ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಡೀಸೆಲ್ ಟ್ಯಾಂಕರ್ ಮಂಗಳವಾರ ದಾರಿ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ, ಕೆಲ ಗಂಟೆಗಳ ಕಾಲ ಕಲ್ಲಡ್ಕದಿಂದ ಮೆಲ್ಕಾರ್ ವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನಗಳು ದಾಸಕೋಡಿ ಮೂಲಕ ನರಿಕೊಂಬು ಮಾರ್ಗವಾಗಿ ಬಿ.ಸಿ.ರೋಡಿನಲ್ಲಿ ಸಂಚರಿಸಿದವು.
ಮಂಗಳೂರಿನಿಂದ ಚೆನ್ನೈಗೆ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕ ಕಲ್ಲಡ್ಕ ಸರ್ವೀಸ್ ರೋಡ್ ನಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿದ್ದು ಘಟನೆಗೆ ಕಾರಣ.
ದಾರಿ ತಪ್ಪಿದ ಟ್ಯಾಂಕರ್ ಚರಂಡಿಗೆ ಬಿದ್ದಿದೆ. ಆ ಸಂದರ್ಭ, ಸಣ್ಣದಾದ ತೂತು ಆಗಿದ್ದು, ಡಿಸೇಲ್ ಸೋರಿಕೆ ಕಂಡುಬಂದಿತ್ತು. ಕೆಲ ಹೊತ್ತು ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತವರಣವೂ ನಿರ್ಮಾಣವಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಕಾರಣಕ್ಕೆ ಇಲ್ಲಿ ಮೊದಲೇ ವಾಹನಗಳ ಸಂಚಾರ ದುಸ್ತರವಾಗಿದ್ದು, ಇದೀಗ ವಾಹನ ಅವಘಡದ ಕಾರಣ ಒಂದು ತಾಸಿಗೂ ಅಧಿಕ ಕಾಲ ವಾಹನಗಳು ಬಾಕಿಯಾದವು. ಟ್ರಾಫಿಕ್ ಎಸ್.ಐ ಸುತೇಶ್ ಕ್ರೇನ್ ತರಿಸಿ ಲಾರಿಯನ್ನು ಬದಿಗೆ ಸರಿಸಿದ ನಂತರ ಟ್ರಾಫಿಕ್ ಸುಗಮವಾಯಿತು.