ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಪಟ್ಟಂತೆ ಅನುದಾನ ಮೀಸಲಿಡಲು ನಾಗರಿಕ ಸಮಿತಿ, ಸ್ವಯಂಸೇವಾ ಸಂಸ್ಥೆಗಳ ಅಹವಾಲು ಆಲಿಸುವ ಬಜೆಟ್ ಪೂರ್ವಭಾವಿ ಸಭೆ ಬಂಟ್ವಾಳ ಪುರಸಭಾ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷತೆಯಲ್ಲಿ ನಡೆಯಿತು.
ಅಹವಾಲು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ವಾಸು ಪೂಜಾರಿ, ಬಸ್ ನಿಲ್ದಾಣವನ್ನು ಸುವ್ಯವಸ್ಥೆಗೆ ತರುವುದು, ಸಂಚಯಗಿರಿ ಸಮಸ್ಯೆ, ಬಿ.ಸಿ.ರೋಡ್ ಸಹಿತ ಪುರಸಭೆ ವ್ಯಾಪ್ತಿಯ ಪಾರ್ಕಿಂಗ್, ಬೀದಿಬದಿ ವ್ಯಾಪಾರ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದರ ಸಹಿತ ನಾಗರಿಕ ಪ್ರತಿನಿಧಿಗಳು ನೀಡಿದ ಸಲಹೆ ಸೂಚನೆಗಳನ್ನು ಗಮನದಲ್ಲಿರಿಸಲಾಗುವುದು ಎಂದರು.
ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮಾತನಾಡಿ, ಬಂಟ್ವಾಳ ಪುರಸಭೆಯ ಮುಂದಿನ ಬಜೆಟ್ ಗೆ ನೀಡಿದ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ಹೇಳಿದರು.
ವಿದೇಶಗಳಿಂದ ಆಗಮಿಸುವವರಿದ್ದಾರೆ:
ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಮಾತನಾಡಿ, ಕೇಂದ್ರಕ್ಕೆ ದೇಶವಿದೇಶಗಳಿಂದ ಅಧ್ಯಯನ, ಸಂದರ್ಶನಕ್ಕೆಂದು ಜನರು ಆಗಮಿಸುತ್ತಾರೆ. ಈ ಸಂದರ್ಭ ಇಲ್ಲಿಗೆ ಬರುವ ರಸ್ತೆ, ಒಳಚರಂಡಿ ಸರಿ ಇಲ್ಲದೇ ಇರುವುದು ಖೇದಕರವಾಗಿದೆ ಸಾಗುವ ರಸ್ತೆಯ ಬದಿಯಲ್ಲಿರುವ ಕೆಲ ಮನೆಯ ಗೇಟಿನ ಮುಂದೆ ಸಾರ್ವಜನಿಕ ಜಾಗದಲ್ಲಿ ಕಲ್ಲುಗಳನ್ನು ಇಡಲಾಗುತ್ತಿದೆ. ರಸ್ತೆಯೂ ಸರಿ ಇಲ್ಲ. ಇದನ್ನು ದುರಸ್ತಿಗೊಳಿಸಬೇಕು ಎಂದರು.
ಹಿರಿಯರಾದ ದಾಮೋದರ ಸಂಚಯಗಿರಿ ಮಾತನಾಡಿ, ಸಮಗ್ರ ಕುಡಿಯುವ ನೀರಿನ ಪೈಪ್ ಕಟ್ ಆಗಿದ್ದರೂ ದುರಸ್ತಿ ಮಾಡುವಂತೆ ಯಾರಲ್ಲಿ ಕೇಳಬೇಕು ಎಂದರು.
ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಮಾತನಾಡಿ, ಕೊಳಚೆ ನೀರು ಸಮಸ್ಯೆ ಇದೆ. ದುರ್ನಾತ ಬೀರುತ್ತಿದ್ದು ಇದಕ್ಕೆ ಪರಿಹಾರ ನೀಡಬೇಕು ಎಂದರು.
ಬಂಟ್ವಾಳ ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ಬಾಳಿಗಾ ಮಾತನಾಡಿ, ಬಂಟ್ವಾಳ ಪೇಟೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಬಸ್ ನಿಲ್ದಾಣ ಶೌಚಾಲಯ ಸುಸ್ಥಿತಿಗೆ ಇಡಬೇಕು, ಸೆಟ್ ಬ್ಯಾಕ್ ನಿಯಮಾವಳಿಗೆ ಸಂಬಂಧಿಸಿ ಬಂಟ್ವಾಳ ಪೇಟೆ ಕುರಿತು ವಿಶೇಷ ನಿಯಮ ರೂಪಿಸಬೇಕು ಎಂದವರು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತೆ ವಸಂತಿ ಗಂಗಾಧರ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಅಂಗನವಾಡಿ ದುರಸ್ತಿಗೆ ಹಾಗೂ ಮಕ್ಕಳಿಗೆ ಆಟದ ಮೈದಾನ ನಿರ್ಮಾಣಕ್ಕೆ ಮನವಿ ನೀಡಿದರು. ಬಂಗ್ಲೆಗುಡ್ಡೆ ಅಂಗನವಾಡಿ, ಹಾಸ್ಟೆಲ್ ಇದೆ, ಅಲ್ಲಿ ಹಾವು ನುಗ್ಗಿದರೂ ಕೇಳುವವರಿಲ್ಲದ ಸ್ಥಿತಿ ಎಂದು ಮುಸ್ತಾಫಾ ಹಾಗೂ ಪಿ.ಎಂ.ಅಶ್ರಫ್ ಹೇಳಿದರು. ಪಾಣೆಮಂಗಳೂರು ಆಲಡ್ಕದಲ್ಲಿ ಒಳಚರಂಡಿ ನೀರು ಬ್ಲಾಕ್ ಆಗಿದೆ ಎಂದು ಮುಸ್ತಾಫಾ ದೂರಿದರು.
ಸಂಚಯಗಿರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಮಾತನಾಡಿ, ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಸಂತೆ ಯನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಾಡಲು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಅಕೌಂಟೆಂಟ್ ಹರ್ಷಿತಾ ಉಪಸ್ಥಿತರಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)