ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ, ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘ ವತಿಯಿಂದ ಸಾಹಿತ್ಯದಿಂದ ಸಾಮರಸ್ಯ ಎಂಬ ಆಶಯದೊಂದಿಗೆ ಆಯೋಜಿಸಲಾದ ಎರಡು ದಿನಗಳ ಬಂಟ್ವಾಳ ತಾಲೂಕು ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಚಿ ಕೊಳ್ನಾಡು ಹೈಸ್ಕೂಲ್ ನಲ್ಲಿ ಶನಿವಾರ ಚಾಲನೆ ದೊರಕಿತು ಈ ಸಂದರ್ಭ ಸರ್ವಾಧ್ಯಕ್ಷರ ನೆಲೆಯಲ್ಲಿ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಮಾತನಾಡಿದ ಅಕ್ಷರರೂಪವಿದು.
ಮುಳಿಯ ಶಂಕರ ಭಟ್ ಅವರ ಭಾಷಣ:
ಬಂಟ್ವಾಳ ತಾಲೂಕು ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಶುಭ ಸಂದರ್ಭದಲ್ಲಿ ಸಮಾಹಿತರಾದ ಎಲ್ಲಾ ಸೋದರ-ಸೋದರಿಯರಿಗೆ ಅಭಿವಾದನಗಳು. ಈ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ನನ್ನ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಸುವರ್ಣ ಅವಕಾಶವನ್ನು ಒದಗಿಸಿದ ಎಲ್ಲಾ ಕನ್ನಡ ಮನಸ್ಸುಗಳಿಗೆ ಋಣಭಾರ ಸಲ್ಲಿಸುತ್ತೇನೆ. ನನ್ನ ಇತಿಮಿತಿಯಲ್ಲಿ ಕನ್ನಡ ನುಡಿಗೆ-ಕನ್ನಡ ಗುಡಿಗೆ ನನ್ನಿಂದ ಸಂದ ಸಾಹಿತ್ಯಕ ಪರಿಚರ್‍ಯೆಯನ್ನು ಗುರುತಿಸಿ, ಅಭಿನಂದಿಸಿ ಈ ಸಮ್ಮೇಳನದ ಅಧ್ಯಕ್ಷತೆಯ ಗೌರವದ ಮಣೆ ನೀಡಿ ಪ್ರೀತಿ-ಅಭಿಮಾನ ತೋರಿದ್ದೀರಿ. ನಮ್ಮೆಲ್ಲರ ಸಾಹಿತ್ಯ ಪ್ರೇಮ-ಸಜ್ಜನಿಕೆ-ಹೃದಯ ವೈಶಾಲ್ಯದ ಕನ್ನಡ ಸಾಹಿತ್ಯ ಸಂಸ್ಕೃತಿಯ ಆರಾಧನೆಯಲ್ಲಿ ನನ್ನೀ ಆಶಯದ ನುಡಿಸುಮಗಳನ್ನು ಒಪ್ಪಿಸಿಕೊಳ್ಳಿ ಎಂದು ಪ್ರಾರ್ಥಿಸುತ್ತೇನೆ.
ನಮ್ಮ ದೇಶದಲ್ಲಿ ನಮ್ಮ ನಾಡಿಗೆ ವಿಶೇಷವಾದ ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸವಿದೆ. ಕನ್ನಡ ನುಡಿ-ಕನ್ನಡ ಸಂಸ್ಕೃತಿಗೆ ನೂರಾರು ವರ್ಷಗಳ ಪರಂಪರೆಯಿದೆ. ನಮ್ಮ ನಾಡನ್ನು ಆಳಿದ ಅರಸು ಮನೆತನಗಳು ನಮ್ಮ ನಾಡಿನ ಹಿರಿಮೆ ಗರಿಮೆಗೆ ಸಾಕ್ಷಿಯಾಗಿವೆ. ಅಭಿಮಾನ, ತನ್ನತನ ಹಾಗೂ ಆತ್ಮ ಪ್ರತ್ಯಯ ಹೆಚ್ಚಿಸಿಕೊಂಡ ನಮ್ಮ ಸಾಂಸ್ಕೃತಿಕ ಪರಂಪರೆ ಹೊಂದಾಣಿಕೆಯ ಗುಣಧರ್ಮವನ್ನು ಮೇಳವಿಸಿಕೊಂಡಿದೆ. ಅದರಿಂದಾಗಿ ’ಅನ್ಯರ ವಿಚಾರಗಳನ್ನು, ಅನ್ಯಧರ್ಮವನ್ನು ಸಹನೆಯಿಂದ ನೋಡುವುದೇ ನಮ್ಮ ನಿಜವಾದ ಸಂಪತ್ತು’ ಎಂಬ ಮಾತಿಗೆ ಪುಷ್ಠಿ ದೊರೆಯುತ್ತದೆ. ಸಹನೆಯೆಂಬುದು ದೌರ್ಬಲ್ಯ ಎಂದು ಭಾವಿಸಿದರೆ ಅದು ಅವಿವೇಕ ಹಾಗೂ ಪ್ರಮಾದ ಎನಿಸುತ್ತದೆ. ಕನ್ನಡಿಗರು ಚತುರರಷ್ಟೇ ಅಲ್ಲ – ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಎಂದು ಕವಿರಾಜ ಮಾರ್ಗಕಾರ ಉಲ್ಲೇಖಿಸಿದ್ದಾನೆ. ಕನ್ನಡದ ಆದಿಕವಿ ಪಂಪ ತನ್ನ ಹುಟ್ಟೂರು ಬನವಾಸಿಯ ಬಗ್ಗೆ ಪ್ರೀತಿ ತೋರಿದವನು. ತನ್ನ ಕೃತಿ ಪಂಪ ಭಾರತದಲ್ಲಿ ’ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್’ ಎಂದಷ್ಟೇ ಅಲ್ಲ ’ಆರಂಕುಶ ಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ತಾಯ್ನೆಲದ ಪ್ರೇಮವನ್ನು ಪ್ರಕಟಿಸಿದ್ದಾನೆ. ಅಚ್ಚಗನ್ನಡದ ಕವಿ ಆಂಡಯ್ಯನು ’ಕನ್ನಡಮೆನಿಪ್ಪಾ ನಾಡು ಚೆಲುವಾಯ್ತು’ ಎಂದು ತನ್ನ ನಾಡಿನ ಸೊಬಗನ್ನು ಚಿತ್ರಿಸಿದ್ದಾನೆ. ಕನ್ನಡದ ಆಧುನಿಕ ಕವಿಗಳೂ ಕನ್ನಡದ ಉನ್ನತಿಕೆಯನ್ನು ಹೃದಯ ತುಂಬಿಕೊಂಡಿದ್ದಾನೆ. ಶ್ರೇಷ್ಠ ಕವಿ ಬಿ. ಎಂ. ಶ್ರೀಕಂಠಯ್ಯನವರು ’ಕನ್ನಡ ಬಾವುಟ’ ಎನ್ನುವ ಕವಿತೆಯಲ್ಲಿ ’ಬಾಳ್ ಕನ್ನಡ ತಾಯ್, ಏಳ್ ಕನ್ನಡ ತಾಯ್, ಆಳ್ ಕನ್ನಡ ತಾಯ್, ಕನ್ನಡಿಗರೊಡತಿ, ಬಾ ರಾಜೇಶ್ವರಿ’ ಎಂದು ತುಂಬು ಅಭಿಮಾನದಿಂದ ನುಡಿದಿದ್ದಾರೆ. ಹುಯಿಲಗೋಳ ನಾರಾಯಣ ರಾಯರು ’ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಹಾಡಿದರು. ಕರ್ನಾಟಕ ರಾಜ್ಯ ಉದಯವಾಯಿತು. ಆದರೆ ನಮ್ಮ – ಕನ್ನಡಿಗರ ಅಭಿಮಾನದ ಅಸ್ತಿ.’ಸ್ವಾಗತ’ ಎನ್ನುವ ಕವಿತೆಯಲ್ಲಿ ತೀ.ನಂ. ಶ್ರೀ ಕಂಠಯ್ಯನವರು ಹೇಳಿದ ಮಾತನ್ನು ನಾವು ಗಮನಿಸಬಹುದು.
ನಾವೆಲ್ಲರೊಡಗೂಡಿ ಒಡನಾಡಿ ಕಲೆತು
ಕನ್ನಡದ ಸೇವೆಯಲಿ ನಮ್ಮ ಮೈಮರೆತು
ಕುಂದುಕೊರತೆಗಳೊಂದರೆಂಬಿಲ್ಲದಂತೆ
ನಮ್ಮ ಸಖ್ಯದ ಮೊಗ್ಗು ಬಿರಿದರಳುವಂತೆ
ದೇವಿ ಕರುಣಿಸಲಿ. ಕನ್ನಡದ
ದೇವಿ ಕೈಗೊಳಲಿ ಫಲವ.
’ಆನಂದ ಕಂದ’ ಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಬೆಟಗೇರಿ ಕೃಷ್ಣ ಶರ್ಮರು ’ಎನಿತು ಇನಿದು ಈ ಕನ್ನಡ ದನಿಯು, ಮನವನು ತಣಿಸುವ ಮೋಹನ ಸುಧೆಯು’ ಎಂದು ಕನ್ನಡದ ಮಾಧುರ್‍ಯವನ್ನು ನಮಗುಣಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ’ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ’ ಎನ್ನುತ್ತಾ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೃದಯಂಗಮವಾಗಿ ಹಾಡಿದರು. ಇಷ್ಟೇ ಅಲ್ಲ ಕನ್ನಡದ ಹಿರಿಮೆಯನ್ನು ವರ್ಣಿಸುತ್ತಾ ಬೆನಗಲ್ ರಾಮರಾಯರು ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ, ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ’ ಎಂದು ಮನದಾಳವನ್ನು ತೋಡಿಕೊಂಡಿದ್ದಾರೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ’ಕನ್ನಡಿಗ ತಾಯಿ’ ಎಂಬ ಕವನದಲ್ಲಿ ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ. ಕವಿ ಕಯ್ಯಾರರು ದೀರ್ಘಕಾಲ ಕಾಸರಗೋಡು ಕನ್ನಡವಾಗಬೇಕೆಂಬ ಹೋರಾಟ ಮಾಡುತ್ತಾ ನಾಡು-ನುಡಿಯ ಕೈಂಕರ್‍ಯಗೈದವರು. ಜನಪದ ಶೈಲಿಯ ಕವಿ ಜಿ.ಪಿ.ರಾಜರತ್ನಂ ’ಕನ್ನಡ ಪದಗೊಳು’ ಎಂಬ ಕವಿತೆಯಲ್ಲಿ ’ಯೆಂಡ ವೋಗ್ಲಿ, ಯೆಂಡ್ತಿ ವೋಗ್ಲಿ, ಎಲ್ಲಾ ಕೊಚ್ಕೊಂಡು ವೋಗ್ಲಿ, ಪರ್ಪಂಚ್ ಇರೋತನ್ಕ ಮುಂದೆ ಕನ್ನಡ ಪದಗೊಳ್ ನುಗ್ಲ’ ಎಂದು ಹೇಳುತ್ತಾ, ’ನರಕಕ್ಕೆ ಇಳಿಸಿ ನಾಲಗೆ ಸೀಳಿಸಿ ಬಾಯಿಗೆ ಹೊಲಿಗೆ ಹಾಕಿದರೂ ಮೂಗ್ನಲ್ ಕನ್ನಡ ಪದವಾಡ್ತೀನಿ, ನನ್ ಮನಸನ್ನ್ ನೀ ಕಾಣೆ’ ಎಂದಿರುವುದನ್ನು ಗಮನಿಸಿದರೆ ಅವರ ಅಪೂರ್ವ ಕನ್ನಡ ಪ್ರೀತಿ ಗೋಚರವಾಗುತ್ತದೆ. ಇಂದು ಆಂಗ್ಲ ಪದ ಸೇರಿಸದೆ ಕನ್ನಡ ಮಾತನಾಡಲಾಗದ ನಾವು ಕುಬ್ಜರಾಗುತ್ತೇವೆ.
ಹಾಗೆಯೇ ಕವಿ ಕಡೆಂಗೋಡ್ಲು ಶಂಕರ ಭಟ್ಟರು ತನ್ನ ’ಮಂಗಲಗೀತ’ದಲ್ಲಿ,
ತನುತುಂಬಿ, ಮನತುಂಬಿ, ಚಿತ್ತ ಚೇತನ ತುಂಬಿ
ಕನ್ನಡದ ಜೀವಕಳೆ ಹೊಮ್ಮುತಿದೆ ನೋಡು.
ಭಾವಕಳೆ ಪೌರುಷನ ತುಂಬು ಹೊಳೆ ಹರಿಯುತಿರೆ
ಭಿನ್ನತೆಯ ನೋವಕಳೆ ಮಂಗಲವ ಹಾಡು
ಅಳಿದ ಸಾಮ್ರಾಜ್ಯಗಳ ಬಾಳದಿಹ ವೈಭವದ
ಕತೆ ಹೇಳಿ ಕಣ್ಣೊರಸಿ ಸವೆದುದಾಯುಷ್ಯ
ದಾರಿ ಕಂಡುದು ಬುದ್ಧಿ, ಕೂಗಿ ಕರೆವುದು ಸಿದ್ಧಿ
ಬಿಸಗೆ ತೋರಣ ಕಟ್ಟಿ ತೆರೆದಿದೆ ಭವಿಷ್ಯ
ಎಂದು ಮುನ್ನಡೆಗೆ ದಾರಿ ತೋರಿದವರು.
ಹೀಗೆಯೇ ಬಹುಮಂದಿ ಕವಿವರರು, ಐತಿಹಾಸಿಕ ಕಾದಂಬರಿಕಾರರು ಕನ್ನಡಮ್ಮನ ಗುಣವಿಶೇಷಗಳನ್ನು, ಕನ್ನಡಿಗರ ಜೀವನವನ್ನು, ಕನ್ನಡಿಗರ ಸಾಧನೆಯನ್ನು ನಮ್ಮ ಮುಂದಿರಿಸಿದ ಸಾಕ್ಷಿಯಿದೆ. ಇಂತಹ ಸಾಹಿತ್ಯ ಸಮ್ಮೇಳನಗಳು ನಮ್ಮ ಹಿಂದಿನ ಬರಹಗಾರರು ಕಂಡ ಕನ್ನಡದ ಉಜ್ವಲ ಭವಿಷ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಪೂರಕ ಭೂಮಿಕೆಗಳಾಗುತ್ತಿವೆ. ಆದರೆ ಅದಕ್ಕಾಗಿ ನಾವು ಬಹಿರಂಗವಾಗಿ ಹೇಗೋ ಹಾಗೆಯೇ ಅಂತರಂಗದಲ್ಲೂ ನಮ್ಮ ಉಸಿರು ಕನ್ನಡವಾಗುವಂತೆ ಪಣತೊಡಬೇಕು. ಈ ಕಾರ್‍ಯಪ್ರವೃತ್ತಿ ಕನ್ನಡವೇ ನಮ್ಮ ಸರ್ವಸ್ವ ಎಂಬ ನಮ್ಮ ಮನೋನಿರ್ಧಾರಕ್ಕೆ ಪೂರಕವಾಗುತ್ತದೆ. ಹಾಗಾಗಲಿ ಎಂಬ ಆಶಯ.
ಸಾಹಿತ್ಯವು ಸಂಸ್ಕೃತಿಯ ಸಂಬಂಧಿ. ಸಾಹಿತ್ಯವು ಜನಜೀವನದ ಕೈಗನ್ನಡಿ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಸಾಹಿತ್ಯವು ಸಾಮಾಜಿಕ ಬದುಕನ್ನು ನೇರ್ಪುಗೊಳಿಸಬಲ್ಲ ಜನಜೀವನಕ್ಕೆ ಉತ್ತಮ ಪ್ರೇರಣೆ ಕೊಡುವ ಪ್ರಧಾನ ಸಲಕರಣೆ. ಸಮಗ್ರ ಸಾಮಾಜಿಕ ಹಿತದ ಕೃತಿಗಳೆಲ್ಲವೂ ಸಾಹಿತ್ಯವೇ. ಬರೆದ ಬರಹಗಳೆಲ್ಲವೂ ’ಸಾಹಿತ್ಯ’ ಎನಿಸಲಾರದು. ಸಾಮಾಜಿಕ-ಸಾಂಸ್ಕೃತಿಕ ಹಿತವನ್ನು ಸಾಧಿಸಬಹುದಾದ ಬರಹಗಳು ನಿರ್ವಿವಾದವಾಗಿ ಸಾಹಿತ್ಯವೇ. ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಕೃತಿಗಳಾಗಲೀ, ಕಲಾಪ್ರದರ್ಶನವಾಗಲೀ ಸಮಾಜದ ಸ್ವಾಸ್ಥ್ಯ ನಾಶಕ್ಕೆ ಹೇತುವಾಗುತ್ತವೆ. ಈ ಎಚ್ಚರವನ್ನು ಕಾಯ್ದುಕೊಳ್ಳುವುದು ಎಲ್ಲರ ಬಾಧ್ಯತೆ. ಆಡಳಿತ ವರ್ಗವೂ ಇದನ್ನು ಸಮರ್ಪಕವಾಗಿ ಬೆಂಬಲಿಸಬೇಕು. ಸ್ವಾತಂತ್ರ್ಯ ಸ್ವೇಚ್ಛಾಚಾರ ಎಂದು ವ್ಯಾಖ್ಯಾನಿಸಿ ಮನಬಂದಂತೆ ವರ್ತಿಸುವುದು ಅನರ್ಥಕಾರಿ. ಕಾವ್ಯ, ನಾಟಕ, ಕತೆ-ಕವಿತೆ, ನೀಳ್ಗತೆ-ಕಾದಂಬರಿಗಳು ಜನಪದದ ಜೊತೆ ಜೊತೆಗೆ ಚಿತ್ರ, ವ್ಯಂಗ್ಯಚಿತ್ರ, ಸಂಗೀತ, ಸುಗಮ ಸಂಗೀತ, ನೃತ್ಯ, ಹರಿಕೀರ್ತನೆ, ಗಮಕ ವಾಚನ, ಶಿಲ್ಪಕಲೆ, ವರ್ಣಚಿತ್ರಗಳಂತಹ ಬಹುತೇಕ ಪ್ರಕಾರಗಳು ಸಂಸ್ಕೃತಿಯ ವೈಭವವನ್ನು ಪ್ರತಿಫಲಿಸುತ್ತದೆ. ಪತ್ರಿಕಾ ಮಾಧ್ಯಮವೂ ಸಾಹಿತ್ಯ ಸಂಸ್ಕೃತಿಯ ಉಜ್ಜೀವನಕ್ಕೆ ಚೇತೋಹಾರಿಯಾಗಿ ಕೊಡುಗೆ ನೀಡಿರುವುದು ವಸ್ತುಸ್ಥಿತಿಯೂ ಹೌದು.
ನಿರಂತರ ಅಧ್ಯಯನ ಬೇಕು:
ಸಾಹಿತ್ಯ ರಚನೆಗೆ ನಿರಂತರ ಓದು, ಅಧ್ಯಯನ ಬೇಕು. ಅಭ್ಯಾಸಕ್ಕನುಗುಣವಾಗಿ ವಿದ್ಯೆಯಷ್ಟೇ! ’ಓದು ತಿಳಿವಿಗಾಗಿ, ಓದು ಜ್ಞಾನಕ್ಕಾಗಿ, ಓದು ನಿನ್ನನು ನೀನು ತಿಳಿದುಕೊಂಬುದಕಾಗಿ’ ಎಂಬ ಶ್ರೀ ಕೆ. ಕಾಂತ ರೈಗಳ ಮಾತು ಎಲ್ಲರಿಗೂ ನಿತ್ಯ ಬೋಧೆ ಪದಗಳ ಕಸರತ್ತಷ್ಟೇ, ಕವಿತೆಯಾಗಲು ಸಾಧ್ಯವೇ? ಸುಧಾರಣೆ, ಪರಿಷ್ಕಾರ ಎಲ್ಲಿ ಮೂಲೆ ಸೇರಿ ’ಪರಿವರ್ತನೆ’ಯೇ ಪ್ರತ್ಯಕ್ಷವಾಗಿ ಬಿಡುತ್ತದೋ ಎಂಬ ಭಯ ಕಾಡುತ್ತಿದೆ. ಶಿಶು ಸಾಹಿತ್ಯದ ಯಾವುದೇ ವಿಭಾಗಗಳಿರಲಿ ಶಿಶು ಕವಿಗಳಂತೂ ಎಳೆಯರ ಮನಸ್ಸು-ವಯಸ್ಸು, ಮನೋಧರ್ಮ, ಸರಳ ಪದಗಳು, ತಿಳಿಹಾಸ್ಯ, ಗೇಯತೆ, ಛಂದ ನೀತಿ, ಪರಿಸರ, ಮಾನವೀಯತೆ, ಪ್ರಾಣಿದಯೆ, ಪರಿಚಿತ ವಸ್ತು ವಿಚಾರ, ಮನೋರಂಜನೆ, ಕೌತುಕ, ರೋಚಕತೆಗಳನ್ನು ಒಳಗೊಂಡಿದ್ದರೆ ಎಲ್ಲರ ಮನಮುಟ್ಟಬಲ್ಲವು ಎನ್ನುವುದು ನನ್ನ ಅಭಿಮತ. ಹಾಗೆಂದು ಇವುಗಳನ್ನು ಬಲವಂತವಾಗಿ ತುರುಕುವುದರಿಂದ ಲಾಭವಿಲ್ಲ. ಶಿಶು ಸಾಹಿತ್ಯದಲ್ಲಿ ಕೈಯಾಡಿಸುವವರು ಮಕ್ಕಳ ಮನೋಧರ್ಮ, ವಯೋಧರ್ಮ, ಪರಿಸರದ ಸಾಮಿಪ್ಯವನ್ನು ತಮ್ಮದಾಗಿಸಿಕೊಂಡು ಕೃತಿ ರಚಿಸಿದಾಗ ಯಶಸ್ಸು ಕಷ್ಟವಲ್ಲ. ಆದರೆ ಅದಕ್ಕೆ ಪೋಷಕರ, ಮಕ್ಕಳ, ಶಿಕ್ಷಕರ ಮನಸ್ಸು ತೆರೆದಿರಬೇಕು ಅಷ್ಟೇ. ಪ್ರಸಿದ್ಧ ಕವಿಗಳು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಧಾರಾಳ ಕಾಣಿಕೆ ನೀಡಿದ್ದಾರೆ. ಹಲವರಿಗೆ ಪ್ರೇರಣೆಯೊದಗಿಸಿದ್ದಾರೆ. ಅಡ್ಯನಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ದಿ. ವಿ.ಮ.ಭಟ್ಟರು ಶಿಶು ಸಾಹಿತ್ಯ ಕೃತಿಗಳನ್ನು ರಚಿಸಿ ಓದುಗರ ಮನಗೆದ್ದ ಜನಮೆಚ್ಚಿದ ಕವಿ. ಹಾಗೆಯೇ ಈ ದಿನಗಳಲ್ಲಿ ಬಂಟ್ವಾಳ ತಾಲೂಕು ಮತ್ತು ಅಕ್ಕಪಕ್ಕದ ಎಲ್ಲಾ ತಾಲೂಕುಗಳಲ್ಲಿ ಶಿಶು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಕೆಲಸ ಮಾಡುತ್ತಿರುವವರು ಬಹುಮಂದಿ ಇದ್ದಾರೆ. ದ.ಕ. ಜಿಲ್ಲೆಯಲ್ಲಿ ಉದಯವಾದ ’ಮಕ್ಕಳ ಸಾಹಿತ್ಯ ಸಂಗಮ’ ಈ ದಾರಿಯಲ್ಲಿ ಪರಿಣಾಮಕಾರಿ ಪ್ರಯತ್ನ ನಡೆಸುತ್ತಾ ಯಶಸ್ಸು ಗಳಿಸುತ್ತಿದೆ. ಆದರೆ ಎಳೆಯ ಪೀಳಿಗೆ ಬೆಳೆದಂತೆ ಉತ್ಸಾಹ, ಕ್ರಿಯಾಶೀಲತೆ, ಓದು, ಪರಿಶ್ರಮ ಬೇರೆಡೆಗೆ ಸಾಗುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳೂ ಇವೆ. ಕನ್ನಡ ಭಾಷೆ-ಕನ್ನಡ ಸಾಹಿತ್ಯದ ಅಭಿವೃದ್ಧಿ ಪಡಿಸುವ ಮಹತ್ತರ ಆಸೆ ಎಲ್ಲರಲ್ಲೂ ಬೇಕು. ಇನ್ನು ಕಾವ್ಯ-ಕೃತಿ ಛಂದೋಬದ್ಧವಾಗಿದ್ದರೆ ಅದನ್ನು ಮಹಾಪರಾಧ ಎಂದೇ ಪರಿಗಣಿಸುವ ಮಂದಿ ಕೆಲವರಿದ್ದಾರೆ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ನವ್ಯ, ನವ್ಯಾತಿನವ್ಯ ಎಂಬೀ ವರ್ಗೀಕರಣದ ಗೊಂದಲ ಮಾಡಿಕೊಳ್ಳುವುದನ್ನು ಬಿಟ್ಟು ನಮಗೆ ಪ್ರಿಯವಾದ ದಾರಿಯಲ್ಲಿ ಸಾಹಿತ್ಯ ಪರಿಚಾರಕನ ಕೆಲಸ ಮಾಡುವುದು ವಿಹಿತ. ನಾಟಕ-ರಂಗನಿರ್ಮಾಣದ ಕ್ಷೇತ್ರದಲ್ಲಿ ಬಂಟ್ವಾಳ ತಾಲೂಕಿನ ಅನೇಕ ಪ್ರತಿಭಾವಂತ ತಜ್ಞ ಸಾಧಕರ ಶ್ರಮವಿದೆ. ರಂಗದಿಗ್ಗಜ ಬಿ.ವಿ. ಕಾರಂತರ ಪ್ರತ್ಯಕ್ಷ-ಪರೋಕ್ಷ ಪ್ರೇರಣೆಯಿಂದ ಶಿಬಿರಗಳು, ನಾಟಕ ರಚನೆ, ರಂಗ ತಾಲೀಮು ಪ್ರದರ್ಶನ ನಡೆದುದನ್ನು ನಾವು ನೆನಪಿಸಿಕೊಳ್ಳುತ್ತೇವೆ. ನಾಟಕಗಳಲ್ಲಿ (ರಂಗತಂತ್ರ) ಸಂಗೀತ, ದೃಶ್ಯ ಸಂಯೋಜನೆ, ಬೆಳಕು ಹೀಗೆ ವಿವಿಧ ಆಯಾಮಗಳಲ್ಲಿ ಜನಮನಗೆದ್ದ ಮೂರ್ತಿ, ದೇರಾಜೆ ಮತ್ತು ಸಶಕ್ತ ತಂಡ ಇತಿಹಾಸ ಸೃಷ್ಟಿಸಿದೆ. ಒಂದು ಕಾಲದಲ್ಲಿ ಮನೆಮಾತಾಗಿದ್ದ ವಿಟ್ಲ ಬಾಬು ಮಾಸ್ತರರ ದೃಶ್ಯ-ದೃಶ್ಯಾವಳಿಗಳು ಮಂಗಳೂರಲ್ಲಿ ಜಯಭೇರಿ ಬಾರಿಸಿದ ನೆನಪು ಹಸಿರಾಗಿದೆ. ಸಣ್ಣಕತೆಗಳ ಬರಹಗಾರರು-ಬರಹಗಾರ್ತಿಯರು ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಬೀರುತ್ತಿದ್ದಾರೆ. ಆದರೆ ಆಧುನಿಕತೆಯ ಗಾಳಿ, ನಾಗರಿಕತೆಯ ಅತಿಯಾದ ವ್ಯಾಮೋಹ, ಕ್ಷಿಪ್ರ ಯಶಪ್ರಾಪ್ತಿಯ ಉತ್ಕಟ ಆಸೆ, ಅಭ್ಯಾಸದ ಕೊರತೆ ಇವೆಲ್ಲವುಗಳ ಕಾರಣದಿಂದ ನಿರೀಕ್ಷಿತ ಫಲ ನೀಡಿದೆ ಎನ್ನುವ ಧ್ಯೆರ್‍ಯವಿಲ್ಲ. ಮೊದಲಿದ್ದಂತಹ ಪತ್ರಿಕಾರಂಗದ ಪ್ರೋತ್ಸಾಹವು ಕುಂಠಿತಗೊಂಡಿರುವುದು ಆಂಶಿಕ ಕಾರಣವಾಗಿರಬಹುದು. ಕಾವ್ಯ-ನಾಟಕಗಳ ರಚನೆ-ಪ್ರಕಟಣೆ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ ಎಂದೇ ಹೇಳಬೇಕು. ಆದರೂ ಪ್ರಯತ್ನ ನಡೆಯುತ್ತಿದೆ ಎನ್ನುವುದು ಸಮಾಧಾನದ ಅಂಶ. ಸಣ್ಣ ಕಾದಂಬರಿ, ನೀಳ್ಗತೆಗಳನ್ನು ರಚಿಸುತ್ತಿರುವ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಉತ್ತೇಜನ ದೊರೆತರೆ ಅವರಿಂದ ಮತ್ತಷ್ಟು ಸಾಧನೆಯನ್ನು ನಾವು ನಿರೀಕ್ಷಿಸಬಹುದು. ಗೀತಾ ನಾಟಕ, ನೃತ್ಯರೂಪಕ ರಚನೆ ಬರಿಯ ರಂಗಪ್ರಯೋಗಕ್ಕಾಗಿ ಹೊರತು ಪ್ರಕಟಿಸುವ ಸರಕು ಎಂದು ಹೇಳುವುದಕ್ಕಾಗದು. ಕಾದಂಬರಿ ಬರೆಯುವವರು ನಮ್ಮ ತಾಲೂಕಿನಲ್ಲಿ ವಿರಳ ಎಂದುಕೊಳ್ಳುತ್ತೇನೆ. ಇದ್ದರೆ ಪ್ರಕಟಿಸಿ ಕೈಸುಟ್ಟು ಕೊಳ್ಳುವ ಮನಸ್ಥಿತಿಯಲ್ಲಿ ಯಾರೂ ಇರಲಾರರು. ಇನ್ನು ಸಂಶೋಧನೆಯ ವಲಯವನ್ನು ನೋಡಿದರೆ ಹಿರಿಯ ವಿದ್ವಜ್ಜನಾದ ಕುಕ್ಕಿಲ ಕೃಷ್ಣ ಭಟ್, ಮುಳಿಯ ತಿಮ್ಮಪ್ಪಯ್ಯ, ಪಾದೆಕಲ್ಲು ನರಸಿಂಹ ಭಟ್ಟರಂತಹ ಬಹುಮುಖ ಪ್ರತಿಭಾ ಸಂಪನ್ನರ ಅಧ್ಯಯನ, ಶೋಧ ಬುದ್ಧಿ ನಮಗೆ ದಾರಿ ದೀವಿಗೆಯಾಗಿದೆ. ಸಂಶೋಧನೆ, ಭಾಷಾ ಶಾಸ್ತ್ರಭ್ಯಾಸ, ತುಲನಾತ್ಮಕ ಅಧ್ಯಯನ, ನಿಘಂಟುಗಳ ರಚನೆಯ ಕೆಲಸ ಉದ್ಯೋಗ-ಪದೋನ್ನತಿ-ಅರ್ಥ ಸಂಗ್ರಹಕ್ಕಷ್ಟೇ ಸೀಮಿತವಾಗಬಾರದು. ಮುಂದಿನ ಪೀಳಿಗೆಯ ಜ್ಞಾನ ಸಂಗ್ರಹಕ್ಕೆ ಆಕರವಾಗಲಿ ಎಂಬ ಹಿರಿದಾಸೆ ಇರಬೇಕು. ಡಾ. ಪಾದೆಕಲ್ಲು ವಿಷ್ಣು ಭಟ್ಟರಂತಹ ಪಂಡಿತ ಪರಂಪರೆಯ ವಿದ್ವಾಂಸರಿಂದ ಗ್ರಂಥ ಸಂಪಾದನೆ, ಜ್ಞಾನಯಜ್ಞ, ಸಂಶೋಧನೆಯ ಕಾರ್ಯ ವಿಸ್ತ್ರತವಾಗಿ ನಡೆದಿದೆ-ನಡೆಯುತ್ತಿದೆ ಎಂಬುದು ಎಲ್ಲರೂ ಅಭಿಮಾನ ಪಡುವ ವಿಚಾರ. ಇನ್ನು ಅನುವಾದ ಕ್ಷೇತ್ರದ ಬಗ್ಗೆ ಹೇಳುವುದಾದರೆ ಬರಬೇಕಾದಷ್ಟು ಕೃತಿಗಳು ಬಂದಿಲ್ಲವೆಂದೇ ನನ್ನ ಎಣಿಕೆ. ಅನುವಾದ ಕಾರ್ಯ ಆಳವಾದ ಅಧ್ಯಯನ, ಶ್ರಮ, ಮೂಲ-ಅನುವಾದ ಭಾಷೆಯ ಪ್ರಭುತ್ವವನ್ನು ಬಯಸುತ್ತದೆ. ಅಷ್ಟು ಪ್ರಯತ್ನ ಪಡುವ ಛಲ ನಮ್ಮಲ್ಲಿ ಇಲ್ಲವೇನೋ ಎಂಬ ಅಳುಕು ನನಗೆ. ಪೆರುವಾಯಿಯಲ್ಲಿ ವೈದ್ಯ ವೃತ್ತಿಯಲ್ಲಿರುವ ಡಾ. ಡಿ. ಕೃಷ್ಣಮೂರ್ತಿಯವರ ವಾಜ್ಮಯ ಸೇವೆ ಬೆರಗುಗೊಳಿಸುವಂತಹುದು.
ಯಕ್ಷಗಾನ ಪ್ರಸಂಗ ರಚನೆಯ ಕುರಿತು ಹೇಳುವುದಾದರೆ ಬಲಿಪದ್ವಯರಿಂದ ತೊಡಗಿ ಅನೇಕ ಪ್ರಸಂಗ ಕರ್ತೃಗಳು ಯಕ್ಷಗಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅಳಿಕೆ ಖ್ಯಾತ ಕಲಾವಿದರಾದ ರಾಮಯ್ಯ ರೈ, ವಿಟ್ಲ ರಾಮಯ್ಯ ಶೆಟ್ಟಿ, ಮುಳಿಯಾಲ ಕೇಶವ ಭಟ್, ಅಳಿಕೆ ಲಕ್ಷ್ಮಣ ಶೆಟ್ಟಿ, ಮುಳಿಯಾಲ ಭೀಮ ಭಟ್, ಕರ್ಗಲ್ಲು ಸುಬ್ಬಣ್ಣ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್, ವಿಟ್ಲ ಗೋಪಾಲಕೃಷ್ಣ ಜೋಶಿ, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್‌ರಂತಹ ಖ್ಯಾತನಾಮರು ಕಲಾಸರಸ್ವತಿಯ ಆರಾಧನೆಯಿಂದ ಯಕ್ಷಗಾನದ ಕೀರ್ತಿ ಬೆಳಗಿದವರು. ಯಕ್ಷಗಾನ-ತಾಳಮದ್ದಳೆಯ ಬಹುಮಂದಿ ಕಲಾವಿದರು ಸಾಹಿತ್ಯ-ಸಂಸ್ಕೃತಿಯ ಮೆರುಗಿಗೆ ಕಾರಣರಾದವರು. ಅವರಿವರೆನ್ನದೆ ಎಲ್ಲ ಕಲೋಪಾಸಕರನ್ನು ಗೌರವಿಸುತ್ತೇನೆ. ಕಲ್ಲಾಡಿ ವಿಠಲ ಶೆಟ್ಟರು ಮೇಳವನ್ನು ಸಂಘಟಿಸಿ ನಿಜಾರ್ಥದ ಯಜಮಾನರೆನ್ನಿಸಿ ಕಲಾಸೇವೆ ಮಾಡಿದವರು. ಅವರ ಚಿರಂಜೀವಿಗಳಿಂದ ಅದೇ ಸಾಧನೆಯನ್ನು ಕಾಣುತ್ತಿದ್ದೇವೆ. ಇದು ನಮ್ಮ ತಾಲೂಕಿನ ಹೆಮ್ಮೆ. ಮಾಂಬಾಡಿ-ಪದ್ಯಾಣ ಮನೆತನವೂ ಕಲಾರಂಗಕ್ಕೆ ಬಹಳಷ್ಟು ಕಾಣಿಕೆ ನೀಡಿದೆ. ಹಾಗೆಯೇ ಹಿರಿಯ ಸಂಗೀತ ವಿದ್ವಾಂಸರಾದ ಶ್ರೀ ಚಕ್ರಕೋಡಿ ನಾರಾಯಣ ಶಾಸ್ತ್ರಿ, ಜಿ. ಶಾಮಸುಂದರಿ ಭಟ್ ಸಂಗೀತದ ಪ್ರಸಾರವಾಗಿದ್ದು, ಇನ್ನೂ ಬಹುಮಂದಿ ಆ ರಂಗದಲ್ಲಿ ಸಕ್ರಿಯರಾಗಿರುವುದು ತಾಲೂಕಿನ ಗೌರವಕ್ಕೆ ಗರಿ ಮೂಡಿಸಿದೆ. ಹಾಗೆಯೇ ಪ್ರವೃತ್ತಿಯಲ್ಲಿ ಕಲಾಸೇವೆಯನ್ನು ನಡೆಸುತ್ತಿರುವವರು ಬಹುಮಂದಿ ಇದ್ದಾರೆ. ಅಧ್ಯಾಪಕರಾಗಿದ್ದು ಯಕ್ಷಗಾನ, ತಾಳಮದ್ದಳೆ, ಗಮಕ ವಾಚನ-ವ್ಯಾಖ್ಯಾನ, ಹರಿಕೀರ್ತನೆ(ಅಳಿಕೆ ಸಂಜೀವ ಶೆಟ್ಟಿ)ಯನ್ನು ಹವ್ಯಾಸವಾಗಿಟ್ಟುಕೊಂಡು ನಾಡಿನ ಸಂಸ್ಕೃತಿಯನ್ನು ಪೋಷಿಸುವ-ಪೂಜಿಸುವ ಎಲ್ಲ ಬಂಧು-ಭಗಿನಿಯರು ನಾಡು-ನುಡಿಯ ಸೇವೆಯಲ್ಲಿ ಭಾಗಿಗಳಾಗುತ್ತಿರುವುದು ಜನಮನಕ್ಕೆ ಖುಷಿಯ ಸಂಗತಿ. ಹಿರಿಯ ಗಮಕಿಗಳಾದ ಬಿ. ಚಂದ್ರಯ್ಯ, ಗಣಪತಿ ಪದ್ಯಾಣರವರು ತಮ್ಮ ಕಂಠಶ್ರೀಯಿಂದ ಕನ್ನಡದ ಕಾವ್ಯಗಳನ್ನು ಜನಮನಕ್ಕೆ ಹತ್ತಿರವಾಗಿಸಿದವರು. ಬೆಂಡೆರವಾಡಿ ಸುಬ್ರಹ್ಮಣ್ಯ ಶರ್ಮರ ಗೀತಾಗಾಯನ ಸದಾ ನೆನಪಿಸುವ ಸಂಗತಿ.
ನಮ್ಮ ತಾಲೂಕಿನಲ್ಲಿ ಸಂಸ್ಕೃತಿ, ಸಾಹಿತ್ಯ, ರಾಜಕಾರಣ, ಧಾರ್ಮಿಕ ಚಟುವಟಿಕೆ, ಸಹಕಾರ, ನ್ಯಾಯಾಂಗ – ಹೀಗೆ ಹಲವು ಬಗೆಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಂಡ ಪ್ರಭಾವಿ ವ್ಯಕ್ತಿಗಳಾದ ರಾವ್ ಬಹದ್ದೂರು, ಸೀತಾರಾಮ ರಾವ್, ಮಂಜೇಶ್ವರ ಗಣಪತಿ ರಾವ್ ಐಗಳು, ಪಂಜೆ ಮಂಗೇಶ ರಾವ್, ದಾಮೋದರ ಬಾಳಿಗಾ, ಬಿ. ವೈಕುಂಠ ಬಾಳಿಗಾ, ಬಾಬಾ ಕಾಮತ್, ದಾಮೋದರ ಜನಾರ್ಧನ ಬಾಳಿಗಾ, ಬಸ್ತಿ ವಾಮನ ಶೆಣೈ, ಬಿ. ಜನಾರ್ಧನ ಪೂಜಾರಿ, ಅಮ್ಮೆಂಬಳ ಬಾಳಪ್ಪ, ಮಡಿಯಾಲ ನಾರಾಯಣ ಭಟ್, ಪೆರಾಜೆ ಶ್ರೀನಿವಾಸ ರಾವ್, ಮಂಚಿ ಶ್ರೀನಿವಾಸ ಆಚಾರ್, ಎ.ಸಿ. ಭಂಡಾರಿ, ಸಾಹಿತಿ ಶ್ರೀ ನೀರ್ಪಾಜೆ ಭಟ್ಟ ಇವರೆಲ್ಲರ ಹೆಸರು ನಮಗೆ ಪರಿಚಿತ. ಹಾಗೆಯೇ ಕರ್ನಾಟಕ ಲೋಕಸೇವಾ ಆಯೋಗ, ಕೇಂದ್ರ ಸರ್ಕಾರದ ಆಡಳಿತ ನಿರ್ವಹಣೆಯ ವಿಭಾಗದಲ್ಲಿ ಕಾರ್ಯನಿರ್ವಹಿಸದವರಲ್ಲೂ ನಮ್ಮ ತಾಲೂಕಿನವರಿದ್ದಾರೆ ಎಂಬುದು ಗಮನಾರ್ಹ. ನಾಡು-ನುಡಿ-ಸಾಹಿತ್ಯ-ಸಂಸ್ಕೃತಿಯ ನಿಟ್ಟಿನಲ್ಲಿ ಇವರೆಲ್ಲರೂ ಸದಾ ಸನ್ಮಾನ್ಯರೇ. ನನ್ನ ಅಲ್ಪ ತಿಳಿವಿನಲ್ಲಿ ನಾನು ಕಂಡುಕೊಳ್ಳಲಾಗದ ಮಹನೀಯರು ಇನ್ನೂ ಬಹಳಷ್ಟು ಮಂದಿ ಇರಬಹುದೆನ್ನುವ ಸತ್ಯವನ್ನು ಪ್ರಾಂಜಲ ಮನದಿಂದ ಒಪ್ಪಿಕೊಳ್ಳುತ್ತಾ ಸಾಹಿತ್ಯದ ಕುರಿತಾದ ಮನದಿಂಗಿತವನ್ನು ನಿಮ್ಮ ಮುಂದೆ ತೋಡಿಕೊಳ್ಳಬಯಸುತ್ತೇನೆ. ಆಡು ಭಾಷೆ-ಸಾಹಿತ್ಯ ಭಾಷೆಯೊಳಗಣ ಸೂಕ್ಷ್ಮತೆಯನ್ನು ಗಮನಿಸಿ ಮುಂದಡಿಯಿಡುವುದು ಅತ್ಯಗತ್ಯ. ಸಾಹಿತ್ಯ ರಚನೆಯೆಂದರೆ ವ್ಯಾವಹಾರಿಕ ಭಾಷೆಯ ಪ್ರಸ್ತುತಿ ಎಂದಷ್ಟೇ ಅರ್ಥವಲ್ಲ. ಭಾಷಾಶುದ್ಧಿಯ ಅಪೇಕ್ಷೆ ಎಂದರೆ ಮಡಿವಂತಿಕೆಯಲ್ಲ. ಅದು ಭಾಷಾಶುದ್ಧಿಯ ಸೌಂದರ್ಯವನ್ನು ಕಾಯ್ದುಕೊಳ್ಳುವ ತುಡಿತ ಎಂದು ಭಾವಿಸಿದರೆ ಸರಿಯಾದೀತು. ವಿಜ್ಞಾನ-ಸಮಾಜ-ಗಣಿತ ಮುಂತಾದ ವಿಚಾರವನ್ನು ಹಂಚಿಕೊಳ್ಳುವಲ್ಲಿ ’ಭಾಷಾಶುದ್ಧಿ’ ಗೌಣ ಎನ್ನುವವರೂ ಇರಬಹುದು. ಈಗ ನಮ್ಮ ತಾಲೂಕಿನ ಸಾಹಿತ್ಯ-ಕಲೆ-ಸಂಸ್ಕೃತಿ ಸಂಬಂಧಿ ವಿಚಾರಗಳನ್ನು ಅವಲೋಕಿಸೋಣ. ಬಂಟ್ವಾಳ ತಾಲೂಕು ಪಾಕಶಾಸ್ತ್ರದ ಕುರಿತಾದ ಕೃತಿಗಳ ಪ್ರಕಾಶನಗಳನ್ನು ಕಂಡಿದೆ. ಈ ವಿಭಾಗದಲ್ಲಿ ಕಡಂಬಿಲ ಸರಸ್ವತಿ ಅಮ್ಮ-ಸವಿತಾ ಎಸ್. ಭಟ್‌ರವರ ಕೊಡುಗೆಯಿದೆ. ವಿ. ಮನೋಹರ್ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶಕರಾಗಿ ತಾಲೂಕಿಗಷ್ಟೇ ಅಲ್ಲ ಕನ್ನಡ ನಾಡಿಗೆ ಗೌರವ ತಂದು ಕೊಟ್ಟವರು. ’ಚೋಮನ ದುಡಿ’ ಖ್ಯಾತಿಯ ಸಾಹುಕಾರ ಸಂಕಪ್ಪಯ್ಯನ ಪಾತ್ರ ನಿರ್ವಹಿಸಿದ ಶ್ರೀ ಎಸ್. ಶಂಕರ ಭಟ್ಟರು ಬಂಟ್ವಾಳ ತಾಲೂಕಿನವರು ಎಂಬುದು ನಮಗೆ ಹೆಮ್ಮೆ, ಹಾಗೆಯೇ ನಿರ್ದೇಶಕರೂ ಕೂಡಾ. ಇತ್ತೀಚೆಗೆ ಸಾಕಷ್ಟು ಬಾಲ ಪ್ರತಿಭೆಗಳು ಅಭಿನಯ ರಂಗದಲ್ಲಿ ಸ್ಥಾನ ಪಡೆದು ಬೆಳೆಯುತ್ತಿರುವುದು ಆಶಾದಾಯಕ. ಇವರಿಗೆಲ್ಲ ತಕ್ಕ ಪ್ರೋತ್ಸಾಹ ದೊರಕಬೇಕು. ನೃತ್ಯ, ಸಂಗೀತ, ಪಕ್ಕವಾದ್ಯ, ಯಕ್ಷಗಾನದ ಹಿಮ್ಮೇಳ-ಮುಮ್ಮೇಳ, ನಟನೆಯ ರಂಗದಲ್ಲಿ ಬಂಟ್ವಾಳ ತಾಲೂಕನ್ನು ಪ್ರತಿನಿಧಿಸುವ ಎಲ್ಲ ಮಹನೀಯರ ಶ್ರಮದಿಂದ ಸಾಹಿತ್ಯ ಸರಸ್ವತಿಯ ಕಲಾದೇವಿಯ ಉಪಾಸನೆ ಸದಾ ಕಳೆಗಟ್ಟುತ್ತಿರಲಿ ಎಂಬುದು ಅಂತರಾಳದ ಹರಕೆ. ನಮ್ಮ ತಾಲೂಕಿನಲ್ಲಿ ನ್ಯಾಯವಾದಿ ಕಲಾವಿದರಿದ್ದಾರೆ, ವೈದ್ಯ ಸಾಹಿತಿಗಳಿದ್ದಾರೆ. ಕಲಾವಿದರು ನ್ಯಾಯವಾದಿಗಳಾದಾಗ, ಸಾಹಿತಿಗಳು ಜನಕ್ಷೇಮದ ವ್ಯೆದ್ಯರಾದಾಗ ಸಮಾಜಕ್ಕೆ ಸೌಖ್ಯ ದೊರಕೀತು. ಬಂಟ್ವಾಳ ತಾಲೂಕಿನಲ್ಲಿ ಪ್ರಕಾಶನ ಸಂಸ್ಥೆಗಳು ಸದ್ದಿಲ್ಲದೆ ಕಾರ್ಯವೆಸಗುತ್ತಿವೆ. ಸನಾತನ ಸಾರಥಿ, ದತ್ತ ಪ್ರಕಾಶ ಬಂಟ್ವಾಳ ತಾಲೂಕಿನವೇ. ಹಾಗೆಯೇ ದೈನಂದಿನ ಸುದ್ದಿವಾಹಿನಿಗಳೂ ಇವೆ. ಪ್ರಸ್ತುತ ಯರ್ಮುಂಜ ಭೀಮ ಜೋಯಿಸರ ಮಗ ಶಂಕರ ಜೋಯಿಸರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ವೈಜಯಂತಿ ಪಂಚಾಂಗವು ನೂರ ಎಂಟನೇ ವರ್ಷವನ್ನು ಪೂರೈಸುತ್ತಿದೆ. ದೃಕ್ಷಿಂದಾತದ ಆದ್ಯ ಪ್ರವರ್ತಕರಾದ ಯರ್ಮುಂಜ ಶಂಕರ ಜೋಯಿಸರು ವೈಜಯಂತಿ ಪಂಚಾಂಗದ ಸ್ಥಾಪಕರು. ಹಿರಿಯ ತಲೆಮಾರಿನಿಂದ ಬಂದ ಪರಂಪರೆಯನ್ನು ಮುಂದುವರಿಸುತ್ತಾ ಪಂಚಾಂಗ ಪ್ರಕಟಣೆ ಮಾಡುತ್ತಿರುವುದು ಸಾಹಸ ಕಾರ್ಯವೂ, ಮಾನನೀಯವೂ ಹೌದು. ಇದರಂತೆ ಶಾಸ್ತ್ರಸಿದ್ಧ ಪಂಚಾಂಗವೂ ನಮ್ಮ ತಾಲೂಕಿನ ಗೌರವ. ಹಾಗೇಯೇ ೧೯೯೩ರಲ್ಲಿ ಉದಯವಾದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠ್ಠಾನವು ಈ ವರೆಗೆ ಐವತ್ತೇಳು ಮೌಲಿಕ ಕೃತಿಗಳನ್ನು ಪ್ರಕಟಿಸಿದೆ. ಸಮಾಜಕ್ಕೆ ಸಾಂಸ್ಕೃತಿಕ-ಶೈಕ್ಷಣಿಕ ಮೌಲ್ಯಗಳನ್ನು ನೀಡುವ ಇಂತಹ ಕೃತಿಗಳನ್ನು ಬರಮಾಡಿಕೊಂಡು ಸದುಪಯೋಗಪಡಿಸಿದಾಗ ನೈಜ ಉದ್ದೇಶ ಈಡೇರುವುದು ಸಾಧ್ಯ.
ಒಡಿಯೂರು ಕೊಡುಗೆ:
ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಕ್ಷೇತ್ರದಲ್ಲಿ ವಿಶೇಷವಾಗಿ ತೊಡಗಿಸಿಕೊಂಡು ಸಾಮಾಜಿಕ ಬದ್ಧತೆಯನ್ನು ಕಾಪಿಟ್ಟುಕೊಂಡು ಮುನ್ನಡೆಯುತ್ತಿರುವ ಶ್ರದ್ಧಾ ಕೇಂದ್ರ ಒಡಿಯೂರಿನ ಶ್ರೀ ಗುರುದೇವ ದತ್ತ ಸಂಸ್ಥಾನ, ’ದತ್ತ ಪ್ರಕಾಶ’ ಪತ್ರಿಕೆ (ದ್ವೈಮಾಸಿಕ) ಪ್ರಕಟಣೆಯ ಜೊತೆಗೆ ಭಕ್ತಿಗೀತೆ, ಬೃಹತ್ ಕಾವ್ಯ, ಗ್ರಂಥ ಸಂಪಾದನೆ, ಯಕ್ಷಗಾನ ಪ್ರಸಂಗ ಪ್ರಕಟಣೆ, ಆಧ್ಯಾತ್ಮಿಕ ಕೃತಿಗಳ ಪ್ರಕಾಶನವೇ ಮುಂತಾದ ಕಾರ್‍ಯಗಳನ್ನು ಕಳೆದ ಮೂವತ್ತು ವರ್ಷಗಳಿಂದ ನಡೆಸುತ್ತಾ ಬಂದಿರುವುದು ಶ್ರೀ ಸಂಸ್ಥಾನದ ವೈಶಿಷ್ಟ್ಯ. ಶ್ರೀ ಸಂಸ್ಥಾನದ ಸ್ಥಾಪಕರಾದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಶ್ರೀ ಕ್ಷೇತ್ರದಲ್ಲಿ ಕೀರ್ತನಕಾರರ ಸಮ್ಮೇಳನ, ಯಕ್ಷಗಾನ ಸಮ್ಮೇಳನ, ಪತ್ರಕರ್ತರ ಸಮ್ಮೇಳನ, ಪೌರಾಣಿಕ ನಾಟಕ ಸ್ಪರ್ಧೆ, ಹೋಬಳಿ-ತಾಲೂಕು ಸಮ್ಮೇಳನಗಳು, ತುಳು ಸಮ್ಮೇಳನಗಳಂಥ ಕಲೆ-ಸಂಸ್ಕೃತಿ ಸಂಬಂಧಿ ಕಾರ್ಯಕ್ರಮಗಳು ನಡೆದುಕೊಂಡು ಬಂದಿವೆ. ಸುಮಾರು ಹದಿನೆಂಟು, ಹತ್ತೊಂಬತ್ತು ವರ್ಷಗಳ ಕಾಲ ಮಹಾಕಾವ್ಯಗಳ ವಾಚನ-ವ್ಯಾಖ್ಯಾನಗಳನ್ನು ಆಯೋಜಿಸಿರುವುದು ಪೂಜ್ಯ ಶ್ರೀಗಳ ಸಾಹಿತ್ಯ-ಕಲೆ-ಸಂಸ್ಕೃತಿಯ ಪ್ರೀತಿಗೆ ಸಾಕ್ಷಿ.
ಬಂಟ್ವಾಳ ತಾಲೂಕಿನಲ್ಲಿ ಸಾಕಷ್ಟು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿವೆ. ’ಮೈತ್ರೇಯಿ’ ಗುರುಕುಲದಂತಹ ಸಂಸ್ಥೆಗಳಿವೆ. ವೃತ್ತಿಪರ-ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳಿವೆ. ಆದರೆ ನಮ್ಮಲ್ಲಿ ಬೇರೂರಿಸುವ ಆಂಗ್ಲ ಭಾಷಾ ವ್ಯಾಮೋಹ ಕೆಲವು ಸರಕಾರಿ ಶಾಲೆಗಳು, ಖಾಸಗಿ ಶಾಲೆಗಳು ಸ್ಥಗಿತಗೊಳ್ಳುವಂತೆ ಮಾಡಿದೆ. ಪರಸ್ಪರ ದೋಷಾರೋಪಣೆಯಿಂದ ಕಾಲವ್ಯಯವಷ್ಟೇ ಲಾಭ. ಸರ್ಕಾರದ ಶಿಕ್ಷಣ ನೀತಿ, ಪೋಷಕರು ಎದುರಿಸುವ ಭೀತಿ, ಎಳೆಯ ಪೀಳಿಗೆಯ ಶಿಕ್ಷಣ ವ್ಯವಸ್ಥೆಯ ರೀತಿ – ಎಲ್ಲವೂ ಮುಂದೊಂದು ದಿನ ಸಮಾಜವನ್ನು ಹಳಿ ತಪ್ಪಿಸುತ್ತದೇನೋ ಎಂಬ ಭಯ ಉಂಟು ಮಾಡುತ್ತದೆ. ಯಾವುದೇ ಭಾಷೆಯ ಕಲಿಕೆ ತಪ್ಪಲ್ಲ. ಆಂಗ್ಲ ಮಾಧ್ಯಮದ ಭರಾಟೆ ಮಾತೃ ಭಾಷೆಯ ಕಲಿಕೆಯನ್ನು ಅಪರಿಚಿವಾಗಿಸುತ್ತದೆಯೇ ಎಂಬ ಕಳವಳಕ್ಕೆ ಕಾರಣವಾಗಿದೆ. ಎಲ್ಲ ವಾದಗಳಿಗಿಂತ ಪಲಾಯನವಾದ ತುಂಬ ಸುಲಭ. ನಾವು ಅದನ್ನು ಬೇಗ ಅಪ್ಪಿಕೊಳ್ಳುತ್ತೇವೆ. ಭಾಷೆಯ ಅಧ್ಯಯನ-ಅಧ್ಯಾಪನ-ಅವಿರತ ಬಳಕೆಯಿಂದ ಮಾತ್ರ ಸಾಹಿತ್ಯ ಕೃಷಿಗೆ ಪೂರಕ ವಾತಾವರಣ ನೆಲೆಗೊಳ್ಳಬಹುದು.
ಸಹಕಾರಿ ಕ್ಷೇತ್ರದಲ್ಲಿ ಬಂಟ್ವಾಳ ನಾರಾಯಣ ನಾಯಕ್, ಯು. ವೆಂಕಪ್ಪಯ್ಯ, ವಾರಣಾಸಿ ಸುಬ್ರಾಯ ಭಟ್, ಕೂಡೂರು ಕೃಷ್ಣ ಭಟ್, ಪೆರಾಜೆ ಶ್ರೀನಿವಾಸ ರಾವ್ ಮೊದಲಾದ ಮಹನೀಯರು ಕೃಷಿವಲಯಕ್ಕೆ ಚೈತನ್ಯ ತುಂಬಿದವರು. ವಿಟ್ಲ ಸೀಮೆಯ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಉನ್ನತಿಯಲ್ಲಿ ವಿಟ್ಲದ ಬಲ್ಲಾಳ ಅರಸು ಮನೆತನದ ಕೊಡುಗೆ ಸಾಕಷ್ಟಿದೆ. ರಾಜಕೀಯ ರಂಗದಲ್ಲಿ ಲೀಲಾವತಿ ಕೆ. ರೈ, ಬಿ. ವಿಠಲದಾಸ ಶೆಟ್ಟಿ, ಕುಳಾಲು ಅಣ್ಣಪ್ಪ ಭಂಡಾರಿ, ಪೆರುವಾಯಿ ಕೋಚಣ್ಣ ರೈ, ಕೂಟೇಲು ರಾಮ ನಾಯಕ್, ಎಚ್. ರಾಮಯ ನಾಕ್, ಬಿ.ವಿ. ಕಕ್ಕಿಲ್ಲಾಯ, ಉರಿಮಜಲು ರಾಮ ಭಟ್ಟರಂತಹ ಹಲವು ಮಂದಿ ಗಣ್ಯರು ದುಡಿದವರು. ಸರ್ವಶ್ರೀ ಬಿ. ರಮಾನಾಥ ರೈ, ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಶಕುಂತಳಾ ಶೆಟ್ಟಿ, ಅಶೋಕ ಕುಮಾರ್ ರೈ, ಪ್ರಭಾದೇವಿ, ಶೈಲಜಾ ಟಿ.ಕೆ. ಭಟ್ ಬಂಟ್ವಾಳ ತಾಲೂಕಿನ ಪ್ರಗತಿಗೆ ಶ್ರಮಿಸಿದವರು. ಸಾಮಾಜಿಕ ಸ್ವಾಸ್ಥ್ಯವನ್ನು ಸಂರಕ್ಷಿಸಿ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಾಮಾಣಿಕ ನಡೆಯನ್ನು ಮತದಾರ ಬಯಸುತ್ತಾನೆ, ಬಯಸಬೇಕು. ಪ್ರಜ್ಞಾವಂತ ಮತದಾರ ಜಾಗೃತಿಯಿಂದ ಹೇಗೆ ಮತವಿತ್ತು ಪವಿತ್ರ ಹಕ್ಕನ್ನು ಚಲಾಯಿಸಬೇಕೋ ಹಾಗೆಯೇ ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯ ಬದ್ಧತೆಯಿಂದ ವ್ಯವಹರಿಸಿದಾಗ ಎಲ್ಲವೂ ಸುಗಮ. ಬದುಕಿನ ಸಾಹಿತ್ಯದಲ್ಲಿ ಕೃಷಿ, ರಾಜಕಾರಣ ಎಲ್ಲವೂ ಒಳಗೊಂಡಿರುವುದರಿಂದ ಮಾತ್ರವೇ ಈ ಮಾತುಗಳು.
ನಮ್ಮ ಬಂಟ್ವಾಳ ತಾಲೂಕಿನಲ್ಲಿ ಸದುದ್ದೇಶವಿರಿಸಿಕೊಂಡ ಅನೇಕ ವಿಶ್ವಸ್ಥ ಮಂಡಳಿಗಳಿವೆ. ಶಿಕ್ಷಣ, ಆರೋಗ್ಯ, ಉದ್ಯಮ, ಕೃಷಿ, ಕೈಗಾರಿಕೆಯ ಪ್ರಗತಿಗೆ ಇವುಗಳಿಂದ ಪೂರಕ ಪ್ರಯತ್ನಗಳು ನಡೆಯುತ್ತಲೇ ಇದೆ. ಅನೇಕ ಯುವಕ ಮಂಡಲಗಳು, ಯುವತಿ ಮಂಡಲಗಳು, ಸ್ತ್ರೀಶಕ್ತಿ ಗುಂಪುಗಳು, ಭಜನಾ ಸಂಘಗಳು ಕಾರ್ಯಾಚರಿಸುತ್ತಿವೆ. ಈ ಸಂಸ್ಥೆಗಳೆಲ್ಲ ತಮ್ಮ ಮೂಲ ಉದ್ದೇಶಗಳೊಂದಿಗೆ ಹೆಚ್ಚು ಹೆಚ್ಚು ಸಾಹಿತ್ಯ ವಲಯವನ್ನು ಆಪ್ತವಾಗಿಸಿಕೊಂಡಾಗ ಸಮೃದ್ಧ ಸಾಹಿತ್ಯ ಸಂಪನ್ನವಾದೀತು. ಮಕ್ಕಳು, ಯುವಜನತೆ, ಹೆಚ್ಚು ಹೆಚ್ಚು ಪುಸ್ತಕ ಪ್ರಿಯರಾದಂತೆ ಸಾಹಿತ್ಯ ಕ್ಷೇತ್ರ ಪುಷ್ಪವಾಗುತ್ತದೆ. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು. ತಾಯಂದಿರ ಪಾತ್ರ ಬಲು ಮುಖ್ಯ. ನಮ್ಮ ಮಕ್ಕಳನ್ನು ಸುಸಂಸ್ಕೃತರಾಗಿ ಬೆಳೆಸುವಲ್ಲಿ ಅದು ತಾಯ್ತನದ ಹೊಣೆಗಾರಿಕೆಯೂ ಹೌದು. ಪ್ರೀತಿ-ಅಕ್ಕರೆಯಿಂದ ತಿಂಡಿ-ತಿನಿಸು ಕೊಟ್ಟು ಮಕ್ಕಳನ್ನು ಪೋಷಿಸುವ ನಾವು ವ್ಯಕ್ತಿತ್ವ ವಿಕಾಸಕ್ಕೆ ಕಾರಣವಾದ ವೈಚಾರಿಕ ಆಹಾರವನ್ನೂ ಕೊಡಬೇಡವೇ? ಮನೆ-ಮನೆಯಲ್ಲೂ ಪುಸ್ತಕ ಸಂಗ್ರಹ, ಓದು, ವಿಚಾರ ವಿನಿಮಯ, ಸಂವಾದ, ಕವಿತಾ ವಾಚನ, ಕಥಾ ರಚನೆ ತರಬೇತಿ, ಕವಿತೆಗಳ ರಚನೆ, ಕಾವ್ಯ ವಾಚನ ಮುಂತಾದ ಪ್ರಯತ್ನಗಳನ್ನು ಕಾರ್‍ಯಗತಗೊಳಿಸಿ ಎಲ್ಲರೂ ಸದಾ ಸಾಹಿತ್ಯ ಪರಿಚಾರಕರಾಗೋಣ. ಬರಹಗಾರರು, ಓದುಗರು, ಸಾಹಿತ್ಯ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಮಕ್ಕಳ ಸಾಹಿತ್ಯ ಪರಿಷತ್ತು ಒಂದೆಡೆ ಕಲೆತು ಸಾಹಿತ್ಯ ಕ್ಷೇತ್ರದ ಆಗು-ಹೋಗುಗಳು, ಸಫಲತೆ-ವೈಫಲ್ಯ, ನವೀನ ಮಾರ್ಗಗಳ ಶೋಧದ ಮೂಲಕ ಸದಭಿರುಚಿಯ ಸಾಹಿತ್ಯ ರಚನೆ-ಪ್ರಸಾರಕ್ಕೆ ಕ್ರಿಯಾಶೀಲರಾಗೋಣ, ಶಾಲೆಗಳಲ್ಲೂ ಸಾಹಿತ್ಯಕ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ಆಯೋಜನೆಯಾಗಲಿ. ಮನೆ-ಮನೆಯಿಂದ ಗ್ರಾಮ-ಹೋಬಳಿ ಮಟ್ಟಕ್ಕೆ ಈ ಜಾಗೃತಿ ತಲುಪುವಂತಾದರೆ ಚೆನ್ನ. ಇಂತಹ ಸಮ್ಮೇಳನಗಳು ಕನ್ನಡ ಸಾಹಿತ್ಯ -ಸಂಸ್ಕೃತಿಯ ಪೂಜೆಗೆ ಭದ್ರ ತಳಹದಿಯಾಗಲಿ ಎಂದು ಹಾರೈಸುತ್ತೇನೆ.
ಈ ಸಮ್ಮೇಳನದ ಆಯೋಜನೆಯ ಹಿಂದೆ ನೂರಾರು ಕನ್ನಡ ಸೇನಾನಿಗಳ ಅವಿರತ ಶ್ರಮವಿದೆ. ತಾಯಿ ಭುವನೇಶ್ವರಿಯ ಮೇಲಣ ಭಕ್ತಿಯಿದೆ. ನಾಡು-ನುಡಿಯ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಅದಮ್ಯ ಉತ್ಸಾಹವಿದೆ. ಇದರ ಸುಸಂಪನ್ನತೆಗೆ ಕಾರಣರಾದ ಎಲ್ಲ ಬಂಧು-ಭಗಿನಿಯರಿಗೆ, ಸಹಕರಿಸಿದ ಎಲ್ಲ ಸಂಸ್ಥೆಗಳಿಗೆ ವಿನೀತನಾಗಿ ನಮಸ್ಕರಿಸುತ್ತೇನೆ. ತಮ್ಮೆಲ್ಲರ ಸದಭಿಮಾನದ ಜೀವಕಳೆ ಇನ್ನಷ್ಟು ಸಾಹಿತ್ಯ ರಚನೆಗೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಪ್ರಾರ್ಥಿಸಿ ಮತ್ತೊಮ್ಮೆ ಎಲ್ಲರಿಗೂ ಪ್ರಣಾಮ ಸಲ್ಲಿಸುತ್ತೇನೆ.
ಮೊಳಗಲನವರತ ಕನ್ನಡದ ಘಂಟಾಧ್ವನಿಯು
ಬೆಳಗುತಿರಲೆಂದೆಂದು ಕನ್ನಡದ ಜ್ಯೋತಿ
ಮನೆಮನೆಯಲನುರಣಿಸೆ ಕನ್ನಡದ ಜಯಘೋಷ
ಜನಮನಕೆ ಬೇಕಿಲ್ಲ ಅಳುಕು-ಭಯ ಭೀತಿ
ಕನ್ನಡದ ಸಾಹಿತ್ಯ ಭಂಡಾರ ತುಂಬಿಡುವ
ಕನ್ನಡದ ಕುಲಕೋಟಿ ಒಮ್ಮನದಿ ನಡೆವ
ಕನ್ನಡವೆ ಗಂಗೆ, ಕನ್ನಡವೆ ಸಂಜೀವಿನಿಯು
ಕನ್ನಡದ ತೇರೆಳೆಯೆ ನೀಡೋಣ ಬಲವ
ಕನ್ನಡವೆ ಮನೆ ಮನವು, ಕನ್ನಡವೆ ಧನವೆಮಗೆ
ಕನ್ನಡದ ನುಡಿಮುತ್ತು ನಿಜದ ಪರಮಾನ್ನ
ಕನ್ನಡದ ಹಬ್ಬವಿರೆ, ಚೆನ್ನುಡಿಯ ಕಬ್ಬವಿರೆ
ಉನ್ನತಿಕೆ ಬೇರೇನು? ಅದುವೆ ಮೃಷ್ಟಾನ್ನ
ಸಿರಿಗನ್ನಡಂ ಗೆಲ್ಗೆ