ಬಂಟ್ವಾಳ ತಾಲೂಕಿನ ಪುದು ಗ್ರಾಮದ ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಸುಜೀರು ಇದರ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಸಹಿತ ಶತ ರುದ್ರಯಾಗವು ಜ.12 ರಂದು ಭಾನುವಾರ ಸುಜೀರು ಶ್ರೀಅರಸು ವೈದ್ಯನಾಥ,ಧೂಮಾವತಿ ಬಂಟ ಪರಿವಾರ ದೈವಗಳ ಕ್ಷೇತ್ರದ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಅಮೃತಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಅವರು ತಿಳಿಸಿದ್ದಾರೆ.
ಬುಧವಾರ ಸಂಜೆ ಸುಜೀರು ಕೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಎಂಟು ವರ್ಷಗಳ ಹಿಂದೆ ಕ್ಷೇತ್ರದ ದೈವಗಳು ನೀಡಿರುವ ಅಭಯದಂತೆ ,ಇಲ್ಲಿಗೆ ಸಂಬಂಧಪಟ್ಟ ಸುತ್ತಮುತ್ತಲಿನ 6 ಗ್ರಾಮಗಳನ್ನು ಜೋಡಿಸಿಕೊಂಡು ಜನರ ಸಕಲ ಇಷ್ಟಾರ್ಥ ಸಿದ್ದಿಗಾಗಿ ಈ ಯಾಗವನ್ನು ನಡೆಸಲಾಗುತ್ತಿದೆ ಎಂದರು.
ಕ್ಷೇತ್ರದ ಪುರೋಹಿತರಾದ ಏರ್ಯ ರಘರಾಮ ಮಯ್ಯ ಅವರ ಪೌರೋಹಿತ್ಯದಲ್ಲಿ ಅವೆ ಮಣ್ಣಿನಲ್ಲೇ ಸಿದ್ದಪಡಿಸಲಾದ ಯಾಗಕುಂಡದಲ್ಲಿ ವೃಷಭಾಯ ಮಂಟಪದಲ್ಲಿ ಬೆಳಿಗ್ಗೆ 8.30 ಯಾಗ ಆರಂಭಗೊಳ್ಳಲಿದ್ದು ಸುಮಾರು ಎರಡೂವರೆ ತಾಸುಗಳ ಕಾಲ ಯಾಗ ನಡೆಯಲಿದೆ. ಮಧ್ಯಾಹ್ನ ಪೂರ್ಣಾಹುತಿಯಾಗಿ ಶ್ರೀರಾಮ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ,ಸಂಜೆ ಅಮೃತಮಹೋತ್ಸವದ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಸುಜೀರುಗುತ್ತು ಯಜಮಾನರಾದ ರಾಮಕೃಷ್ಣ ಚೌಟ ಅವರು ಸಭಾಧ್ಯಕ್ಷತೆ ವಹಿಸುವರು.ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಏಕಾಹ ಭಜನೆ
ಜ.13 ರಂದು ಬೆಳಿಗ್ಗೆ ಸೂರ್ಯೋದಯ 6.56 ಕ್ಕೆ 75 ನೇ ವರ್ಷದ ಏಕಾಹ ಭಜನೆಗೆ ಚಾಲನೆ ನೀಡಲಾಗುವುದು ಜ. 14 ರಂದು ಬೆಳಿಗ್ಗೆ 6.56 ಭಜನಾ ಮಂಗಳಾಚರಣೆ,ಪ್ರಸಾದ ವಿತರಣೆ
ನಡೆಯಲಿದೆ ಎಂದು ಅವರು ತಿಳೊಸಿದರು.
ಪುಣ್ಯ ಕ್ಷೇತ್ರ:
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರುವಿನಲ್ಲಿ ಶ್ರೀ ಅರಸು ವೈದ್ಯನಾಥ ಜುಮಾದಿ ಬಂಟ ಹಾಗೂ ಪರಿವಾರ ದೈವಗಳು ಅನಾದಿ ಕಾಲದಿಂದ ನೆಲೆಯಾದ ಪುಣ್ಯ ಸ್ಥಳವಾಗಿದೆ, ಈ ದೈವಸ್ಥಾನದ ಆಡಳಿತ ಸುಜೀರುಗುತ್ತು ಮನೆತನದವರಿಗೆ ಒಳಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ 8 ಸತ್ ಗುತ್ತುಗಳಿವೆ. ಎರಡು ದೈವಗಳ ಜಲಕದ ಕೆರೆ, 6 ಆಶ್ವಥದ ಕಟ್ಟೆ, ಒಂದು ದೈವದ ಪಾಪೆ ಬಂಡಿ ಇದೆ ಎಂದು ಸುದ್ದಿಗೋಷ್ಠಿಯಲ್ಲಿಹಾಜರಿದ್ದ ಭಜನಾ ಮಂದಿರ ಸಮಿತಿಯ ಗೌರವಾಧ್ಯಕ್ಷ” ಸಹಕಾರ ರತ್ನ” ಪುರಸ್ಕೃತ ರವೀಂದ್ರಕಂಬಳಿ ಸುಜೀರುಗುತ್ತು ತಿಳಿಸಿದರು.
ವೈದ್ಯನಾಥನ ಸೇವೆಯನ್ನು ದೇಯಿಬೈದೆದಿ ಕುಟುಂಬಸ್ಥರು ನಡೆಸುವುದು ಇಲ್ಲಿ ಸಂಪ್ರದಾಯವಾಗಿದ್ದು,ಮಾಚ್೯ ತಿಂಗಳಲ್ಲಿ 5 ದಿನಗಳ ಸುಜೀರಾಯನ ಜಾತ್ರೆ ನಡೆಯುತ್ತದೆ ಎಂದ ಅವರುಈ ದೈವಸ್ಥಾನದ ಭಂಡಾರದ ಮನೆಯಲ್ಲಿ 75 ವರ್ಷದ ಹಿಂದೆ ಹಿರಿಯರು ಸೇರಿಕೊಂಡು ದೇವರ ನಾಮಸ್ಮರಣೆ ಮಾಡುತ್ತಾ ದೈವದ ಸೇವೆಯನ್ನು ಮಾಡತೊಡಗಿದ್ದು,ಕಾಲಕ್ರಮೇಣ ಶ್ರೀ ರಾಮ ವೈದ್ಯನಾಥ ಭಜನಾ ಮಂದಿರವನ್ನು ನಿರ್ಮಿಸಿದರು. ನಂತರ ಹಳೆಯ ಭಜನಾ ಮಂದಿರವನ್ನು ಕೆಡವಿ ನೂತನ ಭವ್ಯವಾದ ಮಂದಿರವನ್ನು ನಿರ್ಮಿಸಲಾಯಿತು ಎಂದು ರವೀಂದ್ರ ಕಂಬಳಿ ವಿವರಿಸಿದರು.
ಈ ಭಜನಾ ಮಂದಿರದಲ್ಲಿ ಪ್ರತಿ ಶನಿವಾರದ ವಾರದ ಪೂಜೆ, ರಾಮನವಮಿಯ ಪ್ರಯುಕ್ತ ಸತ್ಯನಾರಾಯಣ ಪೂಜೆ ಹಾಗೂ ಭಜನೆ, ಅಷ್ಟಮಿಯ ಭಜನೆ, ನವರಾತ್ರಿಯ 9 ದಿವಸದ ಭಜನೆ, ದೀಪಾವಳಿಯ ಭಜನೆ, ನಗರ ಭಜನೆ ಹಾಗೂ ಸುಜೀರಾಯನದ ಸಂದರ್ಭದಲ್ಲಿ 5 ದಿವಸದ ಭಜನೆ, ದೈವದ ನೇಮದಲ್ಲಿ ನಿರಂತರ ಭಜನೆ ನಡೆದುಕೊಂಡು ಬರುತ್ತಿದೆ. ಧರ್ಮಮಾಸದ ಹುಣ್ಣಿಮೆಯ ಸೂರ್ಯೋದಯದಂದು ಏಕಹಾ ಭಜನೆ ಪ್ರಾರಂಭವಾಗಿ ಮರುದಿವಸ ಸೂರ್ಯೋದಯಕ್ಕೆ ಮಂಗಳ ಆಚರಣೆಯ ಮೂಲಕ ಏಕಾಹ ಭಜನೆಯು ಸಂಪನ್ನಗೊಳ್ಳುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಐತಪ್ಪ ಆಳ್ವ ಸುಜೀರುಗುತ್ತು,ಪ್ರಕಾಶ್ಚಂದ್ರ ರೈ ದೇವಸ್ಯ,ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು, ಚಂದ್ರಶೇಖರ ಗಾಂಭೀರ ಸುಜೀರುಗುತ್ತು,ಬಾಲಕೃಷ್ಣ ಗಾಂಭೀರ ಸುಜೀರುಗುತ್ತು,ಲತೇಶ್ ಸುಜೀರ್, ಮಹೇಶ್ ಕೊಡಂಗೆ,ಕಿಶೋರ್ ಮೊದಲಾದವರಿದ್ದರು