ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯವಾಗಿ ಬೆರೆತು, ಬಾಳಿ ನಮ್ಮ ಸಮಾಜದ ಪರಂಪರೆಯನ್ನು ಎಂದಿಗೂ ಮರೆಯದೆ ಮುಂದುವರಿಸಿಕೊಂಡು ಹೋಗಬೇಕು . ಮರಾಟಿಗರ ಶ್ರೇಷ್ಠ ಪೂಜೆ ಶ್ರೀ ಮಹಾಮಾಯಿ ಅಮ್ಮನವರ ಗೋಂದೋಳು ಪೂಜೆ. ಸಂಘದ ವತಿಯಿಂದ ನಡೆಯುವ ಈ ಪೂಜೆಯು ನಮ್ಮ ಸಮಾಜದ ಜನರಿಗೆ ಶಕ್ತಿ ತುಂಬುವಂತಾಗಲಿ ಶಾಂತಿ, ನೆಮ್ಮದಿಯ, ಆರೋಗ್ಯದ ಬಾಳನ್ನು ಅನುಗ್ರಹಿಸಲಿ ಎಂದು ಹೈಕೋರ್ಟ್ ನ್ಯಾಯವಾದಿ, ಕರ್ನಾಟಕ ಮರಾಟಿ ಸಂಘ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಪ್ರವೀಣ್ ಕುಮಾರ್ ಮುಗುಳಿ ನೆಟ್ಲ ಹೇಳಿದರು.
ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂಘ (ರಿ) ವತಿಯಿಂದ ನಡೆದ ಶ್ರೀ ಮಹಮ್ಮಾಯಿ ದೇವಿ ಅಮ್ಮನವರ ಸಾಮೂಹಿಕ ಗೋಂದೋಳು ಪೂಜೆ ಹಾಗೂ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಪೆರ್ನೆ ಮಾತನಾಡಿ, ನಾವು ಬದುಕಿ ಬಾಳುವ ಸಮಾಜದ ಸರ್ವರಿಗೂ ಗೌರವ ಕೊಟ್ಟು, ಮರಾಟಿ ಸಮಾಜದ ನಾವುಗಳು ಶಿಸ್ತು ,ಸಹಬಾಳ್ವೆ ,ಒಗ್ಗಟ್ಟು ಮತ್ತು ಆತ್ಮೀಯತೆಯಿಂದ ಬಾಳಬೇಕು .ನಮ್ಮ ಸಮಾಜದ ಯುವಕರು ಮತ್ತು ಯುವತಿಯರು ಸಮಾಜದ ಏಳಿಗೆಗೆ ಸದಾ ಕಟ್ಟಿಬದ್ಧರಾಗಿ ಶ್ರಮಿಸಬೇಕು .ಉತ್ತಮ ಸಮಾಜ ನಿರ್ಮಾಣದ ಕನಸು ನಮ್ಮದಾಗಬೇಕು ಎಂದರು.
ಕಾರ್ಪೊರೇಟ್ ಅಫೇರ್ಸ್ ಮಿನಿಸ್ಟ್ರಿಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಮಂಗಳೂರಿನ ಬಿ.ಎನ್. ಹರೀಶ್ ಮತ್ತು ದಕ್ಷಿಣ ರೈಲ್ವೆ ಲೋಕೊಪೈಲಟ್ ವನಿತಾ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಸಂಘದ ಖಜಾಂಚಿ ಉಮೇಶ್ ನಾಯ್ಕ್ ಬಿ ಆರ್ ನಗರ, ಸಂಘದ ಸಂಚಾಲಕರು, ಸಂಘದ ಪ್ರಧಾನ ಕಾರ್ಯದರ್ಶಿಗಳು, ಸಂಘದ ಗೌರವಾಧ್ಯಕ್ಷರು, ಮರಾಟಿ ಮಹಿಳಾ ವೇದಿಕೆ ಅಧ್ಯಕ್ಷರಾದ ಸೌಮ್ಯ ಎಸ್ ಮತ್ತು ಯುವ ವೇದಿಕೆ ಅಧ್ಯಕ್ಷರಾದ ಗುರುಪ್ರಸಾದ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 90 ಶೇ.ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಚರಣ್ ಎನ್ ಬರಿಮಾರು ,ಧನುಷ್ ಬಿಳಿಯೂರು ,ಮಾಸ್ಟರ್ ಕಾರ್ತಿಕ್ ಕಡೇ ಶಿವಾಲಯ, ಮೋಕ್ಷಿತ್ ನಾಯ್ಕ್ ಕೆದಿಲ ಮತ್ತು ಧನರಾಜ್ ನಾಯ್ಕ್ ನಗ್ರಿ ಹಾಗೂ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಾರಾಯಣ ನಾಯ್ಕ್ ನಡುಪಾಲು ಮತ್ತು ಭಾರತದ ಸೇನೆಗೆ ಆಯ್ಕೆಯಾದ ಜೀವನ್ ರಾಜ್ ಬೇಡಗುಡ್ಡೆ ಹಾಗೂ ದ ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಭಾರ ಮುಖ್ಯ ಶಿಕ್ಷಕರಾದ ತಿಮ್ಮಪ್ಪ ನಾಯ್ಕ್, ವೃತ್ತಿಯಿಂದ ನಿವೃತ್ತಿಯನ್ನು ಹೊಂದಿದ ನಿವೃತ್ತ ಮುಖ್ಯ ಶಿಕ್ಷಕ ಆನಂದ ನಾಯ್ಕ್ ಎನ್, ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್ ವಿಶ್ವನಾಥ ನಾಯ್ಕ್, ಕೋಮಾಲಿ ಮತ್ತು ನಿವೃತ್ತ ಸೀನಿಯರ್ ಆರೋಗ್ಯ ಸೂಪರ್ ವೈಸರ್ ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಪತ್ರವನ್ನು ಶಿವಪ್ಪ ನಾಯ್ಕ್ ಮಾಸ್ಟರ್, ಸುಮಾ ಉಮೇಶ್ ಬಿ ಆರ್ ನಗರ ,ವಿನುತ, ಸುನಂದ ಬಿ ಆರ್ ನಗರ , ಚಿತ್ರಾ ನೆಲ್ಲಿ, ಸುಜಾತ ಪುರಂದರ, ರೇಖಾ ವಿಠಲ್ ನಾಯ್ಕ್ ಮತ್ತು ಸುಂದರ್ ನಾಯ್ಕ್ ಕಲ್ಲಪಾಪು ವಾಚಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ವಿಠಲ್ ನಾಯ್ಕ್ ನೆಲ್ಲಿ ಸ್ವಾಗತಿಸಿದರು. ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಧನ್ಯವಾದಗೈದರು. ತಿಮ್ಮಪ್ಪ ನಾಯ್ಕ್ ಕುದ್ದುಪದವು ಮತ್ತು ಬಾಲಕೃಷ್ಣ ನಾಯ್ಕ ಕೆ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.