿ ನೀಡಿದ ಶ್ರೀ ಹೆಗ್ಗಡೆಯವರು ಹಲವಾರು ಕಲಾವಿದನ ದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯವೆನಿಸಿದ ವಿಷಯಗಳನ್ನು ಕುರಿತು ಪ್ರಸ್ತಾಪಿಸಿದರು; ಚರ್ಚಿಸಿದರು. ಎಲ್ಲ ಮನ್ನಣೆಯಿತ್ತು ಗೌರವದಿಂದ ಕಳುಹಿಸಿಕೊಟ್ಟರು.

ಇದ್ದ ನಾಲ್ಕು ದಿನಗಳಲ್ಲೇ ನನಗೆ ಧರ್ಮಸ್ಥಳ ಕ್ಷೇತ್ರದ ಮೇಲೆ ಅತೀವ ಭಕ್ತಿ ಮೂಡಿತ್ತು. ಕಲೋಪಾಸಕರಿಗೆ ಆಶ್ರಯ ಪಡೆಯಲು ಇದು ಪ್ರಶಸ್ತ ಸ್ಥಳ ಎನಿಸಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಶ್ರೀ ಹೆಗ್ಗೆಡೆಯವರಂತಹ ಕಲೆಯ ಪ್ರೋತ್ಸಾಹಕರು ಇನ್ನೆಲ್ಲೂ ಇರಲಾರರು ಎಂಬ ನಂಬಿಕೆ ಬಂದಿತ್ತು. ಅವರ ಮೇಲಿನ ಅಭಿಮಾನ ಹಾಗೂ ಪೂಜ್ಯ ಭಾವನೆಗಳೇ ಬೆಳೆದು, ಅವರ ಆಶ್ರಯದ ಮೇಳದಲ್ಲಿ ಒಂದು ಬಾರಿ-ಮೇಳವನ್ನೇ ವಹಿಸಿಕೊಂಡು, ತಿರುಗಾಟ ಮಾಡಿದರೆ ಆಗದೆ? ಎಂಬ ಆಸೆಯೂ ಅಂಕುರಿಸಿತ್ತು.

ಹಿಂದೆ ಮೇಳದ ಸಂಚಾಲಕತ್ವವನ್ನು ನಿರ್ವಹಿಸಿದ್ದ ಶ್ರೀ ಸೋಮನಾಥಯ್ಯನವರು ಆ ವರ್ಷ ಮೇಳ ಕಟ್ಟುವುದಿಲ್ಲವೆಂಬ ವದಂತಿ ಹಬ್ಬಿದುದೂ ಆ ಆಸೆಗೆ ಒಂದು ಕಾರಣ.

ಮನೆಗೆ ಬಂದವನು, ನನ್ನಲ್ಲೇ ಸಾಕಷ್ಟು ಯೋಚಿಸಿದ ತರುವಾಯ ಆ ದಾರಿಯಲ್ಲಿ ಮುಂದುವರಿಯುವುದೇ ಸರಿ. ಮಾಡದೇ ಕೇಳದೆ ಯಾವುದಾದರೂ ತಿಳಿಯುವುದು ಹೇಗೆ? ಒಂದು ವೇಳೆ ಮೇಳ ನನಗೆ ಸಿಗುವ ಅವಕಾಶವಿಲ್ಲ ಎಂದೇ ಆದರೆ, ಶ್ರೀ ಸ್ಥಳದವರೆಗೆ ಇನ್ನೊಂದು ಯಾತ್ರೆಯಾದರೂ ಆದಂತಾಯಿತು ಎಂದುಕೊಂಡೇ ಮನೆಯಿಂದ ಪುತ್ತೂರಿಗೆ ಪಯಣ ಬೆಳೆಸಿದೆ. ಅಣ್ಣ ಶ್ರೀ ಸಿ. ಎಸ್. ಶಾಸ್ತ್ರಿಗಳಲ್ಲಿ ನನ್ನ ‘ಯಾತ್ರೆ’ಯ ವಿಷಯ ಪ್ರಸ್ತಾಪವೆತ್ತಿದೆ.

 

 

ಮೇಳವನ್ನು ಉಳಿಸಿದ ಹರಕೆಯ ಆಟಗಳು

‘ಧರ್ಮಸ್ಥಳ ಮೇಳದ ಆಡಳಿತವೆಂದರೆ ಅಷ್ಟುಸುಲಭವಾಗಿ ತೀರ್ಮಾನಿಸುವ ವಿಷಯವಲ್ಲ. ಸುಲಭದ ಮಾತೂ ಅಲ್ಲ. ತುಂಬಾ ವಿಚಾರ ಮಾಡಿ ನಿರ್ಧರಿಸಬೇಕಾದುದು’ ಎಂದು ಸಿ. ಎಸ್. ಶಾಸ್ತ್ರಿಗಳು ನನ್ನ ಯೋಜನೆಯ ಬಗ್ಗೆ ತಿಳಿಸಿದರು.

ಒಂದೆರಡು ದಿನ ಕಳೆದು ಕಾಣಸಿಕ್ಕಿದ ಶ್ರೀ ರಾಮಕೃಷ್ಣಯ್ಯನವರಲ್ಲೂ ಅದೇ ಆಸೆಯನ್ನು ಪ್ರಸ್ತಾಪಿಸಿದಾಗ ಅವರು-

“ಯಾವುದಕ್ಕೂ ನೀವು ಸ್ಥಳಕ್ಕೆ ಬನ್ನಿ. ಅಲ್ಲಿ ಮಾತನಾಡಿ ನೋಡೋಣ” ಎಂದರು.

ಆ ಮಾತಿಗೆ ಅಣ್ಣನವರ ಒಪ್ಪಿಗೆಯೂ ಸಿಕ್ಕಿತು. ಹಾಗೆ ನಾವಿಬ್ಬರೂ ಧರ್ಮಸ್ಥಳಕ್ಕೆ ಹೋಗಿ ಶ್ರೀಮಾನ್ ಹೆಗ್ಗಡೆಯವರನ್ನು ಭೇಟಿಯಾದೆವು.

ನನ್ನ ಆಸೆಯನ್ನು ಶ್ರೀ ರಾಮಕೃಷ್ಣಯ್ಯನವರೇ ಶ್ರೀ ಹೆಗ್ಗಡೆಯವರೊಂದಿಗೆ ಅರುಹಿದರು.

ಅವರದು ಶೀಘ್ರ ನಿರ್ಧಾರದ ಕ್ರಮವೋ ಏನೋ ಎಂದು ನಾನು ಭಾವಿಸುವ ಹಾಗೆ-

“ಆಗಲಿ ಸಂತೋಷ” ಎಂದು ಅವರ ಅಪ್ಪಣೆ ಬಂದಿತು.

ಮೇಳಕ್ಕೆ ಬೇಕಾದ ವೇಷಭೂಷಣಗಳು ಯಾವುವೆಲ್ಲ ಅಗತ್ಯವಿದೆ ಎಂದು ಒಂದು ಪಟ್ಟಿ ತಯಾರಿಸಿ ಕೊಡಲೂ ಹೇಳಿದರು.

ಅವರಿಂದ ವಾಗ್ದಾನ ಪಡೆದು ಊರಿಗೆ ಬರುವಾಗಲೇ ಧರ್ಮಸ್ಥಳ ಮೇಳವನ್ನು ನಾನು ವಹಿಸಿಕೊಳ್ಳಲಿರುವ ಸುದ್ದಿ ಗಾಳಿಯಲ್ಲಿ ಹರಡತೊಡಗಿತ್ತು.

ಹೊಸಬನಾದ ನನ್ನ ಕೈಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆಡಳಿತವನ್ನು ವಹಿಸಿಕೊಟ್ಟರೆ ಶ್ರೀ ಕ್ಷೇತ್ರದ ಘನತೆಗೆ ಕುಂದು ಬರಬಹುದು ಎಂಬ ಮಾತನ್ನು ಶ್ರೀ ಹೆಗ್ಗಡೆಯವರಿಗೆ ತಲಪಿಸಲೂ ಕೆಲವು ಮಂದಿ ಆಸಕ್ತರು ಮಾಡಿದ ಪ್ರಯತ್ನಗಳ ವಿಚಾರ ಇಲ್ಲಿ ಅನಗತ್ಯ. ಶ್ರೀ ಹೆಗ್ಗಡೆಯವರು ಆ ಮಾತುಗಳಿಗೆ ಬೆಲೆ ಕೊಡಲಿಲ್ಲ ಎಂಬುದೂ, ನಾನಾಗಿ ಬಣ್ಣದ ಬದಕನ್ನು 21ವರ್ಷಗಳ ಅನಂತರ ತೊರೆಯುವಂತಾಗುವವರೆಗೂ ಶ್ರೀ ಧರ್ಮಸ್ಥಳ ಮೇಳವನ್ನೇ ನಾನು ನಡೆಸುತ್ತಾ ಬಂದುದೂ, ಯಕ್ಷಗಾನ ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿವೆ.

ನವೋದಯ

ಧರ್ಮಸ್ಥಳ ಮೇಳ ಶತಮಾನಗಳಷ್ಟು ಹಳೆಯದಾದರೂ, ಹೊಸ ಜನರು, ಹೊಸದಾದ ವೇಷಭೂಷಣಗಳು ಇವೆಲ್ಲವುಗಳಿಂದಾಗಿ ಪುನರುದಿತ ಯಕ್ಷಗಾನ ಮಂಡಳಿಯೇ ಆಗಬೇಕು ಎಂದಾಯಿತು.

ಭಾಗವತರು, ವೇಷಧಾರಿಗಳಿಂದ ಮೊದಲ್ಗೊಂಡು ಪೆಟ್ಟಿಗೆ ಹೊರುವ ಹುಡುಗರವರೆಗೂ ಎಲ್ಲರನ್ನೂ ಒಬ್ಬೊಬ್ಬರಾಗಿ ಕಂಡು ಮಾತನಾಡಿ, ಅವರ ನಿರ್ಣಯಗಳನ್ನು ತಿಳಿದುಕೊಂಡು ಬಂದೆ. ಒಪ್ಪಿಸಿಕೊಂಡೆ.

ನನ್ನ ಮಟ್ಟಿಗೆ ಎಲ್ಲರೂ ಹೊಸಬರೇ. ಹಳಬನಾಗಿ ಉಳಿದವನು ಶ್ರೀ ಕ್ಷೇತ್ರದಿಂದ ಮೇಳದ ತಿರುಗಾಟಕ್ಕೆ ಬರುವ ಆ ಮಹಾಗಣಪತಿಯೊಬ್ಬನೇ.

ಆಡುಂಬೊಲದ ಅಗತ್ಯ…..

ಕಾರ್ತೀಕ ಬಹುಳ ಅಮಾವಾಸ್ಯೆಯ ದಿನ ಶ್ರೀ ಧರ್ಮಸ್ಥಳದಲ್ಲಿ ದೀಪೋತ್ಸವ.

ಮರುದಿನ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ, ನನ್ನ ಜೀವನದ ಹೊಸ ವಿಭಾಗವೊಂದನ್ನು ಪ್ರಾರಂಭಿಸಿದೆ.

ತಿರುಗಾಟವನ್ನು ಪ್ರಾರಂಭಿಸಿದ ತರುಣದಲ್ಲಿಯೇ ಅಲ್ಲಲ್ಲಿ ಆಶ್ರಯ ಪಡೆದು ಬಿಡು ಆಟಗಳನ್ನು ಆಡುವ ಅವ್ಯವಸ್ಥೆಯ ಸಮಸ್ಯೆಯ ಕಡೆಗೆ ನನ್ನ ಗಮನ ಹರಿಯಿತು.

ಹೊಸ ಪ್ರಯತ್ನಗಳಿಗೆ ಹೇಗೂ ಅವಕಾಶ ಸಿಕ್ಕಿದೆ. ಪ್ರಾರಂಭ ದೆಸೆಯಲ್ಲೇ ಮಾಡಿ ನೋಡಿದರೆ, ಒಂದು ವೇಳೆ, ವಿಫಲವಾದರೂ ಅಷ್ಟೊಂದು ಬಿಸಿ ತಟ್ಟುವುದಿಲ್ಲ ಎಂದೇ ನಂಬಿ, ಒಂದೆರಡು ಊರುಗಳಲ್ಲಾದರೂ ‘ಥಿಯೇಟರ್’ ಕಟ್ಟಿಸಿ ಆಟಗಳಿಗೆ ಪ್ರವೇಶಧನವಿಟ್ಟು ಆಡಿ ನೋಡಬೇಕು ಎಂದು ತೀರ್ಮಾನಿಸಿದೆ.

ನಾಟಕ ಶಾಲೆಗಳಂತೆ ಇರುವ ತಾತ್ಕಾಲಿಕ ಕಟ್ಟಡಗಳ ನಿರ್ಮಾಣಕ್ಕೆ ತುಂಬಾ ವೆಚ್ಚ ತಗಲುತ್ತಿತ್ತು. ಆದ್ದರಿಂದ ಒಂದು ಆವರಣವನ್ನು ಮಾತ್ರ ಎತ್ತರಕ್ಕೆ ರಚಿಸಿಕೊಂಡು ತಕ್ಕ ಆಸನ ವ್ಯವಸ್ಥೆಯನ್ನು-ಕುರ್ಚಿ, ಈಸೀಚೆರ್ ಗಳನ್ನು ಬಾಡಿಗೆಗೆ ತಂದು- ಮಾಡಿಕೊಂಡರಾಗಬಹುದು ಎಂದು ಯೋಚಿಸಿ, ಮೂಡಬಿದರೆಯಲ್ಲಿ ಮುಂದಿನ ಕ್ಯಾಂಪಿಗಾಗಿ ವ್ಯವಸ್ಥೆ ಮಾಡಿದೆ.

ಧರ್ಮಸ್ಥಳದಿಂದ ಹೊರಟ ಅನಂತರದ ಕೆಲವು ದಿನಗಳವರೆಗೆ ಆಹ್ವಾನದ ಆಟಗಳು ಇದ್ದುದನ್ನು ಮುಗಿಸಿಕೊಂಡು, ಮುಂದೆ ದಕ್ಷಿಣದ ಜೈನ ಕಾಶಿಯಾದ ಮೂಡಬಿದರೆಗೆ ಬಂದು ತಳವೂರಿದೆ.

ಅಲ್ಲಿಂದ ಮುಂದೆ ಫಲಿಮಾರಿನ ಕ್ಯಾಂಪ್ ಇತ್ತು.

ಅವೆರಡೂ ಸ್ಥಳಗಳಲ್ಲಿ ಸುಮಾರು ಎರಡುವರೆ ತಿಂಗಳುಗಳ ಕಾಲವನ್ನು ಸುಲಭವಾಗಿ ನೂಕಿದೆವು. ಜನರಿಂದ ಸಾಕಷ್ಟು ಪ್ರೋತ್ಸಾಹವೂ ದೊರೆಯಿತು. ಪ್ರತಿದಿನವೂ ಬಿಡಾರ ಕೀಳುವ ಪರಿಸ್ಥಿತಿಯಿಲ್ಲವಾದ ಕಾರಣ- ಸಾಗಾಟದ ವೆಚ್ಟವೂ ಇರಲಿಲ್ಲ. ಆದುದರಿಂದ ಆರ್ಥಿಕಸ್ಥಿತಿ ಅಷ್ಟೊಂದು ತ್ರಾಸದಾಯಕವಾಗಲಿಲ್ಲ.

ಕ್ಷೇತ್ರದ ಮಹಿಮೆ

ಧರ್ಮಸ್ಥಳದ ಮೇಳಕ್ಕೆ- ಇತರ ಮೇಳಗಳಿಂದ ಹೆಚ್ಚು- ಹರಕೆಯ ಆಟಗಳು ಸಿಗುತ್ತವೆ. ಕ್ಷೇತ್ರದ ಮಹಿಮೆಯನ್ನು ನಂಬಿರವ ಜನ, ತಾವು ಬಯಸಿದ ಕೆಲಸ ಕೈಗೂಡಿದರೆ ಧರ್ಮಸ್ಥಳ ಮೇಳದ ಒಂದು ಆಟವನ್ನು ಆಡಿಸುವ ಹರಕೆ ಹೊತ್ತುಕೊಳ್ಳುತ್ತಾರೆ. ಕೆಲವು ಕಡೆಗಳಲ್ಲಿ ಪ್ರತಿವರ್ಷವೂ ಆಟವಾಡಿಸುವ ಹರಕೆಗಳು ಇದ್ದು ಇಂದಿಗೂ ಅದೇ ಕ್ರಮವನ್ನು ಅವರು ಅನುಸರಿಸುವರು.

ಹಾಗೆ ಹರಕೆಯ ಆಟಗಳೂ ನಮಗೆ ದೊರತು, ವೀಳ್ಯದ ಕರೆಗಳೂ ಬಂದು ಪತ್ತನಾಜೆಯವರೆಗೂ ನಮ್ಮ ದಿನ ಕಳೆಯಿತು. ತಿರುಗಿ ‘ಥಿಯೇಟರ್’ ಕಟ್ಟಿಸಬೇಕಾದ ಶ್ರಮ ಆ ವರ್ಷ ಅಗತ್ಯವಾಗಲಿಲ್ಲ.

ಪತ್ತನಾಜೆಯ ಸೇವೆಯನ್ನು ಶ್ರೀ ಧರ್ಮಸ್ಥಳದಲ್ಲಿ ಮುಗಿಸಿ, ಮೇಳವನ್ನು ಶ್ರೀ ಹೆಗ್ಗಡೆಯವರಿಗೆ ಒಪ್ಪಿಸಿಕೊಟ್ಟು ಬಂದಾಗ, ಮೇಳಗಳು ಸ್ವತಂತ್ರವಾಗಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಆಟಗಳನ್ನು ಆಡುತ್ತಾ ಹೋಗಬೇಕಾದರೆ, ಪ್ರದರ್ಶನ ಸ್ಥಳವನ್ನು ಅಳವಡಿಸಿಕೊಳ್ಳುವ ಅನುಕೂಲ ಅವರಿಗಿರಬೇಕು. ಸಂಚಾರಿ ನಾಟಕ ಶಾಲೆಗಳಂತೆ, ಅವುಗಳನ್ನು ಸಾಗಿಸುವ ಸಾರಿಗೆಯ ಅನುಕೂಲವೂ ಬೇಕು ಎಂಬುದನ್ನು ಸ್ವಂತ ಅನುಭವದಿಂದ ಅರಿತುಕೊಂಡೆ.

ಆಟವನ್ನು ಪುಕ್ಕಟೆಯಾಗಿಯೇ ನೋಡಬೇಕೆಂದು ಜನರು ಬಯಸುತ್ತಿಲ್ಲ. ತಕ್ಕ ಮನರಂಜನೆಯನ್ನು ಒದಗಿಸುವ ಭರವಸೆ ಇತ್ತರೆ, ಪ್ರತಿಫಲ ತೆರಲೂ ಸಿದ್ಧರಿದ್ದಾರೆ ಎಂಬ ವಿಚಾರವೂ ತಲೆಯಲ್ಲಿ ಸುಳಿದಿತ್ತು.

ಆದರೆ ಆಟಕ್ಕಾಗಿ, ‘ಟೆಂಟ್’ ಒದಗಿಸಿಕೊಳ್ಳುವುದು ಸುಲಭದ ಮಾತಲ್ಲವಲ್ಲ? ಅದಕ್ಕಾಗಿ ಸುರಿಯಬೇಕಾದ ಮೊತ್ತವನ್ನು ಒದಗಿಸುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಮುಂದೆ ಬಂದು ನಿಂತುವು.

ಆ ವರ್ಷ ಮೇಳಗಳ ಸಂಖ್ಯೆ ಹೆಚ್ಚಾಗಿತ್ತು. ವೇಷಧಾರಿಗಳೆನಿಸಿಕೊಂಡವರ ಬೇಡಿಕೆ ಹೆಚ್ಚಿತ್ತು. ಅದುವಲ್ಲದೆ, ಈಗಾಗಲೇ ವೃತ್ತಿಪರ ವೇಷಧಾರಿಗಳು ಎನಿಸಿಕೊಂಡವರನ್ನು ಕರೆದುಕೊಂಡರೆ, ನನಗೆ ಬೇಕಾದ ರೀತಿಯ ಕೆಲಸ ನಿರ್ವಹಿಸಲು ಅವರು ಒಪ್ಪಲಾರರು ಎಂಬ ಅನುಭವವೇ ಆಗಿತ್ತು.

ಸ್ವಂತ ತಂಡ

ನಮ್ಮದೇ ಆದ ಒಂದು ತಂಡವನ್ನು ತಯಾರಿಸಬೇಕು. ಆಸಕ್ತಿ ಇರುವವರನ್ನು ಒಟ್ಟುಗೂಡಿಸಿ, ಅವರಿಗೆ ತರಬೇತಿ ಕೊಟ್ಟರೆ, ನಿರೀಕ್ಷೆಯಂತೆ ಕಲಾಪ್ರದರ್ಶನ ಮಾಡಬಹುದು ಎಂದು ಯೋಚಿಸಿದೆ.

ಆ ಯೋಚನೆಯನ್ನು ಕಾರ್ಯರೂಪಕ್ಕೆ ಇಳಿಸಹಬೇಕಾದರೆ ಟೆಂಟಿನ ಯೋಜನೆಯಂತೆ ಏಕಗಂಟಿನಿಂದ ಹಣ ಸುರಿಯುವುದನ್ನು ಕುರಿತು ಯೋಚಿಸಿ ಕಂಗೆಡಬೇಕಾಗಿರಲಿಲ್ಲ.

ಅದೇ ಮಳೆಗಾಲದಲ್ಲಿ-

ವೇಷಧಾರಿಗಳಾಗಬಹುದಾದ ಸುಮಾರು 15 ಮಂದಿ ಹುಡುಗರನ್ನು ಕಲೆಹಾಕಿದೆ. ನಮ್ಮ ಮನೆಯಲ್ಲೇ ಅವರ ಊಟೋಪಚಾರಗಳ ವ್ಯವಸ್ಥೆಯಾಯಿತು.

ಹಗಲು ಹೊತ್ತಿನಲ್ಲಿ ಅವರಿಗೆ ಯಕ್ಷಗಾನದ ನಾಟ್ಯಾಭ್ಯಾಸವಾಯಿತು. ರಾತ್ರಿ 2 ಗಂಟೆಯವರೆಗೆ ಕಥಾ ಪ್ರಸಂಗಗಳ ಪುಸ್ತಕಗಳನ್ನು ಹಿಡಿದುಕೊಂಡು ಬೇರೆಬೇರೆ ಕಥೆಗಳ ಅಭ್ಯಾಸ ನಡೆಯಿತು.

ಒಬ್ಬೊಬ್ಬರಿಗೇ ಬೇರೆಬೇರೆ ಪಾತ್ರಗಳನ್ನು ಹಂಚಿಕೊಟ್ಟು ನೋಡುವುದೂ, ಮಾತುಗಳಲ್ಲಿ ರಸಪೋಷಣೆಯಾಗುವಂತೆ ಪ್ರಯತ್ನಿಸುವುದೂ ನಡೆದಿತ್ತು. ಅದರೊಂದಿಗೇ ‘ಕಾಲು ಬಲ’ವಿದ್ದವರೂ, ‘ನಾಲಿಗೆಯಲ್ಲಿ ಮುಂದೆ’ ಎಂದಾದವರೂ, ಅವೆರಡಕ್ಕೂ ಸಮಾನವಾಗಿ ಗಮನ ಹರಿಸುವವರೂ ಯಾರೆಂದು ತಿಳಿದುಕೊಳ್ಳುವ ಕೆಲಸವೂ ಆಗುತ್ತಿತ್ತು.

ಯಕ್ಷಗಾನದಲ್ಲಿ ನಾಟಕದಂತೆ ಸಂಭಾಷಣೆಗಳನ್ನು ಉರು ಹೊಡೆಯುವ ಕೆಲಸ ಅಗತ್ಯ ಬೀಳುವುದಿಲ್ಲ. ಪ್ರಸಂಗದ ‘ಪದ’ಗಳನ್ನು ನೆನಪಿಟ್ಟರೆ ಸಾಕಾಗುತ್ತದೆ. ಅರ್ಥಕ್ಕೆ ಅಗತ್ಯವಾದ ಮಾತುಗಳನ್ನು ಸ್ವಯಂ ವಾಕ್ಯರಚನೆಯಿಂದಲೇ ಹೇಳು್ತಾ ಹೋದರೆ ಭಾವನಾ ವಿಕಾಸಕ್ಕೆ ಅವಕಾಶ ದೊರೆಯುತ್ತದೆ. ಎಂಬ ವಿಷಯವನ್ನೂ ಅವರ ತಲೆಗೆ ತುರುಕಲು ಪ್ರಯತ್ನ ನಡೆದಿತ್ತು.

ಮಳೆಗಾಲದಲ್ಲೇ ಒಂದು ದಿನ, ಧರ್ಮಸ್ಥಳಕ್ಕೆ ಹೋಗಿದ್ದಾಗ, ಕಲಾವಿದರ ತಂಡವೊಂದು ನಮ್ಮಲ್ಲಿ ಸಿದ್ಧವಾಗುತ್ತಲಿರುವ ವಿಷಯವನ್ನು ಶ್ರೀ ಹೆಗ್ಗಡೆಯವರಲ್ಲಿ ಪ್ರಸ್ತಾಪಿಸಿದೆ. ಆ ಸುದ್ದಿಯನ್ನು ಕೇಳಿ ಅವರು ಸಂತೋಷ ವ್ಯಕ್ತಪಡಿಸುದರಲ್ಲದೆ “ನಮ್ಮದೇ ಆದ ಒಂದು ಮೇಳ ಈ ರೀತಿಯಲ್ಲಿ ಹೊಸ ಕಲಾವಿದರನ್ನು ನಾವೇ ತಯಾರಿಸಿದರೆ ಸುಲಭವಾಗಿಯೇ ಆಗಬಹುದು. ಒಂದು ಅರ್ಧ ಮೇಳವನ್ನು ತಯಾರಿಸುವ ಈ ಯೋಜನೆ ಎಲ್ಲ ರೀತಿಯಿಂದಲೂ ಉತ್ತಮವಾಗಿದೆ” ಎಂದು ಆಶೀರ್ವದಿಸಿದರು.

ಮುಂದಿನ ವರ್ಷದ ತಿರುಗಾಟಕ್ಕೆ ಅತ್ಯುತ್ತಮವಾದ ವೇಷ- ಭೂಷಣಗಳನ್ನೇ ಹೊಸದಾಗಿ ಸಿದ್ಧಗೊಳಿಸಲು ವ್ಯವಸ್ಥೆ ಮಾಡಿ ಪ್ರೋತ್ಸಾಹಿಸಿದರು.

ಆ ವರ್ಷ ಯಾವ ತೊಂದರೆಯೂ ಇಲ್ಲದೆ ತಿರುಗಾಟ ಯಶಸ್ವಿಯಾಗಿಯೇ ನೆರವೇರಿತು.

ಸತತ ಅಭ್ಯಾಸ

ಮತ್ತೇನು ಹೊಸದಿದ್ದರೂ ಮಳೆಗಾಲದಲ್ಲಿ ಮನೆಗೆ ಬಂದಾಗ- ಯೋಚನೆಯಾಗಬೇಕಷ್ಟೆ.

ಕೆಲವೊಂದು ಕಥಾ ಪ್ರಸಂಗಗಳಲ್ಲಿ ನೃತ್ಯವನ್ನೇ ಸಂಪೂರ್ಣವಾಗಿ ತೋರಿಸಬೇಕಾದ ಸಂದರ್ಭಗಳಲ್ಲಿ (ಉದಾ: ಮೋಹಿನಿ-ಭಸ್ಮಾಸುರ), ಭರತನಾಟ್ಯ- ಕಥಕ್ಕಳಿಗಳ ಕೆಲವು ಮುದ್ರೆಗಳನ್ನೂ ಉಪಯೋಗಿಸಿದರೆ ಕಳೆಗಟ್ಟಬಹುದು ಎಂದು ಯೋಚಿಸಿದೆ. ಕೇರಳ ಕಲಾಮಂಡಲದ ಸಂಪರ್ಕವಿದ್ದ ನೃತ್ಯಶಿಕ್ಷಕ ಶ್ರೀ ಪರಮಶಿವಮ್ ಎಂಬವರನ್ನು ಕೊಟ್ಟಿಯಿಂದ ಕರೆತರಿಸಿ. ಮನೆಯಲ್ಲೇ ನಾನೂ ನನ್ನ ಶಿಷ್ಯರೂ ಅಭ್ಯಾಸ ಮಾಡಿದೆವು. ಮಳೆಗಾಲವೆಲ್ಲ ನಮ್ಮ ಮನೆ ನಾಟ್ಯಮಂದಿರವೇ ಆಗಿತ್ತು.

ಮಳೆಗಾಲದ ತರುವಾಯದ ತಿರುಗಾಟದಲ್ಲಿ ಕಲಿತು ತಂದುದನ್ನೂ ಉಪಯೋಗಿಸಿ ನೋಡಿದೆ. ಜನರು ಮೆಚ್ಚುವ ಸೂಚನೆಯೇ ಕಂಡುಬಂತು. ಯಕ್ಷಗಾನದಲ್ಲಿ ನೃತ್ಯದ ಸೆಳವು ಹೆಚ್ಚು. ನೃತ್ಯದ ಕಡೆಗೆ ಜನರ ಒಲವೂ ಇದೆ- ಎಂಬುದನ್ನು ತಿಳಿದುಕೊಂಡು, ನರ್ತನ ವೈಶಿಷ್ಟ್ಯಗಳ ಪ್ರಯೋಗವನ್ನೇ ಮಾಡಬೇಕು ಎಂದುಕೊಂಡೆ.

ಕೆಲವೊಂದು ವರ್ಷಗಳ ನಂತರ, ತಿರುಗಿ ಮೂಡಬಿದರೆಯಲ್ಲೇ ಒಂದು ಥಿಯೇಟರ್ನ ಕ್ಯಾಂಪ್ ಮಾಡಬೇಕೆನ್ನಿಸಿ, ವ್ಯವಸ್ಥೆ ಮಾಡಿ ಆಡತೊಡಗಿದೆ.

ಅಲ್ಲಿ-

ನಾನು ಅಭ್ಯಾಸ ಮಾಡಿದ್ದ ಶಿವತಾಂಡವ ನೃತ್ಯವನ್ನು ಪ್ರದರ್ಶಿಸಿಯೇ ತೀರಬೇಕೆಂಬ ಒತ್ತಾಯ ಒಂದು ದಿನ ಪ್ರೇಕ್ಷಕ ವರ್ಗದಿಂದ ಬಂದಿತು. ಆಗ ನಾವು “ದಕ್ಷಯಜ್ಞ”ವನ್ನು ಆಡುವ ಕಾರ್ಯಕ್ರಮವಿರಿಸಿಕೊಂಡಿದ್ದೆವು.

ಜನರ ಒತ್ತಾಯದಿಂದ ಕಥೆಗೆ ಹೊರತಾಗಿಯೇ ತಾಂಡವನೃತ್ಯವನ್ನು ಪೂರೈಸಿದೆನಾದರೂ, ತಾಂಡವವನ್ನು ಆಡುವ ಭಾಗವೂ ಇರುವ ಕಥೆ ಇದ್ದರೆ ಚೆನ್ನಿತ್ತು ಎನಿಸಿತು.

ನೃತ್ಯ ವೈಭವ

ದಕ್ಷಯಜ್ಞದ ಕಥಾ ಭಾಗದಲ್ಲಿ ಆ ಅವಕಾಶವಿರಲಿಲ್ಲ.

ದಾಕ್ಷಾಯಿಣಿಯ ಮರಣ ವಾರ್ತೆಯನ್ನು ಕೇಳಿದ ಶಿವನು ಕೋಪೋದ್ರಿಕ್ತನಾಗಿತನ್ನ ಜಟೆಯನ್ನು ನೆಲಕ್ಕೆ ಅಪ್ಪಳಿಸಿ ವೀರಭದ್ರನನ್ನು ಸೃಷ್ಟಿಸುವ ಸನ್ನಿವೇಶವೊಂದಿದೆ.

ಆಗ, ಆವೇಶದ ವೇಷವನ್ನು ವೀರಭದ್ರನಾದವನು ಪ್ರೇಕ್ಷಕರಿಗೆ ಪರಿಚಯ ಮಾಡಿ ಕೊಡುವ ಒಂದು ಕ್ರಮವೂ ವೈಶಿಷ್ಟಪೂರ್ಣವಾದುದು. ಶಿವನ ಪಾತ್ರಧಾರಿ, ಆ ಹೊತ್ತಿನಲ್ಲಿ ರಂಗಸ್ಥಳದಲ್ಲೇ ಇರಬೇಕು. ಆದರೆ ಸ್ತಬ್ಧನಾಗಿ ನಿಂತಿದ್ದು ಮೂಕಪ್ರೇಕ್ಷಕನಾಗಿ ನಿಲ್ಲುವುದೇ ಅದುವರೆಗಿನ ‘ದಕ್ಷಯಜ್ಞ’ಗಳ ವಾಡಿಕೆಯಾಗಿತ್ತು.

ನಾನು ವಾಡಿಕೆಯನ್ನು ಮುರಿದಿದ್ದೆ. ವೀರಭದ್ರನ ವೇಷಧರಿಸಿದ ಶ್ರೀ (ಬಣ್ಣದ) ಮಾಲಿಂಗನವರು ಸಂಪ್ರಾದಯದ ಪೂರ್ಣನೃತ್ಯದ ವೈಭವವನ್ನು ಜನರಿಗೆ ತೋರಿಸುತ್ತಿದ್ದಂತೆಯೇ, ನಾನೂ ನನ್ನ ಕೆಲಸ ಮಾಡುತ್ತಿದ್ದೆ.

ತನಗಾದ ಅಪಮಾನದ ಸೇಡನ್ನು ತೀರಿಸುವ, ನಿರ್ದಿಷ್ಟ ಕಾರ್ಯಕ್ಕಾಗಿ ಜನಿಸಿದ ಮಗನ ಜನನದಿಂದ, ಶಿವನಿಗಾದ ಆನಂದ- ಅವನಲ್ಲಿ ಇರಿಸಿಕೊಂಡ ನಿರೀಕ್ಷೆಗಳನ್ನು ಮನೋಭಾವಗಳನ್ನು ನೃತ್ಯದಲ್ಲೇ ಪ್ರದರ್ಶಿಸುತ್ತಾ ಆಗಾಗ ಮಾಲಿಂಗನವರಿಂದ ಪ್ರತಿಕ್ರಿಯೆಗಳ ಪ್ರದರ್ಶನ ಮಾಡಿಸಿಕೊಳ್ಳುತ್ತಿದ್ದೆ.

ಹೆಚ್ಚಾಗಿ, ಈ ಪ್ರವೇಶ ನೃತ್ಯವೇ ಅರ್ಧಗಂಟೆಯ ಕಾಲ ನಡೆಯುತ್ತಿತ್ತು. ಸ್ಫೂರ್ತಿಯುತ ವಾತಾವರಣ, ಹಿಮ್ಮೇಳದ ಪೂರ್ಣ ಸಹಕಾರವೇ ಅದಕ್ಕೆ ಮಿತಿ ಎನಿಸಿತ್ತು. ತುಂಬಿದ ಸಭೆ ಇದ್ದರೆ, ಅದು ಮತ್ತೂ ಕಳೆಗಟ್ಟುತ್ತಿತ್ತು. ನೃತ್ಯಗತಿಯ ವಿವಿಧ ಪ್ರಾಕಾರಗಳು ತನ್ನಿಂದ ತಾನೇ ಮುಂದುವರಿಯುಷ್ಟರ ಮಟ್ಟಿಗೂ ಅದು ಅಭ್ಯಾಸವಾಗಿ ಹೋಗಿತ್ತು. ತಲೆಯಲ್ಲಿ ಬೇರೆ ಏನಾದರೂ ಯೋಚನೆ ಬಂದರೂ ತೊಡಕಾಗುತ್ತಿರಲಿಲ್ಲ.

ಅಂದು ಕೂಡಾ-

ವೀರಭದ್ರ ಬಂದಿದ್ದ. ಕುಣಿಯುತ್ತಲಿದ್ದ ನಾನು ಭೈರವಿ-ಅಷ್ಟತಾಳದ “ಕೊಲ್ಲು ಆ ದಕ್ಷಗಿಕ್ಷಾದ್ಯರ” ಎಂಬ ಪದ್ಯಕ್ಕೆ ಕುಣಿದು, ರೌದ್ರರಸವನ್ನು ಚೆಲ್ಲುತ್ತಿದ್ದಂತೆ ಕಾಣಿಸಿಕೊಂಡಿದ್ದಾಗ…. ಇಂತಹದೇ ರಸಪೂರ್ಣ ಕಥಾಭಾಗವು ತುರಂಗಭಾರತದಲ್ಲೊಂದು ಕಡೆ ಇರುವ ವಿಚಾರ ನೆನಪು ಆಯಿತು.

ಐದು ತಲೆಗಳಿದ್ದ ಬ್ರಹ್ಮನ ಒಂದು ತಲೆಯನ್ನು ಚಿವುಟಿ ತೆಗೆದ ಈಶ್ವರನು, ಕೈಗೆ ಆ ಕಪಾಲವನ್ನು ಕಚ್ಚಿಸಿಕೊಂಡು, ಕೈಲಾಸದ ಅಧಿಪತಿಯಾಗಿಯೂ ಬೀದಿಯ ಭಿಕಾರಿಯಾಗಿಯೂ ಕುಣಿದ ಕಥಾ ಸಂದರ್ಭ ನೆನಪಿಗೆ ಬಂತು.

‘ಇದೇ ನನಗೆ ಬೇಕು!’

‘ಪ್ರಸಂಗ ರಚನೆ ಆ ಕಥೆಯಲ್ಲಿ ಆಗಿಲ್ಲ.’

‘ಆಗದಿದ್ದರೆ ಮಾಡಿಸೋಣ!’

ಯೋಚನೆಯ ತಾಳಕ್ಕೆ ಮುಕ್ತಾಯ ಹಾಕಿದೆ. ಕಥೆಯ ಮುಂದಿನ ಓಟದ ಕಡೆಗೆ ಗಮನ ಕೊಟ್ಟೆ.

ಮುಂಜಾನೆಯೇ ಮತ್ತೆ ಅದರ ಯೋಚನೆ. ಬಿಡದಿಯಲ್ಲಿ ಮಲಗಿದ್ದಂತೆ, ಈ ಕಪಾಲದ ಕಥೆಯನ್ನು ಆಡಬೇಕು. ಪ್ರಸಂಗವನ್ನು ಬರೆಸಲೇಬೇಕು ಎಂದು ತೀರ್ಮಾನಿಸಿದೆ.

ಹೊಸ ಪ್ರಸಂಗಗಳನ್ನು ರಚಿಸುವ ಆಸಕ್ತಿ ಇದ್ದ ಮಹನೀಯರೆಲ್ಲ ಮೂಲೆಗೇ ಉಳಿದಿದ್ದರು. ತಮ್ಮ ಸಂತೋಷಕ್ಕೆಷ್ಟೆ ಬರೆದು ಇರಿಸಿದ ಕೆಲವು ಪ್ರಸಂಗಗಳ ಕರ್ತೃಗಳು, ಅವುಗಳನ್ನು ತಮ್ಮಲ್ಲೇ ಭದ್ರವಾಗಿ ಇರಿಸಿಕೊಂಡಿದ್ದರು.

ಯಾವ ರೀತಿಯಲ್ಲೂ ಪ್ರಯೋಜನ ಕೊಡದ ಆ ಒಂದು ವಿದ್ಯೆಯನ್ನು ನೆಚ್ಚಿ ಬಾಳುವುದಾದರೂ ಹೇಗೆ? ಇದ್ದರೆ ಇರುತ್ತವೆ- ಮಸಿಯಿಂದ ಕಪ್ಪಾದ ಕೆಲವು ಕಾಗದಗಳು ಎಂಬಷ್ಟು ಉಪೇಕ್ಷಯೂ ಅವರಿಗೆ ಇತ್ತು.

ನನಗಾಗಿ ಈ ಕಥೆಯ ಪ್ರಸಂಗವನ್ನು ರಚಿಸಿ ಕೊಡುವವರು ಯಾರು?

ಆಗ ನಮ್ಮ ಸಮೀಪದಲ್ಲೇ ಇದ್ದ ‘ಹಿತ್ತಲ ಗಿಡ’ ಒಬ್ಬರ ನೆನಪು ಬಂತು.

ಕಾಸರಗೋಡು ತಾಲೂಕಿನ ಚಿಪ್ಪಾರು ಗ್ರಾಮದ ಕಜೆ ಎಂಬ ಹಳ್ಳಿ ಮೂಲೆಯಲ್ಲಿ ಶ್ರೀ ವೆಂಕಟರಮಣ ಭಟ್ಟ ಎಂಬವರು ಒಬ್ಬರು ಇದ್ದರು. ಅತ್ತಿತ್ತಣ ಹಳ್ಳಿಗಳಲ್ಲೆಲ್ಲ ಅವರನ್ನು ತಿಳಿದವರು ಬಹಳ ಮಂದಿ. ಅವರು ಆಶುಕವಿ. ಆದರೆ ಅವರನ್ನು ಮಾಸ್ತರ್ ಭಟ್ಟರೆಂದೇ ಎಲ್ಲರೂ ಹೇಳುತ್ತಿದ್ದ ಕಾರಣ, ಅವರ ನಿಜವಾದ ಹೆಸರೇ ಹೆಚ್ಚಿನವರಿಗೆ ಮರೆತುಹೋಗಿತ್ತು.

ಪ್ರತಿಭಾವಂತ ಕವಿ

ವಾಗ್ದೇವಿ ಅವರಿಗೆ ಒಲಿದು ಬಂದವಳು. ಅವರ ಬಡತನದ ಪರಿಣಾಮವಾಗಿ ಅವರನ್ನಾಡಿಕೊಂಡವರು ಎಷ್ಟೋ ಮಂದಿ.

ಅವರ ಶಬ್ದ ಭಂಡಾರ ಯಾವ ಕ್ರಮದಿಂದ ಬೆಳೆದಿತ್ತೋ ನಾನರಿಯೆ. ನಿರರ್ಗಳವಾಗಿ ಹರಿದು ಬರುವ ಕವಿತಾ ಪ್ರವಾಹಕ್ಕೆ ಅವರು ಸೆಲೆಯಾಗಿದ್ದರು. ಸಣ್ಣ ಮಗುವೊಂದು ಬಂದು ಮಾತನಾಡಿಸಿ ಕೇಳಿದರೂ, ಆ ಮಗುವಿಗೆ ಬೇಕಾದ ಕವಿತೆಯನ್ನು ಅಲ್ಲೇ ರಚಿಸಿ ಕೊಡುತ್ತಿದ್ದರು. ದೊಡ್ಡವರು ಹೇಳಿದರೂ ಹಾಗೆಯೇ. ಮತ್ತೇಭವಿಕ್ರೀಡಿತ ವೃತ್ತವಾಗಲಿ, ಪರಿವರ್ಧಿನಿ ಷಟ್ಪದಿಯಾಗಲಿ ಬೇಕಾದುದನ್ನು ಎಳ್ಳಷ್ಟೂ ದೋಷವಿಲ್ಲದೆ ಒದಗಿಸುತ್ತಿದ್ದರು. ಸೌಜನ್ಯದಮೂರ್ತಿ.

ಸಂಪೂರ್ಣ ಕಥಾ ಪ್ರಸಂಗ (400-500 ಪದ್ಯಗಳು) ಒಂದೇ ದಿನದಲ್ಲಿ ಅವರಿಂದ ರಚನೆಗೊಂಡುದೂ ಇದೆ. ಸಂಪೂರ್ಣ ಸುಬ್ರಹ್ಮಣ್ಯ ಚರಿತೆಯನ್ನೂ ಅವರು ರಚಿಸಿದ್ದಾರೆ.

ಅವರ ಸಾಹಿತ್ಯ ಭಂಡಾರವನ್ನು ಬರಹದಲ್ಲಿ ಸಂಗ್ರಹಿಸಿಡಲಾಗದುದು ನಮ್ಮ ದೌರ್ಭಾಗ್ಯ. ಅವರು ಕವಿತೆಗಳನ್ನು ರಚಿಸುತ್ತಿದ್ದರೇ ಹೊರತು ಬರೆದು ಇಡುವ ಅಭ್ಯಾಸ ಕಡಿಮೆ. ಕಾಗದವನ್ನೂ ಕೊಳ್ಳಲಾಗದ ಪರಿಸ್ಥಿತಿ ಅವರದು. ಅವರು ವಾಸವಿದ್ದ ಮನೆಯ ಗೋಡೆಗಳ ಮೇಲೆ ಕೆಲವೊಮ್ಮೆ ಕವಿತೆಗಳನ್ನು ಬರೆದು ಇರಿಸಿದ್ದರಂತೆ.

 

 

ಮದ್ದಿಗೆ ಒದಗಿದ ಸಿದ್ಧೌಷದ……

ವೆಂಕಟ ರಮಣ ಭಟ್ಟರನ್ನು ಮೂಡಬಿದರೆಗೆ ಕರೆತರಲು ಜನ ಕಳುಹಿಸಿದೆ. ಅವರು ಬಂದರು.

“ಏನಾಗಬೇಕಿತ್ತು, ಜ್ಞಾನದಾಸಕ್ತನೇ, ಅನು ಬಂದುದರಿಂದ ಆಗಲೇನಿಹುದು?” ಎಂದರು. ಪ್ರಾಸಬದ್ಧವಾಗಿ ಮಾತನಾಡುವುದು ಅವರಿಗೊಂದು ಶ್ರಮದ ಕಾರ್ಯವಲ್ಲ.

ಕಾಗದ ಲೇಖನಿಗಳನ್ನು ಸಿದ್ಧವಾಗಿರಿಸಿಕೊಂಡೇ, ಅವರಲ್ಲಿ ನನ್ನ ಅಗತ್ಯಗಳನ್ನು ವಿವರಸಿದೆ.

ಪ್ರಸಂಗ ರಚನೆ

“ಕಥೆಯನ್ನು ಹೇಳಿ” ಎಂದುದಕ್ಕೆ, ಆ ಕಥೆಯನ್ನು ವಿವರಿಸಿದೆ.

ನನ್ನ ಕಥಾ ವಿವರಣೆ ಒಂದರ್ಧ ಗಂಟೆಯ ಹೊತ್ತು ಮಾತ್ರ ನಡೆದಿರಬಹುದು.

“ಹೂಂ ಬರೆದುಕೊಳ್ಳಿ” ಎಂಬ ಅಪ್ಪಣೆ ಆಯಿತು.

ನಾನು ಬರೆದುಕೊಳ್ಳತೊಡಗಿದೆ.

ಅವರು,

ಶ್ರೀ ಧರ್ಮಸ್ಥಳವಾಸ ಮಿತ್ರ ಘನ ಸಂಕಾಶಾತ್ಮಕಂ ಸುಂದರಂ

ಖೇದಾರಣ್ಯ ದಾವಾಗ್ನಿ ರೂಪ ಭವ ಸಂಹಾರಾದ್ರಿ ಸದ್ಭೂಷಣಮ್

ವೇದಾರಾಧಿತ ಪಾದ ಪದ್ಮಯುಗಳಂ ನಿರ್ಲೇಪನಿಶ್ಚಿಂತಿತಂ

ಶ್ರೀ ಧರ್ಮಪ್ರಿಯ ನಿತ್ಯಮಂಗಳ ನಿರಾಕಾರಂ ಶುಭಾಂಗಂ ಭಜೇ

ಎಂಬ ಪದ್ಯದಿಂದ ಆರಂಭಿಸಿ ಹೇಳುತ್ತಾ ಹೋದರು.

ಮಾಸ್ತರ್ ಭಟ್ಟರ ಆಗಮನದ ವಿಚಾರ ಮಿತ್ರರು ಕೆಲವರಿಗೆ ತಿಳಿಯಿತು. ಅವರೂ ಅಲ್ಲಿ ಬಂದು ಸೇರಿದರು. ಒಬ್ಬಿಬ್ಬರು ನಮ್ಮ ವೇಷಧಾರಿಗಳೂ ಬಂದರು.

ಪದ್ಯಗಳನ್ನು ಅವರು ಹೇಳುತ್ತಾ ಹೋದಂತೆ, ಬರೆದುಕೊಳ್ಳುವ ಕೆಲಸವನ್ನು ನಾನು, ಶ್ರೀ ಕೆ. ರಾಮಚಂದ್ರ ಬಲ್ಯಾಯರು, ಶ್ರೀ ಕೆ. ಸುಬ್ಬಣ್ಣ ಭಟ್ಟರು ಮತ್ತು ಇನ್ನೊಬ್ಬರು ಮಿತ್ರರು ಒಬ್ಬರ ಹಿಂದೊಬ್ಬರಂತೆ ಮಾಡಿ ಮುಗಿಸಿಕೊಂಡೆವು.

ಎರಡೇ ದಿನಗಳಲ್ಲಿ ಪ್ರಸಂಗ ರಚನೆ ಪೂರ್ಣವಾಯಿತು. ಬರೆದು ಬರೆದು ನಮ್ಮ ಕೈಗಳಉ ಸೋತಿದ್ದುವಷ್ಟೆ; ಕವಿಯ ಬಾಯಿಯನ್ನು ಸೋಲಿಸಲಾಗಲಿಲ್ಲ.

ಹಾಗೆ ಸೃಷ್ಟಿಯಾದ “ಬ್ರಹ್ಮ ಕಪಾಲ” ಪ್ರಸಂಗವನ್ನು ನಮಗೆ ಇತ್ತವರು ಈಗ ಇಲ್ಲವಾಗಿದ್ದಾರೆ.

ಇತರರ ಮಟ್ಟಿಗೇನಾದರೂ ಆಗಲಿ, ನನಗಂತೂ ಆ ಹಿತ್ತಲ ಗಿಡ ಸಿದ್ಧೌಷಧವನ್ನೇ ಇತ್ತಿತ್ತು.

(ಬಡತನದಲ್ಲೇ ಕೊನೆಗಾಲವನ್ನು ಕಂಡ ಅವರ ಜೀವನವನ್ನು ನೆನೆದಾಗ ಕಂಬನಿ ಮಿಡಿಯುತ್ತದೆ.)

ಅವರು ನಮಗಿತ್ತು ಹೋದ “ಬ್ರಹ್ಮ ಕಪಾಲ”ದ ಪ್ರದರ್ಶನಕ್ಕಾಗಿ ಎರಡು ದಿನಗಳ ಅಭ್ಯಾಸ ನಡೆಸಿ, ಮಾರನೇ ದಿನದಂದು ಮೂಡಬಿದರೆಯಲ್ಲೇ ಪ್ರದರ್ಶನವನ್ನು ಆರಂಭಿಸಿದೆವು.

ಮೊದಲನೆಯ ಪ್ರಯೋಗದಲ್ಲೇ ಅದು ಯಶಸ್ಸಿನ ಸೂಚನೆಯನ್ನು ಸ್ಪಷ್ಟವಾಗಿ ತೋರಿಸಿತು. ಅದೊಂದೇ ಥಿಯೇಟರಿನಲ್ಲಿ  16 ದಿನಗಳ ಕಾಲ ನಡೆದು, ನಮಗೆ ವೀಳ್ಯ ಕೊಟ್ಟು ಕರೆಸಿ, ಆಟವಾಡಿಸಿ, ನಷ್ಟ ಮಾಡಿಕೊಂಡಿದ್ದ ಮಿತ್ರರೊಬ್ಬರ ನಷ್ಟವನ್ನೂ ತುಂಬಿಸಿಕೊಡಲು ದಾರಿಯಾಯಿತು.

ನನಗೆ ಬೇಕಾದಂತೆ ಕಥಾ ನಿರೂಪಣೆಯ ತಂತ್ರವನ್ನಷ್ಟು ಅಳವಡಿಸಿಕೊಂಡಿದ್ದೆ. ಶಿವನ ಪಾತ್ರವೂ ನನ್ನದೇ.

ಹಬ್ಬಿದ ಖ್ಯಾತಿ

ಕುಣಿಯಬೇಕೆನ್ನಿಸಿದಷ್ಟೂ ಕುಣಿದೆ. ಮಾತನಾಡಬೇಕು ಎನ್ನಿಸಿದಷ್ಟೂ ಮಾತನಾಡಿದೆ. ಬೇರೆಯವರನ್ನೂ ಕುಣಿಸಿ- ಮಾತನಾಡಿಸಿದೆ.

ಶಿವತಾಂಡವಕ್ಕೂ ಅಲ್ಲಿ ಅವಕಾಶವಿತ್ತು. ಲಾಸ್ಯಕ್ಕೂ ಎಡೆಯಿತ್ತು. ಶೃಂಗಾರದಿಂದ ಹಿಡಿದು ಭೀಭತ್ಸ, ಭಯಾನಕ ರಸದವರೆಗೂ ಪ್ರದರ್ಶನವಾಗುತ್ತಿತ್ತು.

ಒಂದು ದಿನವಂತೂ “ಭಿಕ್ಷಾಂದೇಹಿ” ಎಂದು ಬಂದ ಶಿವನನ್ನು ಹಂಗಿಸಿದ ಯಕ್ಷಿಗೆ ಶಾಸ್ತಿ ಮಾಡುವ ನೃತ್ಯದಲ್ಲಿ ಎರಡೂ ಕಾಲುಗಳನ್ನು ಒಮ್ಮೆಲೇ ನೆಲದಿಂದ ಎತ್ತಿ ಯಕ್ಷಿಯ ಪಾತ್ರಧಾರಿಯ ಎದೆಗೆ ಒದ್ದಿದ್ದೆನಂತೆ. ಆ ಹುಡುಗ ಬೆದರಿಕೊಂಡನಾದರೂ ಆಗುವ ನೋವನ್ನು ತಪ್ಪಿಸಿಲೆಂದು, ಮರುದಿನದ ಪ್ರದರ್ಶನದಲ್ಲಿ ಒದೆತದ ಸನ್ನಿವೇಶ ಬಂದಾಗ ಮೈಯನ್ನು ತಪ್ಪಿಸಿ ನಿಂತ. ನನ್ನ ಆಯ ತಪ್ಪಿತ್ತು ಆದರೆ ಕಾಲು ಬೇರೆ ಕಡೆಗೆ ತಾಗಿ ನೋವಾಯಿತಾದರೂ, ಆಗ ಗೊತ್ತಾಗಲಿಲ್ಲ. ಇತರರೂ ಗಮನಿಸುವಂತಿರಲಿಲ್ಲ.

ಆ ವರ್ಷ ಉಳಿದೆಲ್ಲ ಕಡೆಗಳಲ್ಲೂ ನಾವು “ಬ್ರಹ್ಮ ಕಪಾಲ” ವನ್ನೇ ಆಡುವ  ಪರಿಸ್ಥಿತಿ ಬಂದೊದಗಿತು.ಮೂಡಬಿದರೆಯಿಂದ “ಬ್ರಹ್ಮಕಪಾಲ”ದ ಖ್ಯಾತಿ ಬಹಳ ದೂರದವರೆಗೂ ಹಬ್ಬಿತ್ತು. ಮಂಗಳೂರಿನಿಂದಲೂ ಅದನ್ನು ನೋಡಲೆಂದೇ ಜನರು ಬಂದುದಿತ್ತು.

ಬೇರೇನನ್ನೂ ಜನರು ಆಡಗೊಡದೆ, ಬ್ರಹ್ಮಕಪಾಲವನ್ನು ಮಾತ್ರವೇ ಆಡಿರೆನ್ನುವಾಗ, ಜ್ವರ ಬಂದರೂ ಸರಿ, ಆಯಾಸವಿದ್ದರೂ ಸರಿ, ನಾನೇ ಒದ್ದಾಡಬೇಕಾಗುತ್ತಿತ್ತು. ಕೆಲವೊಮ್ಮೆ ಪೂರ್ವಾರ್ಧದ ಈಶ್ವರನ ಪಾತ್ರವನ್ನು ಇನ್ನೊಬ್ಬರು ನಿರ್ವಹಿಸಿ, ಉತ್ತರಾರ್ಧದ ಈಶ್ವರ ನಾನಾಗಬೇಕಾಗುತ್ತಿತ್ತು.

ಒಟ್ಟಿನಲ್ಲಿ “ಬ್ರಹ್ಮಕಪಾಲ” ನನ್ನನ್ನು ಸರಿಯಾಗಿಯೇ ಕಚ್ಚಿ ಹಿಡಿಯಿತು. ಹಿಂಡಿ ಹಿಪ್ಪೆ ಮಾಡಿತು. ಆದರೆ, ಅದು ನಾನಾಗಿಯೇ ತಂದುಕೊಂಡ ಬವಣೆ.

ನನ್ನ ವೈಯಕ್ತಿಕ ಕಷ್ಟಗಳಾಗಲೀ, ದೈಹಿಕ ಶ್ರಮವಾಗಲೀ ನನ್ನನ್ನು ಬೇಸರಗೊಳಿಸಿಲ್ಲ. ಸರಿಯಾಗಿ ನಿರ್ವಹಿಸಬಲ್ಲವರು ಇದ್ದರೆ, ಅತ್ಯದ್ಭುತ ಯಶಸ್ಸನ್ನು ಗಳಿಸುವ ಸಂತೃಪ್ತಿಕರ ಅಂಶವೊಂದನ್ನು ಯಕ್ಷಗಾನ ಕಲೆಗೆ ಸೇರಿಸಿದೆನೆಂಬ ಸಮಾಧಾನ ನನಗಿದೆ.

ಪಾಲುಗಾರಿಕೆ

ಮತ್ತೆ ಎರಡು ವರ್ಷಗಳಲ್ಲೂ ತಿರುಗಾಟ ನಡೆಯಿತು. ತಿಂಗಳುಗಟ್ಟಲೆಯ ಆಟಗಳು ಮುಂದಾಗಿಯೇ ನಿಶ್ಚಯವಾಗುತ್ತಲಿದ್ದ ಕಾರಣ, ಯಾವ ರೀತಿಯ ತೊಂದರೆಯೂ ನಮಗೆ ಕಾಣಿಸಲಿಲ್ಲ. ನೊಂದುಕೊಳ್ಳುವಷ್ಟರ ಮಟ್ಟಿನ ಕಿರುಕುಳಗಳೂ ಉದ್ಭವಿಸಲಿಲ್ಲ.

ಮುಂದಿನ ವರ್ಷದಲ್ಲಿ, ಭಾಗವತರೊಬ್ಬರ ಜೊತೆಗೆ ಪಾಲುಗಾರಿಕೆಯಿಂದ ಧರ್ಮಸ್ಥಳಮೇಳವನ್ನು ನಡೆಸಬೇಕೆಂದು ಶ್ರೀ ಹೆಗ್ಗಡೆಯವರ ಆದೇಶವಿತ್ತು. ಆದರೆ ಮೇಳ ಹೊರಟ ಒಂದು ತಿಂಗಳಲ್ಲೇ ನಿಶ್ಚಿತ ದಿನ ನಿಶ್ಚಯದ ಸಮಯ- ಇವುಗಳ ನಿಯಮವನ್ನು ಭಾಗವತರು ಪಾಲಿಸಪಾರರೆಂದು ಸ್ಪಷ್ಟವಾಗಿ ತೋರಿ ಬಂತು. ಪರಿಸ್ಥಿತಿ ಪ್ರಕೋಪಕ್ಕೆ ಹೋಗುವಂತಾದ ಒಂದು ಕಡೆಯ ಆಟದ ತರುವಾಯ ಧರ್ಮಸ್ಥಳಕ್ಕೆ ಹೋಗಿ “ನಾನೇನು ಮಾಡಲಿ?” ಎಂದು ಶ್ರೀ ಹೆಗ್ಗಡೆಯವರನ್ನೇ ಕೇಳಿದೆ.

“ಪಾಲುಗಾರಿಕೆ ಬೇಡ. ಸಂಪೂರ್ಣ ಹೊಣೆಗಾರಿಕೆಯನ್ನು ಭಾಗವತರೇ ಇಟ್ಟುಕೊಳ್ಳಲಿ” ಎಂದು ಹೆಗ್ಗಡೆಯವರು ಹೇಳಿದಂತೆ, ತಿರುಗಾಟದ ಉಳಿದ ದಿನಗಳಲ್ಲಿ ನಾನು ವೇಷ ಮಾತ್ರ ಹಾಕುತ್ತಾ ದಿನಗಳೆದೆ.

ಮಾರನೇ ವರ್ಷ, ಮೇಳ ತಿರುಗಿ ನನ್ನ ಪಾಲಿಗೇ ಬಂತು. ಆಡಳಿತವನ್ನು ನಿರ್ವಹಿಸುವ ಮತ್ತು ವೇಷವನ್ನೂ ಹಾಕುವ (ಹೆಚ್ಚಾಗಿ ಬ್ರಹ್ಮಕಪಾಲ ಪ್ರಸಂಗವೇ ಇರುತ್ತಿದ್ದ ಕಾರಣ) ಎರಡೂ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದಿಲ್ಲ ಎಂದು ಕಂಡು, ಮನೆಯಲ್ಲೇ ಉಳಿದಿದ್ದ ನನ್ನ ಸಹೋದರ ರಾಮನನ್ನೂ ಕರೆಸಿಕೊಂಡೆ. ವ್ಯವಸ್ಥಾಪಕನ ಕೆಲಸಕ್ಕೆ ಅವನಿದ್ದ ಕಾರಣ, ಆಟವಿಲ್ಲದ ದಿನಗಳಿಗೆ ಆಟಗಳನ್ನು ಜೋಡಿಸಿಕೊಳ್ಳುವ ಕೆಲಸ ನನಗೆ ಸುಲಭವಾಯಿತು.

ಅದರೊಂದಿಗೇ, ಇನ್ನೊಂದು ಹುಚ್ಚು ಸಾಹಸಕ್ಕೆ ಇಳಿಯುವ ಮನಸ್ಸೂ ಆಯಿತು.

ಸೀಮೋಲ್ಲಂಘನ

ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದ ಮೇಳಗಳು ಎಷ್ಟು ಪ್ರಸಿದ್ಧವಾಗಿದ್ದರೂ, ಜಿಲ್ಲೆಯ ಉತ್ತರ ಭಾಗದ ಉಡುಪಿ, ಕುಂದಾಪುರ ತಾಲ್ಲೂಕುಗಳಿಗೆ ಅದುವರೆಗೆ ಕಾಲಿಟ್ಟಿರಲಿಲ್ಲ. ಹಾಗೆಯೇ ಉತ್ತರ ಭಾಗದ ಮೇಳಗಳು ದಕ್ಷಿಣಕ್ಕೂ ಬರುತ್ತಿರಲಿಲ್ಲ. ಪಡುಬಿದ್ರೆಯನ್ನು ದಾಟಿ, ಯಾವ ಮೇಳವೂ ಮುಂದೆ ಹೋಗಿದ್ದ ನಿದರ್ಶನಗಳು ನನಗೆ ದೊರೆತಿರಲಿಲ್ಲ.

ಸುಮಾರು 70-80 ವರ್ಷಗಳ ಹಿಂದೆ ಕುಂಬಳೆಯ ಪ್ರಸಿದ್ಧ ವೇಷಧಾರಿ (ದಿವಂಗತ) ಶ್ರೀ ಗುಂಡ ಎಂಬವರು ಕೂಡ್ಲು ಮೇಳವನ್ನು ತನ್ನ ಯಜಮಾನಿಕೆಯಲ್ಲಿ ಕಲ್ಯಾಣಪುರದವರೆಗೆ ಕೊಂಡೊಯ್ದಿದ್ದರಂತೆ. ಅವರಿಗೆ ಆಟಗಳೇ ಸಿಗದೆ ಅವರು ಹಿಂದೆ ಬರಬೇಕಾಯಿತೆಂದು ಹೇಳುವುದನ್ನು ಕೇಳಿದ್ದೆ.

ಯಕ್ಷಗಾನದ ಮಟ್ಟಿಗೆ ನಮ್ಮ ಜಿಲ್ಲೆ ಇಬ್ಭಾಗವಾಗಿತ್ತು. ತೆಂಕು ಮತ್ತು ಬಡಗುತಿಟ್ಟುಗಳ ಪರಸ್ಪರ ಅವಹೇಳನ ನಡೆದಿತ್ತು.

ಸಾಂಪ್ರದಾಯಿಕವಾಗಿ ಬಂದ ವೇಷಭೂಷಣ-ಕುಣಿತ-ಹಾಡುಗಾರಿಕೆಗಳಲ್ಲಿ ಪದ್ಧತಿಗಳು ಎರಡಾಗಿದ್ದುವು. ಒಂದೇ ತಾಯಿಯ ಎರಡು ಕಣ್ಣುಗಳಲ್ಲಿ, ಅದು ಎಡ ಆದ್ದರಿಂದ ಚೆನ್ನಿಲ್ಲ- ಇದು ಬಲ, ಆದ್ದರಿಂದ ಸರಿಯಿಲ್ಲ ಎನ್ನುವವರು ಹೆಚ್ಚಿದ್ದರು.

ತೆಂಕಾಗಲಿ- ಬಡಗಾಗಲಿ ಯಕ್ಷಗಾನ, ಯಕ್ಷಗಾನವೇ ಅಲ್ಲವೆ? ಹೋಗಿಯೇ ನೋಡೋಣ ಎಂದು, ದೇವರ ಮೇಲೆ ಭಾರ ಹಾಕಿ ಮುಂದುವರಿದೆ.

ಇತರರಲ್ಲಿ ನನ್ನ ಯೋಜನೆಯನ್ನು ಹೇಳಿಕೊಂಡರೆ, ಖಂಡಿತವಾಗಿಯೂ ನಿರುತ್ಸಾಹಕ್ಕೆ ದಾರಿಯಾಗುವುದೆಂದು ತಿಳಿದಿತ್ತು. ಆದುದರಿಂದ ಭಾಗವತರಿಗೂ, ತಮ್ಮನಿಗೂ ಸುಳಿವುಕೊಡದೆ ಒಂದು ದಿನ ಶಿರ್ವಕ್ಕೆ ಹೋದೆ. ಅಲ್ಲಿನ ಊರ ಮಹನೀಯರೆನಿಸಿಕೊಂಡವರನ್ನು ಕಂಡು “ಒಂದು ಆಟವನ್ನು ಇಲ್ಲಿ ಆಡಲು ಅವಕಾಶ ಮಾಡಿಕೊಡಬೇಕು” ಎಂದು ಕೇಳಿಕೊಂಡೆ.

“ಖಂಡಿತಾ ಬೇಡ ಶಾಸ್ತ್ರಿಗಳೇ! ನಿಮ್ಮ ತೆಂಕುತಿಟ್ಟಿನ ಆಟವನ್ನು ಇಲ್ಲಿನ ಜನ ಮೆಚ್ಚುವುದಿಲ್ಲ. ಸುಮ್ಮನೆ ಬಂದು, ಧರ್ಮಸ್ಥಳ ಮೇಳದವರಿಗೆ ಹೀಗಾಯಿತಂತೆ ಎಂದು ಹೇಳಿಸಿಕೊಳ್ಳುವ ಅಪಖ್ಯಾತಿ ನಿಮಗೂ ಬೇಡ. ಶ್ರೀ ಸ್ಥಳಕ್ಕೂ ಬೇಡ” ಎಂದೇ ಕೆಲವರು ಉಪದೇಶ ಮಾಡಿದರು.

“ಇದು ಒಂದು ಪ್ರಯೋಗ, ಸೋಲೋ ಗೆಲವೋ ಒಂದು ಅನುಭವಕ್ಕಾಗಿಯಾದರೂ ಇಲ್ಲಿ ಒಂದು ಆಟವನ್ನು ಆಡಬೇಕೆಂದು ಇದ್ದೇನೆ.  ನೀವೆಲ್ಲರೂ ದೊಡ್ಡ ಮನಸ್ಸು ಮಾಡಿ ಸಹಕರಿಸಿ” ಎಂದು ಪುನಃ ಒತ್ತಾಯಿಸಿದೆ.

ಕೊನೆಗೆ ಅವರು “ನಿಮ್ಮ ಮೇಳದ ಒಂದು ಆಟಕ್ಕೆ ವೀಳ್ಯವೆಷ್ಟು?” ಎಂಬ ಪ್ರಶ್ನೆಗೆ ಬಂದರು.

“ನಿಮ್ಮ ಊರಲ್ಲಿ ಹೊಸತಾಗಿ ಆಡುವ ಆಟ. ಆದ ಕಾರಣ, ನಮ್ಮ ನಿರ್ಣಯದ ವೀಳ್ಯವನ್ನು ನಾನು ಹೇಳುವುದಿಲ್ಲ. ನಿಮಗಿಷ್ಟ ಬಂದಷ್ಟೇ ಕೊಡಿ. ಒಂದು ರಂಗಸ್ಥಳ, ದೇವತಾ ವಿನಿಯೋಗಕ್ಕೂ ಬಣ್ಣಗಾರಿಕೆಗೂ ಯೋಗ್ಯ ಜಾಗ, ಇಷ್ಟನ್ನು ಒದಗಿಸಿ. ಹಣದ ಪ್ರಶ್ನೆ ಆ ಬಳಿಕದ್ದು” ಎಂದುದಕ್ಕೆ ಅವರು ಒಪ್ಪಲೇ ಬೇಕಾಯಿತು. 15 ದಿನಗಳ ಅವಧಿ ಇರಿಸಿಕೊಂಡು, ನಾವು ಆಟವಾಡುತ್ತಿದ್ದ ಸ್ಥಳಕ್ಕೆ ಹಿಂದಿರುಗಿದೆ.

ನಡುವೆ ಇದ್ದ ಸಮಯವನ್ನು ಶಿರ್ವದಲ್ಲಿ ಆಟ ಕೊಡಲು ಒಪ್ಪಿದವರು ಸರಿಯಾಗಿ ಉಪಯೋಗ ಮಾಡಿದರು. ‘ಶಿರ್ವದ ಹೈಸ್ಕೂಲು ಆವರಣದಲ್ಲಿ ಶ್ರೀ ಧರ್ಮಸ್ಥಳ ಮೇಳದವರಿಂದ ಬ್ರಹ್ಮಕಪಾಲ’ ಎಂದು ಘೋಷಿಸಿ ಸಾಕಷ್ಟು ಪ್ರಚಾರವನ್ನು ಕರಪತ್ರಗಳಿಂದಲೂ ಇತರ ವಿಧಾನಗಳಿಂದಲೂ ಮಾಡಿದರು.

ಯಶಸ್ವಿ ಪ್ರದರ್ಶನ

ಆಟದ ದಿನ-

ಸೂರ್ಯಾಸ್ತವಾಗುವ ಮೊದಲೇ ಹೈಸ್ಕೂಲು ಮೈದಾನಿನಲ್ಲಿ ಜನಸಂದಣಿ ಸೇರಲು ಆರಂಭವಾಗಿತ್ತು. ನಾವು ರಂಗಸ್ಥಳಕ್ಕೆ ನಿಲ್ಲುವ ವೇಳೆಗೆ, ಏನಿಲ್ಲೆಂದರೂ 6-7 ಸಾವಿರ ಮಂದಿಯ ಸಭೆ ಸೇರಿತ್ತು. ನಮ್ಮ ಪದ್ಧತಿಯನ್ನು ಒಂದಷ್ಟೂ ವ್ಯತ್ಯಾಸಗೊಳಿಸದೆ, ರಾತ್ರಿ 10ಗಂಟೆಯಿಂದ ಸೂರ್ಯೋದಯದವರೆಗೂ “ಬ್ರಹ್ಮಕಪಾಲ”ದ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದೆವು.

 

 

ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು

ಶಿರ್ವದಲ್ಲಿ ಆಟ ಮುಗಿದ ತರುವಾಯ, ಮುಂದಿನ ಪ್ರದರ್ಶನಕ್ಕೆ ನನಗೆ ಅವಕಾಶ ಕೊಡಿ ಎಂದು ಬೇಡುವ ಸಂದರ್ಭ ಬರಲೇ ಇಲ್ಲ. ನಾನು ಬಣ್ಣ ತೆಗೆಯುತ್ತಿದ್ದಲ್ಲಿಗೆ ಬಂದ ಕಟ್ಪಾಡಿಯ ಶ್ರೀ ಮುದ್ದು ಸುವರ್ಣರು ನಮ್ಮೂರಿಗೆ ಬನ್ನಿ ಎಂದು ವೀಳ್ಯ ಕೊಟ್ಟರು. ಅವರ ಹಿಂದೆಯೇ  ಇನ್ನಿಬ್ಬರು ಬಂದರು. ಅವರಿಗಿಂತಲೂ ಮೊದಲೇ 3 ಆಟಗಳಿಗೆ  ವೀಳ್ಯ ಪಡೆದಿದ್ದ ಫಲಿಮಾರಿಗೆ, ಮಾತು ಕೊಟ್ಟಂತೆ ಹೋಗಿ ಆಟಗಳನ್ನು ಆಡಿದೆವು.

ಅಲ್ಲಿಯೂ “ಬ್ರಹ್ಮ ಕಪಾಲ” ಅದನ್ನು ನೋಡಲು ಉಡುಪಿ, ಮಲ್ಪೆ, ಕಲ್ಯಾಣಪುರಗಳಿಂದ ಜನರು ಬಂದಿದ್ದರು. ಅವರೆಲ್ಲ ಹಿಂತಿರುಗಿದಾಗ ಮಾಡಿದ್ದ ಪ್ರಚಾರವೇ ನಾವು ಕಟ್ಪಾಡಿ-ಕಾಪುಗಳ ಆಟ ಮುಗಿಸಿ, ಮಲ್ಪೆಯ ಸಮೀಪದ ಕ್ರೋಢಪುರಕ್ಕೆ (ಅದಕ್ಕೆ ಶಂಕರ ನಾರಾಯಣವೆಂಬ ಹೆಸರೂ ವಾಡಿಕೆಯಲ್ಲಿದೆ) ಬಂದಾಗ, ನಮಗೆ ಬಡಗು ನಾಡಿನಿಂದ ಅನಿರೀಕ್ಷಿತ ಸ್ವಾಗತವನ್ನು ಕೊಡಿಸಿತು.

“ವಿಶ್ವಾಮಿತ್ರ-ಮೇನಕೆ” ಮತ್ತು “ಕಂಸವಧೆ” ಎಂಬ ಎರಡು ಕಥಾಭಾಗಗಳನ್ನು ಇರಿಸಿಕೊಂಡು ಕ್ರೋಢಪುರದಲ್ಲ ನಾವು ಆಟವಾಡಿದೆವು. ಮೊದಲು ವಿಶ್ವಾಮಿತ್ರನಾಗಿಯೂ, ಅನಂತರ ಕೃಷ್ಣನಾಗಿಯೂ ಪಾತ್ರವಹಿಸಿದ ನಾನು, ಪ್ರೇಕ್ಷಕರ ಹರ್ಷಭರಿತ ಕರತಾಡನಗಳ ಅಂದವನ್ನು ಅನುಭವಿಸುತ್ತಿದ್ದೆ. ಜನಸಮೂಹದಲ್ಲಿದ್ದ, ಅಲ್ಲಿನ ಪಂಡಿತರೊಬ್ಬರು ನಮಗೆಲ್ಲ ಹಾರ ಸಮರ್ಪಣೆ ಮಾಡಿದರು.

ನಡುವೆ, ಅಂತಹ ಕಾರಣದಿಂದ ಕೆಲವುನಿಮಿಷಗಳ ಕಾಲ ಬಿಡುವು ದೊರೆತರೆ, ಮುಂದಿನ ಆಟ ನಡೆಯಲಿರುವ ಸ್ಥಳವನ್ನು ರಂಗಸ್ಥಳದಿಂದ ಕರೆದು ಹೇಳುವ ಪದ್ಧತಿ. ಮುಂದಿನ ಒಂದು ದಿನದ ವಿವರವನ್ನು ಸಾರಲೆಂದು ಹಾಸ್ಯಗಾರರು ರಂಗಸ್ಥಳವನ್ನು ಸೇರುವಾಗಲೇ ಅವರ ಕೈಗೆ  ಆರು ಕಡೆಗಳ ಆಟ ನಿರ್ಣಯವಾದ ಚೀಟಿ ಸೇರಿತು. ಅವುಗಳನ್ನೂ ಹೇಳತೊಡಗಿದಾಗ ಇನ್ನೂ ಕೆಲವು ಸ್ಥಳಗಳೂ ತಾರೀಕುಗಳೂ ಸೂಚಿಸಲ್ಪಟ್ಟವು. ಬೇಡಿಕೆ ಹೆಚ್ಚುವ ಸೂಚನೆ ಕಂಡು ಬಂದಾಗ, ಮುಂದಿನ ಎಲ್ಲ (ನಿಶ್ಚಯವಾದ) ಆಟಗಳ ಕುರಿತು ಸ್ಥಳ ಮತ್ತು ತಾರೀಕುಗಳ ಒಂದು ಯಾದಿಯನ್ನು ತಯಾರಿಸಿ ಅವರ ಕೈಗೆ ಕೊಟ್ಟಾಗ, ಒಟ್ಟು 33 ಆಟಗಳು ನಿಶ್ಚಯವಾದುದು ಗೊತ್ತಾಯಿತು.

ಆಟಗಳ ದಾಖಲೆ

“ಅಡ್ವಾನ್ಸ್ ಬುಕ್ಕಿಂಗ್”ನಲ್ಲಿ  33 ಆಟಗಳ ದಾಖಲೆಯನ್ನು ನಿರ್ಮಿಸಿದ ತಂಡ ನಮ್ಮದು ಮಾತ್ರವೇ ಎಂದು ಈಗಲೂ ಹೇಳಬಲ್ಲೆ.

ಉಡುಪಿಯಲ್ಲಿ- ಶ್ರೀ ಕೃಷ್ಣ ಸನ್ನಿಧಿಯಲ್ಲಿ ಶ್ರೀ ಶಿರೂರು ಮಠಾಧೀಶರ ಆಶ್ರಯದಲ್ಲಿ ಆಟವಾಡಿ, ಶಾಲು ಜೋಡಿ- ಫಲ ಮಂತ್ರಾಕ್ಷತೆ- ಮಾನಪತ್ರಗಳನ್ನು ಪಡೆದೆವು. ಒಂದು ವಾರ ಕಳೆದು ಶ್ರೀ ಪೇಜಾವರ ಮಠದ ರಾಜಾಂಗಣದಲ್ಲಿ ಆಡಿ, ಶ್ರೀ ಮಠಾಧೀಶರಿಂದ ಶಾಲು ಜೋಡಿ ಪಡಕೊಂಡೆವು.

ಯಶಸ್ವೀ ಪ್ರದರ್ಶನಗಳನ್ನೇ ಮಾಡುತ್ತಾ ಮುಂದುವರಿದ ಎಷ್ಟೋ ಊರುಗಳಲ್ಲಿ ಆಟವಾಡಿಸಿದ ಮತ್ತು ಆಟ ನೋಡಲು ಬಂದ ಕಲಾಭಿಮಾನಿಗಳು ಭಾಗವತರಾದಿಯಾಗಿ ಕೂಲಿಯಾಳುಗಳವರೆಗೆ  ಎಲ್ಲರಿಗೂ ಜರಿಶಾಲು- ಧೋತಿಗಳ ಸನ್ಮಾನ ಮಾಡಿದರು.

ಕುಂದಾಪುರ, ಶಂಕರನಾರಾಯಣ, ಬೈಂದೂರು ಈ ಕಡೆಗಳಿಗೆ-ಆಹ್ವಾನದ ಮೇಲೆಯೇ- ಮುಟ್ಟಿದಾಗ ಅಲ್ಲೆಲ್ಲ ಸ್ಥಳೀಯ ಪವಿತ್ರ ಕಾರ್ಯಗಳಿಗಾಗಿ ಸಹಾಯಾರ್ಥ ಆಟಗಳನ್ನೂ ಆಡಿದೆವು.

ಬಂದವರನ್ನು ಸ್ವಕೀಯರೆಂದು ಬಗೆಯುವಷ್ಟರ ಮಟ್ಟಿಗೆ ಜನರು ಮುಂದುವರಿದಾಗ, ನಾವು ಇದಕ್ಕೆ ಮೊದಲೇ ಈ ಕಡೆ ಬರಲಿಲ್ಲವೇಕೆ? ಎಂದುಕೊಂಡೆ. ಹೋಗದೆ ಇದ್ದ ಕಡೆಯ ಸ್ವಾಗತ ಅತ್ಯಪೂರ್ವವಾಗಿತ್ತು; ಆತ್ಯಾನಂದಕರವಾಗಿತ್ತು.

ಕಲಾಸಂಗಮ

ಕುಂದಾಪುರ ತಾಲ್ಲೂಕಿನ ಕಂಡ್ಲೂರಿನಲ್ಲಿ ನಮ್ಮ ಮೇಳವಿದ್ದ ದಿನ ಅಲ್ಲಿಂದ 13 ಮೈಲು ದೂರದ ಬಿಸಿಗಲ್ಲು ಕಟ್ಟೆಯಲ್ಲಿ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಆಟವಿದೆ ಎಂದು ತಿಳಿದು ಬಂತು. ಶ್ರೀ ಹಾರಾಡಿ ರಾಮ ಗಾಣಿಗರೂ (ರಾಷ್ಟ್ರ ಪ್ರಶಸ್ತಿ ಪಡಿದಿದ್ದಾರೆ) ಆ ಮೇಳದಲ್ಲಿನ ಪಾತ್ರಧಾರಿಯಾದ ಕಾರಣ ಅವರ ವೇಷವನ್ನು ನೋಡಬೇಕೆಂಬ ಆಸೆ ಮೂಡಿತು.

ಹಾಗೆ, ಪ್ರಥಮ ಭಾಗದಲ್ಲಿ ನನಗಿದ್ದ ವೇಷವನ್ನು ಮಾಡಿ ಮುಗಿಸಿ, ಬಿಸಿಗಲ್ಲು ಕಟ್ಟೆಗೆ ಹೋಗಿ, ಆಟದ ಸ್ಥಳವನ್ನು ಸೇರಿದೆ.

ನಾನು ಅಲ್ಲಿಗೆ ಬಂದ ವಿಷಯ ಯಾರ ಮೂಲಕವೋ ಶ್ರೀ ರಾಮ ಗಾಣಿಗರ ಕಿವಿಗೆ ಬಿತ್ತು. ಅವರು ಆಟವಾಡಿಸುವವರನ್ನು ಕರೆಸಿ ನನ್ನನ್ನು ಗೌರವದಿಂದ ಕುಳ್ಳಿರಿಸಲು ಏರ್ಪಾಡುಮಾಡಬೇಕೆಂದರಂತೆ. ವ್ಯವಸ್ಥಾಪಕರು ನನ್ನನ್ನು ಹುಡುಕಿ ಬಂದು, ಕೈ ಹಿಡಿದು ಕರೆದುಕೊಂಡು ರಂಗಸ್ಥಳದ ಕಡೆಗೆ ಹೋದರು.

ಕೇಂದ್ರಬಿಂದು

ವಿಶೇಷ ಅತಿಥಿಗಳು ಅಥವಾ ಗಣ್ಯವ್ಯಕ್ತಿಗಳು ಯಾರಾದರೂ ಆಟ ನೋಡಲು ಬಂದರೆ, ಅವರನ್ನು ರಂಗಸ್ಥಳದಲ್ಲಿ –ವೇಷಧಾರಿಗಳು ಕುಣಿಯುವ ಸ್ಥಳದಲ್ಲಿ –ಒಳಗೇ ಕುಳ್ಳಿರಿಸಿ ಗೌರವಿಸುವುದು ಅಲ್ಲಿನ ಪದ್ಧತಿಯಂತೆ.

ಆ ಪದ್ಧತಿಯ ನೆನಪು ಆದಾಗ, ಸಾವಿರ ಕಣ್ಣುಗಳ ಕೇಂದ್ರಬಿಂದುವಾಗಿ ಆ ಸ್ಥಳದಲ್ಲಿ ಕುಳ್ಳಿರುವುದಾದರೂ ಹೇಗೆ? ಎಂಬ ಭೀತಿ ನನ್ನನ್ನು ಕಾಡತೊಡಗಿತು.

ಧರ್ಮಕರ್ಮ ಸಂಯೋಗದಿಂದ, ಅಂದಿನ ಪ್ರದರ್ಶನಕ್ಕೆ ಕುಂದಾಪುರದಿಂದ ಯಕ್ಷಗಾನ ಕಲಾಸಕ್ತರಾದ ವಕೀಲ್ ಶ್ರೀ ಮುತ್ತಯ್ಯ ಹೆಗ್ಡೆಯವರೂ ತಮ್ಮ ಮಿತ್ರರೊಂದಿಗೆ ಆಗಮಿಸಿದ್ದರು. ಅವರಿಗೂ ಅದೇ ರೀತಿಯ ಗೌರವಾಸನ ವ್ಯವಸ್ಥೆಯಾಗಿತ್ತು. ಪರಿಚಿತರಾದ ಅವರೂ ಅಲ್ಲಿದ್ದರಾದ ಕಾರಣ ಧೈರ್ಯಮಾಡಿ ರಂಗಸ್ಥಳದ ಒಳಗೇ ಕುಳಿತು, ಬೆಳಗಿನ ತನಕವೂ ಆ ಕಲಾಪ್ರದರ್ಶನ ನೋಡಿ ಸಂತೋಷಗೊಂಡೆ.

ಪ್ರದರ್ಶನವನ್ನು ನೋಡುತ್ತಿದ್ದಂತೆ-“ವೇಷಭೂಷಣಗಳಲ್ಲಿ ಮತ್ತು ನಾಟ್ಯದ ಹೆಜ್ಜೆಗಾರಿಕೆಯಲ್ಲಿ ಅಲ್ಲಲ್ಲಿನ ಸಂಪ್ರಾದಯದಂತೆ, ನಮ್ಮ ತೆಂಕುತಿಟ್ಟಿಗೂ ಇಲ್ಲಿನ ಬಡಗುತಿಟ್ಟಿಗೂ ಅಲ್ಲ ಸ್ವಲ್ಪ ವ್ಯತ್ಯಾಸವಿರಬಹುದು. ಅದನ್ನೇ ಮಹಾಮೇರುವಾಗಿ ಮಾಡಿ ಕಲಾವಿದರೊಳಗೆ ಮತ್ತು ಕಲಾಸಕ್ತರೊಳಗೆ ಸಲ್ಲದ ವೈಷಮ್ಯ- ತಿರಸ್ಕಾರ ಅಸಹಕಾರಗಳನ್ನು ಉಂಟು ಮಾಡುವುದು ಅನ್ಯಾಯ.”

“ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಹಲವು ಮಕ್ಕಳಲ್ಲಿ ಒಬ್ಬೊಬ್ಬನ ಉಡುಗೆ ತೊಡುಗೆಗಳು, ಒಂದೊಂದು, ಬೇರೆ ಬೇರೆ ಬಣ್ಣಗಳಲ್ಲಿದ್ದರೇನು? ನಡೆ ನುಡಿಗಳಲ್ಲ ಮಂದ ಮತ್ತು ತೀವ್ರಗತಿಗಳಿದ್ದರೇನು? ಸ್ವರಭಾರದಲ್ಲಿ ಏರುಪೇರುಗಳು ಇದ್ದರೆ ತಪ್ಪೇನು? ತಾಯಿಯಾದವಳಿಗೆ ಮಕ್ಕಳೆಲ್ಲರೂ ಮುದ್ದು. ಅಣ್ಣ ತಮ್ಮಂದಿರೇಕೆ ಬಡಿದಾಡಿಕೊಳ್ಳಬೇಕು? ಅಥವಾ ಇತರರು ಅವರನ್ನೇಕೆ ಬಡಿದಾಡಿಸಬೇಕು?”

-ಎಂಬ ಭಾವನೆ ಮೂಡಿತು. ಕಲೆಯ ರಸಾಸ್ವಾದನೆ ಮಾಡುತ್ತಾ ಬೆಳಗಿನವರೆಗೂ ಕಳೆದ ನಮಗೆ, ಮುಂಜಾನೆ ಶ್ರೀ ಮುತ್ತಯ್ಯ ಹೆಗ್ಡೆಯವರೇ ಶ್ರೀ ಶೇಷಗಿರಿ ಭಾಗವತರ ಮತ್ತು ಶ್ರೀ ರಾಮ ಗಾಣಿಗರ ಪರಿಚಯ ಮಾಡಿಸಿಕೊಟ್ಟರು.

ಅಂದಿನದು ನನ್ನ ಯಕ್ಷಗಾನ ಜೀವನದಲ್ಲಿ ಒಂದು ರಸನಿಮಿಷದಂತೆ.

ಆ ವರ್ಷ, ಮೇಳವನ್ನೊಪ್ಪಿಸಿಕೊಡುವಾಗ, ನನ್ನ ಉತ್ತರ ಭಾಗದ ಪ್ರವಾಸ ಕಥನವನ್ನೂ ಶ್ರಿ ಮಂಜಯ್ಯ ಹೆಗ್ಡೆಯವರೊಡನೆ ವರದಿ ಮಾಡಿದೆ. ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಅವರು ಮುಂದಿನ ವರ್ಷಕ್ಕೆ ಇನ್ನೂ ಹೆಚ್ಚಿನ ತರಬೇತಿ ನಡೆಸಿ, ಉತ್ತರ ಕನ್ನಡಕ್ಕೂ ಹೋಗಿ ಬರಬೇಕೆಂಬ ಅಪ್ಪಣೆ ಕೊಡಿಸಿದರು.

ಪುನಃ ನೃತ್ಯ ಭ್ಯಾಸ

ಸಂತೋಷದಿಂದ ಮನೆಗೆ ಬಂದ ನಾನು, ಇನ್ನೂ ಹೆಚ್ಚಿನ ತರಬೇತಿಯ ವಿಚಾರದಲ್ಲೇ ಯೋಚನೆ ಮಾಡತೊಡಗಿದೆ. ಇತರರ ತರಬೇತಿಯಾಗುವ ಮೊದಲು ನನ್ನದಾಗಬೇಕಷ್ಟೆ? ಭಾವಪೂರ್ಣವಾಗಿ ಅಭಿನಯಿಸಿಯೇ ಪದ್ಯದ ಅರ್ಥವನ್ನು ವ್ಯಕ್ತಪಡಿಸಲು ಏನು ಮಾಡಬಹುದು ಎಂದು ಯೋಚಿಸುತ್ತಿರುವಾಗಲೇ, ಮಂಜೇಶ್ವರದಲ್ಲಿ ಶ್ರೀ ಲಕ್ಷ್ಮಣ ಭಕ್ತರು ತಮ್ಮ  ಮನೆ ಮಕ್ಕಳಿಗೆ ಶ್ರೀ ಪರಮಶಿವಮ್ ರವರಿಂದ ಭರತನಾಟ್ಯ ಅಭ್ಯಾಸ ಮಾಡಿಸುತ್ತಲಿರುವ ಸುದ್ದಿ ಕೇಳಿದೆ.

ಅಲ್ಪಸ್ವಲ್ಪ ಹಸ್ತಾಭಿನಯ ಮತ್ತು ಅಂಗವಿನ್ಯಾಸಗಳನ್ನು ಪುನಃ ಅವರಿಂದಲೇ ಪಡೆದುಕೊಳ್ಳವುದು ಒಳ್ಳೆಯದೆನಿಸಿತು. ಶ್ರೀ ಭಕ್ತರನ್ನು ಕೇಳಿಕೊಂಡಾಗ, ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗದಂತೆ ನೀವು ಬಂದು ಕಲಿಯಬಹುದು ಎಂದರವರು. ಅವರಿಂದ ಅನುಮತಿ ದೊರೆತೊಡನೆ, ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಟು, 13 ಮೈಲು ದೂರದ ಮಂಜೇಶ್ವರಕ್ಕೆ ಸೈಕಲಿನಲ್ಲಿ ಹೋಗಿ, ಶ್ರೀ ಪರಮಶಿವಮ್ ರವರಲ್ಲಿ ಸುಮಾರು ಒಂದುವರೆ ಗಂಟೆಯ ಕಾಲದ ಅಭ್ಯಾಸ ಮಾಡತೊಡಗಿದೆ.

ಕಥಕ್ಕಳಿಯಂತಹ ಹಸ್ತಾಭಿನಯ ಸಾಮರ್ಥ್ಯ ಯಕ್ಷಗಾನಕ್ಕಾಗಿ ನನಗೆ ಬೇಕಾಗಿತ್ತು. ಆದರೆ ಅದನ್ನು ಹೊಂದಿಸಿಕೊಡಲು ಶ್ರೀ ಪರಮಶಿವಮ್ ರವರಿಗೆ ಮೊದಮೊದಲು ಕಷ್ಟವಾಯಿತು. ನನಗೆ ಅವರಿಂದ ಏನಾದರೂ ಬೇಕೆಂದಾದರೆ, ಅದನ್ನು ಪಡೆವ ದಾರಿಯನ್ನು ನಾನೇ ಕಂಡುಹಿಡಿಯಬೇಕಾಯಿತು.

ನಾನೇ ಅವರೆದುರಿಗೆ ಯಕ್ಷಗಾನದ ಪದ್ಯಗಳನ್ನು ಹಾಡಿ, ತಾಳಗಳನ್ನು ಬಾರಿಸಿ- ಅವುಗಳ ಅರ್ಥವನ್ನು ವಿವರಿಸಿ, ಪದ್ಯಕ್ಕೆ ಕಥಕ್ಕಳಿಯ ಹೆಜ್ಜೆಗಳನ್ನೂ ಮುದ್ರೆಗಳನ್ನೂ ತೋರಿಸಿಕೊಡಲು ಪ್ರೇರೇಪಿಸಿದೆ. ಅವರು ಕುಣಿಯುವಾಗ, ಹೆಜ್ಜೆ-ಮುದ್ರೆಗಳನ್ನು ಯಕ್ಷಗಾನಕ್ಕೆ ಹೇಗೆ ಹೊಂದಿಸಿಕೊಳ್ಳಲು ಸಾಧ್ಯವೆಂದು ಯೋಚಿಸತೊಡಗಿದೆ. ಮಂಜೇಶ್ವರದಿಂದ ಮನೆಗೆ ಬರುವಾಗ ಅದರ ಬಗ್ಗೆಯೇ ವಿಮರ್ಶೆ ನಡೆಸಿ, ಮನೆಯಲ್ಲಿ ತಿರುಗಿ ಪುನರಾವರ್ತನ ಮಾಡತೊಡಗಿದೆ.

ಮಳೆಗಾಲ ಕಳೆಯುವವರೆಗೂ ಇದೇ ರೀತಿ ಪ್ರತಿದಿನ ಅಭ್ಯಾಸ ನಡೆಯತೊಡಗಿತು. ಕಥಕ್ಕಳಿಯಲ್ಲಿ ನಡೆಯುವುದನ್ನು ತಿಳಿದು, ಮುದ್ರೆಗಳಿಗೆ ಅವಕಾಶವಿಲ್ಲ ಎಂದು ತಿಳಿದುಕೊಂಡು ಸುಮ್ಮನಾಗಿದ್ದ ಯಕ್ಷಗಾನದ ಭಾಗಗಳಲ್ಲೂ ಮುದ್ರೆಗಳನ್ನು ನಿಯೋಜಿಸಿಕೊಳ್ಳಲು ಸಾಧ್ಯವಾಯಿತು. ಕಥಕ್ಕಳಿಯಲ್ಲಿ ಮಾತೇ ಇಲ್ಲದೇ, ವಿಶಿಷ್ಟವಾದ ಮುದ್ರೆಗಳಿಂದಲೇ ಕಾರ್ಯ ನಿರ್ವಹಣೆಯಾಗಬೇಕಾಗುತ್ತಿತ್ತು. ಯಕ್ಷಗಾನದಲ್ಲಿ ಮಾತೂ ಇದ್ದ ಕಾರಣ, ಪದ್ಯವನ್ನು ಹಾಡುವ ಹೊತ್ತಿಗೆ ‘ಮುದ್ರೆಗಳು ಇದ್ದರೆ’ ಪದ್ಯದ ಅಭಿನಯಕ್ಕೆ ಕಳೆ ಕಟ್ಟುವಂತಾಗುತ್ತಿತ್ತು. ಕಥಕ್ಕಳಿಯ ಮುದ್ರೆಗಳನ್ನು ನಾನು ಉಪಯೋಗಿಸಿಕೊಂಡೆ ಎನ್ನುವುದಕ್ಕಿಂತಲೂ ಅಲ್ಲಿಯ ಮುದ್ರೆಗಳ ‘ತಂತ್ರ’ವನ್ನು ಅರಿತು, ಆ ತಂತ್ರವನ್ನಷ್ಟೇ ಉಪಯೋಗ ಮಾಡಿಕೊಂಡೆ ಎಂದರೆ ಶ್ರೀ ಪರಮಶಿವಮ್ ರವರಿಗೆ ಅಪಚಾರ ಮಾಡಿದಂತಾಗಲಾರದು ಎಂದು ನಂಬಿದ್ದೇನೆ.

ಇದು ನನ್ನ ಮಾತಾಯಿತು. ಕೂಟದ ಇತರ ಶಿಷ್ಯರು ಮತ್ತು ಸಹೋದ್ಯೋಗಿಗಳಿಗೂ ಅವುಗಳ ಉಪಯೋಗ ಎಲ್ಲಿ ಮತ್ತು ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟೆ. ಅದುವಲ್ಲದೆ, ತೆಂಕುತಿಟ್ಟಿನ ನಾಟ್ಯದಲ್ಲೂ, ಕೆಲವೊಂದು ಕಡೆ ಇನ್ನಷ್ಟು ಮೃದತ್ವ ಬರಲು ಸಾಧ್ಯವಿರುವಂತೆ, ಬಡಗುತಿಟ್ಟಿನ ಕೆಲವು ಅಂಗವಿನ್ಯಾಸಗಳನ್ನೂ ಅನುಸರಿಸಲು ಸಾಧ್ಯವೆ ಎಂದು ನೋಡಿರೆಂದೆ.

ಕೆಲವೊಂದು ಸನ್ನಿವೇಶಗಳಲ್ಲಿ ಅದೂ ಸಾಧ್ಯವೆಂದು ಕಂಡುಬಂದಿತು. ನನಗೆ ಎಲ್ಲ ವಿಭಾಗಗಳೂ ಸಮಾನವಾದ ಕಾರಣ ಕಲೆಯನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ಮಾಡಿ ತೋರಿಸಲು ಅನುಕೂಲವಾಗುವುದಾದರೆ ಯಾವ ವಿಭಾಗದ ಸಹಾಯವನ್ನು ಬೇಕಾದರೂ ಪಡೆಯಬಹುದು ಎಂದೇ ತೋರಿತು.

ಉತ್ತರ ಕರ್ನಾಟಕದಲ್ಲಿ

ಆ ವರ್ಷದ ತಿರುಗಾಟದಲ್ಲಿ, ಪೀಠಿಕೆಯ ಮೊದಲು ಸೇರಿದ ಜನರನ್ನು ಸಮಾಧಾನ ಪಡಿಸುವ ಸಲುವಾಗಿ ಅಲ್ಲಲ್ಲಿ ‘ಸಭಾ ಲಕ್ಷಣ’ದ ಮಿತಿಯಿಂದ ಹೊರಗೆ ಸೇರಿಸಲಾಗುತ್ತಿದ್ದ ಕೆಲವು ಹಾಸ್ಯದ ಕಾರ್ಯಕ್ರಮಗಳ ಬದಲು ಭರತನಾಟ್ಯದ  ಕೆಲವೊಂದು ಸಣ್ಣ ನೃತ್ಯ ಕಾರ್ಯಕ್ರಮಗಳನ್ನೂ ಸೇರಿಸಿ ನೋಡಿದೆ. ಅದರಿಂದ ಸ್ತ್ರಿವೇಷ ಮತ್ತು ಪ್ರಸಂಗಪೀಠಿಕೆ ಇವುಗಳ ಮೊದಲು ಸಂಪ್ರದಾಯದ ರಂಗಪೂಜೆ ಮತ್ತು ದೇವತಾಪೂಜೆಗಳನ್ನು ಮಾಡಿದ ನಂತರದ  ಕಾಲವನ್ನೂ ಸದ್ವಿನಿಯೋಗ ಮಾಡಿಕೊಳ್ಳಬಹುದು. ಜನರೂ ಅದನ್ನು ಮೆಚ್ಚುತ್ತಾರೆ ಎಂದು ಖಚಿತವಾಯಿತು.

ಶ್ರೀಮಾನ್ ಮಂಜಯ್ಯ ಹೆಗ್ಗಡೆಯವರ ಆಣತಿ ಇದ್ದರೂ, ಆ ವರ್ಷ ಉತ್ತರ ಕನ್ನಡದತ್ತ ಹೋಗಲು ಸಾಧ್ಯವಾಗಲಿಲ್ಲ. ಮರುವರ್ಷ ಉತ್ತರ ಕನ್ನಡವೇ ನಮ್ಮನ್ನು ಕರೆಸಿಕೊಂಡಿತು.

ಉತ್ತರಕನ್ನಡದಲ್ಲಿ ನಾಲ್ಕಾರು ಯಕ್ಷಗಾನ ಮೇಳಗಳು ಇವೆ. ಹಲವಾರು ಮಂದಿ ಪ್ರಸಿದ್ಧ ಕಲಾವಿದರೂ ಇದ್ದಾರೆ. ಇದ್ದ ಮೇಳಗಳಲ್ಲಿನ ಕಲಾವಿದರಲ್ಲಿ ಹೆಚ್ಚಿನವರು ಕಲವಿಲಾಸಿಗಳಂತೆ ಇರುವುದರಿಂದಲೂ, ತಮಗೆ ಬೇಕೆನಿಸಿದ ವಿಷಯಕ್ಕೆ ಹೆಚ್ಚಿನ ಗಮನ ಕೊಟ್ಟು ಅದನ್ನು ಬೆಳೆಸಿಕೊಳ್ಳಲು ಅವರಿಗೆ ಅವಕಾಶವಾಗುತ್ತಿತ್ತೆಂದು ನಂಬಿದ್ದೇನೆ.

ಉತ್ತರ ಕನ್ನಡದಿಂದಲೂ ನಾನು ಕೆಲವೊಂದು ವೈಶಿಷ್ಠ್ಯಪೂರ್ಣ ಅಂಶಗಳನ್ನು ತಂದುದಿದೆ. ಅಲ್ಲಿಗೆ ಹೋದಾಗ ಪರಿಚಯ- ಸ್ನೇಹವಾದ ಕರ್ಕಿ ಮೇಳದ ಹಾಸ್ಯಗಾರ ಬಂಧುಗಳಲ್ಲಿ ಜಿಜ್ಞಾಸೆ ನಡೆಸಿದೆ. ಅಲ್ಲಿನ ಭಾಗವತರೊಬ್ಬರನ್ನು ತೆಂಕುತಿಟ್ಟಿನ ಕಡೆಗೇ ಎಳೆದಿದ್ದೇನೆ. ಕಲಾವಿದರಿನ್ನೊಬ್ಬರು ತೆಂಕುತಿಟ್ಟಿನ ಆಟಗಳಲ್ಲಿ ಪಾತ್ರವಹಿಸುವಂತಾಗಿದೆ.

ಕಲೆ-ಬೆರಿಕೆ

ಇವೆಲ್ಲ ಅನುಭವಗಳಿಂದ- ಯಕ್ಷಗಾನವೆಂದರೆ ನಾಡಿನ ಕಲೆ-ದಕ್ಷಿಣ ಕನ್ನಡದ ದಕ್ಷಿಣ-ಉತ್ತರಭಾಗಗಳೂ, ಉತ್ತರ ಕನ್ನಡದ ವೈಶಿಷ್ಟ್ಯಗಳ ಸಮನ್ವಯವಾಗುವುದಾದರೆ ಅದರಿಂದ ಯಾವ ತೊಂದರೆಯೂ ಇಲ್ಲ. ಕಲ್ಲಹಳ್ಳಿಯ ಮತ್ತು ಕೋಲಾರದ ಯಕ್ಷಗಾನ ಪ್ರದರ್ಶನಗಳನ್ನು ನಾನು ನೋಡಿಲ್ಲ. ಉತ್ತರ ಕರ್ನಾಟಕದ ದೊಡ್ಡಾಟ- ಅಟ್ಟದ ಆಟಗಳನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿಲ್ಲ. ನೋಡಿ ಮಾಡಿದ್ದರೆ, ನಮ್ಮ ಕಲಾಪ್ರದರ್ಶನಕ್ಕೆ ಕಳೆ ಕಟ್ಟಿಸುವ ಅಂಶಗಳು ಅವುಗಳಲ್ಲಿ ದೊರೆತಿದ್ದರೆ, ಖಂಡಿತವಾಗಿಯೂ ಅವುಗಳನ್ನು ಉಪಯೋಗಿಸುತ್ತಿದ್ದೆ ಎಂದು ಹೇಳುವ ನಿರ್ಧಾರಕ್ಕೆ ಬರುವಂತಾಯಿತು.

ಇದರಿಂದ, ‘ಕಲೆ-ಬೆರಿಕೆ’ಯ ಹೊಸ ಸಂಪ್ರದಾಯ ಒಂದನ್ನು ಸ್ಥಾಪಿಸಲು ಹೊರಟಿದ್ದೆಯಾ? ಎಂದು ಯಾರೂ ಕೇಳಬೇಕಾದ ಸಂದರ್ಭ ಬರುವುದಿಲ್ಲ. ಒಂದು ಕ್ಷಣದಲ್ಲಿ ಜನರೆದುರು ಮಿಂಚಿ ಮಾಯವಾದರೂ, ಮುಂಜಾನೆಯ ಅನಂತರವೂ ನೆನಪಿನಲ್ಲಿ ಉಳಿಯಬಹುದಾದ ಕೆಲವು ಭಾವ ವಿನ್ಯಾಸಗಳು, ರಸಾಸ್ವಾದನೆಗೆ ಸಿದ್ಧರಾಗಿ ಜನರು ಕುಳಿತಿರುವಾಗ ಅವರ ಮನತಣಿಸಲೆಂದೆ ಬರುವ ಕೆಲವೊಂದು ಚಮತ್ಕಾರಿಕ ಪದಗತಿಗಳು ಇವುಗಳನ್ನು ಯಕ್ಷಗಾನದಲ್ಲಿ ತರಲು ಸಾಧ್ಯವಿದೆ. ಎಂಬುದನ್ನು ಪ್ರತ್ಯಕ್ಷ ಸಾಧಿಸಿ ತೋರಿಸುವಂತಾಗಿದೆ.

ಬಾಲಲೀಲೆಯ ಕೃಷ್ಣನಾಗಿ, ನಾನು ಜನರ ಮನಸ್ಸು ಸೆಳೆದುದು ಇದ್ದರೆ, ಅದು ಅಂತಹ ‘ಪಡೆದ ಪದಗತಿ’ಯ ಬಲದಿಂದ.

ರಾಸಲೀಲೆಯ ಕೃಷ್ಣನಾಗಿ, ಕುಡಿಗಣ್ಣ ನೋಟವನ್ನು ತಾಳಬದ್ಧವಾಗಿ ಅತ್ತಿತ್ತ ಹಾಯಿಸಿ ಮುಗುಳುನಕ್ಕಾಗ- ಪ್ರಮದೆಯರು ಹಲವು ಮಂದಿ ನನ್ನಲ್ಲಿ ಮೋಹಗೊಂಡುದು ಇದ್ದರೆ ಅದು, ಕೈ ಕಾಲುಗಳಂತೆ ಮುಖವನ್ನೂ ನಾನು ಕುಣಿಸುವಂತೆ ಮಾಡಿದ ಕಲಾಸಂಗಮದಿಂದ.

ಮಾಯ ಶೂರ್ಪನಖಿ ಅಥವಾ ಮಾಯಾ ಅಜಮುಖಿಯಾಗಿ ರಂಗಸ್ಥಳಕ್ಕೆ ಬಂದು ಒನಪು ವಯ್ಯಾರಗಳನ್ನು ಕುಣಿ ಕುಣಿದು ಬೀರಿದಾಗ, ತಮ್ಮ ಇರವನ್ನು ಮರೆತು ಕೆಲವರು ‘ಕ್ಷಣಿಕ ರಸಿಕ’ರಾದುದು ಇದ್ದರೆ, ಅದು ನನ್ನ ಹತ್ತು ಮಂದಿ (ಪ್ರತ್ಯಕ್ಷ ಮತ್ತು ಪರೋಕ್ಷ) ನಾಡಿನ ಕೆಲವೆಡೆಗಳಿಗೆ ಹರಡಿದ ಗುರುಗಳು ನನ್ನಲ್ಲಿ ಮೂಡಿಸಿದ ಲಾಸ್ಯಭಾವಗಳಿಂದ.

ಶಿವನಾಗಿ ಕುಣಿದು ಚೌಕಿಗೆ ಬಂದಾಗ ಶ್ರೀ ಮಹಾಗಣಪತಿಯ ಪ್ರಸಾದ ಪಡೆಯಲೆಂದು ಅಲ್ಲಿ ಸೇರಿದ ವೃದ್ಧರು ನನ್ನ ಕಾಲಿಗೂ ಎರಗಿದ್ದರೆ, ಅದು ಕೆಲವು ನಿಮಿಷಗಳ ಕಾಲವಾದರೂ ನನ್ನೊಳಗೆ ನಾನು ಆಹ್ವಾನಿಸಿಕೊಂಡೆ ಎಂದು ಭಾವಿಸಲು ಸಾಧ್ಯವಾದ ನಾಟ್ಯದೇವನ ಒಲವಿನಿಂದ.

‘ಕೃಷ್ಣ ಸ್ವಪ್ನ’ವನ್ನು ಕಂಡ ಕಂಸನಾಗಿ ನಾನು ಮಂಚದಿಂದ (ಮೂರಡಿ ಎತ್ತರದ ಆಸನ-ಅಷ್ಟೆ) ಕೆಳಗೆ ಉರುಳಿ ಹೊರಳಿದಾಗ “ಅಯ್ಯಯ್ಯೋ! ಸಾಯುತ್ತಿದ್ದಾರೆ!” ಎಂದು ಎದುರು ಸಾಲಿನವರು ಕಿರಿಚಿಕೊಂಡಿದ್ದರೆ, ಅದು ಅಲ್ಲಿ-ಇಲ್ಲಿ, ಕಂಡು ಕಲ್ಪಿಸಿ ಪಡೆದ ಅಭಿನಯದ ಆಕರ್ಷಣೆಯಿಂದ. ಎಲ್ಲಿಂದ ಯಾವುದನ್ನೂ ತೆಗೆದರೂ, ಶ್ರದ್ಧೆಯಿಂದ ಅದನ್ನು ಉಪಯೋಗಿಸಿದಾಗ ನನಗೆ ಅದು ಉಪಕಾರವನ್ನೇ ಮಾಡಿದೆ; ಇತರರಿಗೂ ಮಾಡುತ್ತದೆ.

ಯಕ್ಷಗಾನ ಕಲಾಮಾತೆ ಒಂದು ಬಂಗಾರದ ಹೂವು. ನೋಡಿ ಆನಂದಿಸಿದ ವಿವಿಧ ವಿಭಾಗಗಳ ಕಲೆಯ ಸಮನ್ವಯವಾಯಿತು. ಎಂದರೆ ಆ ಹೂವಿಗೆ ಪರಿಮಳವೂ ಬರುತ್ತದೆ. ಅದು ಬೇಡವೆನ್ನಲಾದೀತೆ?

ಪರಿಮಳವನ್ನೊದಗಿಸುತ್ತೇವೆ ಎಂದಾಗ, ಜನತೆ ‘ಬೇಡ’ ಎಂದಿಲ್ಲ. ನಾನು ಒಪ್ಪುವಂತೆ ಒದಗಿಸು ಎಂದು ಮಾತ್ರ ಹೇಳಿದೆ. ನಮ್ಮ ದೃಷ್ಟಿಕೋನದಿಂದ ಮಾತ್ರವೇ ಕಾಣಿಸುವ ಬಂಗಾರದ ಹೂ ಇದ್ದರೆ ಸಾಕು. ಉಳಿದ ಕೋನಗಳಿಂದ ಅದು ಸರಿಯಾಗಿ ಕಾಣಿಸಲಾರದು ಎಂದಿಲ್ಲ. ಬಂದುದು ಪರಿಮಳವಲ್ಲ- ಸುವಾಸನೆಯಲ್ಲ ಎಂದೂ ಹೇಳಿಲ್ಲ.

ರೇಖೆ: ಹರಿಣಿ – ಕೃಪೆ: ಪ.ರಾಮಚಂದ್ರ

 

 

ಯಂತ್ರಗಳು, ಯಾಂತ್ರಿಕರು…..

ಆಧುನಿಕ ವಿಜ್ಞಾನವು ಇತ್ತ ಕೊಡುಗೆಗಳನ್ನು ನಾವು ಜೀವನದಲ್ಲಿ ಉಪಯೋಗಿಸಿಕೊಳ್ಳಲೇ ಬೇಕಷ್ಟೆ. ಕಲೆಗೂ ಕೆಲವು ಕೊಡುಗೆಗಳನ್ನು ವಿಜ್ಞಾನವು ಇತ್ತಿದೆ. ಇತರ ಕಲೆಗಳಂತೆ ಯಕ್ಷಗಾನದಲ್ಲೂ ಅವುಗಳ ಉಪಯೋಗವಾಗುತ್ತಿದೆ.

ಸರಿಯಾಗಿ ಉಪಯೋಗ ಮಾಡಿಕೊಳ್ಳುವ ಮೊದಲು, ವಿಜ್ಞಾನವಿತ್ತ ಹಲವು ಸಲಕರಣೆಗಳೂ, ‘ಅನುಕೂಲಗಳೂ’ ನನಗೆ ಉಪಟಳವಿತ್ತಿವೆ.

ನಾವು ಉತ್ತರ ಕನ್ನಡ ಪ್ರವಾಸ ಕೈಕೊಂಡ ಮಾರನೆಯ ವರ್ಷ ಡೇರೆಯ ಅಗತ್ಯ ನಮಗಾಯಿತು. ಅದಕ್ಕೆ ಮೊದಲೇ ಶ್ರೀ ಕೊರಗಪ್ಪ ಶೆಟ್ಟರು ತಮ್ಮ ಮೇಳಕ್ಕೆ ಒಂದು ಡೇರೆಯನ್ನು ಮಾಡಿಸಿಕೊಂಡಿದ್ದರು. ನಮ್ಮ ಮನೆಯಲ್ಲೇ ಬೇಕಾದ ವಸ್ತುಗಳನ್ನು ತರಿಸಿ ಹೊಸ ಡೇರೆಯೊಂದನ್ನು ತಂದೆಯವರು ಮಾಡಿಸಲು ತೊಡಗಿದರು. ಮೊದಲು ಹೊರಗಿನ ಆವರಣ ಮಾತ್ರ ಸಾಕು ಎಂದಿದ್ದುದು, ಅನಂತರ- ಆಟವಾಡುವ ಸ್ಥಳದ ಅರ್ಧ ಬಯಲನ್ನು ಮುಚ್ಚುವ ದೊಡ್ಡ ಡೇರೆಯಾಗಿಯೇ ಪರಿವರ್ತನೆಗೊಂಡಿತು. ಆಗ ಅದಕ್ಕೆ ತಕ್ಕಂತೆ ಕಟ್ಟಿ- ಬಿಚ್ಚಿ- ಜೋಡಿಸಿ ಸಾಗಿಸಬಲ್ಲ ಒಂದು ರಂಗಸ್ಥಳವೂ ಬೇಕು ಎನಿಸಿತು.

ಅನಂತರ ಬಂದುದು ವಿದ್ಯುತ್ತಿನ ವ್ಯವಸ್ಥೆ; ಧ್ವನಿವರ್ಧಕದ ಏರ್ಪಾಡು.

ಈ ನಡುವೆ ಸಂಚಾರ- ಸಾಗಾಟಗಳಿಗೆ ಅನುಕೂಲವಾಗುವಂತೆ ಒಂದು ‘ಷೆವರ್ಲೆ’ ವ್ಯಾನನ್ನೂ ಕೊಂಡಿದ್ದೆ. ಆದರೆ, ಖರೀದಿ ಮಾಡಿದ ಸ್ಥಳದಿಂದ ನಮ್ಮ ಮನೆಯನ್ನು ತಲಪುವ ಮೊದಲೇ ಅದು ಅಪಘಾತಕ್ಕೆ ಒಳಗಾಗಿ ತನ್ನ ಉದರದೊಳಗಿನ ವಿವಿಧ ಭಾಗಗಳ ಪರಿಚಯವನ್ನೂ (ಗ್ಯಾರೇಜಿನಲ್ಲಿ) ನನಗೆ ಮಾಡಿಸಿಕೊಟ್ಟಿತು.

ಬರಿಯ ರಥಿಕ ನಾನಾದರೆ ಸಾಲದು, ಸಾರಥಿಯೂ ಆಗುವುದು ಅಗತ್ಯ ಎಂದು ತಿಳಿದು ವ್ಯಾನನ್ನು ಓಡಿಸಲೂ ಕಲಿಯಬೇಕಾಯಿತು. ಹಲವಾರು ವರ್ಷಗಳವರೆಗೆ ಸೇವೆ ಸಲ್ಲಿಸಿದ ಆ ವ್ಯಾನಿನಲ್ಲಿ ‘ಡ್ರೈವಿಂಗ್’ ಎಂದರೆ ಎಷ್ಟು “ಸುಖಕರ”ವಾದ ವೃತ್ತಿ  ಎಂಬುದರ ಮರ್ಮವನ್ನು ನಾನರಿಯುವಂತಾಯಿತು.

ಒಂದು ಶಿಬಿರದಿಂದ ಇನ್ನೊಂದು ಶಿಬಿರಕ್ಕೆ ಐವತ್ತು ಮೈಲುಗಳ ಅಂತರವಿದ್ದರೂ ಬೆದರದೆ ಸಾಗುವ ಅನುಕೂಲ- ಆಗಾಗ ಕೈ ಕೊಡುತ್ತಿದ್ದರೂ – ಆ ವ್ಯಾನಿನಿಂದ ನಮಗಾಯಿತು.

ಮೈಕಾಸುರ

ಧ್ವನಿವರ್ಧಕಗಳನ್ನು ನಾವು ಉಪಯೋಗಿಸತೊಡಗುವಾಗ, ಸ್ವಲ್ಪ ವಿಳಂಬವಾಗಿತ್ತು. ಆದರೆ ಅದಕ್ಕೆ ಮೊದಲು ಕೆಲವು ಕಡೆ ಕರೆಸಿ ಆಡಿದ ಆಟಗಳಲ್ಲೂ, ಮಳೆಗಾಲಗಳಲ್ಲಿ ಮುಂಬಯಿಗೆ ತೆರಳಿದ್ದಾಗಲೂ ‘ಮೈಕ್’ನ ಒಳಗಿನಿಂದ ನನ್ನ ಮಾತು ಹೊರಡಬೇಕಾದರೆ ಹೇಗೆ ನಿಲ್ಲಬೇಕು, ಎಲ್ಲಿ ಕುಣಿಯಬೇಕು ಎಂಬುದನ್ನು ತಿಳಿದುಕೊಂಡಿದ್ದೆ. ಆದುದರಿಂದ ವೈಯಕ್ತಿಕವಾಗಿ ನನಗೆ ಅಷ್ಟೊಂದು ಶ್ರಮವಾಗಲಿಲ್ಲವಾದರೂ, ಇತರರ ಮಟ್ಟಿಗೆ ‘ಮೈಕಾಸುರನೆಲ್ಲಿರುವ?’ ಎಂದು ಆಗಾಗ ನೆನಪು ಮಾಡಿಕೊಳ್ಳುವ ಪ್ರಮೇಯ ಬಂದೊದಗಿ ಆರಂಭದ ದಿನಗಳಲ್ಲಿ ಕಷ್ಟವಾಯಿತು.

ರಂಗಸ್ಥಳದ ಯಾವ ಭಾಗದಲ್ಲಿ ಅದನ್ನು ತೂಗು ಹಾಕಿದರೆ, ಸಂದರ್ಭವಶಾತ್ ಸಭೆಗೆ ಬೆನ್ನು ತೋರಿಸಿ ಮಾತನಾಡಿದವನ ಮಾತೂ ಕೇಳಿಸುವಂತಾಗಬಹುದು ಎಂದು ಕಂಡು ಹಿಡಿಯಲು ಕೆಲವು ದಿನಗಳೇ ಹಿಡಿಯಿತು. ಹಾಗೆಯೇ ತಾರಸ್ಥಾಯಿಯಲ್ಲಿ ಸ್ವರ ಹೊರಡಿಸುವ ಭಾಗವತರು ಮತ್ತು ವಿಶಿಷ್ಟ ನಾದದ ಚೆಂಡೆ ಇವುಗಳೆಲ್ಲಕ್ಕೂ ಹೊಂದಾಣಿಕೆಯಾಗುವಂತೆ ಅದನ್ನು ಜೋಡಿಸಿಕೊಳ್ಳಲೂ ಕಲಿಯಬೇಕಾಯಿತು.

ರಂಗಸ್ಥಳಕ್ಕೆ ಮತ್ತು ಡೇರೆಯ ಇತರ ಕಡೆಗಳಿಗೆ ಬೆಳಕನ್ನು ಒದಗಿಸುವ “ಜನರೇಟರ್” ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ವಿದ್ಯುತ್ತಿನ ವಿತರಣೆ ಹೇಗೆ ಆಗುತ್ತದೆ? ಎಂಬುದನ್ನು ಅನಂತರದ ವರ್ಷ ಕಲಿಯುವ ಅವಕಾಶ ಬಂತು.

ಆಗ ‘ದೊಂದಿ’ ಯುಗದಿಂದ ಪೆಟ್ರೊಮೆಕ್ಸ್ ಯುಗಕ್ಕೆ ಬಂದ ಬಣ್ಣಗಾರಿಕೆ ಸಾಲದು; ವಿದ್ಯುದ್ದೀಪಗಳಿಗೆ ಅನುಗುಣವಾಗಿ, ಮುಖಕ್ಕೆ ಬಳಿಯುವ ಬಣ್ಣದ ಛಾಯೆಯಲ್ಲೂ ಬದಲಾವಣೆಯಾಗಬೇಕಾಗುತ್ತದೆ ಎಂಬುದೂ ತಿಳಿಯಿತು. ಅದನ್ನು ಇತರರಿಗೂ ತಿಳಿಸಿ ಕೊಡಬೇಕಾಯಿತು.

ರಂಗಸ್ಥಳಕ್ಕೆ ಹೆಚ್ಚಿನ ಪ್ರಕಾಶವನ್ನು ಒದಗಿಸುವ ದೀಪಗಳಿಂದಾಗಿ  ಜನರ ಕಣ್ಣು ಕುಕ್ಕುವಂತಾಗಬಾರದು- ಅವುಗಳನ್ನು ಹೊರ ಭಾಗದಿಂದ ಮುಚ್ಚಿರಬೇಕು. ಕುಳಿತುಕೊಳ್ಳುವಲ್ಲಿ ಸಂಪೂರ್ಣ ಕತ್ತಲೆ ಮಾಡಲು ಸಾಧ್ಯವಿಲ್ಲದ ಕಾರಣ ಎರಡೂ ಕಡೆಯ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದೂ ತಿಳಿದುಕೊಳ್ಳಬೇಕಾಯಿತು.

ದಾರಿಯಲ್ಲೆ ಬಾಯ್ಬಿಟ್ಟು ಕೈಕೊಡುವ ಟೈರನ್ನು ತೇಪೆ ಹಾಕಲೂ ಕಲಿತೆ. ಎಂಜಿನಿನ ತಡೆಗೆ ಇರುವ ಕಾರಣ- ನಿವಾರಣೆಗಳನ್ನೂ ಅರಿತೆ. ಜೊತೆಗೆ, ಯಾವ ರಸ್ತೆಯಲ್ಲಿ ಯಾವ ಕಡೆಗೆ ಕೈ ತೋರಬೇಕು? ಪೋಲಿಸರ ಯಾವ ರಸ್ತೆಯ ಅಂಚಿನಲ್ಲಿ ಹೊಂಚು ಹಾಕುತ್ತಾರೆ- ಎಲ್ಲಿ ಧೈರ್ಯವಾಗಿ ಎದುರು ನಿಂತು, ನಮ್ಮನ್ನು ನಿಲ್ಲಿಸುತ್ತಾರೆ ಎಂಬುದನ್ನೂ ತಿಳಿದುಕೊಂಡೆ.

ವಾಲ್ಟ್ ಗಳ ಪರಿಚಯವೂ ಆಯಿತು. ಧ್ವನಿ ಹಿಗ್ಗಿಸುವ ಚೌಕಟ್ಟಿನಲ್ಲಿ ಇರುವ ನಾಲ್ಕು ಗುಂಡಿಗಳನ್ನು ತಿರುವುವುದೇಕೆ ? ಎಂದೂ ತಿಳಿಯಿತು.

ಡೀಸೆಲ್ ಎಂಜಿನಿಗೆ ‘ಸ್ಪಾರ್ಕ್ ಪ್ಲಗ್’ ಏಕೆ ಬೇಡ? ಎಂಬುದನ್ನೂ ತಿಳಿದುಕೊಳ್ಳ ಬೇಕಾಯಿತು. ಸ್ವಿಚ್ ಬೋರ್ಡ್ ಏನು ಎಂಬುದೂ ಗೊತ್ತಾಯಿತು.

ಒಂದೊಂದು ಹೊಸ ಸಲಕರಣೆ ಬರುವಾಗಲೂ, ಅದು ಹೇಗೆ ಕೆಲಸ ಮಾಡುತ್ತದೆ? ಎಂದು ಕುತೂಹಲ ತೋರುತ್ತಿದ್ದ ನನ್ನನ್ನು-

“ಅವೆಲ್ಲವನ್ನೂ ತಿಳಿದು ಏನು ಮಾಡುತ್ತೀಯಾ?” ಎಂದವರಿದ್ದಾರೆ.

“ಯಕ್ಷಗಾನಕ್ಕೆ ಅವೆಲ್ಲ ಬೇಕ ಎಂದಾದರೆ ನಾನೂ ಅವುಗಳ ವಿಷಯ ತಿಳಿದುಕೊಳ್ಳಬೇಕು. ನಾನೂ ಯಕ್ಷಗಾನದ ಒಂದು ಕಣ ತಾನೆ?” ಎಂದಿದ್ದೆ.

ಈಗ, ಅವುಗಳಾವುವೂ ನನ್ನ ಉಪಯೋಗಕ್ಕೆ ಇಲ್ಲ. ಅವುಗಳ ಅಗತ್ಯವೂ ನನಗೆ ಇಲ್ಲ. ಆದರೆ, ಆಗಿನ ಪರಿಚಯ ಮತ್ತು ಅನುಭವಗಳಿಂದ-

ಯಾವುದನ್ನು ಎಲ್ಲಿ ಉಪಯೋಗ ಮಾಡಿಕೊಳ್ಳಬಹುದು? ಹೇಗೆ ಅವುಗಳ ಪ್ರಯೋಜನ ಪಡೆಯಬಹುದು? ಇನ್ನೂ ಯಾವ ವಸ್ತುಗಳು ಉಪಯೋಗಕ್ಕೆ ಬರುವಂತೆ ಮಾಡಬಹುದು? ಎಂದು ಆಸಕ್ತರಿಗಾದರೂ ಸಲಹೆ ಕೊಡುವಂತಾಗಿದ್ದೇನೆ.

ಜೋಡಾಟ

ಯಕ್ಷಗಾನದಲ್ಲಿ ಎರಡು ಮೇಳಗಳೊಳಗೆ ಸ್ಪರ್ಧೆಯನ್ನು ಏರ್ಪಡಿಸುವ ಕ್ರಮವಿದೆ. ಅಕ್ಕಪಕ್ಕದಲ್ಲೇ ಎರಡು ರಂಗಸ್ಥಳಗಳನ್ನು ರಚಿಸಿ, ಆಯ್ಕೆ ಮಾಡಿದ ಒಂದೇ ಪ್ರಸಂಗವನ್ನು ಎರಡೂ ಮೇಳಗಳವರೂ ಆಡಿ ತೋರಿಸುವ ಆ ಕ್ರಮಕ್ಕೆ ‘ಜೋಡಾಟ’ ಎನ್ನುತ್ತಾರೆ. ಸಾಮಾನ್ಯವಾಗಿ ನಡೆಯುವ ಆಟಕ್ಕಿಂತ, ನಾಲ್ಕು ಪಾಲು ಜನ ಸೇರುವ ಸಂದರ್ಭ ಅದು. ಪ್ರತಿಯೊಂದು ವಿಚಾರದಲ್ಲೂ ಎರಡು ಮೇಳಗಳೊಳಗೆ ಕಠಿಣ ಸ್ವರ್ಧೆ ಇರುತ್ತದೆ. ಸ್ಪರ್ಧೆಯಲ್ಲಿ ಗೆದ್ದ ಮೇಳಕ್ಕೆ ಇರುವುದು ಪ್ರಶಂಸೆಯ ಹೆಗ್ಗಳಿಕೆ ಮಾತ್ರ. ಕುಣಿಸಿ ನೋಡುವ ಜನರ ಬಾಯಿಂದ “ಆ… ಮೇಳ ಚೆನ್ನಾಗಿತ್ತು” ಎಂಬ ಹೊಗಳಿಕೆಯನ್ನು ಆಟದ ಮರುದಿನ ಹತ್ತು ಊರುಗಳಲ್ಲಿ ಕೇಳಿದರೆ, ನಮ್ಮ ಬದುಕು ಸಾರ್ಥಕವಾಯಿತು ಎಂದುಕೊಳ್ಳಬೇಕು.

ಅಂತಹ ಜೋಡಾಟಗಳೂ ಜರುಗುವುದೂ ಅಪರೂಪ. ಆದುದರಿಂದ ಜನರೂ ಹೆಚ್ಚಾಗಿ ಸೇರುತ್ತಿದ್ದರು. ಅಲ್ಲಿನ ಆಕರ್ಷಣೆ ಏನಿದ್ದರೂ ಕಣ್ಣಿನದು. ಎರಡು ರಂಗಸ್ಥಳಗಳಲ್ಲಿ, ಒಂದೇ ಬಾರಿಗೆ ಹತ್ತಿಪ್ಪತ್ತು. ಜನರು ಬಂದು, ಝಗಝಗಿಸುವ ವೇಷಭೂಷಣಗಳಿಂದ ಮೆರೆದು ಕಣ್ಸೆಳೆದು ಹೋಗಬೇಕಾದ ಸಂದರ್ಭ. ಕಿವಿಗಂತೂ ಅಲ್ಲಿ ಕೆಲಸ ಕೊಡದಿರುವುದೇ ಒಳ್ಳೆಯದು. ಅರ್ಥ ಹೇಳುವುದನ್ನು ತಪ್ಪಿಸುವಂತಿಲ್ಲ. ಆದರೆ, ಆ ಅರ್ಥ, ಪ್ರಾಯಶಃ ಹೇಳಿದವನಿಗೂ ಕೇಳಲಾರದ ಪರಿಸ್ಥಿತಿ.

ಒಂದು ರಂಗಸ್ಥಳದಲ್ಲಿ ಪಾತ್ರಧಾರಿಯ ಅರ್ಥವಿವರಣೆ ಪ್ರಾರಂಭವಾದಾಗಲೇ, ಪಕ್ಕದ ರಂಗಸ್ಥಳದಲ್ಲಿ ಭಾಗವತರು ಪದ್ಯವನ್ು ಆರಂಬಿಸುವುದು, ಚೆಂಡೆಯ ಬಡಿತದಲ್ಲಿ, ಈ  ಅರ್ಥ ಮಾಯವಾಗುವುದು ಸ್ವಾಭಾವಿಕ ಕ್ರಮ. ಆಗ, ಕಾಣಿಸುವುದಷ್ಟನ್ನೇ ಸಕಲ ವೈಭವಗಳಿಂದ ಕಾಣಿಸುವುದು ಕ್ಷೇಮ ಎನಿಸುತ್ತದೆ. ಜನರೂ ಅದನ್ನು ನಿರೀಕ್ಷಿಸುತ್ತಾರೆ.

ಜೀವನ್ಮರಣದ ಹೋರಾಟ

ಸ್ವರ್ಧೆ ಬೆಳೆದು ವೈಷಮ್ಯಕ್ಕೂ ದಾರಿ ಆದುದಿದೆ. ಮೇಳಗಳ ಯಜಮಾನರೂ, ವೇಷಧಾರಿಗಳೂ ದ್ವೇಷ ಸಾಧಿಸಿ, ಜಗಳ ಆಡಿ ಹೊಡೆದಾಡಿಕೊಂಡುದಿದೆ.

ಜೋಡಾಟ, ಊರವರಿಗೊಂದು ಹಬ್ಬವಾದರೂ, ಮೇಳದ ಯಜಮಾನರಿಗೆ- ಕಲಾವಿದರಿಗೆ ಜೀವನ್ಮರಣದ ಹೋರಾಟವಾಗುತ್ತದೆ. “ನಾವು ಮೆರೆಯಬೇಕು” ಎಂಬ ಒಂದೇ ಹಟ ತೊಟ್ಟು, ಬಟ್ಟೆಯ ಅಂಗಡಿಯ ಜವುಳಿಯನ್ನೆಲ್ಲ ಖರೀದಿ ಮಾಡಿ, ಹೊಸ ಉಡುಗೆ-ತೊಡುಗೆಗಳನ್ನು ತಯಾರಿಸಿ, ಹೊಸ ಕಿರೀಟಗಳನ್ನು ಸಿದ್ಧಗೊಳಿಸಿಕೊಳ್ಳುವುದು, ಅವರವರ ಮೇಳದ ದೇವಸ್ಥಾನಗಳಲ್ಲಿರುವ ಹಸಿರು ಕೊಡೆ- ಚಿನ್ನಾಭರಣಗಳನ್ನು ತಂದು ಉಪಯೋಗಿಸುವುದು, ಸಿಡಿಮದ್ದು ಸುಡಿಸುವುದು, ಮಾಲೆಗಳನ್ನು ಹಾಕಿಸುವುದು, ಹೇಗಾದರೂ ನಮ್ಮ ಮೇಲ್ಮೆಯ ಪ್ರದರ್ಶನವಾಗಬೇಕು ಎನ್ನುವುದು- ಇವುಗಳಿಂದಾಗಿ ಒಂದು ಜೋಡಾಟ ಮುಗಿಯುವ ಹೊತ್ತಿಗೆ ಮೇಳದ ಯಜಮಾನ ಹಿಂಡಿದ ಹಿಪ್ಪೆಗಾಯಿ ಆಗಿಹೋಗುತ್ತಿದ್ದ. ಅವನ ಸ್ನೇಹಿತರೂ ಸಂಬಂಧಿಕರೂ ಅಷ್ಟೇ ಶ್ರಮಕ್ಕೊಳಗಾಗುತ್ತಿದ್ದರು.

ಆದರೆ, ಜೋಡಾಟಕ್ಕೆ ಕರೆ ಬಂದರೆ ಬೇಡ ಎನ್ನಲು ಯಾರಿಗೂ ಧೈರ್ಯ ಇರಲಿಲ್ಲ. ಅದು ಮಾನಾಪಮಾನದ ಪ್ರಶ್ನೆ ಆಗುತ್ತಿತ್ತು.

ಕಲಾವಿದರ ದೇಹ ಮತ್ತು ಯಜಮಾನನ ಹಣ ಇವುಗಳ ಶಕ್ತಿಯ ಪ್ರದರ್ಶವನವೆಂದರೆ ಜೋಡಾಟ ಹೊರತು ಅದನ್ನು ಕಲಾ ಪ್ರದರ್ಶನವೆಂದು ಕರೆಯಲು ಮನಸ್ಸಾಗುವುದಿಲ್ಲ.

ಅಪರೂಪಕ್ಕೆ ಜೋಡಾಟವಾಗುವುದಿದ್ದರೆ, ಎಲ್ಲಾದರೂ, ಕೆಲವು ವರ್ಷಕ್ಕೆ ಒಂದು ಬಾರಿ ಮೂರು- ನಾಲ್ಕು ಮೇಳಗಳ ಸ್ಪರ್ಧೆಯ ಆಟಗಳೂ ಈಗೀಗ ಎಂಬ ಹಾಗೆ ನಡೆಯ ತೊಡಗಿವೆ. ಈಗಲಂತೂ, ಪುಕ್ಕಟೆಯಾಗಿ ತೋರಿಸುವ ಬಯಲಾಟ (ತೆಂಕುತಿಟ್ಟಿನ ಮಟ್ಟಿಗೆ) ಮಾಯವೇ ಆಗಿ ಹೋಗಿದೆ. ಆದ್ದರಿಂದ ಮೂರು ಮೇಳದ ಆಟವನ್ನಾಡಿಸುವವರು – ಕೇವಲ ಹಣ ಗಳಿಸುವ – ಒಂದೇ ದೃಷ್ಟಿಯನ್ನಿಟ್ಟಿರುತ್ತಾರೆ.

ಜೋಡಾಟದಲ್ಲಿ ಪಾತ್ರಧಾರಿಯಾದವನು ಅರ್ಥ ಹೇಳುವಾಗ ಸಾಧ್ಯವಿದ್ದಷ್ಟೂ  ಸ್ವರವೇರಿಸಿ ಮಾತನಾಡಬೇಕು ಎಂದು ಭಾವಿಸುವ ಕಲಾವಿದರು ಬಹಳ ಮಂದಿ ಇದ್ದಾರೆ. ನಾನು ಅದಕ್ಕೆ ತೀರಾ ವ್ಯತಿರಿಕ್ತವಾದ ಒಂದು ತಂತ್ರವನ್ನು ಉಪಯೋಗಿಸಿದೆ.

ಗೊಂದಲದಲ್ಲಿ ಎಷ್ಟು ಗಟ್ಟಿಯಾಗಿ  ಮಾತನಾಡಿದರೂ ಕೇಳಿಸದು, ಎಂಬ ವಿಚಾರ ಖಚಿತವಿತ್ತು. ಕುಣಿತಕ್ಕೂ ಅಂಗಗಳ ಅಭಿನಯಕ್ಕೂ ಹೆಚ್ಚಿನ ಪ್ರಾಮುಖ್ಯ ಕೊಟ್ಟು, ಮಾತುಗಳನ್ನು ಬರಿಯ ತುಟಿ ಚಲನೆಯಲ್ಲೇ ತೀರಿಸಿಬಿಡತೊಡಗಿದೆ. ಅಭಿನಯ ಮಾತ್ರ, ಬಹಳಷ್ಟು ಕಷ್ಟಪಟ್ಟು ಏರು ಧ್ವನಿಯಲ್ಲೇ ಮಾತನಾಡುವಂತಿರುತ್ತಿತ್ತು. ಆದರಿಂದಾಗಿ ನಾನು ಧ್ವನಿ ಹೊರಡಿಸದಿದ್ದರೂ, ಬಹಳ ಚೆನ್ನಾಗಿ ಮಾತನಾಡುತ್ತೇನೆ ಎಂಬ ಅಭಿಪ್ರಾಯ ಜೋಡಾಟದಲ್ಲಿ ನನ್ನನ್ನು ನೋಡುವ ಜನರಿಗೆ ಬಂದಿತು.

ಜೋಡಾಟಗಳಲ್ಲಿ  ಸೋಲು-ಗೆಲುವುಗಳನ್ನು ಅಳೆಯುವ ಮಾನವಾವುದೆಂದು ಇದುವರೆಗೂ ನನಗೆ ತಿಳಿದಿಲ್ಲ.

ಆದರೆ, ಕುಣಿದವರು, ಚೆನ್ನಾಗಿ ಕುಣಿದಂತೆ ಕಾಣಬೇಕು ಎಂಬ ಕಠಿಣ ನಿಯಮ ನನ್ನ ಜೊತೆಯ ಕಲಾವಿದರಿಗಿತ್ತು.

ಆದುದರಿಂದ, ಜೋಡಾಟದಲ್ಲಿ ಅವರನ್ನೇನು ನೋಡುವುದು ಎಂದು ಯಾರೂ ಹೇಳುವಂತಾಗಲಿಲ್ಲ.

ಯಕ್ಷಗಾನದ ಅದೊಂದು ಅಂಗದಲ್ಲಿ, ನನಗಷ್ಟರಿಂದಲೇ ತೃಪ್ತಿಯಾಗಿದೆ. 25 ವರ್ಷಗಳ ಕುಣಿತದಲ್ಲೂ ಅದೇ ಅಭಿಪ್ರಾಯವನ್ನು ನಾನು ಇರಿಸಿಕೊಂಡಿದ್ದೇನೆ. ಇನ್ನು ಬದಲಾಯಿಸಲೂ ಸಿದ್ಧನಿಲ್ಲ. ಬದಲಾಯಿಸುವ ಅಗತ್ಯವೂ ಇಲ್ಲ.

ಯಕ್ಷಗಾನದ- ಅಂದರೆ ನಮ್ಮಲ್ಲಿನ ಯಕ್ಷಗಾನದ –ಪರಿಚಯ ಜಿಲ್ಲೆಯಿಂದ ಹೊರಗಿನವರಿಗೆ ಆದುದು ಕಡಿಮೆ. ನಾವೇನೋ, ನ್ಮವರು ಹೋಗದಿದ್ ಜಿಲ್ಲೆಯ ಉತ್ತರಭಾಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದವರೆಗೂ ಹೋಗಿ ಬಂದೆವು. ಆದರೆ, ಕನ್ನಡ ನಾಡಿನ ಇತರ ಭಾಗಗಳಿಗೆಲ್ಲ ಭೇಟಿಯನ್ನೇಕೆ ಕೊಡಬಾರದು? ದಕ್ಷಿಣ ಕನ್ನಡಿಗರು ಬಹು ಸಂಖ್ಯೆಯಲ್ಲಿರುವ ಮುಂಬಯಿ ನಗರಕ್ಕೆ ಮಾತ್ರ- ನಮ್ಮ ಪ್ರವಾಸ ಸಂದರ್ಶನವೇಕೆ ಮುಕ್ತಾಯಗೊಳ್ಳಬೇಕು? ಎಂಬ ಪ್ರಶ್ನೆ ನನ್ನನ್ನು ಬಹಳ ದಿನಗಳಿಂದ ಕಾಡುತ್ತಲಿತ್ತು.

ಜಿಲ್ಲೆಯ ಕೆಲವು ತಾಲ್ಲೂಕುಗಳ ಮಿತಿಯನ್ನೇ ದಾಟಲು ಅಂಜುತ್ತಿದ್ದ ಪರಿಸ್ಥಿತಿ ಮಾಯವಾಗಿ, ಕೈಗೊಂಡ ಕೆಲವು ಪ್ರಯೋಗಗಳಾದರೂ ಯಶಸ್ವಿಯಾಗುವ ಸೂಚನೆ ತೋರಿದಾಗ, ಹೊರಗೆ ಹೊರಡುವ ಸಂದರ್ಭವೂ ಬಂದಿತು.

(ಅದಕ್ಕೆ ಮೊದಲು ಆಕಾಶವಾಣಿಯಲ್ಲಿ ತಾಳಮದ್ದಳೆ ಒಂದು ಧ್ವನಿ ಮುದ್ರಣಕ್ಕಾಗಿ ಮಾತ್ರ ಧಾರವಾಡಕ್ಕೆ ನಾನು ಹೋದವನು. ಮುಂಬಯಿಯ ಆಟಗಳಿಗಾದರೂ ಮೇಳದ ಎಲ್ಲ ಜನರನ್ನೂ ಕಟ್ಟಿಕೊಂಡು ಹೋದವನಲ್ಲ.)

ಮಂಜೇಶ್ವರದಲ್ಲಿ ಶ್ರೀ ಪರಮಶಿವಮ್ ಅವರ ಬಳಿ, ಮುದ್ರೆಗಳ ಪ್ರಯೋಗ ನಡೆಸಿದ್ದ ಕೆಲವೇ ದಿನಗಳು ಕಳೆದ ತರುವಾಯ-

ಒಂದು ದಿನ ಇದ್ದಕ್ಕಿದ್ದಂತೆ (ದಸರಾದ ದಿನ ಸಮೀಪಿಸಿತ್ತು) ನನ್ನ ಅಳಿಯ ಗೋಪಾಲಕೃಷ್ಣನಿಂದ ಒಂದು ಕಾಗದ ಬಂದಿತು.

“ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ, ಯಕ್ಷಗಾನದ ಒಂದು ಕಾರ್ಯಕ್ರಮಕ್ಕೆ ಅವಕಾಶ ದೊರಕಿಸಿಕೊಂಡಿದ್ದೇನೆ. ಬರುತ್ತೀರಾ?” ಎಂದು ಅವನು ಪ್ರಶ್ನಿಸಿದ್ದ. ಹೆಚ್ಚಿನ ವಿವರಗಳೇನನ್ನೂ ತಿಳಿಯದೆ, ಏನು ಹೇಳಲೂ ಸಾಧ್ಯವಾಗದು ಎಂದಾಗ, ವಿವರ ಚರ್ಚಿಸಲು ಅವನೇ ಊರಿಗೆ ಬಂದ.

 ಮೈಸೂರಿನವರ ಮನಸೆಳೆದ ಕಲೆ

ನಮ್ಮವನೇ ಆದ ನಾರಾಯಣನ ಮನೆಯಲ್ಲಿ ನಾನು ಶ್ರೀ ಗೋಪಾಲಕೃಷ್ಣ ಭೇಟಿಯಾದೆವು. ವಿಷಯ ವಿವರ ಚರ್ಚಿಸಿಯಾಯಿತು. ಆದರೂ ಯಕ್ಷಗಾನದ ಪರಿಚಯವಿಲ್ಲದ ಮೈಸೂರು ನಗರಕ್ಕೆ ಮೇಳದ ಜನರನ್ನು ಕಟ್ಟಿಕೊಂಡು ಹೋಗುವುದೆಂದರೆ? ಎಂಬ ಸ್ವರವೆತ್ತಿದೆ. ಕೊನೆಗೆ ಹೇಸಿ ಕೆಲಸವೆಂದು ಆಗಬಾರದಲ್ಲ ಎಂದೆ.

“ಮೈಸೂರಿನವರು ಎಂದರೆ ಯುರೋಪಿನವರಲ್ಲ. ಅವರೂ ಕನ್ನಡಿಗರೇ. ನಿಮ್ಮ ಕಲೆಯ ಬಗ್ಗೆ ನಿಮಗೇ ಅಳುಕು ಇದೆ ಎಂದಾದರೆ ಪ್ರದರ್ಶನ ವಿಫಲವಾದೀತು. ವಿಶ್ವಾಸವಿದ್ದರೆ ಸಫಲಗೊಂಡೀತು. ಹೊರಡಿ” ಎಂದ. ನಮ್ಮ ಧರ್ಮಸ್ಥಳ ಮೇಳದಲ್ಲೇ ಮೊದಲು ಹಾಸ್ಯಗಾರನಾಗಿ ನನ್ನಿಂದಲೇ ತರಬೇತಿ ಪಡೆದು, ಆಗಲಷ್ಟೇ ಮೂಲ್ಕಿ ಮೇಳವನ್ನು ಆಡಳಿತಕ್ಕಾಗಿ ವಹಿಸಿಕೊಂಡಿದ್ದ ನಾರಾಯಣನೂ “ನಿಮ್ಮ ಜವಾಬ್ದಾರಿಯಲ್ಲಾದರೆ ಹೋಗೋಣ ಮಾವ. ವೇಷಭೂಷಣ ಸಾಮಗ್ರಿಗಳನ್ನು ಮೂಲ್ಕಿಯಿಂದ ಕೇಳಿ ತರಬಹುದು” ಎಂದು ತಿಳಿಸಿದ.

“ಸಂಭಾವನೆ ಎಷ್ಟು ಸಿಗುತ್ತದೆ?” ಎಂದು ಸಹಜವಾಗಿ ಪ್ರಶ್ನಿಸಿದೆ.

“ಬರಿಯ ನೂರು (ಒಂದು ನೂರು) ರೂಪಾಯಿಗಳು ಮಾತ್ರ. ನಿಮ್ಮ ವ್ಯಾನಿನ ಪೆಟ್ರೋಲ್ ಮತ್ತು ಎರಡು ದಿನದ ಕಾಫಿಯ ವೆಚ್ಚಕ್ಕೆ ಸಾಲಬಹುದಷ್ಟೆ. ಅಲ್ಲಿನ ಊಟ-ವಸತಿಗಳ ವೆಚ್ಚಕ್ಕಾಗಿ ಅಲ್ಲಿನ ಪರಿಚಿತರು ಕೆಲವರಿಂದ ವಂತಿಗೆ ಎತ್ತಿದ್ದೇನೆ” ಎಂದು ಹೇಳಿದ ಗೋಪಾಲಕೃಷ್ಣನನ್ನು ಏನೆಂದು ಕರೆಯಲೂ ಶಬ್ದ ಸಾಲದು ಎನ್ನಿಸಿತು.

“ದಸರಾ ವಸ್ತು ಪ್ರದರ್ಶನದಲ್ಲಿ ಅಪರಿಚಿತರಿಗೆ ಅವಕಾಶ ಸಿಗುವುದೇ ಕಷ್ಟ. ಅದು ನಿಮಗೂ ಗೊತ್ತಿದೆ. ಈಗ ಒಂದು ಬಾರಿ ನಷ್ಟವನ್ನು ಅನುಭವಿಸಿದರೆ ಏನಂತೆ? ತಿರುಗಾಟದಲ್ಲಿ ಒಂದು ದಿನ ನಷ್ಟವಾಯಿತು ಎಂದೇ ತಿಳಿಯಿರಿ. ಮೈಸೂರಿನ ನಗರವಾಸಿಗಳಿಗೆ – ಯಕ್ಷಗಾನವನ್ನು ತೋರಿಸಿಕೊಡುವ ಅವಕಾಶ ಸಿಗುವಾಗ ಅದನ್ನುಕಳೆದುಕೊಳ್ಳಬೇಡಿ. ನಾನಂತೂ ದಕ್ಷಿಣ ಕನ್ನಡ ಕಲಾ ಪ್ರಚಾರ ಸಮಿತಿಯ ವತಿಯಿಂದ ನಿಮ್ಮ ಕಲಾವಿದರ ಹೆಸರು ಹಾಕಿ ಯಕ್ಷಗಾನ ಬಯಲಾಟ ನಡೆಯುವುದಾಗಿ ಕರಪತ್ರ ಹಂಚಿಯಾಗಿದೆ. ಇನ್ನು ಮಾನ ಕಳೆದುಕೊಳ್ಳುತ್ತೀರಾ?” ಎಂದು ನನ್ನನ್ನೇ ಬೆದರಿಸಿದ.

ಮೈಸೂರಿನವರ ಮೆಚ್ಚುಗಗೆ

ಯಾವ ಪ್ರಸಂಗ ಆಡಬಹುದು? ಎಂದು ಅವನು ಪತ್ರದಲ್ಲಿ ಕೇಳಿದುದಕ್ಕೆ “ದಕ್ಷಾಧ್ವರ” ಆಗಬಹುದು ಎಂದು ಮೊದಲೇ ಒಪ್ಪಿಗೆ ಕೊಟ್ಟಾಗಿತ್ತು.

“ಆಯಿತು. ಹೋಗು ಈಗ” ಎಂದು ಹುಸಿ ಮುನಿಸು ತೋರಿದೆ.

ಕಾರ್ಯಕ್ರಮ ನಿರ್ಧಾರವಾಗಿದ್ದ ದಿನಕ್ಕೆ ನಾವೆಲ್ಲ ಅಲ್ಲಿಗೆ ಮುಟ್ಟಿದೆವು. ನನ್ನ ಹಳೆಯ ಗೆಳೆಯ ರಾಮಯ ರೈಯವರನ್ನೂ ಕರೆದೊಯ್ಯಲಾದುದು ನನಗೆ ತುಂಬಾ ಸಂತೋಷವೆನ್ನಿತ್ತಿತ್ತು.

ಬಯಲಾಟದ ಪ್ರಾರಂಭ ರಾತ್ರಿ 9ಕ್ಕೆ ಎಂದು ಪ್ರಚಾರವಿದ್ದಿತು. 9ಕ್ಕೆ ನಾವೆಲ್ಲ ಸಿದ್ಧರಾಗಿದ್ದೆವು. ಪ್ರದರ್ಶನ ಸಮಿತಿಯ ಆಢ್ಯ ಮಹನೀಯರೊಬ್ಬರ  ದೆಸೆಯಿಂದ, ನಮ್ಮ ಕಾರ್ಯಕ್ರಮದ ಮೊದಲಿಗೆ ನಡೆದಿದ್ದ ಸಂಗೀತ ಕಚೇರಿ ಸಮಯ ಮೀರಿ ಮುಂದುವರಿಯಿತು. ದೊಡ್ಡವರೆಂದು ಹೇಳಿಕೊಳ್ಳುವವರ ಶಿಸ್ತಿನ ಪರಿಚಯ ಮೊದಲ ಬಾರಿಗೆ ಆಯಿತು.

ಮೌನವಾಗಿಯೇ ಉರಿಯತೊಡಗಿದ್ದೆ. ಆದರೆ, ಗೌರಿಯ ಮರಣ ವಾರ್ತೆಯನ್ನು ಕೇಳಿದ ಶಿವನಾದಾಗ, ಉರಿಯೆಲ್ಲ ಮೈಯಿಂದ ಹೊರಹೊಮ್ಮಿತು.

‘ಅದುವರೆಗೂ ಕಂಡಿರದಿದ್ದ’ ಜನರು ನಮ್ಮ ಯಕ್ಷಗಾನ ಪ್ರದರ್ಶನವನ್ನು ಮೆಚ್ಚಿದರು. ಕರತಾಡನಗಳಿಂದ ತಮ್ಮ ಸಂತೋಷವನ್ನು ಸೂಚಿಸಿದರು.

(ಪ್ರದರ್ಶನದಲ್ಲಿ ಭಾಗವಹಿಸಿದವರು ನಾವು ಒಟ್ಟು 21 ಮಂದಿ. ಊರಿನಿಂದ ಮೈಸೂರಿಗೆ ಬಸ್ ಪ್ರಯಾಣದಲ್ಲಿ  ಹೋಗಿ ಬರುವ ವೆಚ್ಚವೇ ತಲಾ 14ರೂ. ಗಳಷ್ಟಾಗುತ್ತಿತ್ತು….)

ಮೈಸೂರಿನಿಂದ ಹೊರಟು, ಹುಣಸೂರಿಗೆ ಬರುವಾಗ ವ್ಯಾನಿನ ಟೈರ್ ಒಂದು ಕೈ ಕೊಟ್ಟುದರಿಂದ, ಅಲ್ಲಿಯ ಒಂದು ಹೋಟೆಲಿನಲ್ಲಿ ಕಾಫಿ ಕುಡಿಯಲೆಂದು ಇಳಿದೆವು. ನಮ್ಮ ಕುತೂಹಲ ತಾಳಿದ ಹೋಟೆಲ್ ಮಾಲಿಕರಾದ ಶ್ರೀ ಸೀತಾರಾಮಾಚಾರ್ಯರು “ಇಲ್ಲಿ  ಒಂದು ಆಟ ಆಡುತ್ತೀರಾ?”  ಎಂದು ಕೇಳಿದರು. ತಮ್ಮ ಕೆಲವರು ಸ್ನೇಹಿತರನ್ನು ಒಟ್ಟುಗೂಡಿಸಿ ವೀಳ್ಯವನ್ನೇ ನಿಶ್ಚಯಿಸಿ, ಅಂದು ರಾತ್ರೆ ಆಟವಾಡಲು ಒಪ್ಪಿಸಿದರು. ರಂಗಸ್ಥಳ ಸಿದ್ಧಗೊಳಿಸುವ ವ್ಯವಸ್ಥೆ ಮಾಡಿದರು.

ಹೆಚ್ಚಿನ ಯಾವ ಪ್ರಚಾರವೂ ಇಲ್ಲದೆ, ನಾವು ಆಡಲು ತೊಡಗಿದ “ಪಂಚವಟಿ”ಯ ಕಥಾಭಾಗ ಪ್ರಾರಂಭವಾಗುವ ಹೊತ್ತಿಗೆ 3-4 ಸಾವಿರ ಮಂದಿ ಪ್ರೇಕ್ಷಕರು ಅಲ್ಲಿ ಸೇರಿದ್ದರು. ಸಮೀಪದ ಹಳ್ಳಿಗಳಿಂದ ಗಾಡಿಗಳಲ್ಲಿ ಜನರು ಬಂದು ಸೇರಿದ್ದರಂತೆ.

ಹುಣಸೂರಿನ ಮಿತ್ರರು ಇತ್ತ ‘ವೀಳ್ಯದ’ ಮೊಬಲಗು ವಸ್ತು ಪ್ರದರ್ಶನ ಸಮಿತಿಯವರು ದಯಪಾಲಿಸಿದ ಮೊತ್ತಕ್ಕಿಂತ ಎಷ್ಟೋ ಹೆಚ್ಚಿತ್ತು. ನಮ್ಮೆಲ್ಲರ ಊಟೋಪಚಾರಗಳನ್ನೂ ಅವರು ತುಂಬು ಮನಸ್ಸಿನಿಂದ ವ್ಯವಸ್ಥೆಗೊಳಿಸಿದ್ದರು.

ಪುನಃ ಕರೆ

ಊರು ಬಂದು ಸೇರಿದ ಎಂಟು ದಿನಗಳಲ್ಲಿ “ನಿಮ್ಮೊಂದಿಗೆ ಅಗತ್ಯವಾಗಿ ಮಾತನಾಡುವ ಕೆಲಸವಿದೆ. 14ನೇ ತಾರೀಕಿಗೆ ಪುತ್ತೂರಿಗೆ ಶ್ರೀ ಸಿ. ಎಸ್, ಶಾಸ್ತ್ರಿಗಳ ಮನೆಗೆ ಬಂದು ಭೇಟಿಯಾಗಿರಿ” ಎಂಬ ಇನ್ನೊಂದು ಕಾಗದ ಗೋಪಾಲಕೃಷ್ಣನಿಂದ ಬಂದಿತು.

“ಏನು? ಎಂದು ವಿಚಾರಿಸಿದೆ, ಮಾತಿನಂತೆ ಭೇಟಿಯಾದಾಗ.

“ಬೆಂಗಳೂರಿನಲ್ಲಿ ಒಂದು ಅರ್ಧ ಗಂಟೆಯ ಆಟವನ್ನು ಆಡಬೇಕು. ಹೇಗೆ? ಸಾಧ್ಯವಾದೀತೇ?”

ರಾತ್ರೆಯ ಹನ್ನೆರಡು ಗಂಟೆಗಳೂ ಸಾಕಾಗದೆ ಹೋದ ಅನುಭವ ನಮಗಿರುವಾಗ, ಅರ್ಧ ಗಂಟೆಯ ಹೊತ್ತು ಅದು ಎಂತಹ ಆಟ? ಎಂದು ಜಬರಿಸಿದೆ.

“ಅದರಿಂದ ಹೆಚ್ಚು ಸಮಯ ಸಿಗುವುದು ಆಸಾಧ್ಯ. ಚಿಕ್ಕದೊಂದು ದೃಶ್ಯವಾದರೂ ಸಾಕು. ಹೇಗಾದರೂ ಮಾಡಿ ನೋಡಿ.”

“ಯಾವ ಸಂದರ್ಭಕ್ಕಾಗಿ ಈ ಆಟ ಆಗುವುದು?”

“ಬುಲ್ಗಾನಿನ್- ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ಕೊಟ್ಟಾಗ, ಅವರನ್ನು ಸತ್ಕರಿಸುವ ಕೂಟದಲ್ಲಿ, ಇತರ ಕಾರ್ಯಕ್ರಮಗಳೊಂದಿಗೆ ಯಕ್ಷಗಾನವೂ ಆಗಬೇಕು.”

“ಬುಲ್ಗಾನಿನ್- ಕ್ರುಶ್ಚೇವ್ ಅಂದರೆ ಯಾರು?” ಎಂದುದಕ್ಕೆ ಅಣ್ಣ (ಶ್ರೀ ಶಾಸ್ತ್ರಿಗಳು) ವಿವರಿಸಿದರು. “ಆಗಲಿ, ಮಾಡೋಣ. ಆದರೆ ಖರ್ಚು ವೆಚ್ಚದ ಎಲ್ಲ ಭಾರಕ್ಕೂ ವ್ಯವಸ್ಥೆ ಮಾಡಿಕೊ. ನಾನು ಯಾವ ಭಾರವನ್ನೂ ಹೊರುವ ಸ್ಥಿತಿಯಲ್ಲಿ ಇಲ್ಲ” ಎಂದು ಗೋಪಾಲಕೃಷ್ಣನನ್ನು ಕಳುಹಿಸಿದೆ.

ದಾರಿಯಲ್ಲಿ (ಐದಾರು ದಿನ ಮುಂಚಿತವಾಗಿ ಹೊರಟು) ಮಡಿಕೇರಿಯಿಂದ ಆರಂಭಿಸಿ ಬೆಂಗಳೂರಿನವರೆಗೂ ಅಲ್ಲಲ್ಲಿ ಆಟಗಳನ್ನಾಡಿ ಮುಂದುವರಿಯುವುದೆಂದು ಒಂದು ‘ಕರಡು ಯೋಜನೆ’ ಸಿದ್ಧಪಡಿಸಿಕೊಂಡು ಅವನು ಹೊರಟುಹೋದ.

ಹೋಗಿ ಎರಡು ದಿನವಾಗಬೇಕಾದರೆ ‘ಕೂಡಲೆ ಪುತ್ತೂರಿಗೆ ಬರಬೇಕಂತೆ’ ಎಂದು ಮನೆಗೆ ಕರೆ ಬಂತು. ಬಂದಾಗ, ಗೋಪಾಲಕೃಷ್ಣನ ದೂರವಾಣಿಯ ಕರೆ ಕಾದಿತ್ತು.

“ಪ್ರದರ್ಶನದಲ್ಲಿ ತೋರಬಹುದಾದ ಕಾರ್ಯಕ್ರಮಗಳ ಮುನ್ನೋಟವೊಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆಗಬೇಕಾಗಿದೆ. ಅದು ಆಗದೆ ನಮಗೆ ಅವಕಾಶ ದೊರೆಯುವುದು ಕಷ್ಟ. ನಾಡಿದ್ದು ಸಂಜೆ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ  ‘ರಿಹರ್ಸಲ್’ ಇಟ್ಟಕೊಂಡಿದ್ದಾರೆ. ಎಲ್ಲರನ್ನೂ ಕರೆದುಕೊಂಡು ಬಂದು ಸೇರಿ” ಎಂದಿತು. 250 ಮೈಲುಗಳ ದೂರದಿಂದ ಗೋಪಾಲಕೃಷ್ಣನ ಧ್ವನಿ. ಟೆಲಿಪೋನ್ ಯಂತ್ರವನ್ನು ಕಂಡುಹಿಡಿದ ಮಹಾಶಯನನ್ನು ಮನಸಾರೆ ಶಪಿಸಿದೆ. ಆದರೆ, ಬೆಂಗಳೂರಿಗೆ ಬಂದು ತಲಪುವುದಾಗಿ ಮಾತು ಕೊಟ್ಟೆ.

ಪ್ರಥಮ ಸ್ಥಾನ

ಕೂಡಲೇ ಹತ್ತು ಹಲವು ಹಳ್ಳಿಗಳಿಗೆ ಹೋಗಿದ್ದ ಕಲಾವಿದರನ್ನು ಹುಡುಕಿ ಹಿಡಿದು ಕರೆತರುವುದಕ್ಕೆ ಜನರನ್ನು ಕಳುಹಿಸಿದೆ. ಒಬ್ಬರು ಬರಲಾಗುವುದಿಲ್ಲ ಎಂದರೆ ಮತ್ತೊಬ್ಬರು ಇರಲಿ ಎಂದೆ. ಭಾಗವತರು, ಇತರ ಹಿಮ್ಮೇಳದವರು, ವೇಷಧಾರಿಗಳು ಇತರ ಸಹಾಯಕರು ಎಲ್ಲರನ್ನೂ ಒಟ್ಟು ಮಾಡುವುದರೊಂದಿಗೆ ಧರ್ಮಸ್ಥಳಕ್ಕೂ ಹೋಗಿ- ತಿರುಗಾಟದ ಸಮಯವಲ್ಲವಾದ ಕಾರಣ ವಿಶೇಷ ಅನುಮತಿ ದೊರಕಿಸಿಕೊಂಡು ವೇಷಭೂಷಣಗಳನ್ನೂ ಪಡೆದು ಪುತ್ತೂರಿಗೆ ಬಂದೆ. ಅಲ್ಲಿಂದ ಎಲ್ಲೂ ನಿಲ್ಲದ ಪಯಣವಾಗಿ “ರಹರ್ಸಲ್”ನ ದಿನ ಮಧ್ಯಾಹ್ನ 12ರ ಹೊತ್ತಿಗೆ ಪ್ರದರ್ಶನವನ್ನು ಏರ್ಪಡಿಸುವ ಅಧಿಕಾರಿಗಳ ಕಚೇರಿಯ ಮುಂದೆ ನಮ್ಮ ವ್ಯಾನ್ ನಿಲ್ಲಿಸಲು ಸಾಧ್ಯವಾಯಿತು.

ನಾವಾಗಿಯೇ ಬಂದವರೆಂದೊ ಏನೊ, ಆಯ್ಕೆಯಾಗುವುದು ಅನಿಶ್ಚಿತವೆನಿಸಿಯೊ, ನಾವು ಇಳಿದುಕೊಳ್ಳಲು ಕಲಾಸಿಪಾಳ್ಯಂ ಬಸ್ ನಿಲ್ದಾಣಕ್ಕೆ ಸಮೀಪದ ಒಂದು ಉರ್ದೂ ಶಾಲೆಯಲ್ಲಿ ಒಂದು ಕೋಣೆಯನ್ನು ದಯಪಾಲಿಸಲಾಯಿತು.

ಆಯ್ಕೆಗಾಗಿ ನಡೆದ ಪ್ರಾಯೋಗಿಕ ಪ್ರದರ್ಶನಕ್ಕೆ ಭಾಗವಹಿಸಲೆಂದು ಬಂದವರು ಹಲವು ಮಂದಿ. ಅವರಲ್ಲೆಷ್ಟೋ ಜನರಿಗೆ ತಾವು ಬೀರಬಹುದಾದ ಪ್ರಭಾವದ ಧೈರ್ಯವಿತ್ತು. ನಾವು ಅಪರಿಚಿತರು. ನಮ್ಮನ್ನು ಯಾರೂ ಮಾತನಾಡಿಸುವವರಿರಲಿಲ್ಲ. ಆಗಿದ್ದ ಅಲ್ಪ ಪರಿಚಯವೇನಿದ್ದರೂ ಗೋಪಾಲಕೃಷ್ಣನ ಓಡಾಟದಿಂದ. ಆದರೆ ಕಲಾವಿದರ ಕುರಿತು ಆಸಕ್ತಿ ವಹಿಸುವುದು ರಕ್ತಗುಣವಾಗಿದ್ದ ಶ್ರೀ ಎಂ. ಎಸ್. ನಟರಾಜನ್ ರವರು ನಮ್ಮ ಬಗ್ಗೆ ಮೊದಲಿನಿಂದಲೇ ಆಸಕ್ತಿ ವಹಿಸಿದ್ದುದಾಗಿ ಅನಂತರ ನನಗೆ ತಿಳಿಯಿತು.

ಅಂದು ನಮ್ಮ ಕಾರ್ಯಕ್ರಮ ಕೊನೆಯದಾಗಿತ್ತು. ಆದರೆ ಕುಳಿತು ಪ್ರದರ್ಶನವನ್ನು ನೋಡುತ್ತಿದ್ದ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯನವರು ಮತ್ತು ಇತರ ಅಧಿಕಾರಿಗಳು, ಆಯ್ಕೆಯ ಸಮಿತಿಯಲ್ಲಿದ್ದ ಶ್ರೀಮತಿ ದೇವಿಕಾರಾಣಿ ರೋರಿಚ್ ರವರು, ನಗರದ ಪತ್ರಿಕೋದ್ಯಮಿಗಳು ಇವರ ದೃಷ್ಟಿಯಲ್ಲಿ ಮೊದಲನೆಯ ಆಯ್ಕೆಯಾಗಿಯೇ ಪರಿಣಮಿಸಿತು.

ಪಂಥಾಹ್ವಾನ

ಯಕ್ಷಗಾನದ ಪ್ರದರ್ಶನವೂ ನಮ್ಮ ಕಾರ್ಯಕ್ರಮದಲ್ಲಿ ಇದೆ. 13ನಿಮಿಷಗಳ ಕಾಲ ಎಂಬುದಾಗಿ ತಿಳಿಸಲಾಯಿತು.

ಆ ಸುದ್ದಿಯನ್ನು ಹೊತ್ತು ತಂದ ಗೋಪಾಲಕೃಷ್ಣನ ಎದುರು “ನನಗೆ ಈ ಅವಕಾಶ ಬೇಡಲೇ ಬೇಡ. ಈಗಲೇ ಮನೆಗೆ ಹಿಂದಿರುಗುತ್ತೇನೆ” ಎಂದೆ. ಅರ್ಧಗಂಟೆಯ ಅವಕಾಶವೇ ಸಾಲದೆನ್ನುವ ಭಾವನೆ ನನ್ನಲ್ಲಿರುವಾಗ 13ನಿಮಿಷಗಳಲ್ಲಿ ಏನು ತಾನೆ ಮಾಡಬಹುದು?

“ಎಲ್ಲಕ್ಕೂ, ಸುಖದ ವ್ಯವಸ್ಥೆ ಎಂದರೆ ಯಾರು ಕುಣಿಯುತ್ತಾರೆ. ನಿಮ್ಮಲ್ಲಿರುವ ನಿಜವಾದ ಪ್ರತಿಭೆಯನ್ನು 13ನಿಮಿಷಗಳ ಕಾಲವೇ ಪ್ರದರ್ಶಿಸಿದರೆ ಸಾಕು. 13ವರ್ಷ ಅದು ನೆನಪಿನಲ್ಲಿ ಉಳಿಯಬೇಕು. ಎಷ್ಟು ಅನಾನುಕೂಲವಾದರೂ ನಮ್ಮ ಕಲೆಯನ್ನು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಿದೆ ಎಂದು ತೋರಿಸಿಕೊಡಿ. ಹಳ್ಳಿಯಿಂದ ಬಂದವರು ಇವರು ಎನ್ನುವ ತಿರಸ್ಕಾರದಿಂದ ಇರುವ ಆಯ್ಕೆಯ ಸಮಿತಿಯ ಪ್ರಭೃತಿಗಳೂ ಕಣ್ಣು ತೆರೆಯುವಂತಾಗುತ್ತದೆ” ಎಂದ ಆತ.

ಹೌದು. ಕಲಾಸಕ್ತರು ನೀಡಿರುವ ಒಂದು ಪಂಥಾಹ್ವಾನ ಇದು ಎಂದು ಸುಮ್ಮನಾದೆ.

ಮರುದಿನದಿಂದಲೇ, ಅಭ್ಯಾಸಕ್ಕೆ ತೊಡಗಬೇಕಾಯಿತು.

ಅರ್ಥವಿವರಣೆಯನ್ನು ಒಂದೆರಡು ಶಬ್ದಗಳಿಗೇ ನಿಲ್ಲಿಸಿ, ಪದ್ಯಗಳನ್ನು ಮೊಟಕುಗೊಳಿಸಿ ಸನ್ನಿವೇಶಗಳನ್ನು ಹೊಂದಿಸಿ ದಿನವೊಂದಕ್ಕೆ 50ಬಾರಿಯಾದರೂ ಅಭ್ಯಾಸ ಮಾಡುವ ನಿರ್ಧಾರಕ್ಕೆ ಬಂದೆವು. ನಮ್ಮ ಅಭ್ಯಾಸ ಸಾಗುತ್ತಲಿದ್ದಾಗ ಚೆಂಡೆಯ ಬಡಿತ, ಗೆಜ್ಜೆಗಳ ಕುಣಿತದಿಂದ ಅಕ್ಕಪಕ್ಕದ ತರಗತಿಗಳಲ್ಲಿನ ಹುಡುಗರಿಗೂ ಉಪಾಧ್ಯಾಯರಿಗೂ ಆಗುತ್ತಲಿದ್ದ ಶ್ರಮವನ್ನು ಪೋರ್ಟ್ ಹೈಸ್ಕೂಲಿನ ಅಧಿಕಾರಿ ವರ್ಗದವರು ಇನ್ನೂ ನೆನಪಿನಲ್ಲಿಟ್ಟಿರಬಹುದು.

ಕಾರ್ಯಕ್ರಮದ ದಿನ ಬಂದಿತು. ಅಂದವಾಗಿ ಸಿಂಗರಿಸಿದ ಲಾಲ್ ಬಾಗ್ ಗಾಜಿನ ಮನೆಯಲ್ಲಿ ಮನರಂಜನೆಯ ಕೊನೆಯ ಕಾರ್ಯಕ್ರಮವಾಗಿ 13ನಿಮಿಷಗಳ “ದಕ್ಷಾಧ್ವರ ಯಕ್ಷಗಾನ ಕಾರ್ಯಕ್ರಮವಾಯಿತು.”

ಗಣ್ಯ ಅತಿಥಿಗಳ ಎದುರು, ಸಾವಿರಾರು ಅಮಂತ್ರಿತ ನಾಗರಿಕರ ಮುಂದೆ, ಚಲನಚಿತ್ರ- ಟೆಲಿವಿಷನ್ ಕ್ಯಾಮರಗಳ ಎದುರು, ಶಿವನಾಗಿ ಕುಣಿದೆ.

(ವೀರಭದ್ರನ ಭಯಂಕರ ಅವತಾರವನ್ನು ನಿಕಿತಾ ಕ್ರುಶ್ಚೇವರು ಬಾಯಿತೆರೆದು ನೋಡುತ್ತಿದ್ದುದೂ, ಅವನ ದೊಂದಿಯಿಂದ ಹಾರಿದ ಬೆಂಕಿಯ ರಾಸಿಯಿಂದಾಗಿ ಗಾಬರಿಗೊಂಡು ಅತಿಥಿಗಳ ದ್ವಿಭಾಷಿಯ ಕೆಲಸ ಮಾಡುತ್ತಲಿದ್ದ ಮಹಿಳೆ ಎರಡೂ ಕೈಗಳಿಂದ ಕಣ್ಣುಮುಚ್ಚಿಕೊಂಡುದೂ, ಎಲ್ಲರ ಜೊತೆಗೆ ಭಾವಚಿತ್ರ ತೆಗೆಯಲಾದಾಗ-

‘ಜಗತ್ತಿನ ಆರನೇ ಒಂದಂಶ ಜನರನ್ನು ಆಳುವ ಆ ವ್ಯಕ್ತಿ ಈಗ ನನ್ನ ಪಕ್ಕದಲ್ಲಿ  ಇದ್ದಾನೆ.’ ಎಂಬ ಭಾವನೆ ನನಗೆ ಬಂದುದೂ ಪಾರ್ಶ್ವಪ್ರಕಾಶದ ವಿವಿಧ ನೋಟಗಳು.)

ಪ್ರಥಮ ಬಾರಿಗೆ ‘ರಿಹರ್ಸಲ್’ ನಡೆದ ದಿನದಿಂದ ಲಾಲ್ ಬಾಗಿನ ಕಾರ್ಯಕ್ರಮ ಆಗುವವರೆಗೆ ಇದ್ದ ಕೆಲವು ದಿನಗಳ ಬಿಡುವಿನಲ್ಲಿ-

ಪ್ರಸಾರ- ಧ್ವನಿಮುದ್ರಣ

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೇರೆ ಒಂದೆರಡು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದೆವು. ಹಾಗೆಯೇ ಕಾರ್ಯಕ್ರಮವಾದ ತರುವಾಯ ಒಂದೆರಡು ದಿನ ಕಳೆದು ಗುಬ್ಬಿ ಥಿಯೇಟರಿನಲ್ಲೂ ದಕ್ಷಾಧ್ವರವನ್ನು ಆಡಿದೆವು.

ಆ ಸಂದರ್ಭಗಳಲ್ಲೆಲ್ಲ ನಮಗೆ ಸಿಕ್ಕಿದ ಪ್ರೋತ್ಸಾಹ, ಕನ್ನಡದ ಕಲೆಯನ್ನು ಕನ್ನಡಿಗರಿಗೇ ತೋರಿಸಿಕೊಡಲು ಅಳುಕಬೇಕಾಗಿಲ್ಲ ಎಂಬ ಧೈರ್ಯವನ್ನೇ ನನಗೆ ಇತ್ತಿತ್ತು.

ಆ ಸಂದರ್ಭದಲ್ಲೇ ಆಕಾಶವಾಣಿಯವರು ನಮ್ಮ ಒಂದೆರಡು ಕಾರ್ಯಕ್ರಮಗಳ ಪ್ರಸಾರ- ಧ್ವನಿ ಮುದ್ರಣ ಇತ್ಯಾದಿಗಳನ್ನು ನಡೆಸಿದರು.

ಅನಂತರ ಒಂದು ಬಾರಿ, ಜಾನಪದ ಕಲೆಗಳ ವಿಶೇಷ ಕಾರ್ಯಕ್ರಮವನ್ನೂ ನಡೆಸಿ ಅದಕ್ಕಾಗಿ ನಮ್ಮ ತಂಡವನ್ನೇ ಆಹ್ವಾನಿಸಿದ್ದರು.

ನಮ್ಮ ಬೆಂಗಳೂರು ಯಾತ್ರೆ- ಅನಂತರ ಎರಡು ಬಾರಿ ನಡೆದ ಮೈಸೂರು ಪ್ರವಾಸ- ಮಲೆನಾಡು ಸಮ್ಮೇಳನದ ಕಾರ್ಯಕ್ರಮಕ್ಕಾಗಿ ಶಿವಮೊಗ್ಗಕ್ಕೆ ಸಂದರ್ಶನ, ಇವುಗಳೆಲ್ಲ ನಮ್ಮ ಕಲೆಯ ಬಗ್ಗೆ ಜನರಿಗೆ ಉಂಟಾಗಬಹುದಾದ ಆದರದ ಸೂಚನೆಯನ್ನೇ ಸ್ಪಷ್ಟವಾಗಿ ತೋರಿಸಿದ್ದುವು.

ಆದರೆ, ದಾವಣಗೆರೆಯಲ್ಲಿ ನಡೆದ ನಾಟ್ಯೋತ್ಸವದಲ್ಲಿ ಮಾತ್ರ ನಮ್ಮ ಪ್ರದರ್ಶನ ಪ್ರೋತ್ಸಾಹ ಪಡೆಯಲಿಲ್ಲ. ಅದಕ್ಕೆ ನಾವು ಕಾರಣರಾಗಿರಬಹುದು. ಆದರೆ ನಮ್ಮ ದೋಷವನ್ನು ನನಗೆ ಇಷ್ಟು ವರ್ಷಗಳ ತರುವಾಯವೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಸ್ಥಳೀಯ ಆಸಕ್ತರ ಆಸಡ್ಡೆ ಅನಾಸ್ಥೆಗಳ ದೋಷವಂತೂ ತಿಳಿದಿದೆ.

ಮತ್ತೊಮ್ಮೆ ದಸರಾ ವಸ್ತುಪ್ರದರ್ಶನದಲ್ಲೂ, ಹಣದ ವಿಚಾರ ಬಂದಾಗ, “ಅವರು ಹಣ ಕೊಡಲು ಗತಿ ಇಲ್ಲದವರಾದರೆ ಬೇಡ, ಉಚಿತವಾಗಿ ಅಲ್ಲಿ ಪ್ರದರ್ಶನ ನಡೆಸಿ ಬನ್ನಿ” ಎಂದು ಶ್ರೀ ರತ್ನವರ್ಮ ಹೆಗ್ಗಡೆಯವರು ನುಡಿದುದಲ್ಲದೆ, ನಮಗೆ ತಗಲಿದ ಎಲ್ಲ ಖರ್ಚುಗಳನ್ನೂ ಇತ್ತು ನುಡಿಯಂತೆ ನಡೆದಿದ್ದಾರೆ.

ದೆಹಲಿಯಲ್ಲಿ …

ಕನ್ನಡ ನಾಡಿನಿಂದ ಹೊರಗೆ, ದೂರದ ದೆಹಲಿಯಲ್ಲೂ ನಮ್ಮ ಕಾರ್ಯಕ್ರಮ ನಡೆಯಿತು. ಆಕಾಶವಾಣಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಕ್ಕಿದ ಸಮಯಾವಕಾಶ ಸಾಲದೆ ಬಂದು, ನನ್ನ ಅತೃಪ್ತಿ ಮತ್ತೊಂದು ಅವಕಾಶವನ್ನೂ ಹುಡುಕಿಕೊಂಡಿತು.

ದೆಹಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ನಾವಿತ್ತ ಒಂದು ಕಾರ್ಯಕ್ರಮ, ಅಮದು ಅಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ಶ್ರೀ ಕೆ.ಸಿ. ರೆಡ್ಡಿಯವರಿಂದಲೂ, ಇತರ ಹಲವು ನೂರು ಮಂದಿಯಿಂದಲೂ ಮೆಚ್ಚುಗೆ ಗಳಿಸಿತು.

ದೆಹಲಿಯಲ್ಲಿ ಆಡಿದ ರೀತಿಯ ಆಟವನ್ನೇ, ಹುಬ್ಬಳ್ಳಿಯಲ್ಲೂ ನಾವು ಆಡಿದ್ದೇವೆ. ಯಾವ್ಯಾವ ಕಾರಣಗಳಿಂದಲೋ, ನಾವು ಬಾಡಿಗೆಗೆ ಹಿಡಿದ ಪ್ರದರ್ಶನ ಮಂದಿರ ಖಾಲಿಯಾಗಿಯೇ ಉಳಿದು “ನಾವು ಈ ಊರನ್ನು ಬಿಟ್ಟರೆ ಒಳ್ಳೆಯದು” ಎಂಬ ಭಾವನೆ ಬಂದಾಗ, ಕೊನೆಯ ದಿನ- ನಗರದ ಮಧ್ಯ ಸ್ಥಳದಲ್ಲಿ – ಬಿಡು ಬಯಲಿನಲ್ಲಿ  “ಬಯಲಾಟ”ವನ್ನೇ ಆಡಿ, ಸೇರಿದ್ದ ಸಾವಿರಾರು ಮಂದಿ ನಾಗರಿಕರನ್ನು ಮುಗ್ಧಗೊಳಿಸಿದ್ದೇವೆ.

ಎಲ್ಲ ಕಡೆಗಳಲ್ಲೂ ಒಂದೇ ರೀತಿಯ ವ್ಯವಸ್ಥೆಯಾಗಿರುವುದು ಸಾಧ್ಯವಲ್ಲ. ಯಾವುದಾದರೂ ಕುಂದುಕೊರತೆಗಳಿಂದ ದೊರೆತ ಪ್ರೋತ್ಸಾಹ ಕಡಿಮೆಯಾಯಿತು ಎಂದು ಕೊರಗಬೇಕಾಗಿಯೂ ಇಲ್ಲ. ಕೊರತೆ ಏನು? ಪರಿಹಾರವೇನು? ಎಂದು ತಿಳಿಯುವ ವಿಮರ್ಶಕ ಬುದ್ಧಿ ಇದ್ದರೆ ದೇಶದ ಯಾವ ಕಡೆಯಲ್ಲಾದರೂ ಯಕ್ಷಗಾನವನ್ನು ಪ್ರದರ್ಶಿಸಬಹುದು. ಸುಸಂಸ್ಕೃತ ರೂಪದಲ್ಲಿ  ಅದನ್ನು ಪ್ರದರ್ಶಿಸುವ ಎದೆಗಾರಿಕೆ ವಹಿಸಿದರೆ, ನಾವಾಗಿಯೇ ನಮ್ಮ ತಂಡಗಳನ್ನು ಕೊಂಡೊಯ್ಯಬಹುದು.

ಅದಕ್ಕಾಗಿ ರಾಜ್ಯ ಸರಕಾರಗಳ- ಅಥವಾ ಅಕಾಡೆಮಿಗಳ ವ್ಯವಸ್ಥೆ- ವಿನಿಮಯ ಆಶ್ರಯವನ್ನು ಪಡೆಯಬೇಕಾಗಿಲ್ಲ,

ನಮ್ಮ ಕಲೆ ಇಂತಹದು ಎಂದು ತೋರಿಸಿಕೊಳ್ಳುವ ಧೈರ್ಯ ನಮಗಿದ್ದರೆ ಎಲ್ಲೂ ಅದನ್ನು ಮೆರೆಸಬುಹುದು; ಎಂತಹವರ ಎದುರೂ ಪ್ರದರ್ಶಿಸಬಹುದು.

 

 

 

ಸಣ್ಣವರು ದೊಡ್ಡವರು….

ನಾನು ಸಣ್ಣವನಿದ್ದಾಗ, ಹಲವು ಮಂದಿ ದೊಡ್ಡವರು ನನ್ನ ಕೈ ಹಿಡಿದು ನಡೆಸಿದ್ದರು. ದೈನಂದಿನ ಜೀವನಕ್ಕೆ  ಅನ್ವಯಿಸುವಷ್ಟೇ ಪರಿಣಾಮಕಾರಿಯಾಗಿ ಆ ಮಾತು ಕಲಾ ಜೀವನಕ್ಕೂ ಅನ್ವಯಿಸುವಂತಹುದು.

ಆಮೇಲೆ, ನಾನೂ ಒಬ್ಬ ಕಲಾವಿದ ಎಂದು ಹೇಳಿಕೊಳ್ಳುವ ಶಕ್ತಿ ಬಂದಾಗ (ಶಕ್ತಿಗಿಂತಲೂ ಹೆಚ್ಚಿನ ಕುರುಡು ಧೈರ್ಯವೂ ಇದ್ದಾಗ) ಹಲವು ಮಂದಿ ದೊಡ್ಡವರೆನಿಸಿಕೊಂಡವರ ಸ್ನೇಹ-ಪರಿಚಯಗಳನ್ನು ಮಾಡಿಕೊಂಡಿದ್ದೇನೆ. ಎಷ್ಟೋ ಮಂದಿ ಸಣ್ಣವರನ್ನು ಕಲಾರಂಗಕ್ಕೆ ಪರಿಚಯ ಮಾಡಿಸಿಕೊಟ್ಟಿದ್ದೇನೆ.

ದೊಡ್ಡವರೆನಿಸಿದವರು ಹಲವರಲ್ಲಿ ಕೆಲವರು ಈಗ ಕಣ್ಣರೆಯಾಗಿದ್ದಾರೆ. ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಸಣ್ಣವರಾಗಿದ್ದವರು ಮೆಲ್ಲಮೆಲ್ಲನೆ ದೊಡ್ಡವರಾಗುತ್ತಲಿದ್ದಾರೆ.

ನಾನು ಎಳೆಯ ಕಲಾವಿದರನ್ನು ತರಬೇತಿಗಾಗಿ ನಮ್ಮಲ್ಲಿಗೆ ಎಳೆದು ತಂದಾಗ, ನನ್ನ ಆಯ್ಕೆಯ ಕ್ಷೇತ್ರವನ್ನು ವಿಸ್ತಾರಗೊಳಿಸುವ ಧೈರ್ಯ ನನಗಿರಲಿಲ್ಲ. ಮನೆಯವರಿಂದ ಬೇರ್ಪಡಿಸಿ ಹುಡುಗರನ್ನು ನನ್ನ ಬಳಿಗೆ ಕರೆತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ನಮ್ಮ ಮನೆಯ ಸಮೀಪದವರನ್ನಾದರೂ ಕರೆತಂದು ಸೇರಿಸಿಕೊಳ್ಳುವ ಮೊದಲು “ನಿಮ್ಮ ಹುಡುಗನಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇನೆ.” ಎಂಬ ಭರವಸೆ ಕೊಟ್ಟೇ ಕರೆತರಬೇಕಾಗುತ್ತಿತ್ತು.

ಹಾಗೆ ತಂದು ತರಬೇತಿ ಮಾಡಿಸಿದವರಲ್ಲಿ ಹೆಚ್ಚಿನವರು ತಮ್ಮ ರಂಗಪ್ರವೇಶದ ಹಾರೈಕೆಗಳನ್ನು ಸಾರ್ಥಕಗೊಳಿಸಿದ್ದಾರೆ. ಇನ್ನು ಕೆಲವರು ತಾವು ಪರಿಣತರಾದೆವೆಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು, ಜೀವನದ ಇತರ ಜಂಜಾಟಗಳಿಗೆ ಸಿಕ್ಕಿ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುವ ಮಟ್ಟಕ್ಕೂ ಮುಟ್ಟಿದ್ದಾರೆ.

ಎಲ್ಲರೂ ಒಂದೇ ರೀತಿಯಾಗಿರಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಏಕರೂಪದ ಸಾಕಾರವೇ ಸಾಕ್ಷಾತ್ಕಾರವಾಗುವುದಾದರೆ, ಭಗವದ್ ಸೃಷ್ಟಿಯಲ್ಲಿ ವೈವಿಧ್ಯವೇ ಇರಲಾರದಲ್ಲ?

ನನ್ನೊಂದಿಗೆ ಸಣ್ಣವರಾಗಿದ್ದು ದೊಡ್ಡವರಾಗುತ್ತಿರುವಾಗಲೇ ವಿಧಿಯ ಕಡೆ ಸೇರಿದವರು ಇಬ್ಬರು-ನಮ್ಮ ದೊಡ್ಡಪ್ಪನ ಮಕ್ಕಳು. ಒಬ್ಬನ ಹೆಸರು ರಾಮ, ಇನ್ನೊಬ್ಬನ ಹೆಸರು ಕೃಷ್ಣ.

ರಾಮನ ಹೆಸರು ಅವನು ನಿರ್ವಹಿಸುತ್ತಿದ್ದ ರಾಕ್ಷಸ ಪಾತ್ರಗಳಿಂದಾಗಿ ಮೆರೆದಿತ್ತು. ಕೃಷ್ಣ ಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದ. ಅವರಿಬ್ಬರೂ ಪಡೆದುಬಂದಿದ್ದ ಪ್ರತಿಭೆಯನ್ನು ಮೆರೆಸಲು ಸರಿಯಾದ ಅವಕಾಶ ದೊರೆಯುವ ಮೊದಲೇ ಇಬ್ಬರೂ ಅನಾರೋಗ್ಯಕ್ಕೆ ತುತ್ತಾದರು.

ನನ್ನ ಜೊತೆಗೇ- ಅಥವಾ ಒಂದೆರಡು ವರ್ಷಗಳ ಹಿಂದು ಮುಂದಿನ ವ್ಯತ್ಯಾಸದಲ್ಲಿ- ರಂಗಪ್ರವೇಶ ಮಾಡಿ ಇಂದಿಗೂ ತಮ್ಮ ಕಲಾಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತಲಿರುವವರು ಕೆಲವರಿದ್ದಾರೆ. ಅವರೆಲ್ಲರನ್ನೂ ನಾನು ಪ್ರತ್ಯೇಕವಾಗಿ ಹೆಸರಿಸ ಬೇಕಾಗಿಲ್ಲ. ಕರಾವಳಿಯ ಸೀಮೆಯ ಜನರು ಅವರ ವಿವಿಧ ವೇಷಗಳನ್ನು ನೋಡಿ ಆನಂದಿಸುತ್ತಿದ್ದಾರೆ.

ನನ್ನ ಮೂಲಕವೇ ತರಬೇತಿ ಪಡೆದು ತಮ್ಮ ವೈಯಕ್ತಿಕ ಸಾಮರ್ಥ್ಯವನ್ನು ಪಡೆದು ಹೆಚ್ಚಿಸಿಕೊಂಡ ರಾಮಚಂದ್ರ- ನಾರಾಯಣರಂತಹ ಕೆಲಮಂದಿ ಯುವಕರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಲಿದ್ದಾರೆ.

ಉಪಚಾರದ ಬೆಲೆ

ಅಧಿಕಾರ ಸ್ಥಾನದಿಂದಾಗಲಿ, ಕಲಾ ನೈಪುಣ್ಯದಿಂದಾಗಲಿ ದೊಡ್ಡವರೆನಿಸಿಕೊಂಡವರು ಹಲವರನ್ನು ಕಂಡು ಪರಿಚಯ ಮಾಡಿಕೊಳ್ಳುವ ಸುಯೋಗ ನನಗೊದಗಿತ್ತು.

ಅಧಿಕಾರದ ಪದವಿಗಳಿಂದಾಗಿ ದೊಡ್ಡವರಾದವರು ಎಷ್ಟೋ ಮಂದಿ, ನನ್ನನ್ನು ಕಂಡು ಆಡಿದ ಮಾತುಗಳ ಉಪಚಾರದ ಬೆಲೆ- ಈಗ ಅವರ ಮುಂದೆ ಕಲಾವಿದನಂತೆ ನಿಲ್ಲಲಾರದ ಸಂದರ್ಭದಲ್ಲಿ ನೆನಪಿಗೆ ಬರುತ್ತಲಿದೆ.

ಕಲೆಯಿಂದಾಗಿ ದೊಡ್ಡವರಾದವರು ಈಗಲೂ ನೆನಪಿನ ಸುಳಿಯಲ್ಲಿ ತಿರುಗುತ್ತ ಇದ್ದಾರೆ. ಅವರಲ್ಲಿ ಒಬ್ಬರು ನೆನಪು ಮಾಡಿಕೊಟ್ಟ-

ಅರಸರ್ ಕೊಡುವಾ ಕಾರ್ತ

ಸ್ವರ ಕಂಕಣಮಿರ್ಕೆ ಸರಸರಾಸ್ವಾದಿಸಿ ಕಾ|

ವ್ಯರಸವ ಸೂಸುವ ಸುಖ ಭಾ

ಸ್ವರಾಶ್ರು ಕಣ್ಕಣಮೆ ಕವಿಗೆ ಕಂಕಣ ಮಲೆ|

ಎಂಬ ಕಂದಪದ್ಯ ಇನ್ನೂ ನೆನಪಿನಲ್ಲಿ ಉಳಿದಿದೆ.

ಆತ್ಮಪರೀಕ್ಷೆ

ಅಷ್ಟೊಂದು ವರ್ಷಗಳ ಕಾಲ ಕಲಾಸಾಗರದಲ್ಲೇ ಈಜಾಡುತ್ತಲಿದ್ದರೂ, ಯಕ್ಷಗಾನದ ಬಗ್ಗೆಯಾಗಲಿ ನನ್ನ ಜೀವನದ ಕುರಿತಾಗಲಿ ಅಂತರ್ಮುಖಿಯಾಗಿ ವಿಮರ್ಶೆ ನಡೆಸಲು ಅವಕಾಶ ನನಗೆ ದೊರೆತಿರಲಿಲ್ಲ.

ಅಂತಹ ಅವಕಾಶ ಸಿಗಬೇಕಾದರೆ, ತಿಂಗಳುಗಟ್ಟಲೆ ವಿಶ್ರಾಂತಿಯಿಂದಲೇ ಇರಬೇಕಾಗುವುದೇ? ಎನಿಸುತ್ತಲಿತ್ತು ಒಮ್ಮೊಮ್ಮೆ. ದೇಹದ ದಣಿವು- ಮನಸ್ಸಿನ ಆಯಾಸ, ಎರಡೂ ಸೇರಿಕೊಂಡು ನನ್ನನ್ನು ಹಣ್ಣು ಮಾಡತೊಡಗಿದ್ದುವು.

ಕಟ್ಟಿದ ವೇಷವನ್ನು ಬಿಚ್ಚಿ, ಉಜ್ಜಿದ ಬಣ್ಣವನ್ನು ಆಳಿಸಿ ಒಮ್ಮೆ ಬಿದ್ದುಕೊಂಡರೆ ಸಾಕು ಎನ್ನುವ ಸ್ಥಿತಿ 1960ರ ದಶಕದಲ್ಲಿ ಬರತೊಡಗಿತ್ತು. ನಾನು ಹೇಗಾದರೂ ಮುಂದೆ ಸಾಗುತ್ತಿದ್ದೆ, ಎಂದಾದರೆ ಚೆಂಡೆಯ ಪೆಟ್ಟಿನ ಆಕರ್ಷಣೆಯೇ ಕಾರಣವಾಗಿತ್ತು.

1965ನೇ ಇಸವಿ ಆಗುವಾಗ, ಹೊಸ ಪ್ರಸಂಗಗಳನ್ನು ತಮಗಾಗಿಯೇ ಬರೆಸಿಕೊಂಡು ಕೃತಿಕೃರ್ತೃಗಳ ಶ್ರಮಕ್ಕೆ ಕಿಂಚಿತ್ ಕಾಣಿಕೆ ಸಲ್ಲಿಸುವ ಅಭ್ಯಾಸ ದಶಾವತಾರ ಮೇಳಗಳವರಲ್ಲಿ ಬೆಳೆಯತೊಡಗಿತ್ತು.

ನಮ್ಮ ಧರ್ಮಸ್ಥಳ ಮೇಳದ ಪರವಾಗಿ ಆ ವರ್ಷ ಒಂದು ಹೊಸ ಪ್ರಸಂಗವನ್ನು ಬರೆಸಲಾಯಿತು. ವೈಶಿಷ್ಟ್ಯಪೂರ್ಣ ಹಿನ್ನೆಲೆಯುಳ್ಳ ಶ್ರೀ ಧರ್ಮಸ್ಥಳ ಕ್ಷೇತ್ರವೇ ಪ್ರಸಂಗಕ್ಕೆ ಸ್ಫೂರ್ತಿ. ಧರ್ಮಸ್ಥಳದ ಮಹಾತ್ಮೆಯೇ ಕಥಾವಸ್ತುವಾಯಿತು. ಶ್ರೀಮಾನ್ ರತ್ನವರ್ಮ ಹೆಗ್ಗಡೆಯವರ ಅಪೇಕ್ಷೆಯಂತೆ ಶ್ರೀ ಪದ್ಯಾಣ ವೆಂಕಟೇಶ್ವರ ಭಟ್ಟರಿಂದ “ಧರ್ಮಸ್ಥಳ ಮಹಾತ್ಮೆ” ಪ್ರಸಂಗವನ್ನು ಬರೆಸಿದೆ. ಆ ವರ್ಷ ಧರ್ಮಸ್ಥಳದಲ್ಲೇ ಶ್ರೀ ಹೆಗ್ಗಡೆಯವರ ಸಮ್ಮುಖದಲ್ಲೇ ಯಶಸ್ವಿಯಾದ ಪ್ರಥಮ ಪ್ರಯೋಗವಾಯಿತು.

ತಿರುಗಾಟಕ್ಕೆ ಹೊರಟಾಗ, ಹೆಚ್ಚಿನ ಕಡೆಗಳಲ್ಲಿ ಪ್ರಸಂಗದ ಎರಡು ಪ್ರಾಮುಖ್ಯ ಪಾತ್ರಗಳಾದ ಶಿವ ಮತ್ತು ಅಣ್ಣಪ್ಪ ದೈವ- ಇವೆರಡನ್ನೂ ನಾನೇ ಮಾಡಬೇಕಾಗಿ ಬರುತ್ತಿತ್ತು.

ದೇಹಶ್ರಮ ಅಧಿಕಾವಾಗುತ್ತಾ ಬಂದಿತ್ತು. ಆದರೆ ಕಾಲನ್ನು ಕುಣಿಸುವ ಕಾಲ ಕೇಳುತ್ತಿರಲಿಲ್ಲ.

1965ರ ಜನವರಿ 14ನೇ ತಾರೀಕಿನ ರಾತ್ರಿ-

ಉಡುಪಿಯಿಂದಾಚೆ ಪೆರ್ಡೂರಿನಲ್ಲಿ- ವೇಷಧಾರಣೆಗೆ ಪ್ರಾರಂಭಿಸಿದಾಗ ಅಷ್ಟೊಂದು ಆಯಾಸ ಕಂಡುಬರಲಿಲ್ಲ. ಅದೇ ಧೈರ್ಯದಿಂದ ಶಿವನಾಗಿ ರಂಗಸ್ಥಳ ಪ್ರವೇಶಿಸಿ ತಾಂಡವವನ್ನಾಡತೊಡಗಿದೆ.

ಇದ್ದಕ್ಕಿದ್ದಂತೆ ಎದೆಯ ಬಡಿತ ಹೆಚ್ಚಾಗಿ ತೊಡಗಿ, ಉಸಿರು ಕಟ್ಟ ತೊಡಗಿತು. ಒಂದು ತಾಳದ ಹೊಡೆತಕ್ಕೆ ಭಾಗವತರ ಬಳಿಯ “ರಥ”ದ ಮೇಲೆ ಒರಗಲೇಬೇಕಾಯಿತು.

ಏನೋ ಆಗಿದೆ ಎಂಬ ಸೂಚನೆ ಭಾಗವತರಾದ ಶ್ರೀ ಕಡತೋಕಾ ಮಂಜುನಾಥ ಭಾಗವತರಿಗೆ ದೊರೆತಿತಂತೆ. ಅವರು ತಮ್ಮ ಬಳಿಯಲ್ಲಿ (ತಮಗಾಗಿ) ತರಿಸಿಟ್ಟಿದ್ದ ಚಹಾದ ಗ್ಲಾಸನ್ನು ಎತ್ತಿ ನನಗೆ ಕೊಡಲು ಪ್ರಯತ್ನಿಸಿದರು.

“ಆಯಾಸ- ಅಲ್ಲ- ಏನೋ ಭಯಂಕರ ಸ್ಥಿತಿ- ಹೇಳಲಾರೆ- ಕಥೆ ಮುಂದುವರಿಸಿ ಮುಂದಿನ ಪಾತ್ರ- ರಂಗಪ್ರವೇಶ” ಎಂದು ಹೇಗಾದರೂ ಮೇಲುಸಿರಿನಲ್ಲಿ ತಿಳಿಸಿದಾಗ ಭಾಗವತರು ಮುಂದಿನ ಪಾತ್ರಗಳ ಪ್ರವೇಶ ಸೂಚನೆಯನ್ನು ತಾಳದಲ್ಲೇ  ತಿಳಿಸಿದರು.

ವೇಷಗಳು ಬಂದೊಡನೆ, ಮುಂದಿನ ಕಥಾಸಂದರ್ಭವನ್ನು ಎಳೆದ ಉಸಿರಿನ ಮಾತಿನಲ್ಲೇ ತಿಳಿಸಿ, ಕುಸಿದು ತೆವಳುವಂತಾಗಿ ರಂಗಸ್ಥಳದಿಂದ ಮೆಲ್ಲನೆ ಸರಿದೆ.

ಬಳಿಯ ಚೌಕಿಯಲ್ಲಿ ಇತರ ವೇಷಧಾರಿಗಳು ಇನ್ನೂ ಬಣ್ಣ ಬಳಿಯುತ್ತಿರುವಲ್ಲಿಗೆ ಬಂದು ಹೇಗಾದರೂ ಇತರರ ಆಧಾರದಿಂದ ಸೇರುವಾಗ ವಾಂತಿಯಾಯಿತು. ಪ್ರಜ್ಞೆತಪ್ಪಿತು. ಮೇಳದ ಶ್ರೀ ಮಹಾಗಣಪತಿಯನ್ನು ಕಣ್ಣಿಂದ ನೋಡುತ್ತಿದ್ದಂತೆ ಕೆಳಕ್ಕೆ ಬಿದ್ದೆ-

ನನಗೆ ಮೂರ್ಛೆ ತಿಳಿದಾಗ-

ನಾನು ಪೆರ್ಡೂರಿನ ಆಟದ ಚೌಕಿಯಲ್ಲಿರಲಿಲ್ಲ. ಒಂದು ಮಂಚದ ಮೇಲಿದ್ದೆ. ಮೂಗಿನಲ್ಲಿ ಎರೆಹುಳುವಿನಂತೆ ಒಂದು ರಬ್ಬರ್ ನಳಿಗೆ ಇದ್ದುದು ಕಂಡಿತು. ನನ್ನವರೆನ್ನುವವರು ಯಾರೊಬ್ಬರೂ ಬಳಿಯಲ್ಲಿ ಇರಲಿಲ್ಲ. ಮನಸ್ಸಿಗೇ ಕತ್ತಲು ತುಂಬಿಕೊಂಡಿತ್ತು.

ಎಚ್ಚರ ತಪ್ಪಿ ಮುಚ್ಚಿದ ಕಣ್ಣು ತೆರೆಯುವಾಗ ಮರುದಿನ ಮಧ್ಯಾಹ್ನವಾಗಿತ್ತು ಎಂದು ತಿಳಿದು ಬಂದುದು ಅನಂತರ.

ಜೀವನ್ಮರಣ ಕಾಳಗ

ರಂಗಸ್ಥಳದಲ್ಲಿ ಒರಗಿದುದನ್ನು ಕಂಡಾಗಲೇ ಸ್ಥಿತಿಗತಿಯನ್ನು ಊಹಿಸಿದ್ದವರು ಪ್ರೇಕ್ಷಕ ವೃಂದದಲ್ಲಿದ್ದ ಡಾ| ಎಂ. ಆರ್. ಹೆಗ್ಡೆಯವರು. ಅವರು ಚೌಕಿಗೆ ಬಂದು  ವಿಚಾರಿಸುವ ಹೊತ್ತಿಗೆ ನಾನು ಕೆಳಗೆ ಬಿದ್ದಾಗಿತ್ತು. ಅವರೂ, ಜೊತೆಗಿದ್ದ ಮಾಸ್ಟರ್ ಕಲ್ಯಾಣಿಯವರೂ “ಆಟವನ್ನು ನಿಲ್ಲಿಸಿ ಅನಾಹುತದ ಸುದ್ದಿಗಳಿಗೆ ಅವಕಾಶ ಕೊಡಬಾರದು, ದೇವರ ದಯೆಯಿಂದ ಏನೂ ಕೆಟ್ಟದಾಗಲಾರದು” ಎಂದು ಎಲ್ಲರಿಗೆ ಧೈರ್ಯ ಹೇಳಿ, ಆಟ ನಡೆಯುವ ವ್ಯವಸ್ಥೆ ಮಾಡಿ, ನನ್ನನ್ನು ಕೂಡಲೇ ಮಣಿಪಾಲಕ್ಕೆ ಸಾಗಿಸಿ ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಿಸಿದರಂತೆ.

ಬೇರೆಯವರು ಕೆಲವು ದಿನಗಳ ನಂತರ ನನಗೆ ಅವೆಲ್ಲ ವಿವರಗಳನ್ನು ತಿಳಿಸಿದರು. ಜನವರಿ 15ರಿಂದ ಮಾರ್ಚ್ 9ರವರೆಗೆ ಕುರಿಯ ವಿಠಲಶಾಸ್ತ್ರಿಯ ಪಾತ್ರ ಜೀವನ್ಮರಣ ಕಾಳಗದ ಪ್ರಸಂಗದಲ್ಲೇ ಕಳೆಯಿತು. ಆಸ್ಪತ್ರೆಯ ಡಾ| ಶಿವರಾಮನ್, ಡಾ| ಶಂಕರ್ ಭಟ್, ಡಾ| ಪಾಂಡ್ಯ ಇವರೇ ಹಿಮ್ಮೇಳದ ಸೂತ್ರಧಾರರಾದರು. ರೋಗಿ ಶುಶ್ರೂಷೆಯ ಸಹೋದರಿಯರು ನೇಪಥ್ಯದ ಬೆಂಬಲಿಗರಾದರು.

ಮಾರ್ಚ್ 9 ರಂದು ಹೇಗಾದರೂ – ವೈದ್ಯರ ಕಾವಲು ಇನ್ನು ನಿಮಗೆ ಬೇಡ.ನೀವು ರೋಗಿ ಎಂಬುದನ್ನು ಮರೆಯದೆ, ಮನೆಯನ್ನು ಕೂಡಾ ಆಸ್ಪತ್ರೆ ಎಂದೇ ಭಾವಿಸಿ ಕೆಲವು ವರ್ಷಗಳನ್ನು ಕಳೆಯಬೇಕು. ಗಟ್ಟಿಯಾಗಿ ಮಾತನಾಡುವುದು, ಸಟಕ್ಕೆಂದು ಏಳುವುದು, ಮೆಟ್ಟಲುಗಳನ್ನು ಏರುವುದು ಇವಾವುದೂ ಸಲ್ಲದು. ಸುಮಾರು ಎರಡು-ಮೂರು ವರ್ಷದ ಸಂಪೂರ್ಣ ವಿಶ್ರಾಂತಿಯೇ ನಿಮಗೆ ಇನ್ನು ಬೇಕಾದ ಔಷಧ- ಎಂಬ ಎಚ್ಚರಿಕೆಯನ್ನಿತ್ತು ಡಾಕ್ಟರರು ನನ್ನನ್ನು ಬೀಳ್ಕೊಟ್ಟರು.

ಅಲ್ಲಿಂದ, ನನ್ನ ಬಂಧು ಡಾ| ಈಶ್ವರ ಶರ್ಮರು ತಮ್ಮ ಮನೆಗೆ ನನ್ನನ್ನು ಕರೆತಂದರು. ನನ್ನ ಹಳ್ಳಿ ಮನೆಗೆ ನಾನು ಬಯಸಿದರೂ ಹೋಗಲಾರದವನಾಗಿ ಪಣಂಬೂರಿನಲ್ಲಿ ಡಾ| ಶರ್ಮರಲ್ಲಿ ಕೆಲವು ತಿಂಗಳುಗಳು ಠಾಣ್ಯ ಹೂಡಬೇಕಾಯಿತು.

ವೇಷದ ಆಸೆ

ಈ ನಡುವೆ ಮೇಳವಂತೂ ತಿರುಗಾಟ ನಡೆಸಿಯೇ ಇತ್ತು. ಸಂಚಾಲಕನ ಹೊಣೆಗಾರಿಕೆ ನನ್ನ ತಮ್ಮನ ಮೇಲೆಯೇ ಸಂಪೂರ್ಣವಾಗಿ ಬಿದ್ದಿತು. ಮೇಳವಂತೂ ಉತ್ತರ ಕನ್ನಡದ ಕಡೆಗೆ ಹೋಗಿತ್ತು. ನನ್ನ ಪಾತ್ರಗಳನ್ನು ನಿರ್ವಹಿಸಲು ದೈವ ಪ್ರೇರೇಪಣೆಯಿಂದ ಉತ್ತರ ಕನ್ನಡದ ನಟಶ್ರೇಷ್ಠ ಶ್ರೀ ಮೂರೂರು ದೇವರ ಹೆಗ್ಗಡೆಯವರು ದೊರೆತಿದ್ದರು.

ಸ್ವತಃ ಅನಾರೋಗ್ಯದಿಂದಿದ್ದರೂ ಅವರು ನನಗಾಗಿ ಶ್ರಮವಹಿಸಿ ಹೊಸತಾಗಿ ಹೊಂದಿಸಿಕೊಂಡ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಆ ವರ್ಷದ ತಿರುಗಾಟವನ್ನು ಮುಗಿಸಿಕೊಟ್ಟರು.

ಅವರಂತೆಯೇ ಶ್ರೀ ಮಂಜುನಾಥ ಭಾಗವತರೂ, ಮೃದಂಗವಾದಕ ಶ್ರೀ ಕೃಷ್ಣಯ್ಯ ಬಲ್ಲಾಳರೂ ಎಲ್ಲ ರೀತಿಯಿಂದಲೂ ಸಹಕರಿಸಿದರು.

ಜೀವಕ್ಕೆ ಬಂದ ಕುತ್ತ ತೊಲಗಿತ್ತು. ಆದರೆ ವೇಷದ ಆಸೆ?

‘ಕಾಲು ಕುಣಿಯ ಹೊರಟರೆ, ಕಾಲನ ಏಟು ಬೀಳಬಹುದು. ಎಚ್ಚರಿಕೆ!’ ಎಂದರು ಡಾಕ್ಟರರು.

ವೈದ್ಯಾಯ ತಸ್ಮೈ ನಮಃ  ಎಂದೆ. ಪತ್ತನಾಜೆಗೆ ಶ್ರೀ ಧರ್ಮಸ್ಥಳಕ್ಕೆ ತೆರಳಿ ಮೇಳದ ಲೆಕ್ಕಾಚಾರವನ್ನು ಒಪ್ಪಿಸಿ ಶ್ರೀ ಹೆಗ್ಗಡೆಯವರಿಂದ ಬೀಳ್ಕೊಂಡು ಬರುವಷ್ಟು ಚೈತನ್ಯವನ್ನು ಹೇಗಾದರೂ ಎರವಲು ಪಡೆದುಕೊಂಡೆ.

ಡಾಕ್ಟರರ ಕಠೋರ ಶಾಸನದ ತರುವಾಯ ಅದಕ್ಕೆ ಕತ್ತರಿ ಬಿದ್ದಿತು. ನನ್ನ ಕತ್ತರಿ ಟೊಪ್ಪಿಗೆ ವಿಶ್ರಾಂತಿ ಪಡೆಯಿತು.

ಕೊಡುಗೆ ಏನು?

ಅನಂತರ, ಈಗ ಅಲ್ಲಿ- ಇಲ್ಲಿ ಮನಸ್ಸು ಅಲೆದಾಡುತ್ತಲಿದೆ. ಕುಣಿದುಮುಗಿದ ತರುವಾಯ ನಿನ್ನ ಕೊಡುಗೆಯಾಗಿ ಯಕ್ಷಗಾನಕ್ಕೆ ಏನನ್ನು ಕೊಟ್ಟಿರುವೆ? ಎಂದು ಕೇಳುತ್ತಾ ಇದೆ. ನಾನೇನನ್ನು ಕೊಡಲು ಸಾಧ್ಯವಾಗಿತ್ತು? ಇನ್ನೂ ಏನನ್ನು ಕೊಡಲು ಸಾಧ್ಯವಿದೆ?  ಎಂದು ಕೇಳುತ್ತಲಿದ್ದೇನೆ.

ಯಕ್ಷಗಾನದ ಪರಿಚಯವನ್ನು ಎಲ್ಲ ಆಸಕ್ತರಿಗೂ ಮಾಡಿಸಿದರಾಗದೆ?- ಅವರು ಅದನ್ನು ಸರಿಯಾಗಿ ತಿಳಿದು ನೋಡುವಂತಾಗಬಾರದೆ? ಎಂದು ಯೋಚಿಸಿದ್ದೇನೆ.

ಕಲಾವಿದರ ಮನೋವಿಕಾಸಕ್ಕೆ ಯಾವುದಾದರೂ ರೀತಿಯ ಸೂಕ್ತ ವಾತಾವರಣ  ನಿರ್ಮಾಣಗೊಳ್ಳದೆ? ಎಂದು ಪ್ರಶ್ನಿಸಿದ್ದೇನೆ.

ಕಲೆಯ ಜೀವನದಲ್ಲಿ ಮುಪ್ಪಿನ ದಿನ ಬಂದಾಗ ಪ್ರತಿಷ್ಠೆಯ ಲೋಭಿಗಳು ಎಂಜಲು ಎಸೆದು ಕಲಾವಿದರ ಜೀವವನ್ನು ಅರ್ಧಂಬರ್ಧ ಉಳಿಸುವುದೊಂದೇ ಗತಿಯೇ? ಈ ಪರಿಸ್ಥಿತಿ ಬದಲಾಗಲಾರದೆ? ಎಂಬ ಪ್ರಶ್ನೆಯೂ ಬಂದಿದೆ.

ಇವೆಲ್ಲ- ಇನ್ನೂ ಕೆಲವು ವರ್ಷಗಳ ಕಾಲ ಆಯು ಬಲ ದೊರಕಿದರೆ-

ಯಕ್ಷಪ್ರಶ್ನೆಗಳೇ ಆಗಿ ಉಳಿಯಲಾರವು; ಯಕ್ಷಗಾನದ ಪ್ರಶ್ನೆಗಳು ಮಾತ್ರ ಆಗಬಹುದು ಎನಿಸುತ್ತದೆ.

ಕೊಡಬೇಕೆಂದಿರುವ ಸೂಚನೆಗಳನ್ನು ಕೊಟ್ಟೇ ತೀರಬೇಕು ಅನಿಸುತ್ತಿದೆ.

ಅವಕಾಶ ದೊರೆಯಬೇಕು ಅಥವಾ ದೊರಕಿಸಿಕೊಳ್ಳಲು ಸಾಧ್ಯವಾಗಬೇಕು,ಅಷ್ಟೆ.

ಕುಣಿಯುವುದರ ಹೊರತು, ಬೇರಾವುದಾದರೂ ಒಂದು ರೀತಿಯ ಸೇವೆಯನ್ನು ಯಕ್ಷಗಾನಕ್ಕೆ ಸಲ್ಲಿಸುವ ಕಾಲ ಬರಬಹುದು; ನೋಡೋಣ. (ಮುಗಿಯಿತು)

ಈ ಎಲ್ಲ ಪ್ರಕಟಣೆಗೆ ಚಿತ್ರ ಹಾಗೂ ಲೇಖನವನ್ನು ಒದಗಿಸಿಕೊಟ್ಟವರು ಪ.ಗೋ ಅವರ ಪುತ್ರ ಪ.ರಾಮಚಂದ್ರ. ಅವರಿಗೆ ವಿಶೇಷ ಕೃತಜ್ಞತೆಗಳು

 

 

 

NEWSDESK

Recent Posts