ಬಂಟ್ವಾಳ ತಾಲೂಕಿನಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ 2700 ಸಂಘದಲ್ಲಿ 22200 ಸದಸ್ಯರಿಗೆ 5 ಕೋಟಿ ರೂ ಲಾಭಾಂಶ ಬಂದಿದೆ ಎಂದು ಯೋಜನಾಧಿಕಾರಿ ಪಿ.ಜಯಾನಂದ ಹೇಳಿದ್ದಾರೆ. ಜನವರಿ ಅಂತ್ಯದೊಳಗೆ ಎಲ್ಲ ಸಂಘಗಳಿಗೆ ಲಾಭಾಂಶ ತಲುಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬಂಟ್ವಾಳ ಯೋಜನಾ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬಂಟ್ವಾಳ ತಾಲೂಕಿನ 18 ಶಾಲೆಗಳಿಗೆ 10ರಿಂದ 20 ಸೆಟ್ ಬೆಂಚ್ ಡೆಸ್ಕ್ ಈ ವರ್ಷ ವಿತರಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ 224 ಕುಟುಂಬಗಳಿಗೆ ಮಾಸಾಶನ ನೀಡಲಾಗಿದ್ದು, 2.20 ಲಕ್ಷ ರೂ ವಿತರಿಸಲಾಗಿದೆ. 392 ಮಂದಿಗೆ ಸಲಕರಣೆಗಳನ್ನು ವಿತರಿಸಲಾಗಿದೆ. ಕಳೆದ 20 ವರ್ಷಗಳಲ್ಲಿ ಶಾಲೆ, ರುದ್ರಭೂಮಿಗಳಿಗೆ ನೆರವು ನೀಡಲಾಗಿದ್ದು, ದೇವಸ್ಥಾನಗಳಿಗೆ 4 ಕೋಟಿ ರೂ ಗೂ ಮಿಕ್ಕಿ ಸಹಾಯ ನೀಡಲಾಗಿದ್ದರೆ, 4 ಕೋಟಿಯಷ್ಟು ಶಾಲಾ ಕೊಠಡಿ, ಕುಡಿಯುವ ನೀರಿಗೆ ನೆರವು ನೀಡಲಾಗಿದೆ. ಒಂದು ರುದ್ರಭೂಮಿಗೆ 2ರಿಂದ 3 ಲಕ್ಷದಂತೆ 8 ಕೋಟಿ ರೂಗಳನ್ನು ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಈ ವರ್ಷ 18 ಸರಕಾರಿ ಶಾಲೆಗಳಿಗೆ ಕ್ಷೇತ್ರದಿಂದ ಗೌರವಧನ ನೀಡಲಾಗಿದೆ. ಸದಸ್ಯರು ಅವರ ವ್ಯವಹಾರ ಚೆನ್ನಾಗಿಟ್ಟುಕೊಂಡರೆ, ದೊಡ್ಡ ದಾಖಲಾತಿ ಇಲ್ಲದೆ, ವಿಶ್ವಾಸ, ಪ್ರೀತಿಯಿಂದ ಸಾಲ ಪಡೆದುಕೊಂಡು ವ್ಯವಹಾರವನ್ನು ಸುಲಭವಾಗಿ ನಡೆಸಬಹುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿಗೆ ಕಾಲಿಟ್ಟು 20 ವರ್ಷಗಳಾಗಿವೆ. ಈಗಾಗಲೇ ತಾಲೂಕಿನಲ್ಲಿ 5 ಸಾವಿರಕ್ಕೂ ಮೇಲ್ಪಟ್ಟು ಸಂಘ ರಚನೆಯಾಗಿದೆ. ವಿಟ್ಲ ಹಾಗೂ ಬಂಟ್ವಾಳದಲ್ಲಿ ಯೋಜನಾ ಕಚೇರಿ ಇದ್ದು, 200ಕ್ಕೂ ಅಧಿಕ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. 2703 ಸ್ವಸಹಾಯ ಪ್ರಗತಿಬಂಧು ಸಂಘ ಕೆಲಸ ಮಾಡುತ್ತಿದ್ದು, 22 ಸಾವಿರದಷ್ಟು ಮಂದಿ ಪಾಲುದಾರರಿದ್ದಾರೆ. ಪ್ರಗತಿಬಂಧು ಕಾರ್ಯಕ್ರಮ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ವಿಯಾಗಿದೆ ಎಂದು ಹೇಳಿದರು. ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ನಾವರ ಉಪಸ್ಥಿತರಿದ್ದರು.