ರೇಖೆ: ಹರಿಣಿ - ಕೃಪೆ: ಪ.ರಾಮಚಂದ್ರ
ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು: ನಿರೂಪಣೆ: ಪ.ಗೋಪಾಲಕೃಷ್ಣ, ಕರ್ನಾಟಕ ಸಂಘ, ಪುತ್ತೂರು, 575202 (ದ.ಕ.) ಕ್ಯಾರಿಕೇಚರ್ ಬಿಡಿಸಿದವರು: ಹರಿಣಿ…. ಪದ್ಯಾಣ ಗೋಪಾಲಕೃಷ್ಣ ಅವರು ಬರೆದ ಕುರಿಯ ವಿಠಲ ಶಾಸ್ತ್ರೀ ಆತ್ಮಕಥನ ಬಣ್ಣದ ಬದುಕು ಎಂಬ ಕೃತಿಯ ಮರುಓದು. ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಣೆಗಾಗಿ ಅವರ ಪುತ್ರ ಪದ್ಯಾಣ ರಾಮಚಂದ್ರ ನೀಡಿದ್ದಾರೆ. ಇದು ಎರಡನೇ ಕಂತು. ಎರಡನೇ ಕಂತು ಮುಂದೆ ಪ್ರಕಟವಾಗಲಿದೆ. ಇಲ್ಲಿ ಪ್ರಕಟವಾದ ಬರೆಹ, ಚಿತ್ರಗಳೆಲ್ಲವೂ ಕೃತಿಕಾರರ ಕೊಡುಗೆ. = ಪ.ರಾಮಚಂದ್ರ ಅವರಿಗೆ ಕೃತಜ್ಞತೆ
ಕುರಿಯ ವಿಠಲ ಶಾಸ್ತ್ರಿ: ಜನನ: 8-9-1912, ನಿಧನ: 18-11-1972
ಮೊದಲ ಕಂತಿನ ಲಿಂಕ್ ಇಲ್ಲಿದೆ.
ಎರಡನೇ ಕಂತು ಇಲ್ಲಿದೆ.
ತಲೆಗೆ ಬಿದ್ದ ತಾಳ
ಇಂದಿಗೆ ಸುಮಾರು ಐದು ದಶಕಗಳ ಹಿಂದೆ…
ನಾನಾಗ ಎಂಟರ ತುಂಟಗಾಲಿನಲ್ಲಿದ್ದ ಹುಡುಗ. ಆಟದ (ಯಕ್ಷಗಾನ ಬಯಲಾಟಕ್ಕೆ ಹಾಗೆನ್ನುತ್ತಾರೆ.) ಮೋಜು ನಮ್ಮ ಹಳ್ಳಿಯಲ್ಲಿ ಎಲ್ಲರಿಗೂ ಇದ್ದಿತು (ಈಗಲೂ ಇದೆಯೆನ್ನಿ)-
ದಕ್ಷಿಣ ಕನ್ನಡದ ಹಳ್ಳಿಗಳೆಂದರೆ, ಹತ್ತು ಮನೆಗಳ ಸುತ್ತೂರುಗಳಾಗಿರುವುದಿಲ್ಲ. ಒಂದು ಮನೆಯಿಂದ ಇನ್ನೊಂದು ಮನೆಗೆ ಕೂಗಳತೆಯ ದೂರವೇ ಇರುತ್ತದೆ. ಅಂತಹ ಹತ್ತು ಮನೆಗಳಿರುವ ಸುಮಾರು ಚದರ ಮೈಲಿಗಳ ವಿಸ್ತಾರದ ಪ್ರದೇಶಕ್ಕೆ ಒಂದು ಹಳ್ಳಿಯ ಹೆಸರು ಇರುತ್ತದೆ. ಪ್ರತಿ ಮನೆಯ ತಾಣಕ್ಕೂ ಒಂದು ಒಳ ಹೆಸರಿರುತ್ತದೆ.
ನಮ್ಮ ಮನೆ ಇರುವ ಸ್ಥಳಕ್ಕೆ ಕುರಿಯ ಎನ್ನುತ್ತಾರೆ. ಅಲ್ಲಿಂದ ಸುಮಾರು ಒಂದು ಮೈಲು ದೂರದ ಕುರುಡಪದವಿನಲ್ಲಿ ಮೂರು ದಿನಗಳ (ಅಂದರೆ ರಾತ್ರಿಗಳ) ಬಯಲಾಟದ ಕಾರ್ಯಕ್ರಮವಿದ್ದಿತು.
ಒಂದು ದಿನದ “ಆಟ”ವಾದರೂ ನಮಗೆ ಸಂತಸದ ಸುಗ್ಗಿ. ಮೂರು ದಿನಗಳೆಂದರೆ ಕೇಳಬೇಕೆ?
ರಾತ್ರೆಯೆಲ್ಲಾ ರಂಗಸ್ಥಳದ ಬಳಿ- ಹಗಲೆಲ್ಲಾ (ಊಟದ ಹೊತ್ತಿನ ಹೊರತು) ಮನೆ ಚಾಪೆಯ ಮೇಲೆ- ನಾನು ಕಳೆದಿದ್ದೆ.
ಮೊದಲ ರಾತ್ರಿ- “ಪಟ್ಟಾಭಿಷೇಕ”, ಮರುರಾತ್ರಿ “ಪ್ರಹ್ಲಾದ ಚರಿತ್ರೆ”, ಮೂರನೆಯ ದಿನ “ಕಾರ್ತವೀರ್ಯಾರ್ಜುನ ಕಾಳಗ.”
ಮೂರೂ ಪ್ರಸಂಗಗಳ ಹೆಸರು ನೆನಪಿನಲ್ಲಿ ಉಳಿದಿದೆ. ಆದರೆ, ನೋಡಿದ ಆಟಗಳಲ್ಲಿ “ಪಟ್ಟಾಭಿಷೇಕ” ಮಾತ್ರವೇ ಅಚ್ಚಳಿಯದೆ ಉಳಿದುದು.
ಅದರಲ್ಲೂ ಒಂದು ಪಾತ್ರ, ಇಂದಿಗೂ ಕಣ್ಣೆದುರು ಕಟ್ಟಿದಂತಿದೆ.
“ಸಣ್ಣವಳಾದ ಸೀತೆ ಮತ್ತು ವೃದ್ಧಾಪ್ಯದಲ್ಲಿರುವ ಪಿತ ದಶರಥ ಚಕ್ರವರ್ತಿ… ಇವರಿಬ್ಬರಿಗೂ ನಾನಿಲ್ಲದಿರುವಾಗ ನಮ್ಮ ವಿಯೋಗದ ದುಃಖವು ಬಾರದಂತೆ-ತಾಪ ತಗಲದಂತೆ ನೋಡಿಕೊಳ್ಳುವ ಹೊಣೆ ನಿಮ್ಮದಮ್ಮಾ!” ಎಂದು ಶ್ರೀರಾಮಚಂದ್ರನು ತಾಯಿ ಕೌಸಲ್ಯೆಯೊಡನೆ ಹೇಳುವ ಮಾತು-
ಕೌಸಲ್ಯೆ ಅವನನ್ನು ಬೀಳ್ಕೊಡುವ ದೃಶ್ಯ…..
ರಾಮನ ಪಾತ್ರಕ್ಕಿಂತಲೂ, ವನವಾಸಕ್ಕೆ ಮಗನನ್ನು ಕಳುಹಿಸಿಕೊಡುವ ಕೌಸಲ್ಯಾದೇವಿಯ ಪಾತ್ರಚಿತ್ರಣ ನನ್ನನ್ನು ಸೆರೆ ಹಿಡಿದಿತ್ತು.
ಕೌಸಲ್ಯೆ “ಅಭಿನಯ”ವನ್ನು ಕಂಡು, ಕೆಲವು ಹನಿ ಕಣ್ಣೀರು ಸುರಿಸಿದ್ದೆನೆಂದು ಹೇಳಲು ನಾಚಿಕೆ ಏನೂ ಆಗುವುದಿಲ್ಲ.
ಆ “ವೇಷ”ವನ್ನು ಹಾಕಿದ್ದವರು ಶ್ರೀ ಕುಂಬಳೆ ರಾಮಚಂದ್ರರೆಂದು ನೆನಪು (ಅವರು ಈಗ ಇಲ್ಲ).
ಆಗಿನ ಕಾಲಕ್ಕೂ ಮೊದಲು, ಅಂದಿನ ಬಯಲಾಟ ನಡೆಸಿದ್ದ ಕೂಡ್ಲು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂದರೆ ಪ್ರಸಿದ್ಧವಾಗಿತ್ತು.
ಕೂಡ್ಲು “ಮೇಳ”ದ (ಅದು ಕೆಲವರ ಬಾಯಲ್ಲಿ ಕೂಡೇಲು ಮೇಳವೂ ಆಗಿತ್ತು) ಆಟ ಇದೆ ಎಂದರೆ ಹತ್ತಾರು ಮೈಲು ದೂರದಿಂದ ರಾತ್ರೆಯ ಹೊತ್ತಿನಲ್ಲಿ ಗುಡ್ಡಗಳಲ್ಲೆಲ್ಲಾ ತೆಂಗಿನ ಗರಿಗಳ “ಸೂಟೆ”ಗಳ ಸಾಲನ್ನು ಕಾಣಬಹುದಾಗಿತ್ತು.
ಇಂದೆಲ್ಲಿ ಆಟ?
ಇಂದಿನಂತೆ, ಭಿತ್ತಿಪತ್ರಗಳ ಪ್ರದರ್ಶನ ನಡೆಸಬೇಕು ಎಂದಿರಲಿಲ್ಲ. ಕರಪತ್ರಗಳನ್ನು ಕಡ್ಡಾಯವಾಗಿ ಗಾಳಿಗೆ ತೂರಬೇಕಾಗಿರಲಿಲ್ಲ. ಕಾರುಗಳಲ್ಲಿ ಧ್ವನಿವರ್ಧಕಗಳನ್ನು ಇರಿಸಿಕೊಂಡು “ಬನ್ನಿರಿ, ನೋಡಿರಿ! ಆನಂದ ಪಡೆಯಿರಿ!” ಇತ್ಯಾದಿಗಳ ಕಂಠಶೋಷಣೆ ಮಾಡಬೇಕಾಗಿರಲಿಲ್ಲ.
ಆಟವಾಡಿಸುವ ವೀಳಯವನ್ನು ಊರ ಪ್ರಮುಖರಿಂದ ಪಡೆದುಕೊಂಡರೆ-ಯಜಮಾನನ ಕೆಲಸ ಮುಗಿಯಿತು.
ಊರವರೇ ಮಾಡಿಕೊಡುವ ರಂಗಸ್ಥಳದ ಬಳಿ “ಚೌಕಿ” (ಬಣ್ಣ ಹಾಕಿಕೊಳ್ಳುವ ಸ್ಥಳ)ಯ ಸಮೀಪದಿಂದ ಸಾಯಂಕಾಲದ ಒಂದು ಘಳಿಗೆಯ ಕಾಲ ಚೆಂಡೆಯ “ಕೇಳಿ” ಬಾರಿಸಿದರೆ- ಅದೇ ಪ್ರಚಾರ ಸಾರುತ್ತಿತ್ತು.
“ಇಂದೆಲ್ಲಿ ಆಟವಿದೆ?” ಎಂದು ಜನರು ಕುತೂಹಲ ತಳೆಯುತ್ತಿದ್ದರು.
ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಐದಾರು ಮೈಲಿಗಳ ದೂರ ಕೇಳಿಸುವ ಚೆಂಡೆಯ ಸದ್ದಿನಿಂದಲೇ ಆಟವಾಗುವ ಸ್ಥಳದ ದಿಕ್ಕು- ದೆಸೆಗಳನ್ನು ತಿಳಿದುಕೊಳ್ಳುತ್ತಿದ್ದರು. ವಿಚಾರಿಸಿ ಅರಿತು, ಬಯಲಾಟಕ್ಕೆ ಭೇಟಿ ಕೊಡುವ ಸಿದ್ಧತೆ ನಡೆಸುತ್ತಿದ್ದರು.
ಸಂಜೆಗತ್ತಲಿನಲ್ಲೇ ಹೊರಟು ಆಟದ ಸ್ಥಳಕ್ಕೆ ಬಂದು ಸೇರಿದರೆಂದರೆ ಮುಂಜಾವಿನ ಮುಂಬೆಳಕಿನವರೆಗೂ ಅಲ್ಲೇ ಉಳಿಯುತ್ತಿದ್ದರು.
ಆಟ ನೋಡಲು ಬಂದು, ಅಲ್ಲಿ ತೂಕಡಿಸುವುದೆಂದರೆ ಅಂದಿನ ಹಿರಿಯರ ದೃಷ್ಟಿಯಲ್ಲಿ ಮಹಾಪಾಪ.
ತೂಕಡಿಕೆ ಕೂಡಾ ಬಾರದೆ ರಾತ್ರಿಯಿಡೀ ಆಟ ನೋಡಿದೆ ಎಂದು ಹೇಳಿಕೊಳ್ಳಲು ಹುಡುಗರಿಗೆಲ್ಲಾ ಹೆಗ್ಗಳಿಕೆ.
ವೇಷಗಳ ವಿವಿಧ ರೀತಿಯ ಕುಣಿತಗಳನ್ನು ಕಾಣಬೇಕು- ಅವರ ಆರ್ಭಟ- ಅಟ್ಟಹಾಸಗಳನ್ನು ಕೇಳಿದಾಗ ನಡುಗಬೇಕು- ಪಾತ್ರಗಳ ಪರಸ್ಪರ ವಿಮರ್ಶೆ ನಡೆಸಬೇಕು. ಇವೆಲ್ಲವೂ ರಂಗಸ್ಥಳಕ್ಕೆ ಸಾಧ್ಯವಾದಷ್ಟು ಸಮೀಪವಾಗಿ ಕುಳಿತಿದ್ದ ಹುಡುಗರು ನಡೆಸುವ ಕೆಲಸಗಳು.
ನಾನೂ ಅಂತಹ ಕೆಲಸ ನಡೆಸುತ್ತಿದ್ದೆ. ಇತರರಿಗಿಂತ ಹೆಚ್ಚು ಉತ್ಸಾಹ ತೋರುತ್ತಿದ್ದೆನಾದರೆ ಅದು ಸ್ವಾಭಾವಿಕ.
ಬಯಲಾಟದ ಬಗ್ಗೆ ಹೆಚ್ಚಿನ ಉತ್ಸಾಹ ಬರಲು ವಿಶೇಷವಾದ ಕಾರಣ ಬಯಲಾಟ ಎಂದರೆ ಬೇಕಾದಾಗ ಸಿಗುವ ಮನರಂಜನೆ ಅಲ್ಲದಿದ್ದುದೇ ಆಗಿತ್ತು.
ಪ್ರತಿ ವರ್ಷದ ಮಾರ್ಗಶಿರ ಮಾಸದಲ್ಲಿ ಪ್ರಾರಂಭವಾದ ಬಯಲಾಟದ ಮೇಳಗಳ ತಿರುಗಾಟ ವೈಶಾಖ ಮಾಸದ ದಶಮಿಯಂದು ಅಂತ್ಯಗೊಳ್ಳುವ ಪರಂಪರೆ. ಅಂದಿಗೆ ಸಂಪ್ರದಾಯ ಪ್ರಕಾರ ತಿರುಗಾಟ ಮುಗಿಸಿ, ಮೇಳದ ಲೆಕ್ಕಾಚಾರವನ್ನು ಒಪ್ಪಿಸುವ ಕ್ರಮವೂ ಇದೆ.
ಬಾಲ್ಯದ ಆಸಕ್ತಿ
ಆದುದರಿಂದ ವರ್ಷದ ಉಳಿದ ದಿನಗಳಲ್ಲಿ ನಮಗೆ ಯಕ್ಷಗಾನದ ಆಸಕ್ತಿಯನ್ನು ಉಳಿಸಿಕೊಳ್ಳಲು ದಾರಿಗಳನ್ನು ಹುಡುಕುವ ಪ್ರಮೇಯ ಬರುತ್ತಿತ್ತು.
ಯಕ್ಷಗಾನ ಕಲಾವಿಲಾಸಿಗಳಿಗೆ ಒಂದು ರೀತಿಯ ಅಭ್ಯಾಸರಂಗವಾಗಿ ತಾಳಮದ್ದಳೆ ಕೂಟಗಳನ್ನು ನಮ್ಮತ್ತ ಕಡೆ ಜರುಗಿಸುತ್ತೇವೆ. ಬೇಸಾಯದ ದುಡಿಮೆ ಮುಗಿದಾಗ ಅಂತಹ ಕೂಟಗಳು ಹೆಚ್ಚು ಹೆಚ್ಚಾಗಿ ಆಗುತ್ತವೆ. ಮಳೆಗಾಲದಲ್ಲೂ ನಡೆಯುತ್ತದೆ.
ಮುಂಗಾರು ಮಳೆಯ ಅಬ್ಬರ ಕೇಳತೊಡಗಿದಾಗ ಯಕ್ಷಗಾನ ತಾಳಮದ್ದಳೆ ಕೂಟಗಳ ವ್ಯವಸ್ಥೆಗೂ ಕಳೆ ಬರುತ್ತದೆ.
ನಮ್ಮ ಮನೆ ಮತ್ತು ಹಳ್ಳಿಯ ಸುತ್ತಲಿನ ಮನೆಗಳಲ್ಲಿ ಅಂತಹ ಕೂಟಗಳು ಬಹಳ ವರ್ಷಗಳಿಂದ ನಡೆದು ಬರುತ್ತ ಇದ್ದುವು.
ನಾನು ಮೂರು ವರ್ಷದ ಬಾಲಕನಾಗಿ ಇದ್ದಾಗಲೇ ತಾಳಮದ್ದಳೆ ಎಂದರೆ ಅತೀವ ಆಸಕ್ತಿಯನ್ನು ತೋರುತ್ತಿದ್ದುದಾಗಿ ನಮ್ಮ ಮಾತೋಶ್ರೀಯವರು ಹೇಳಿದ್ದುದನ್ನು ಕೇಳಿದ್ದೇನೆ.
ನನಗೆ ನೆನಪಿದ್ದ ಹಾಗೆ, ಯಕ್ಷಗಾನ ಕೂಟಗಳು ನಮ್ಮ ಮನೆಯಲ್ಲಿ ನಡೆದಾಗಲೂ, ಮನೆ ಬಳಿಯ ಇತರ ಸ್ಥಳಗಳಲ್ಲಿ ಆದಾಗಲೂ ಭಕ್ತಿ ಪುರಸ್ಸರವಾಗಿ ಭಾಗವಹಿಸಲು ಯಾವ ಆತಂಕವೂ ನನ್ನ ಹಿರಿಯರಿಂದ ಬರುತ್ತಿರಲಿಲ್ಲ.
ಆರಂಭದ ವರ್ಷಗಳಲ್ಲಿ ತಾಳಮದ್ದಳೆಯಲ್ಲಿ ನಾನು ವಹಿಸುತ್ತಿದ್ದ ಭಾಗವೆಂದರೆ ಶ್ರಾವಕನದು ಮಾತ್ರ. ಆದರೆ, ಶ್ರವಣದಿಂದ ಸಂಗ್ರಹ ಶಕ್ತಿಯನ್ನು ಬೆಳೆಸಿಕೊಳ್ಳುವ ಕೆಲಸ ನನಗರಿವಿಲ್ಲದಂತೆಯೇ ನಡೆದಿತ್ತು.
ಆಗ ಅರಿತುದನ್ನು ನಾನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿದಾಗಲೂ ನನ್ನ ಹಿರಿಯರು ಏನೂ ಹೇಳಿದವರಲ್ಲ.
ನನ್ನ ತೀರ್ಥರೂಪರು, ಹಿಂದೆ ಒಮ್ಮೊಮ್ಮೆ ಹರಿಕಥೆಗಳನ್ನು ನಡೆಸುತ್ತಿದ್ದರು. ಹರಿಕಥೆಗಾಗಿ ಹಲವಾರು ಬಾರಿ ಅವರು ಕವಿತೆಗಳನ್ನು ರಚಿಸಬೇಕಾಗುತ್ತಿತ್ತು.
ಕೆಲವೊಮ್ಮೆ ಪದಗಳನ್ನು ಹೇಳುತ್ತಾ ಪ್ರಾಸಕ್ಕಾಗಿ ಅವರು ತಡಕಾಡುತ್ತಿದ್ದಾಗ ನನ್ನ ಮನಸ್ಸಿಗೆ ಸರಿ ಎಂದು ಕಂಡ ಶಬ್ದಗಳನ್ನು ಹೇಳಿ “ಇದು ಸರಿಯಾಗದೆ?” ಎಂದು ಕೇಳಿದ್ದೆ. “ಸರಿ” ಎಂದು ಅವರು ನುಡಿದಾಗ ಸಂತೋಷಗೊಂಡಿದ್ದೆ.
ಅಂತೆಯೇ, ಕೆಲವು ಬಾರಿ ಪ್ರಾಸಬದ್ಧ ಶಬ್ದಗಳ ಸೂಚನೆಗೆ ಹೊರಟಾಗ ಅವರೇ ವಿಪರೀತ ಅರ್ಥ ಬರುವ ಶಬ್ದಗಳನ್ನು ಹೇಳಿ “ಈ ಶಬ್ದದ ಅರ್ಥವೇನೆಂದು ತಿಳಿದುಕೊ” ಎಂದೂ ಹೇಳಿದ್ದ ಘಟನೆಗಳು ನೆನಪಿಗೆ ಬರುತ್ತವೆ.
ಇರಲಿ.
ಬರಿಯ ಶ್ರಾವಕನಾಗಿ ತಾಳಮದ್ದಳೆಗಳಲ್ಲಿ ಭಾಗವಹಿಸುವ ಕಾಲವು ಕಳೆದು, ಮುಂದಿನ ಹಂತಕ್ಕೆ ಕಾಲಿಕ್ಕುವ ಅವಕಾಶವೂ ನನಗೆ ಬೇಗನೆ ದೊರೆಯಿತು.
ಯಕ್ಷಗಾನದ ಸೂತ್ರಧಾರಿ ಭಾಗವತರ ಹಿಂದೆಯೇ ಕುಳಿತು ವೀರರಸದ ಪದ್ಯಗಳು ಬಂದಾಗಲೆಲ್ಲಾ ಚೆಂಡೆಯ ಪೆಟ್ಟಿಗೆ ಸರಿಯಾಗಿ (ಕಂಚಿನ) ಚಕ್ರತಾಳದ ಪೆಟ್ಟುಗಳನ್ನು ಹೊರಡಿಸುವ ಕೆಲಸ ಮೊದಲನೆಯ ಬಾರಿಗೆ ನನಗೆ ಊರಿನ ಒಂದು ಕೂಟದಲ್ಲೇ ಸಿಕ್ಕದಿನ, ಯಕ್ಷಗಾನ ‘ಕಲಾವಿದ’ನಾಗಿ ಆ ರಂಗಕ್ಕೆ ಪಾದಾರ್ಪಣ ಮಾಡಿದೆ ಎಂಬ ಭಾವನೆ ನನ್ನ ಮಟ್ಟಿಗೆ ಬಂತು.
ವೀರರಸದ ಪದ್ಯಗಳು ಹೆಚ್ಚಾಗಿ ಮಾರವಿ ರಾಗದಲ್ಲಿ (ಏಕತಾಳ) ಇರುತ್ತವೆ. ಪ್ರತಿಯೊಂದು ಪ್ರಸಂಗದಲ್ಲೂ ಕಡಿಮೆ ಎಂದರೆ ನೂರು ಪದ (ಪದ್ಯ)ಗಳಾದರೂ ವೀರರಸದಲ್ಲಿ ಇಲ್ಲವೆಂದಾದರೆ, ಈ ಪ್ರಸಂಗ ನೀರಸವಾದುದೆಂದೇ ರಸಿಕರ ಭಾವನೆ.
ಲಯವಿಲ್ಲದ ತಾಳ
ನನಗಂತೂ, ಆಗಿನ ದಿನಗಳಲ್ಲಿ ಒಂದು ಪದ ಕಳೆದು ಇನ್ನೊಂದು ಬರಬೇಕಾದರೆ ಬಹಳ ಹೊತ್ತಾಗುತ್ತಿದೆ ಎನಿಸುತ್ತಿತ್ತು. ನನ್ನ “ಪ್ರೌಢಿಮೆ”ಯ ಪ್ರದರ್ಶನಕ್ಕೆ ಸಿಗುವ ಅವಕಾಶ ಬಹಳ ಕಡಿಮೆ ಎಂದೇ ಸಂಕಟವಾಗುತ್ತಿತ್ತು.
ನನ್ನ ಉತ್ಸಾಹ ಹೆಚ್ಚಿ, ಎಷ್ಟೋ ಬಾರಿ ಲಯವಿಲ್ಲದೆ ಚಕ್ರತಾಳ ಬಾರಿಸಿ ಹಿರಿಯರಿಗೆ ಕೊಟ್ಟ ಉಪಟಳದ ಕಥೆ ಕೇಳಬೇಕಾದರೆ ಕೆಲವು ವರ್ಷಗಳೇ ಸಂದುಹೋಗಿದ್ದುವು.
ಮನೆಯ ಮಾಳಿಗೆಯಲ್ಲಿ ತಮ್ಮನನ್ನು ಕೂಡಿಹಾಕಿ ಪ್ರಸಂಗ ಪುಸ್ತಕಗಳನ್ನು ಓದಿ ಅರ್ಥ ಹೇಳುವುದೂ ನಡೆದಿತ್ತು. ಅರ್ಥ ಅಸಂಬದ್ಧವಾಗಿ ಅನರ್ಥವಾದರೂ ಆಗಿನ ದೃಷ್ಟಿಯಲ್ಲಿ ಅದೇ ಸರಿಯಾಗಿತ್ತು.
ಸಹೋದರ ಕೂಟ
ಹಲವು ಕೂಟಗಳಲ್ಲಿ ಸೂತ್ರಧಾರರ ಹಿಂದೆ (ಚಕ್ರತಾಳ ಹಿಡಿದು!) ಕುಳಿತು ಮನೆ ಮಾಳಿಗೆಯ ‘ಸಹೋದರ ಕೂಟ’ಗಳನ್ನು ನಡೆಸಿ ನೋಡಿ ಅನುಭವ ಪಡೆದೆನೆಂದೇ ನನಗನಿಸಿದಾಗ, ನನ್ನ ಅನುಭವವನ್ನು ಪ್ರಯೋಗಿಸಿ ನೋಡಬೇಕೆಂಬ ಆಸೆಯೂ ಆಗುತ್ತಿತ್ತು.
ಆಸೆ ತೀರಿಸಿಕೊಳ್ಳಲು ಅವಕಾಶಗಳನ್ನು ನಾನೇ ಹುಡುಕಿಕೊಳ್ಳುತ್ತಿದ್ದೆ.
ಮನೆಯಲ್ಲಿ ನನ್ನ ತಮ್ಮನನ್ನು ಹುಡುಗರ ಕೂಟಕ್ಕೆ ಎಳೆದುಕೊಳ್ಳಲು ಶ್ರಮವೇನೂ ಇರಲಿಲ್ಲ. ನಮ್ಮ ಬಯಲಿನ ಇತರ ಕೆಲವು ಮಂದಿ ಸಂಗಡಿಗರನ್ನೂ ಒಟ್ಟುಗೂಡಿಸಿ ನಾವು ನಮ್ಮದೇ ಆದ “ತಾಳಮದ್ದಳೆ”ಗಳನ್ನು ನಡೆಸುತ್ತಿದ್ದೆವು.
ಅಂದಿನ ಕೂಟಗಳಲ್ಲಿ ರಾಕ್ಷಸ ಪಾತ್ರಗಳ ಅರ್ಥ ಹೇಳುತ್ತಿದ್ದ ನನಗಿಂತ ಹಿರಿಯ- ಆದರೂ ಸಂಗಡಿಗನ ಸಾಲಿನಲ್ಲೇ ಇದ್ದ- ಒಬ್ಬರು ಗೆಳೆಯರು ಇಂದಿಗೂ ಅದೇ ರೀತಿಯ ಉತ್ಸಾಹವನ್ನು ಯಕ್ಷಗಾನದ ಬಗ್ಗೆ ತೋರಿದ್ದಾರೆ; ತೋರುತ್ತಲಿದ್ದಾರೆ (ಕುರಿಯ ಗುತ್ತು ಮಂಞಣ್ಣ ಶೆಟ್ಟಿ ಎಂದು ಅವರ ಹೆಸರು).
ಕೂಟಗಳಲ್ಲಿ ಹೆಚ್ಚಾಗಿ ನನ್ನ ತಮ್ಮನೇ ಭಾಗವತನಾಗಿರುತ್ತಿದ್ದ. ಅವನ ಸ್ವರ ಸಂಗೀತಯೋಗ್ಯವಾಗಿದ್ದರೂ, ಕೆಲವೊಮ್ಮೆ ನನ್ನ ನಿರ್ದೇಶನಾಧಿಕಾರವನ್ನು ತೋರಿಸುವ ಹುಮ್ಮಸ್ಸಿನಿಂದ ನಾನೇ ಭಾಗವತನಾಗಿ ಅವನು ಅರ್ಥಧಾರಿಯಾಗುವಂತೆ ಮಾಡಿದ್ದಿದೆ.
ಕೆಲವು ದಿನಗಳಲ್ಲಿ ನಮ್ಮ ಕೂಟಗಳಿಗೆ ಸಾಕಷ್ಟು ಜನರು ಸಿಗುತ್ತಿದ್ದರು. ಜನ ಕಡಿಮೆಯಾದರೆ ನಾವು ನಾವೇ ಪಾತ್ರಗಳನ್ನು “ಹರಿಹಂಚು” ಮಾಡಿಕೊಳ್ಳಲೂ ಸಿದ್ಧರೇ.
ಎಷ್ಟೋ ಬಾರಿ ನಮ್ಮ ಕೂಟಗಳೆಲ್ಲದರಲ್ಲೂ ಪ್ರೇಕ್ಷಕ ಸ್ಥಾನದಲ್ಲೇ ಭಾಗವಹಿಸಲು ಮುಂದಾಗುತ್ತಿದ್ದ ನನ್ನ ಇಬ್ಬರು ತಂಗಿಯರನ್ನೂ ಅರ್ಥಧಾರಿಗಳಾಗಿರೆಂದು ಒತ್ತಾಯಿಸುವ ಪ್ರಮೇಯ ಬರುತ್ತಿತ್ತು.
ನನ್ನ ತಂಗಿಯರಲ್ಲಿ ಹಿರಿಯವಳು ನನ್ನ ಒತ್ತಾಯಕ್ಕೆ ಕಟ್ಟು ಬಿದ್ದು ಓದಲು ತಿಳಿಯದಿದ್ದರೂ ಹಲವಾರು ಬಾರಿ ಪ್ರಸಂಗಗಳ ಪದ್ಯಗಳನ್ನು ಓದಿ ಹೇಳಲು ಪ್ರಯತ್ನಿಸಿ ಸಹಕರಿಸಿದ್ದಳು.
ಆದರೆ, ಹಾಗೆ ಓದಲು ಅವಳನ್ನು ಕೇಳಿಕೊಂಡಾಗಲೆಲ್ಲಾ ‘ಯಕ್ಷಗಾನದಲ್ಲಿ ಯಾವ ತೆರದಲ್ಲಾದರೂ ಸ್ತ್ರೀಯರು ಭಾಗವಹಿಸುವ ಕ್ರಮವಿಲ್ಲವಲ್ಲ! ನಾನೊಂದು ಅಪಚಾರವನ್ನು ಎಸಗುತ್ತಿರುವೆನೆ?’ ಎಂದು ಮನಸ್ಸು ಕುಟುಕಿ, ಕೂಟವನ್ನೇ ಸಂಕ್ಷಿಪ್ತಗೊಳಿಸಿ ಮುಗಿಸಿದ್ದೂ ಇದೆ.
ಕೇಳಿ ಕೇಳಿ ಬಾಯಿಪಾಠವಾಗಿದ್ದ ಪದಗಳು, ತಿಳಿದುಕೊಂಡಿದ್ದ ಅರ್ಥ, ಇವುಗಳಿಂದಾಗಿ ನಮ್ಮ ಕೂಟ ತನ್ನಿಂದ ತಾನೇ ಒಂದು ಮಟ್ಟವನ್ನು ಮುಟ್ಟಿತ್ತು.
ನೆನಪಿನ ಅಣಕು
ಆಗಿನ ಪ್ರಸಂಗಗಳಲ್ಲಿ ದಿವಂಗತ ಶ್ರೀ ಪೆರುವಡಿ ಸಂಕಯ್ಯ ಭಾಗವತರು ರಚಿಸಿದ್ದ “ತುಳು ಪಂಚವಟಿ” ಪ್ರಸಂಗ ನನಗೆ ಅತಿ ಪ್ರಿಯವಾಗಿತ್ತು. ನಮ್ಮ ಸುತ್ತಿನ ಪರಿಸರದಲ್ಲಿ ತುಳುಭಾಷೆಯ ಬಳಕೆಯೇ ಹೆಚ್ಚಾಗಿ ಇದ್ದುದರಿಂದ ಅದು ಸುಲಭವಾಗಿ ಅರ್ಥವಾಗುತ್ತಿತ್ತು.
ಚೆಂಡೆಯ ನಾದದ ಆಕರ್ಷಣೆಯಂತೂ ನನಗೆ ಅವರ್ಣನೀಯ. ಆಟಗಳಿಗೆ ಹೋದ ಮರುದಿನ ಕುಣಿದು ಆರ್ಭಟಿಸಿ ನಾವು ಅಣ್ಣ ತಮ್ಮಂದಿರಿಬ್ಬರೂ ಮನೆಯನ್ನೇ ಅಡಿಮೇಲು ಮಾಡಿದ್ದಿದೆ.
ಕುಣಿತ – ಕಲಿಸಿದುದಲ್ಲ; ಕಲಿತುದೂ ಅಲ್ಲ, ಕಂಡ ನೆನಪಿನ ಅಣಕು ಅಷ್ಟೆ.
ಕೂಟಗಳು ಎಷ್ಟೇ ಗುಟ್ಟಾಗಿ ನಡೆದಿದ್ದರೂ ನಮ್ಮ ತೀರ್ಥರೂಪರಿಗೆ ಅವುಗಳ ಸುಳಿವು ಸಿಕ್ಕಿತ್ತು. ನಾವು ನಿರೀಕ್ಷಿಸಿದ ಬಯ್ಗಳ ಬದಲಿಗೆ, ಅವರು ನಮ್ಮನ್ನು ಪ್ರೋತ್ಸಾಹಿಸಿದುದು, ನನ್ನ ಆಸೆಯ ಹಕ್ಕಿ ಗರಿಗೆದರುವಂತಾಯಿತು.
ಮಗು ಅರ್ಥ ಹೇಳುತ್ತಾನೆ…
ತೀರ್ಥರೂಪರ ಕವಿತೆಗಳಲ್ಲಿ ‘ಕುಕ್ಕುಟಾಪುರ’ವೆನಿಸಿ ಮೆರೆದ ಕೋಳ್ಯೂರು ನಮ್ಮ ಬಯಲಿನಂತಹ ಹತ್ತಾರು ಬಯಲುಗಳಿಗೆ ದೈವ ಕೇಂದ್ರ. ಅಲ್ಲಿನ ‘ಮಂಡಲಪೂಜೆ’ ಎಂದರೆ ಸುತ್ತಿನ ಹತ್ತು ಗ್ರಾಮಗಳಲ್ಲೂ ಪ್ರಸಿದ್ಧವಾಗಿತ್ತು. ಕೆಲವರು ಆಸಕ್ತರಿಂದಾಗಿ ಜಾತ್ರೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ (ಆ ಹೆಸರಿನಿಂದಲ್ಲವಾದರೂ) ಅಲ್ಲಿ ನಡೆಯುವುದಿತ್ತು. ನಮ್ಮತ್ತ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಪುರಾಣವಾಚನ, ಹರಿಕಥೆ, ತಾಳಮದ್ದಳೆಗಳಿಗೆ ಮಾತ್ರ ಮುಕ್ತಾಯಗೊಳ್ಳುತ್ತಿದ್ದವು. ಆಗಿನ ಕಾಲದಲ್ಲಿ ಹತ್ತು ಸಮಸ್ತರು ಭಾಗವಹಿಸಿದ ಚಟುವಟಿಕೆಗಳೆಲ್ಲ ಅಲ್ಲೇ ನಡೆಯಬೇಕು.
ಚಟುವಟಿಕೆಯ ಕಾರ್ಯಕ್ರಮಗಳು ಏನಿದ್ದರೂ, ತಂದೆಯವರು ಪ್ರಮುಖ ಕಾರ್ಯಕರ್ತರಲ್ಲೊಬ್ಬರಾಗಿರುವಾಗ, ನಮಗೆ ಸುದ್ದಿ ಸಿಗದಿರುತ್ತದೆಯೆ? ನನ್ನ ಜೊತೆಯವರೊಂದಿಗೆ ನಾನೂ ಅಲ್ಲಿ ಹಾಜರಾಗುತ್ತಿದ್ದೆ. ಮನೆಯಿಂದ ಕೋಳ್ಯೂರಿಗೆ ಇರುವ ನಾಲ್ಕು ಮೈಲು ದೂರವೇನು ಮಹಾ? ಬಯಲಿನ ತುದಿಗೆ ಬಂದು, ಇನ್ನೊಂದು ಬಯಲು ಕಳೆದ ಮೇಲೆ, ಹೊಳೆಯನ್ನು ದಾಟಿ, ಒಂದು ಗುಡ್ಡವನ್ನು ಏರಿ, ನಡುವೆ ಇದ್ದ ತಟ್ಟಿನಲ್ಲಿ ಅಷ್ಟು ದೂರ ನಡೆದು ಗುಡ್ಡ ಇಳಿದರೆ ಆಯಿತು. ಕೋಳ್ಯೂರ ದೇವಸ್ಥಾನ ಕಾಣಿಸುತ್ತದೆ.
ಅಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಒಂದು ಕೂಟ ನಡೆಯಲಿತ್ತು. ಬರಲಿರುವವರ ಹೆಸರುಗಳನ್ನು ಕೇಳಿದ ತರುವಾಯ ಎಂತಹ ರಸದೌತಣ ನಮಗಾಗಬಹುದು ಎಂದು ನಾನೂ ಯೋಚಿಸದ್ದೆ.
ಹಾಡುಗಾರಿಕೆ ಶ್ರೀ ಬಲಿಪ ನಾರಾಯಣ ಭಾಗವತರು (ಈಗ ಅವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ). ಅವರಿಗೆ ಸರಿಸಮರಾದ ಶ್ರೀ ಕೆಮ್ಮಣ್ಣು ನಾರ್ಣಪ್ಪಯ್ಯನವರ ಮೃದಂಗ-ಚೆಂಡೆಗಳು. ಅರ್ಥದಾರಿಗಳೂ ಅವರಂತೆ ಪ್ರಸಿದ್ಧರೇ. ಶ್ರೀ ಬಳ್ಳಮಜಲು ರಂಗಪ್ಪಯ್ಯ, ಕವಿ ಶ್ರೀಬಡಕಮೈಲು ಪರಮೇಶ್ವರಯ್ಯ, ಶ್ರೀ ಹೊಸಹಿತ್ಲು ಗಣಪತಿ ಭಟ್ಟರು, ಶ್ರೀ ಕುಂಜಾರು ರಾಮಕೃಷ್ಣಯ್ಯ, ದಿ. ಮಂಕುಡೆ ಬಳ್ಳುಕ್ರಾಯರು. ಇವರ ಅರ್ಥಗಳನ್ನುಕೇಳಲೆಂದು ಸಾರಿಗೆ ಸಂಪರ್ಕ ಅಷ್ಟು ಸುಲಭವಲ್ಲದ ಆ ಕಾಲದಲ್ಲೂ ಎಷ್ಟೋ ದೂರದಿಂದ ಜನರು ಬರುತ್ತಿದ್ದರು.
ಕೂಟದ ದಿನ ಬಂದಿತು.
ಪ್ರಸಂಗ: ನಂದಳಿಕೆ ಲಕ್ಷ್ಮೀ ನಾರ್ಣಪ್ಪಯ್ಯ ಅವರು (ಮಹಾಕವಿ ಮುದ್ದಣ್ಣ) ರಚಿಸಿದ “ಕುಮಾರ ವಿಜಯ”. ಭಾಗವಹಿಸುವವರ ಹೆಸರು ಮತ್ತು ಅವರ ಪಾತ್ರಗಳ ವಿವರಗಳನ್ನು ಸಾರಲಾಯಿತು.
ಸಣ್ಣಪುಟ್ಟ ಪಾತ್ರಗಳು ಸ್ಥಳೀಯ ಕಲಾಸಕ್ತರಿಗೇ ದೊರೆಯುವುದು ರೂಢಿ.
ಸಂತೋಷ – ಅಳುಕು
ಭಾನುಗೋಪನ ತಾಯಿ ಪದ್ಮಕೋಮಲೆಯ ಪಾತ್ರ ನನಗೆ ಎಂದಾಗ, ಸಂತೋಷವೂ ಆಯಿತು; ಜೊತೆಯಲ್ಲೇ ಅಳುಕೂ ಮೂಡಿತು.
ಕುಟುಂಬದವರಲ್ಲಿ ಹಿರಿಯರೆಲ್ಲ ನನ್ನನ್ನು ‘ಮಗು’ ಎಂಬ ಅಡ್ಡ ಹೆಸರಿನಿಂದ ಸಂಬೋಧಿಸುವುದು ರೂಢಿ. ‘ಮಗು ಅರ್ಥ ಹೇಳುತ್ತಾನೆ ಅಂತೆ’ ಎಂಬ ಮಾತು ಸುತ್ತಲಿನ ಬೈಲುಗಳಿಗೆ ಹಬ್ಬಿತ್ತು. ಆದುದರಿಂದಲೇ ಅಂದು ಸ್ಥಳೀಯ ಕಲಾವಿದರಲ್ಲಿ ನಾನೂ ಒಬ್ಬನೆಂದು ಪರಿಗಣಿಲ್ಪಟ್ಟೆ. ಸರಿ, ಭಾಗವಹಿಸಲು ನನಗೂ ಅವಕಾಶ ಸಿಕ್ಕಿತೆಂಬುದಕ್ಕೆ ಸಂತೋಷ.
ಆದರೆ 15 ವರ್ಷ ಪ್ರಾಯದ ‘ಮಗು’ ನಾನು. ಹಳೆಯ ಹುಲಿಗಳೆನಿಸಿದವರ- ಜಿಲ್ಲೆಯಾದ್ಯಂತ ಹೆಸರು ಪಡೆದವರ- ಎದುರು ಮಾತನಾಡುವುದೆಂದರೆ? ಏನಾದರೂ ಹೆಚ್ಚು ಕಡಿಮೆಯಾದರೆ? ಅದಕ್ಕಾಗಿ ಅಳುಕು.
ತಾಳಮದ್ದಳೆ ಪ್ರಾರಂಭವಾಗಿ ನನ್ನ ಪಾತ್ರದ ಪದ್ಯ ಬರುವವರೆಗೂ ನಾನು ಮೈಯೆಲ್ಲ ಕಿವಿಯಾಗಿ ಕುಳಿತಿದ್ದೆ. ಸಾಸಿವೆ ಬಿದ್ದರೂ ಸದ್ದು ಕೇಳುವಂತಹ ವಾತಾವರಣವನ್ನು ಶ್ರಾವಕರು ನಿರ್ಮಿಸಿದ್ದರು. ತುಂಬಿದ ಸಭೆಯಲ್ಲಿ ಕಲಾವಿದರ ಹೊರತು ಇತರ ಯಾರ ಧ್ವನಿಯೂ ಇರಲಿಲ್ಲ.
ಪದ್ಮ ಕೋಮಲೆಯ ಮೊದಲನೇ ಪದ್ಯವನ್ನು ಭಾಗವತರು ಹಾಡತೊಡಗಿದೊಡನೆ, ನನ್ನ ಮೈ ಬೆವರತೊಡಗಿತು.ಏನೇನೋ ಎಣಿಸಿಕೊಂಡು ಮೈ ನಡುಕ ಬರಿಸಿಕೊಂಡೆ. ನನ್ನನ್ನೇ ಗಮನಿಸುತ್ತಿದ್ದು, ನನ್ನ ಕಡೆ ನೋಡಿದ ಭಾಗವತರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು.
ಪರವಾಗಿಲ್ಲ ಹುಡುಗ
ಒಂದು ಬಾರಿ ಗಂಟಲು ಸರಿ ಮಾಡಿಕೊಂಡು, ಕೆಮ್ಮಿ, ನನ್ನ ಗಮನವನ್ನು ಅವರೆಡೆಗೆ ಸೆಳೆದರು. ಕಣ್ಸನ್ನೆಯಿಂದ ಧೈರ್ಯ ಇತ್ತರು.
ಪದ್ಮ ಕೋಮಲೆಯ ಪ್ರವೇಶದ ಪದ್ಯಕ್ಕೆ ಇದ್ದ ಅರ್ಥವನ್ನು ಹೇಗಾದರೂ ಹೇಳಿ ಮುಗಿಸಿದೆ. ಸಭೆ ಮೊತ್ತ ಮೊದಲನೆಯ ಬಾರಿ ಕೇಳಿಸಿದ ಮಾತುಗಳಿಗೆ ಪ್ರೋತ್ಸಾಹದ ಪ್ರತಿಕ್ರಿಯೆಯನ್ನೇ ತೋರಿತು. ಮುಂದಿನ ಪದ್ಯಗಳಿಗೆ ಅರ್ಥ ಹೇಳಲು ಅಷ್ಟೊಂದು ತೊಡಕಾಗಲಿಲ್ಲ.
ಅಂತೂ ಅಂದು ಬಂದಿದ್ದ ಮಹನೀಯರ ಬಾಯಿಂದ ‘ಪರವಾಗಿಲ್ಲ ಹುಡುಗ’ ಎನ್ನಿಸಿಕೊಂಡೆ. ನನ್ನ ಹೊಸ ಹುಚ್ಚನ್ನು ತಂದೆಯವರೂ ಗಮನಿಸಿದರು.
ಇದೊಂದು ಹುಚ್ಚು ಎಂದು ನುಡಿದರಾದರೂ, ಹುಚ್ಚಿನ ಆ ಬಳ್ಳಿಗೆ ಕಿಚ್ಚು ಹಚ್ಚಲಿಲ್ಲ. ನೀರನ್ನೆರೆದು ಪ್ರೋತ್ಸಾಹಿಸಿದರು. ಅದೊಂದು ದೃಷ್ಟಿಯಲ್ಲಂತೂ ನಾನು ಪುಣ್ಯವಂತ.
ಸಾಮಾನ್ಯವಾಗಿ ನಮ್ಮೂರಲ್ಲಿ ಯಕ್ಷಗಾನಕ್ಕೆ ಧಾರಾಳ ಪ್ರೋತ್ಸಾಹವಿದ್ದರೂ, ಅದು ದೂರದಿಂದ ನೋಡಿ ಆನಂದಿಸಬಹುದಾದ ಬೆಟ್ಟವೆಂದೇ ಭಾವನೆ ಬೆಳೆದಿತ್ತು. ಬಳಿಗೆ ಹೋಗಬಾರದು- ಒಳಗೆ ಸೇರಿ ಅಲ್ಲಿ ಬೆಳೆಯಬಾರದು ಎನ್ನುವವರೇ ಹೆಚ್ಚಾಗಿದ್ದರು.
ಯಕ್ಷಗಾನ (ತಾಳಮದ್ದಳೆ) ಕೂಟಗಳಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಭಾಗವಹಿಸಿ ಮನೆಗೆ ನಿದ್ದೆ ಕಳೆಯಲು ಬಂದರೂ, ಪ್ರಸಂಗ- ಅರ್ಥ- ಪಾತ್ರಗಳ ಗುಂಗಿನಲ್ಲೇ ಇರುವುದು, ಒಂದಷ್ಟು ಮಾತು ಬಲ್ಲವನ ಮಟ್ಟಕ್ಕೆ ಏರಿದ ತರುವಾಯ ಎದುರಾಳಿ ಆಗುವವನ ಮುಖಭಂಗ ಮಾಡುವುದು ಹೇಗೆ ಎಂಬ ಯೋಚನೆಯ ಸುಳಿಯಲ್ಲೇ ಸುತ್ತಿ ಸಲ್ಲದ ಸಾಹಿತ್ಯದ ಸಂಗ್ರಹಕ್ಕೆ ಹೊರಡುವುದು, ಯಾರಿಗೂ ಅರ್ಥವಾಗದ ಕ್ಲಿಷ್ಟ ಪದಗಳನ್ನೇ ಸಂಗ್ರಹಿಸಿ ಹೇಳುವುದು, ಇವೆಲ್ಲ ಸಾಮಾನ್ಯ ಅಭ್ಯಾಸಗಳೆಂದೇ ಜನರಲ್ಲಿ ಬೆಳೆದಿದ್ದ ಭಾವನೆ.
ಅಂದಿನ ವೇಷಧಾರಿಗಳ ಸ್ಥಿತಿ
ಇನ್ನು ಬಯಲಾಟಗಳಲ್ಲಿ ವೇಷಧಾರಿಯಾಗಿ ಮುಂದುವರಿಯಲೆಂದು ಹೊರಟವನ ಬಗ್ಗೆ ಮತ್ತು ಹೆಚ್ಚಿನ ಕಳವಳ ಇರುತ್ತಿತ್ತು. ತಾಳಮದ್ದಳೆಯಲ್ಲಾದರೆ, ಕೂಟ ಮುಗಿದು ಮನೆಗೆ ಬರುವ ಹವ್ಯಾಸವಾದರೂ ಇರುತ್ತದೆ. ಅದೊಂದು ಸಂಭಾವನೆ ತಾರದ ಹವ್ಯಾಸ ಎಂದಾದ ಕಾರಣ ಜೀವನೋಪಾಯಕ್ಕೆ ಬೇರೆಯೇ ಒಂದು ವೃತ್ತಿಯನ್ನು ಅವಲಂಬಿಸಿರಬೇಕಾಗುತ್ತದೆ. ಆಟದಲ್ಲಾದರೆ ಹಾಗಲ್ಲ. ಇಂದು ಒಂದು ಊರಿನಲ್ಲಿ ಇದ್ದರೆ ನಾಳೆ ಇನ್ನೊಂದು ಗ್ರಾಮಕ್ಕೆ ಪಯಣ. ಮನೆ ಬಿಟ್ಟ ಮಗ ತಿರುಗಿ ಬರಬೇಕಾದರೆ ಆರು ತಿಂಗಳುಗಳು ಕಳೆದೇ ಸರಿ. ಅಲ್ಪವಾದರೂ, ಕಾಸು ಕೈಯಲ್ಲಿ ತಿರುಗುವ ಕಾರಣ, ಕುಟುಂಬದ ನಿಯಂತ್ರಣಕ್ಕೆ ಯಾವುದೇ ರೀತಿಯ ಅವಕಾಶ ಅಲ್ಲಿ ಇಲ್ಲ- ಇತ್ಯಾದಿ ಕಾರಣಗಳು, ಕಲಾವಿದನಾಗ ಬಯಸುವವನಿಗೆ ಹಿರಿಯರು ಅಡ್ಡಿ ತಂದೊಡ್ಡುವ ಹಿನ್ನೆಲೆಗಳಾಗಿದ್ದುವು.
ಅಂದಿನ ಕಾಲದ ಯಕ್ಷಗಾನ ಮೇಳಗಳ ಮತ್ತು ವೇಷಧಾರಿಗಳ ಸ್ಥಾನ ಶೋಚನೀಯವಾಗಿತ್ತು. ಕಲಾವಿದರು ಎಲ್ಲರ ಪರಿಸ್ಥಿತಿಯೂ ಹಾಗೆಯೇ. ರಾತ್ರೆಯ ಹೊತ್ತು ರಾಜಾಧಿರಾಜರಾಗಿ ಮೆರೆದ ಕಲಾವಿದರು, ‘ಸ್ವರ್ಗ ವೈಭವದ ಭೋಗವನ್ನುಣ್ಣುವುದಾಗಿ’ ಸಾರಿದ್ದ ದೇವೇಂದ್ರರು, ಹಗಲಿನಲ್ಲಿ ಒಂದು ಹೊತ್ತಿನ ಗ್ರಾಸಕ್ಕಾಗಿ ಪರದಾಡಬೇಕಾಗುತ್ತಿತ್ತು.
ಮರದಡಿಯಲ್ಲಿ ಮೇಳಗಳ ಬಿಡಾರ ಇರುವುದು ದೈನಂದಿನ ಸಾಮಾನ್ಯ ಘಟನೆ. ನಾಲ್ಕು ಬಿದಿರ ತುಂಡುಗಳನ್ನು ಊರಿ, ಅವುಗಳಿಗೆ ಮಾವಿನ ಎಲೆಗಳ ಅಲಂಕಾರ ಮಾಡಿದ ‘ರಂಗಮಂಟಪ’ದಲ್ಲಿ ಬಯಲಾಟ ನಡೆಯುವುದು ಎಂದಿನ ಅನುಭವ.
ಆರು ತಿಂಗಳ ಅಲೆದಾಟದಲ್ಲಿ ದೊರೆತು ಉಳಿದ ದುಡಿಮೆಯ ಹಣ, ನಿರುದ್ಯೋಗದ ಆರು ದಿನಗಳಿಗೂ ಸಾಕಾಗುತ್ತಿರಲಿಲ್ಲ.
ದೂರದಿಂದ ವೇಷಗಳನ್ನು ನೋಡಿ ಆನಂದಿಸುವ ಊರವರಿಗೂ, ಮೇಳದವರು ಎಂದರೆ ತಿರಸ್ಕಾರ. ಅವರಿಗೆ ಸಮಾಜ ಕೊಡುವ ಗೌರವ- ನಕಾರ.
ಮರ್ಯಾದಸ್ಥರು ಮರೆಯಬೇಕಾದ ಪ್ರಪಂಚವೇ ಅದಾಗಿತ್ತು.
ಆದರೆ ತೀರ್ಥರೂಪರು ಆ ಪ್ರಪಂಚಕ್ಕೆ ಧೈರ್ಯವಾಗಿ ಕಾಲಿರಿಸಿದ್ದಲ್ಲದೆ ಅದರ ಸುಧಾರಣೆಯಲ್ಲಿ ಆಸಕ್ತರಾಗಿದ್ದರು. ತಮ್ಮ ಮಿತ್ರವರ್ಗದವರೂ ಆಸಕ್ತಿ ವಹಿಸುವಂತೆ ಮಾಡಿದ್ದರು. ಸಣ್ಣ ಪುಟ್ಟ ಪರಿಮಾಣದಲ್ಲಾದರೂ ನಮ್ಮ ಮನೆಯಲ್ಲೇ ಯಕ್ಷಗಾನ (ತಾಳಮದ್ದಳೆ) ಕೂಟಗಳು ನಡೆಯುವಂತೆ ಮಾಡಿದ್ದರು.
ಮಾರ್ಗದರ್ಶನ
ನಾನು ಕೋಳ್ಯೂರಿನ ಕೂಟದಲ್ಲಿ ಭಾಗವಹಿಸಿದ ನಂತರ, ನನ್ನ ಆಸೆ, ಅವರ ಪ್ರೋತ್ಸಾಹದಿಂದಾಗಿ ಬೆಳೆಯಿತು. ಸರಿಯಾದ ಪ್ರೋತ್ಸಾಹವಿತ್ತು. ಆಗತ್ಯದ ವಿಮರ್ಶೆಗಳನ್ನೂ ಒದಗಿಸಿ ನನ್ನ ಅಭಿರುಚಿ ವಿಕಾಸಗೊಳ್ಳುವಂತೆ ಮಾಡಿದವರು ಅವರೇ.
ಯಕ್ಷಗಾನದಲ್ಲಿ ಅರ್ಥದ ಮಾತಿಗೆ ತೂಕವಿರಬೇಕು. ಯಾವ ರೀತಿಯ ಏರಿಳಿತವೂ ಇಲ್ಲದೆ, ಮೈಲುದ್ದದ ಮಾತುಗಳ ಮಾಲೆಯನ್ನು ಕಟ್ಟುವುದಕ್ಕೆ ಕಲಾವಿದನ ಪಾಂಡಿತ್ಯ ಸೀಮಿತಗೊಳ್ಳಬಾರದು. ರಸಪೋಷಣೆ- ಭಾವ ಪ್ರೇರಣೆಗಳು ಬೇಕಾದಲ್ಲಿ ಪಾತ್ರಗಳ ಪರಸ್ಪರ ಸಂಭಾಷಣೆಗೆ ಅವಕಾಶ ಇರಬೇಕು. ಎದುರಾಗಿ ಅರ್ಥಹೇಳುವವನು ಚಿಕ್ಕವನಾದರೂ, ಅವನಿಗೇ ಪ್ರೋತ್ಸಾಹ ದೊರಕಬೇಕು. ಕಥೆಯ ಸನ್ನಿವೇಶ ಕೇಳುವವರ ಕಣ್ಣೆದುರು ಮೈವೆತ್ತು ನಿಲ್ಲಬೇಕು ಎಂಬಿತ್ಯಾದಿ ಅಂಶಗಳನ್ನು ನಿದರ್ಶನಗಳೊಂದಿಗೆ ನನ್ನ ತಲೆಗೆ ತುರುಕಿದವರು ಅವರೇ.
ರೇಡಿಯೋ ನಾಟಕಗಳನ್ನು ನಾನು (ಈಚೀಚೆಗೆ) ಕೇಳಿದಾಗಲೆಲ್ಲ, ಅವರ ಉಪದೇಶಗಳ ನೆನಪು ಬರುತ್ತದೆ. ದಶಕಗಳ ಹಿಂದೆ ಅವರು ಹೇಳಿದ್ದ ಮಾತುಗಳು ಮರುಕಳಿಸುತ್ತವೆ.
ನಜ್ಜು ಗುಜ್ಜಾಗುವ ಪ್ರಹ್ಲಾದ….
ಮನೆಯಲ್ಲೊಂದು ದಿನ ಯಾವುದೋ ಶುಭಕಾರ್ಯ ನಿಮಿತ್ತ ನೆರೆಕರೆಯವರು ಸೇರಿದ್ದರು. ನಮ್ಮ ಊರಿನತ್ತ ಯಾವುದೇ ಕಾರ್ಯಕ್ಕಾಗಿ ಭೇಟಿ ಕೊಟ್ಟರೆ ‘ಉಂಡೊಡನೆ ಊರು ಬಿಡುವ ’ ಕ್ರಮವಿರುವುದಿಲ್ಲ.
ಆ ದಿನ ಸಂಜೆಯ ಹೊತ್ತಿಗೆ ತೆರಳುವವರು ತೆರಳಿದ ತರುವಾಯವೂ, ಕೆಲವರು ಸಮೀಪದವರು ಉಳಿದಿದ್ದರು. ಬಂಧುಗಳೂ ಇದ್ದರು.
ಊರಿನ ಹಲವು ಸಮಸ್ಯೆಗಳ, ಜನರ ನಡೆನುಡಿಯ ವಿಚಾರಗಳ ಚರ್ಚೆ ಮಾತುಕತೆಗಳಲ್ಲಿ ಆಗುತ್ತಿತ್ತು. ಅಂತೆಯೇ ಮಾತು ಮುಂದುವರಿದು ತಾಳಮದ್ದಳೆಯ ಕಡೆಗೂ ತಿರುಗಿತು. ಬರಿಯ ಮಾತಿನಿಂದ ಪಾತ್ರ ಪೋಷಣೆಯಾಗುವುದಿಲ್ಲ, ಸಜೀವ ಚಿತ್ರಣವಾಗುವುದಿಲ್ಲ ಎಂದು ಒಬ್ಬರು ಹೇಳಿದರು.
“ಪಾತ್ರ ಚಿತ್ರಣ ಬೇಕಾದರೆ ಬಯಲಾಟವನ್ನೇ ನೋಡಬೇಕು” ಎಂದರು ಇನ್ನೊಬ್ಬರು.
ಮಳೆಗಾಲ ಕಳೆದಿದ್ದು, ಮೇಳಗಳು ಹೊರಡುವುದಕ್ಕೆ ಇನ್ನೂ ಸಮಯವಿದ್ದುದಾಗಿ ನನ್ನ ನೆನಪು.
“ಅದಕ್ಕೆ ಬಯಲಾಟವೇ ಆಗಬೇಕೆಂದು ಏನು? ಅಭಿನಯದ ಸಾಮರ್ಥ್ಯವಿದ್ದರೆ, ಅತ್ಯುತ್ತಮ ಪಾತ್ರ ನಿರೂಪಣೆ ನಮ್ಮ ಕೈಯಿಂದಲೂ ಸಾಧ್ಯವಿದೆ!” ಎಂದರು ತಂದೆಯವರು.
“ಅದು ಹೇಗೆ?”
“ನಾನು ಎಣಿಸಿರುವ ಪ್ರಯೋಗಗಳನ್ನು ಇಂದು ಮಾಡಿ ನೋಡೋಣ” ಎಂಬ ಉತ್ತರ ಅವರಿಂದ ಬಂದಿತು.
ಅಂದಿನ ರಾತ್ರಿಯೇ, ಇದು ಸುಧಾರಣೆಯ ಒಂದು ಕ್ರಮವೆಂದು ಹೇಳಿಸಿಕೊಳ್ಳುವ ‘ಯಕ್ಷಗಾನ ನಾಟಕ’ದ ಮೊದಲ ಪ್ರಯೋಗ ನಮ್ಮಲ್ಲಾಯಿತು.
ನೆಲದಿಂದ ಮೂರಡಿ ಎತ್ತರಕ್ಕಿರುವ- ಸುಮಾರು ಐವತ್ತು ಅಡಿ ಉದ್ದ, ಆರು ಅಡಿ ಅಗಲದ- ನಮ್ಮ ಮನೆಯ ಜಗಲಿ, ಅಂದಿನ ನಾಟಕ ಶಾಲೆಯಾಯಿತು. ಸೀರೆಗಳ ಸಂಗ್ರಹದಿಂದ ಪರದೆಗಳು ತಯಾರಾದುವು.
ಪ್ರಸಂಗದ ಆಯ್ಕೆ, ಪಾತ್ರ ವಿತರಣೆಗಳೂ, ಮನೆಗೆ ಬಂದು ಉಳಿದಿದ್ದ ಸಾಕಷ್ಟು ಮಂದಿ ಕಲಾಸಕ್ತರಿಂದಾಗಿ ಸುಲಭದಲ್ಲೇ ಆದುವು. ಮೃದಂಗ-ಚೆಂಡೆ-ಜಾಗಟೆಗಳನ್ನು ಒದಗಿಸಿಕೊಳ್ಳುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ.
ವೇಷಭೂಷಣಗಳಿಗಾಗಿ ನಮ್ಮೆಲ್ಲ ಬುದ್ಧಿಶಕ್ತಿಯನ್ನು ವೆಚ್ಚ ಮಾಡಬೇಕಾದ ಸಂದರ್ಭ ಬರಲಿಲ್ಲವೆನ್ನಿ. ಸೀತಾಪಹಾರದ ಕಥಾನಕವನ್ನೊಳಗೊಂಡಿದ್ದ (ಪಾರ್ತಿಸುಬ್ಬನವರ) “ಪಂಚವಟಿ” ಪ್ರಸಂಗವಾದ ಕಾರಣ, ರಾವಣನ ಪಾತ್ರಕ್ಕೆ ಕೂಡಾ ವೇಷಭೂಷಣಗಳ ಅರಸುವಿಕೆ ಅಗತ್ಯವಾಗಲಿಲ್ಲ.
ದೇಹ ಗಾತ್ರದಲ್ಲಿ ಕುಳ್ಳನಾಗಿದ್ದ ನನ್ನ ಪಾಲಿಗೆ ಸೀತೆಯ ಪಾತ್ರ ಬಂದಿತು.
ನಾವೆಲ್ಲ ಪಾತ್ರಧಾರಿಗಳೂ, ಸಂಪ್ರದಾಯಕ್ಕೆ ಅನುಗುಣವಾಗಿ ಶಿಖೆಯನ್ನು ಧರಿಸಿದ್ದವರು. ನನ್ನ ಕೂದಲು ತುರುಬು ಬಿಡಲಾಗುವಷ್ಟು ಇತ್ತು. ಸ್ತ್ರೀ ಪಾತ್ರ ನಿರ್ವಹಣೆ ಕಷ್ಟವಾಗಿರಲಿಲ್ಲ. ಜಟಾವಲ್ಕಲಧಾರಿಗಳಾದ ರಾಮ ಲಕ್ಷ್ಮಣರಿಗೂ ‘ಟೋಪನ್’ ಅಗತ್ಯ ಬೀಳಲಿಲ್ಲ.
ಅದುವರೆಗೂ, ತಾಳಮದ್ದಳೆಗಳಲ್ಲಿ ಮಾತು ಸರಾಗವಾಗಿ ಬಂದರೆ ಸಾಕಾಗಿತ್ತು. ಉಳಿದ ಅಂಗಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಅಂದು, ಅಡಿಯಿಂದ ಮುಡಿಯವರೆಗೂ ನನ್ನ ಅಂಗಾಂಗಗಳನ್ನು ನಿಯಂತ್ರಿಸಿ – ಸಭೆಗೆ ಬೆನ್ನು ತೋರಬಾರದು ಎಂಬಿತ್ಯಾದಿ ನಾಟಕದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು, ನನ್ನಿಂದಲೂ ಹಿರಿಯರಾದ ರಾಮನ ಪಾತ್ರಧಾರಿಯ ಎದುರು ಅಪಚಾರವಾಗದಂತೆ ಅಭಿನಯಿಸಲು ನನ್ನೆಲ್ಲ ಸಾಹಸವನ್ನೂ ಉಪಯೋಗಿಸಬೇಕಾಯಿತು. ಮನೆಯಂಗಳದಲ್ಲಿ ಹಾಕಲಾಗಿದ್ದ ತೆಂಗಿನ ಸೋಗೆ, ಚಾಪೆಗಳ ಮೇಲೆ ಕುಳಿತಿದ್ದವರೆಲ್ಲ ಪರಿಚಿತರು. ಆದುದರಿಂದ ಹೊಸ ಸಭೆಯ ಅಳುಕಿನ, ಜನ ಸಮೂಹದ ಸಭಾಕಂಪನದ ಬೆದರಿಕೆ ಇರಲಿಲ್ಲ. ಆದರೆ, ಸೇರಿದ ಸಮೀಪದವರಲ್ಲೇ ಪ್ರತಿ ವಾಕ್ಯದ ಒಂದೊಂದು ಸನ್ನಿವೇಶದ ವಿಮರ್ಶೆಯನ್ನು ಎಳೆಎಳೆಯಾಗಿ ಮಾಡಬಲ್ಲವರೂ ಇದ್ದ ಕಾರಣ ನಾನೆಲ್ಲೂ ಎಚ್ಚರ ತಪ್ಪುವಂತಿರಲಿಲ್ಲ.
ಹೊಸ ಪ್ರಯೋಗ
.ಅಂದಿನ ಪ್ರಸಂಗ, ಕಥಾಭಾಗದ ದೃಷ್ಟಿಯಿಂದ ಸಂಕ್ಷಿಪ್ತಗೊಳಿಸಿದ್ದುದೇ ಆದರೂ, ಬೆಳಗು ಮುಂಜಾನೆಯವರೆಗೂ ಯಶಸ್ವಿಯಾಗಿಯೇ ನಡೆಯಿತು. ಸೀತೆಯ ಪಾತ್ರ “ಚೆನ್ನಿತ್ತು” ಎಂದು ಯಕ್ಷಗಾನ ನಾಟಕವನ್ನು ನೋಡಿದವರು ಹೇಳಿದರು.
ಭಾಗವತರ ಹಾಡುಗಾರಿಕೆಯ ಹೊತ್ತಿನಲ್ಲಿ ನರ್ತನವಿಲ್ಲದೆ ಭಾವಪೂರ್ಣ ಅಭಿನಯದಿಂದ ‘ಪದ’ದ ಸನ್ನಿವೇಶವನ್ನು ವಿವರಿಸಿ, ತಿರುಗಿ ಅರ್ಥ ಹೇಳುವಾಗ ಸರಸ ಶೈಲಿಯ ಸಂಭಾಷಣೆಯಿಂದ ಅದನ್ನು ಚಿತ್ರಿಸುವುದು ಒಂದು ಉತ್ತಮ ಪ್ರಯೋಗವೆಂದೇ ನಮಗನಿಸಿತು. ಪ್ರಯೋಗದ ನಿರ್ದೇಶನವನ್ನು ವಹಿಸಿದ್ದ ತಂದೆಯವರಂತೂ ಬೆಳಗಿನ ಹೊತ್ತಿಗೆ ಆ ಪ್ರಯೋಗದ ಮುಂದಿನ ಹೆಜ್ಜೆಯ ಕನಸು ಕಾಣತೊಡಗಿದ್ದರು.
ನಮ್ಮ ಪ್ರಯೋಗ ನಡೆದ ಕೆಲವೇ ದಿನಗಳಲ್ಲಿ ನಮ್ಮದೇ ಆದ ಯಕ್ಷಗಾನ ಮಂಡಳಿಗಾಗಿ ಸಿದ್ಧತೆ ಪ್ರಾರಂಭವಾಯಿತು.
ನೃತ್ಯವಿಲ್ಲದ ಕಾರಣ, ದೃಶ್ಯಾವಳಿಗೆ ರಂಗಪರಿಕರಗಳು ಅಗತ್ಯವೆನಿಸಿದುದರಿಂದ ನಮ್ಮ ಪ್ರಯೋಗ “ನಾಟಕ”
ಎನಿಸಿಕೊಂಡಿತು. ಸಂಗೀತ ನಾಟಕಗಳಲ್ಲಿರುವ ಸಂಗೀತ ಭಾಗವತರ ಹಾಡುಗಾರಿಕೆಯಿಂದ ಮಾತ್ರವೆ ಒದಗುವ ಕಾರಣ ಇದು “ಯಕ್ಷಗಾನ ನಾಟಕ ” ಎನಿಸಿತು.
ಇತರ ನಾಟಕ ಕಂಪೆನಿಗಳ ಕಲಾಕುಶಲಿಗಳ ಸಹಾಯವನ್ನು ನಾವು ಯಾಚಿಸುವಂತಿರಲಿಲ್ಲ. ಅವರು ನಮ್ಮೂರಿಗೆ ಸಮೀಪ ಇರಲೂ ಇರಲಿಲ್ಲ. ಆದುದರಿಂದ, ತಂದೆಯವರು ನಮ್ಮೂರಿಗೆ ಸಮೀಪದಲ್ಲಿದ್ದ ‘ಎಲೆ ಮರೆಯ ಕಾಯಿ’ ಯಾದ ಕಲಾವಿದರೊಬ್ಬರ ನೆರವು ಪಡೆದು ಪರದೆ ಇತ್ಯಾದಿಗಳನ್ನು ಸಿದ್ಧಗೊಳಿಸಿದರು. ಸಾವಿರಾರು ರೂಪಾಯಿಗಳನ್ನು ಸುರಿದು ವೇಷ ಭೂಷಣಗಳೂ ಸಿದ್ಧವಾದುವು. ನಾವಾಡುವ ನಾಟಕಗಳೆಲ್ಲ ಪೌರಾಣಿಕ ಪ್ರಸಂಗಗಳಿಂದಲೇ ಆದ ಕಾರಣ, ವೆಚ್ಚದಲ್ಲಿ ಕೈ ಬಿಗಿತ ತೋರುವಂತಿರಲಿಲ್ಲ.
ನಮ್ಮ ಸಂಸ್ಥೆ
ಊರಿನ ದೇವರಾದ ಶಂಕರನಾರಾಯಣನ ಹೆಸರು ಹೇಳಿ ನಮ್ಮ ಸಂಸ್ಥೆ “ಶ್ರೀ ಶಂಕರ ನಾರಾಯಣ ಪ್ರಾಸಾದಿತ ಯಕ್ಷಗಾನ ಮಂಡಳಿ, ಕೋಳ್ಯೂರು” ಎಂಬ ನಾಮಧೇಯವನ್ನು ಹೊತ್ತುಕೊಂಡು ಒಂದು ಶುಭದಿನದಂದು ಪ್ರಾರಂಭ ಆಯಿತು.
ಮೊದಲನೆಯ ಪ್ರದರ್ಶನ ಕೋಳ್ಯೂರಿನಲ್ಲೇ. ಹೆಸರು ಕೊಟ್ಟ ದೇವರ ಸನ್ನಿಧಿಯಲ್ಲೇ ಪ್ರಾರಂಭಿಕ ಕಾರ್ಯಕ್ರಮ ನಡೆಯುವುದೂ ಯಕ್ಷಗಾನದ ರೂಢಿ. ಹಾಗೆ, ರಾಮಾಯಣದ ಪ್ರಾರಂಭದಲ್ಲಿನ “ಪುತ್ರಕಾಮೇಷ್ಟಿ- ಸೀತಾ ಸ್ವಯಂವರ”ದ ವರೆಗಿನ ಕಥಾಭಾಗವನ್ನು ಅಂದಿಗೆ ಆರಿಸಿಕೊಳ್ಳಲಾಯಿತು.
ಶಿವಧನುಸ್ಸನ್ನು ಮುರಿದ ರಾಮನನ್ನು ಲಜ್ಜೆಯಿಂದ ಬಾಗಿ ಬಳುಕಿ ಮಾಲೆ ಹಾಕಿ ವರಿಸಿದ ಅಂದಿನ ಸೀತೆ ನಾನು.ರಾಮನ ಕೈಹಿಡಿದ ಸೀತೆಯಂತೆ ಕೊನೆಯವರೆಗೂ ಅಶಾಂತಿಯ ಜೀವನವನ್ನೇ ಅನುಭವಿಸುವ ಅದೃಷ್ಟ ನನ್ನದಾಗುವುದೆಂದು ಅಂದು ಕನಸು ಕಂಡಿರಲಿಲ್ಲ. ಬಣ್ಣ ಬಳಿವ ಬದುಕನ್ನು ಮಾತ್ರ ವರಿಸಿದೆ ಎಂದುಕೊಂಡಿದ್ದೆ.
ಸಂಘ ಹುಟ್ಟಿ, ಕಟ್ಟಿದ ಊರಿನಲ್ಲಿ ಕೆಲವು ಪ್ರದರ್ಶನಗಳು ನಡೆದ ತರುವಾಯ ನಮ್ಮ ನಾಟಕ ಮಂಡಳಿ ಊರಿನಿಂದ ಹೊರಗೆ ಹೊರಟಿತು.
ಹೊಸ ಕಥೆಗಾಗಿ, ರಂಗಪ್ರವೇಶ ಮತ್ತು ಇತರ ತಾಂತ್ರಿಕ ವ್ಯವಸ್ಥೆಗಳಿಗೆಂದು ಒಂದೆರಡು ‘ಅಭ್ಯಾಸ’ಗಳನ್ನು ಕೆಲವು ಗಂಟೆಗಳ ಹೊತ್ತಿನಲ್ಲಿ ಮಾಡಿ ಮುಗಿಸಿದರೆ ಸಾಕಾಗುತ್ತಿತ್ತು.
ಆರಂಭದಿಂದಲೇ, ಅಭಿನಯದ ಪ್ರಾಮುಖ್ಯವನ್ನು ನಮ್ಮ ತಲೆಗೆ ತುರುಕಲಾಗಿತ್ತಾದ ಕಾರಣ ನಮಗೆ ಆ ದಿಸೆಯಲ್ಲಿ ತಬ್ಬಿಬ್ಬಾಗುವ ಸನ್ನಿವೇಶ ಎಂದೂ ಬರಲಿಲ್ಲ. ಹೆಚ್ಚಿನ ಪಾತ್ರಗಳಿಗೆ ನಮ್ಮ ಕುಟುಂಬದವರೇ- ದೊಡ್ಡಪ್ಪಂದಿರ ಮಕ್ಕಳು- ಆರೇಳು ಮಂದಿ ಒದಗುತ್ತಿದ್ದರೆ, ಮುಖ್ಯ ಪಾತ್ರಗಳ ಕೆಲವಕ್ಕೆ ತಂದೆಯವರು ತಮ್ಮ ಗೆಳೆಯರಾಗಿದ್ದ ಕೆಲವರು ಯಕ್ಷಗಾನ ಕಲಾವಿದರನ್ನು ಕೂಡಿಸಿಕೊಂಡಿದ್ದರು.
ಇನ್ನು ಕೆಲವು ಕಡೆಗಳಲ್ಲಿ ‘ನಾಟಕ’ದಲ್ಲಿ ಭಾಗವಹಿಸುವ ಆಸಕ್ತಿ ತಡೆಯದೆ ಸ್ಥಳೀಯ ಕಲಾವಿದರೂ ನಾಟಕಗಳಲ್ಲಿ ಪಾತ್ರವಹಿಸಲು ಬರುತ್ತಿದ್ದರು.
ರಂಗದ ಮೇಲೆ ಶಿಕ್ಷೆ
ಗೆಳೆಯರಾಗಲಿ, ಆಸಕ್ತರಾಗಲಿ ಬರಿಯ ಘನತೆ-ಗೌರವ ಇವುಗಳ ಕಡೆಗಷ್ಟೇ ಗಮನ ಇರಿಸಿದ್ದವರು. ಅವರಲ್ಲಿ ಸಂಭಾವನೆಯ ಅತ್ಯಾಸೆಯನ್ನು ಮುಂದೊಡ್ಡಿದವರಿರಲಿಲ್ಲ.
ನಮ್ಮ ಖರ್ಚು-ವೆಚ್ಚ- ಪರಿಶ್ರಮಗಳೆಲ್ಲ ಆಡುವ ಜನರ ಕಡೆಗೆ ಬೇಕಾಗಲಿಲ್ಲ. ಸ್ಥಳ ಮತ್ತು ಸ್ಥಳಕ್ಕೆ ತಲುಪುವ ವ್ಯವಸ್ಥೆ ಇವುಗಳಿಗೇ ಅಗತ್ಯವಾದುವು.
ಮೊದಲಿನ ವರ್ಷ ನಾವು ಕೆಲವು ಪ್ರಸಂಗಗಳ ನಾಟಕಗಳನ್ನು ಆಡಿದೆವು. ಅವುಗಳಲ್ಲಿ “ಪ್ರಹ್ಲಾದ ಚರಿತ್ರೆ”ಯ ಪ್ರಯೋಗವೇ ಬಹಳಮಟ್ಟಿಗೆ ಯಶಸ್ವಿಯಾಯಿತು. ಹೋದ ಊರುಗಳಲ್ಲಿ ಅದೇ ನಾಟಕಕ್ಕೆ ಬೇಡಿಕೆಗಳು ಬರುವಷ್ಟರ ಮಟ್ಟಿಗೂ ಅದರ ಖ್ಯಾತಿ ಹಬ್ಬಿತ್ತು.
ಪ್ರಹ್ಲಾದ ಚರಿತ್ರೆ ಜನತೆಗೆ ಬೇಕಾಯಿತೇನೋ ನಿಜ. ಆದರೆ ನನ್ನ ಮಟ್ಟಿಗೆ ಆ ಹೆಸರೆತ್ತಿದರೇ ಮೈ ನಡುಕ ಬರುತ್ತಿದ್ದ ಸಂದರ್ಭಗಳೂ ಇದ್ದುವು.
ಸ್ವತಃ ಪಾತ್ರವಹಿಸುತ್ತಿದ್ದ ತಂದೆಯವರ ತನ್ಮಯತೆಯೇ ಅದಕ್ಕೆ ಕಾರಣ.
ಹಿರಣ್ಯಕಶಿಪುವಾಗಿ ಅವರು ಪಾತ್ರ ವಹಿಸುತ್ತಿದ್ದರು. ನನ್ನ ದೊಡ್ಡಪ್ಪನವರ ಮಗ ರಾಮ ಹಿರಣ್ಯಾಕ್ಷನಾಗುತ್ತಿದ್ದ. ಇನ್ನೊಬ್ಬ ದೊಡ್ಡಪ್ಪನವರ ಮಗ ಕೃಷ್ಣ (ಪ್ರಾಯದಲ್ಲಿ ನನಗೆ ತಮ್ಮ ) ಕಯಾದುವಾಗುತ್ತಿದ್ದ. ನನ್ನ ಪಾಲಿಗೆ ಪ್ರಹ್ಲಾದನ ಪಾತ್ರ ಸಿಗುತ್ತಿತ್ತು.
ಹರಿಭಕ್ತನಾಗಿಯೇ ಉಳಿಯುವೆನೆನ್ನುವ ಪ್ರಹ್ಲಾದನಿಗೆ ತಂದೆಯಿಂದ ದೊರೆಯುವ ಶಿಕ್ಷೆ ನಾಟಕದ್ದಾಗುತ್ತಿರಲಿಲ್ಲ; ನಿಜ ಜೀವನದ್ದಾಗುತ್ತಿತ್ತು. ಆವೇಶದಲ್ಲಿ ತನ್ನನ್ನು ತಾನೇ ಮರೆಯುವ ತಂದೆಯವರ ಕಾಲುಗಳು- ನಿಂತಿರುವುದು ನಾಟಕರಂಗವೆಂಬುದನ್ನೂ ಮರೆಯುತ್ತಿದ್ದವು. ಅವರಿಂದ ಒದೆಸಿಕೊಂಡು ನನ್ನ ಮೈ ನಜ್ಜುಗುಜ್ಜಾಗುತ್ತಿತ್ತು.
ಸಾರ್ಥಕ
ಪ್ರಹ್ಲಾದನಾಗಿ ಪವಿತ್ರಾನುಭವದ ಪರಾಕಾಷ್ಠೆಯನ್ನ ಪಡೆದ ದಿನ ಮತ್ತು ಆ ದಿನದ ಅನುಭವ, ಇಂದಿಗೂ ನೆನಪು ಬರುತ್ತಿದೆ. ಈಗಲೂ ಮೈ ನವಿರೇಳಿಸುತ್ತಿದೆ.
ಕಟೀಲಿನಲ್ಲಿ “ಪ್ರಹ್ಲಾದ ಚರಿತ್ರೆ” ನಡೆದಿತ್ತು. ತಮ್ಮ ಕೃಷ್ಣ ಕಯಾದುವಾಗಿದ್ದ. ನಾನೇ ಪ್ರಹ್ಲಾದನಾಗಿದ್ದೆ.
ಹೆಡದ ಮಗನಿಗೆ ತಾಯಿ, ತನ್ನ ಕೈಯಾರೆ ವಿಷ ಕೊಡುವ ದೃಶ್ಯ…..
ವಿಷದ ಪಾತ್ರೆಯನ್ನು ನಾನು ಸ್ವೀಕರಿಸಿದಾಗ ತಂದೆಯ ಒದೆತದ ನೋವು ಮರೆತು ಹೋಗಿತ್ತು. ನನ್ನನ್ನು ಹೆತ್ತ ತಾಯಿ ಕೊಡುತ್ತಿರುವುದು ವಿಷ-
ಪಾತ್ರೆಯಲ್ಲಿದ್ದುದನ್ನು ಕುಡಿದೆ. ಮೈಯಲ್ಲಾ ಉರಿಯುತ್ತಿರುವ ಅನುಭವವಾಯಿತು.
“ನಾನು ಹರಿಯ ಭಕ್ತ- ಆ ವಿಷದಿಂದ ನನಗೇನೂ ಆಗಲಾರದು” ಎಂದು ಪ್ರಾರ್ಥಿಸಿಕೊಂಡೆ. ಆಗ ನಾನೇ ಪ್ರಹ್ಲಾದನಂತಿದ್ದೆ.
ಮೈಯ ಉರಿ ಕಡಿಮೆಯಾಗ ತೊಡಗಿತು. ನೋವು ಅಲ್ಪ ಸ್ವಲ್ಪವಾಗಿ- ಉಳಿದು ನೆನಪು ಮಾಡಿಕೊಡುತ್ತಿತ್ತು.
ಮುಂದಿನ ದೃಶ್ಯದಲ್ಲೇ “…ತಮಗೇ ತಾವೇ ಶತ್ರು” ಎಂಬ ಪದದ ವಾಕ್ಕುಗಳು ಪ್ರಹ್ಲಾದನವು.
ಹಿರಣ್ಯಕಶಿಪುವಿನ ಕಣ್ಣಿನಿಂದ ನೀರು ಇಳಿಯುತ್ತಿತ್ತು!
ತಂದೆಯ ಎದುರು ಮಗ. ತಂದೆಯ ಕಣ್ಣ ನೀರು!
ಬದುಕು ಸಾರ್ಥಕವಾಯಿತು ಎಂದುಕೊಂಡೆ.
ಯಕ್ಷಗಾನದಿಂದ ಇಷ್ಟೊಂದು ಒದೆಗಳನ್ನು ತಿಂದು ಮಲಗಿದ ತರುವಾಯವೂ, ಇಂದು ಆ ಘಟನೆಯನ್ನು ಜ್ಞಾಪಿಸಿಕೊಂಡು ಹಾಗೇ ಹೇಳುತ್ತೇನೆ.
ಐದು ವರ್ಷಗಳಲ್ಲಿ ಆಸ್ತಿ ಅಡವು…
1931ರ ಆರ್ಥಿಕ ಮುಗ್ಗಟ್ಟಿನ ದಿನಗಳ ನೆನಪಿರುವವರು ಬಹಳ ಮಂದಿ. ನಮ್ಮ ನಾಟಕ ಮಂಡಳಿಯಿಂದಾಗಿ ನನಗೂ ಆ ದಿನಗಳ ನೆನಪು ಉಳಿದಿದೆ; ಅಂದಿನ ಮತ್ತು ಇಂದಿನ ಪರಿಸ್ಥಿತಿಗಳ ವ್ಯತ್ಯಾಸವನ್ನು ಜ್ಞಾಪಿಸಿಕೊಳ್ಳುವ ಹಾಗಾಗಿದೆ.
ಆಗ ಊರಿಂದೂರಿಗೆ ಸಾಮಾನು ಸಾಗಿಸುವ ಲಾರಿಗಳ ಸೌಕರ್ಯವಿರಲಿಲ್ಲ. ಸಾಗಾಟಕ್ಕೆ ಸಿಗುತ್ತಿದ್ದುದು ಎತ್ತಿನ ಗಾಡಿಗಳು ಮಾತ್ರ.
ದಶಾವತಾರದ ಮೇಳಗಳಲ್ಲಿ ಇರುತ್ತಿದ್ದ ಸಾಮಾನುಗಳನ್ನು ಸಾಗಿಸಲು ಬಹಳ ಕಷ್ಟವಾಗುತ್ತಿರಲಿಲ್ಲ. ಪರದೆ ಇತ್ಯಾದಿಗಳ ತೊಡಕು ಇಲ್ಲದ ಕಾರಣ, ಕೆಲವು ಪೆಟ್ಟಿಗೆಗಳನ್ನು ತಲೆ ಹೊರೆಯಲ್ಲಿ ಸಾಗಿಸಲು ಸಾಧ್ಯವಾಗುತ್ತಿತ್ತು. ಸಂಚಾರಕ್ಕೆ ರಸ್ತೆಯ ಅನುಕೂಲವಿದ್ದರೆ ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದರೆ ಸಾಕಾಗುತ್ತಿತ್ತು. ಸಂಚಾರಕ್ಕೆ ರಸ್ತೆಯ ಅನುಕೂಲವಿದ್ದರೆ ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದರೆ ಸಾಕಾಗುತ್ತಿತ್ತು. ಊರು ಸೇರಿದ ತರುವಾಯ ಡೇರೆಯ ವ್ಯವಸ್ಥೆಯೂ ಬೇಕಾಗುತ್ತಿರಲಿಲ್ಲ. ಹೆಚ್ಚಾಗಿ ಬಯಲಾಟಗಳೇ ಅಂದು ನಡೆಯುತ್ತಿದ್ದುವು.
ಆದರೆ ಯಕ್ಷಗಾನ ನಾಟಕ ಕಂಪೆನಿಯ ಹೊಣೆ ಹೊತ್ತ ನಮ್ಮ ಪರಿಸ್ಥಿತಿ ಅದಕ್ಕೆ ತೀರಾ ವ್ಯತಿರಿಕ್ತವಾಗಿತ್ತು.
ದೃಶ್ಯಾವಳಿಗಳಿಗಾಗಿ ಪರದೆಗಳು, ‘ಪಕ್ಕದ ರೆಕ್ಕೆ’ಗಳು, ಆಸನ- ಪೀಠೋಪಕರಣಗಳು, ಕಿರೀಟ-ಆಯುಧ, ಅಲಂಕಾರಗಳು ಇವೆಲ್ಲವುಗಳ ಜೊತೆಗೆ ಸಾಕಷ್ಟು ಫರ್ನಿಚರ್ ಗಳನ್ನು ಸಾಗಿಸಲು ಎಂಟು ಹತ್ತು ಗಾಡಿಗಳನ್ನು ಅನುವು ಮಾಡಿಕೊಳ್ಳ ಬೇಕಾಗುತ್ತಿತ್ತು. ಎಷ್ಟೇ ಜನಪ್ರಿಯತೆ ಗಳಿಸಿದರೂ, ಕೆಲವು ದಿನಗಳ ತರುವಾಯ ಊರು ಬದಲಾಯಿಸಲೇ ಬೇಕಾಗುವುದಷ್ಟೇ.
ಊರಿಂದೂರಿಗೆ
ಬಟ್ಟೆಯ ಡೇರೆಗೆ ಬೇಕಾದ ಅನುಕೂಲ ನಮಗೆ ಇರಲಿಲ್ಲ. ಆದುದರಿಂದ ಪ್ರತಿಯೊಂದು ಊರಿನಲ್ಲೂ “ಥಿಯೇಟರ್” ಕಟ್ಟಿಸಬೇಕಾಗುತ್ತಿತ್ತು. ಸರಾಸರಿ ಒಂದು ಸಾವಿರ ರೂ. ಅದಕ್ಕಾಗಿ ವೆಚ್ಚವಾಗುತ್ತಿತ್ತು.
ಊರಿನ ಯಾವುದಾದರೂ ಶಾಲೆಯ ಬಯಲನ್ನೋ, ಬೇರೆ ವಿಶಾಲ ಸ್ಥಳವನ್ನೋ ಹಿಡಿದು ಥಿಯೇಟರ್ ವ್ಯವಸ್ಥೆ ಮಾಡುವಾಗ ನೋಡುವವರಿಗೆ ಅನುಕೂಲವಾಗಲೆಂದು, ಪ್ರೇಕ್ಷಕರು ಕುಳಿತಿರುವ ಸ್ಥಳವನ್ನು ಇಳಿಜಾರಾಗಿ ಅಗೆದು ಸಮತಟ್ಟುಗೊಳಿಸಬೇಕಾಗುತ್ತಿತ್ತು. (ಊರು ಬಿಡುವಾಗ ಅದನ್ನು ಮಚ್ಚಿಸಿ ಮೊದಲಿನಂತೆ ಮಾಡಿಕೊಡಲೂ ಬೇಕಿತ್ತು).
ನಾಟಕದ ಸಾಮಾನುಗಳನ್ನು ಸಾಗಿಸುವ ದಾರಿಯಲ್ಲಿ ಹೊಳೆಗಳು ಸಿಕ್ಕಿದವೆಂದರೆ ದೇವರೇ ಗತಿ ಎನಿಸುತ್ತಿತ್ತು. ಸೇತುವೆಗಳಿಲ್ಲದಿದ್ದ ಹೊಳೆಗಳಿಂದಾಗಿ, ಆಚೆಯ ದಡದಿಂದ ಬೇರೆಯೇ ಗಾಡಿಗಳನ್ನು ಹುಡುಕಿ ತರಬೇಕಾಗುತ್ತಿತ್ತು.
ಗಾಡಿ-ದೋಣಿ ಇತ್ಯಾದಿಗಳಲ್ಲಿ ತುಂಬಿಸಿ ಖಾಲಿ ಮಾಡಿ, ತಿರುಗ ತುಂಬಿಸುವ ಗೊಂದಲದಲ್ಲಿ ನಾಜೂಕಾದ ವಸ್ತುಗಳೆಷ್ಟೋ ಪುಡಿಪುಡಿಯಾಗಿ ಅವುಗಳನ್ನು ತಿರುಗಿ ತಯಾರಿಸಿಕೊಳ್ಳಬೇಕಾಗುತ್ತಿತ್ತು.
ಎಷ್ಟೋ ಊರುಗಳಲ್ಲಿ ದೊರೆತ ಹಣ ನಾಟಕ ಶಾಲೆಯನ್ನು ಕಟ್ಟಿದ ವೆಚ್ಚವನ್ನೂ ಪೂರೈಸದೆ ಇದ್ದುದೂ ಇದೆ.
ಪ್ರದರ್ಶನಗಳನ್ನು ಮೆಚ್ಚುವವರಿದ್ದ ಕಡೆಗಳಲ್ಲೇ ದೊರೆತ ಚಿನ್ನದ ಪದಕ ಇತ್ಯಾದಿಗಳು, ಕ್ಯಾಂಪ್ ಮುಗಿದಾಗ ಒತ್ತೆ ಇಡಲ್ಪಟ್ಟುದೂ ಇದೆ.
ಆದರೆ, ಆಗಿನ ಮೇಳಗಳಲ್ಲಿ ವೀಳ್ಯ ಪಡೆದೇ ಆಟ ಆಡುವ ರೂಢಿ ಇದ್ದ ಕಾರಣ, ಊರ ಪ್ರಮುಖರು ಆಟ ಬೇಡವೆಂದರೆ ಎಲ್ಲರಿಗೂ ಏಕಾದಶಿಯಾಗುತ್ತಿತ್ತು. ನಮ್ಮ ಸಂಸ್ಥೆಯ ‘ನಾಟಕ’ಗಳು ಪ್ರವೇಶ ಧನವಿರಿಸಿ ಆಡುತ್ತಿದ್ದ ಕಾರಣ- ಕಲೆಕ್ಷನ್ ಇಲ್ಲವಾದರೂ- ತಂದೆಯವರ ಹಠದಿಂದಾಗಿ ಸಂಸ್ಥೆಯವರಿಗೆ ತೊಂದರೆ ತಂದೊಡ್ಡುತ್ತಿರಲಿಲ್ಲ.
ಯಾರ ಮರ್ಜಿಗೂ ಬೀಳದೆ ಐದಾರು ವರ್ಷ ತಿರುಗಾಟ ನಡೆಸಿ, ಯಕ್ಷಗಾನ ಕಲಾವಿದರೂ ಸ್ವತಂತ್ರರಾಗಿ ಬಾಳಬಹುದು ಎಂಬ ಆತ್ಮವಿಶ್ವಾಸವನ್ನು ಮೂಡಿಸಿದವರು ನನ್ನ ತೀರ್ಥರೂಪರೆಂದು ಧೈರ್ಯವಾಗಿ ಹೇಳಬಲ್ಲೆ.
ಕೆಲವೆಡೆಗಳಲ್ಲಿ ಕಟ್ಟಿಸಿದ ಥಿಯೇಟರಿನ ಖರ್ಚು ಹುಟ್ಟದೆ ಇದ್ದರೂ, ಇನ್ನೂ ಕೆಲವೆಡೆ ಜನರ ಪ್ರೋತ್ಸಾಹ ಅಪರಿಮಿತವಾದುದೂ ಇದೆ.
ದಕ್ಷಿಣ ಕನ್ನಡದಲ್ಲಿ ಹೆಸರಾಂತ ಊರುಗಳಲ್ಲೆಲ್ಲ ನಾವು ಪ್ರದರ್ಶನಗಳನ್ನಿತ್ತೆವು. ಸುಬ್ರಹ್ಮಣ್ಯ, ಸುಳ್ಯಗಳಂತಹ (ಆಗಿನ ) ಮೂಲೆಯ ಊರುಗಳಿಗೂ ಹೋದೆವು.
ಯಕ್ಷಗಾನದ ಬಗ್ಗೆ ತಿರಸ್ಕಾರ ತೋರುತ್ತಿದ್ದ ಕೆಲವರ ಎದುತೂ ಆಡಿದೆವು. ಶ್ರೀ ಗರೂಡ ಸದಾಶಿವರಾಯರು, ಶ್ರೀ ನಂಜುಂಡಯ್ಯನವರು ಮೊದಲಾದ ಪ್ರಸಿದ್ಧ ನಾಟಕಕಾರ ನಟರನ್ನೂ ಆಕಸ್ಮಿಕವಾಗಿ ಸ್ವಾಗತಿಸುವ ಸಂದರ್ಭ ಒದಗಿದಾಗ, ಮೆಚ್ಚಿಸಿದೆವು.
ಕಡೇ ನಾಟಕ
ಏರು- ತಗ್ಗುಗಳಿಂದ ಕೆಲವು ವರ್ಷಗಳಾದರೂ ನಮ್ಮ ಸಂಘವು ನಡೆಯಬಹುದಿತ್ತೋ ಏನೋ! 1936ರ ಹೊತ್ತಿಗೆ ಪರಿಸ್ಥಿತ ಮತ್ತೂ ಶೋಚನೀಯವಾಯಿತು.
ತಂದೆಯವರ ಆತ್ಮೀಯರಾಗಿದ್ದ, ನಮ್ಮ ಸಂಸ್ಥೆಯ ಪ್ರಸಿದ್ಧ ನಟರಾಗಿದ್ದ ಶ್ರೀ ಬಿ. ರಂಗಪ್ಪಯ್ಯನವರು ಅನಾರೋಗ್ಯ ನಿಮಿತ್ತ ಹಾಸಿಗೆ ಹಿಡಿದರು. ಇನ್ನೊಬ್ಬ ನಟ ಶ್ರೀ ಕುಂಜಾರು ರಾಮಕೃಷ್ಣಯ್ಯ(ಗುಂಡ್ರಾಯ)ರು ಅದೇ ಕಾರಣದಿಂದ ಸಂಸ್ಥೆಯನ್ನು ತೊರೆದರು. ಅವರಿಬ್ಬರ ‘ಬದಲಿ’ ನಟರನ್ನು ತರುವ ಕೆಲಸ ನಮಗಾಗದುದಾಯಿತು. (ಯಕ್ಷಗಾನ ‘ನಾಟಕ’ಕ್ಕೇ ಆದ ಕಾರಣ ಆ ಸಮಸ್ಯೆ). ದಿನ ನಿತ್ಯ ಹತ್ತಿಪ್ಪತ್ತು ಜನರ ವೆಚ್ಚ, ಅವರ ವೇತನ ಮುಂತಾದುವನ್ನು ನಿಭಾಯಿಸುವುದು ಅಸಾಧ್ಯವೆನಿಸಿತು.
ಗತ್ಯಂತರವಿಲ್ಲದೆ, 1937ರ ಹೊತ್ತಿಗೆ ಮಂಡಳಿಯನ್ನು ಮುಚ್ಚಲೇಬೇಕು ಎಂದಾಯಿತು.
ಶ್ರೀ ಶಂಕರನಾರಾಯಣ ಪ್ರಾಸಾದಿತ ಯಕ್ಷಗಾನ ನಾಟಕ ಸಭಾ, ಕೋಳ್ಯೂರು- ಮಂಗಳೂರಿನಲ್ಲಿ “ದೇವರಾಣೆಗೂ ಕಡೇ ನಾಟಕ”ವನ್ನು ಆಡಿ ಮಂಗಳ ಹಾಡಿತು.
ಕೊನೆಯ ನಾಟಕದ ನಂತರ ಮನೆಗೆ ಬಂದು, ಮಂಡಳಿಯ (ಇಲ್ಲದ )ಲಾಭ ಮತ್ತು (ಇರುವ) ನಷ್ಟದ ಲೆಕ್ಕ ತೆಗೆದುವು.
ಒಂದೇ ಕುಟುಂಬದವರಾದ ನಾವು ಐದಾರು ಮಂದಿ ವೇತನವಿಲ್ಲದೆ ದುಡಿದಂತೆಯೇ ಲೆಕ್ಕ ಹಿಡಿದಿದ್ದೆವು. ಆದರೂ ಲೆಕ್ಕದ ಬಾಯಿಗೆ ಕೊನೆ ಇರಲಿಲ್ಲ.
ಬರುವುದೇನೂ ಇಲ್ಲದೆ, ಹೋಗುವುದನ್ನೇ ಲೆಕ್ಕ ಹಾಕುತ್ತಾ ಹೋದಾಗ ಕೆಲವು ಸಾವಿರಗಳ ಬಾಕಿ ಕಾಣಿಸಿತು. ಆದಾಯ ತರುವ ಬದಲಿಗೆ, ಯಕ್ಷಗಾನಕ್ಕಾಗಿ ಎಲ್ಲವನ್ನೂ ಕಳೆದುಕೊಂಡವನೆಂಬ ಬಿರುದು ತಂದೆಯವರಿಗೆ ಬರುವಂತೆ ಆಯಿತು.
ಮನೆಯದಾಗಿದ್ದ ಆಸ್ತಿಯನ್ನು 12000 ರೂಪಾಯಿಗಳಿಗೆ ಅಡವಿಟ್ಟು, ಯಕ್ಷಗಾನ ನಾಟಕ ಮಂಡಳಿಯ ವ್ಯವಹಾರದಿಂದ ತಂದೆಯವರು ಕೈ ತೊಳೆದುಕೊಂಡರು.
ಆದರೆ, ಮರುವಾರವೇ ಯಕ್ಷಗಾನ ಕೂಟದ ಆಹ್ವಾನವೊಂದು ಬಂದಾಗ, ಮೊದಲಿನ ಉತ್ಸಾಹದಿಂದಲೇ ಹೋಗಿ ತಾಳಮದ್ದಳೆಯಲ್ಲಿ ಭಾಗವಹಿಸಿದರು.
ನಾನೂ ಆ ಅಭ್ಯಾಸಕ್ಕೆ ಹೊರತಾಗಿರಲಿಲ್ಲ. ಪ್ರಾಯಶಃ ವ್ಯವಹಾರದ ಬಿಸಿ ನನ್ನನ್ನು ನೇರವಾಗಿ ಮುಟ್ಟದೆ ಇದ್ದುದೂ ಅದಕ್ಕೆ ಕಾರಣವಾಗಿರಬಹುದು.
ಈ ನಡುವೆ ಅಂದರೆ 1933ರಲ್ಲಿ ನಾನು ಮನೆಯಲ್ಲಿ ಉಳಿಯಲು ವೇಳೆ ಇಲ್ಲದವನಾಗಿದ್ದರೂ ಗೃಹಸ್ಥನಾಗಿದ್ದುದರಿಂದ, ಮಂಡಳಿಯ ಮುಗಿತಾಯದ ನಂತರದ ಕೆಲ ದಿನಗಳನ್ನು ಮನೆಯಲ್ಲೇ ಕಳೆಯುವ ಅವಕಾಶವೂ ಸಿಕ್ಕಿತು.
ಯಕ್ಷಗಾನ ನಾಟಕದ ಕಹಿ ನೆನಪುಗಳನ್ನೇ ಮೆಲುಕು ಹಾಕುವ ಬದಲು, ಸವಿ ನೆನಪುಗಳನ್ನೂ ನೆನೆಯುವ ಅಭ್ಯಾಸವನ್ನು ಮೈಗೂಡಿಸಿಕೊಂಡೆ.
ರಸ ಪೋಷಣೆಗೆ
ಕುಣಿತವಿಲ್ಲದ ಯಕ್ಷಗಾನ ನಾಟಕದಲ್ಲಿ, ರಸಪೋಷಣೆಗಾದರೂ ಅಲ್ಪಸ್ವಲ್ಪ ಕುಣಿತವಿದ್ದರೆ ಒಳ್ಳೆಯದಿತ್ತು ಎಂದು ವಿಮರ್ಶಕರು ಕೆಲವೊಮ್ಮೆ ಹೇಳಿದ್ದ ನುಡಿಗಳು ನನ್ನ ಕಿವಿಗೂ ಬಿದ್ದಿದ್ದುವು.
ಆದರೆ, ತಂದೆಯವರ ಮಟ್ಟಿಗೆ ಕುಣಿತದ ಅಗತ್ಯ- ಯಾವ ಸಂದರ್ಭದಲ್ಲೂ ಕಂಡು ಬಂದಿರಲಿಲ್ಲ. ಯಕ್ಷಗಾನದಲ್ಲಿನ ಕಂಸನ ಪಾತ್ರವನ್ನು ನಿರ್ವಹಿಸುವ ಯಾವನೇ ವೇಷಧಾರಿ, ಅವರ ‘ನಾಟಕ’ದ ಕಂಸನ ಎದುರು ನಿಲ್ಲಲು ಶಕ್ತನಾಗಿರಲಿಲ್ಲವೆಂದು ಧೈರ್ಯವಾಗಿ ಇಂದಿಗೂ ಹೇಳಬಲ್ಲೆ.
ಅದೇ ರೀತಿ, ಅವರ ಇತರ ರಾಕ್ಷಸ ಪಾತ್ರಗಳೂ ಪರಿಪೂರ್ಣವಾಗಿರುತ್ತಿದ್ದುವು.
ಆದರೆ, ನನ್ನ ಮಟ್ಟಿಗೆ ಆ ಪರಿಪೂರ್ಣತೆ ಸಾಧಿಸಿರಲಿಲ್ಲವೆಂದೇ ಮನಸ್ಸಿಗೆ ಅನಿಸಿತ್ತು.
“ಬಾಲಲೀಲೆ- ಬಿಲ್ಲಹಬ್ಬ” ದ ಕೃಷ್ಣನಾಗಿ ಬಂದಿದ್ದಾಗ, ರಾಸಕ್ರೀಡೆಯ ದೃಶ್ಯದಲ್ಲಿ ಮಾತ್ರವೇ ಪ್ರಯತ್ನಪೂರ್ವಕ ಕುಣಿದುಬಿಡುತ್ತಿದ್ದೆ. ಅದು ಅನುಭವಕ್ಕಾಗಿ ಕಲಿತ ಒಂದು ಪಾಠವಾಗಿತ್ತು ಅಷ್ಟೆ. ಉಳಿದೆಲ್ಲ ದೃಶ್ಯಗಳಲ್ಲೂ ಹಿಮ್ಮೇಳದ ವಿವಿಧ ಧ್ವನಿಗಳನ್ನು ಚಿತ್ರಿಸಲಾಗುವುದಿಲ್ಲವಲ್ಲ! ಎಂಬ ಸಂಕಟವಾಗಿತ್ತು.
ಹಾಡುಗಾರಿಕೆಯೇ ಇಲ್ಲದಿದ್ದರೆ ಆ ಮಾತು ಬೇರೆ. ಬರಿಯ ನಾಟಕವಾದರೆ, ಸಂಭಾಷಣೆಯ ಸಮಯದಲ್ಲಿ ಅಲ್ಲದೆ ಬೇರೆ ಕಡೆಗಳಲ್ಲಿ ಭಾವಪ್ರದರ್ಶನದ ಅಗತ್ಯವಿರುವುದಿಲ್ಲ. ಪದದ ಹೊತ್ತಿನಲ್ಲಿ ಅರ್ಥ ಅಭಿನಯ ನೀಡುವ ಕೃಷ್ಣನಿಗೂ, ಸಂಭಾಷಣೆಯ ಪಾಠವನ್ನೊಪ್ಪಿಸುವ ಕೃಷ್ಣನಿಗೂ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ನಮ್ಮೂರಿನಿಂದ ಸ್ವಲ್ಪ ದೂರದಲ್ಲಿನ ಅಡ್ಯನಡ್ಕದಲ್ಲಿ “ಚವತಿಯ ಚಂದ್ರ” (ಸಂಗೀತ) ನಾಟಕದ ಕೃಷ್ಣನಾಗಿ ಪಾತ್ರವಹಿಸಿ ಕಂಡುಕೊಂಡಿದ್ದೆ.
ಇಂತಹ ಅನುಭವಗಳಿಂದ, ಮನೆಯಲ್ಲಿ ಕುಳಿತಿರುವಾಗ ಮಾಡುತ್ತಿದ್ದ ಯೋಚನೆಗಳಿಂದ, “ಯಕ್ಷಗಾನದಲ್ಲೂ ಕುಣಿಯದೆ ಇರುವ ಆ ಪೀತಾಂಬರಧಾರಿ ಎಂತಹನು?” ಎಂಬ ಭಾವನೆಯೇ ನನ್ನಲ್ಲಿ ಬೆಳೆದು ನಿಂತಿತು.
ಸೌಮ್ಯ ಪಾತ್ರಗಳ ಬಗ್ಗೆ ಆ ಬಗೆಯ ಯೋಚನೆಯಾದರೆ, ರೌದ್ರರಸವಿರುವ ಪಾತ್ರಗಳಲ್ಲೂ ಅದೇ ಕೊರತೆ ನನಗೆ ಕಂಡುಬರುತ್ತಿತ್ತು.
ಕೈಲಾಸದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಶುರಾಮ, ಜಮದಗ್ನಿಯ ಕರೆ ಕೇಳಿದಾಗ ರಂಗಪ್ರವೇಶ ಮಾಡುವ ಸಂದರ್ಭ. ಚೆಂಡೆಯ ನಾದ ಮುಗಿಲು ಮುಟ್ಟುವಂತಿರುತ್ತದೆ.ಅನಂತರದ ಪದ್ಯಗಳಾದರೂ ವೀರರಸ ಉಕ್ಕೇರುವಂತೆ ಮಾಡುತ್ತವೆ.
ಕಾರ್ತವೀರ್ಯಾಜುನ ಕಾಳಗ ಪ್ರಸಂಗದಲ್ಲಿ, ಕಟ್ಟಿ ನಿಲ್ಲಿಸಲಾಗಿದ್ದ ಬೆಳ್ಳಿ ಬೆಟ್ಟಗಳಿಂದ ಕೆಳಗೆ(ಧರೆಗೆ) ಧುಮುಕಿದ್ದೆ. ಚೆಂಡೆಯ ಬಡಿತಕ್ಕೆ ಬಾಹುಗಳು ಸ್ಫುರಿಸಿದ್ದುವು. ಆದರೆ ಕಾಲು?
ಅದು, ಕಾಸರಗೋಡಿನ ಒಂದು ನಾಟಕ ಪ್ರದರ್ಶನದಲ್ಲಿ ನನಗೆ ಆದ ಅನುಭವ.
ಅಂತಹುದೇ ಹಲವು ಅನುಭವಗಳನ್ನು ಅಳೆದು- ತೂಗುವ ಕೆಲಸ ನನ್ನದಾಯಿತು.
ಬಯಕೆಯ ಬಳ್ಳಿ
ಒಟ್ಟಿನಲ್ಲಿ, ನೃತ್ಯ-ನನಗೆ ಬೇಕೇಬೇಕು ಎಂದಾಯಿತು. ಬಯಕೆಯೇನೋ ಬೇರು ಬಿಟ್ಟಿತು. ಪಡೆಯುವ ಬಗೆ?
ಯಾರ ಮೂಲಕವಾದರೂ ತರಿಸಿಕೊಳ್ಳುತ್ತಿದ್ದ ಕೆಲವು ಪತ್ರಿಕೆಗಳ ವಿಶೇಷಾಂಕಗಳು ಮನೆಯಲ್ಲಿ ಇರುತ್ತಿದ್ದುವು. ಒಂದು ವಿಶೇಷಾಂಕದಲ್ಲಿ ಶ್ರೀ ಶಿವರಾಮ ಕಾರಂತರ “ಸೋಮಿ ಸೌಭಾಗ್ಯ” ಎಂಬ ಕವನದಲ್ಲಿ “ಸೋಮೀ ಸೋಮೀ! ಕುಣಿಯೋಣ ಚೆನ್ನಿ!” ಎಂಬ ಚರಣವನ್ನು ನನಗೆ ಬೇಕಾದಂತೆ ಹಾಡಿಸಿ ಕುಣಿಯಲೂ ಒಂದು ದಿನ ಪ್ರಯತ್ನಿಸಿದ್ದೆ.
ಆಗ ಪುತ್ತೂರಿನಲ್ಲಿ ಶ್ರೀ ಶಿವರಾಮ ಕಾರಂತರ ಹತ್ತು ಹಲವು ಅಭ್ಯಾಸ- ಪ್ರಯೋಗಗಳು ನಡೆಯುತ್ತಿದ್ದುವು.
ಒಂದು ದಿನ, ಪುತ್ತೂರಿನಲ್ಲಿ ವಕೀಲ ವೃತ್ತಿಯಲ್ಲಿದ್ದ ನನ್ನ ಕುಟುಂಬಸ್ಥರಾದ ಶ್ರೀ ಸಿ, ಎಸ್. ಶಾಸ್ತ್ರೀಯವರು ನನಗೆ ಕರೆ ಕಳುಹಿದರು. ಆಹ್ವಾನದ ಕಾರಣ ತಿಳಿದಿರದೆ, ಕುತೂಹಲದ ಒಂದು ಮೂಟೆಯನ್ನೇ ಹೊತ್ತುಕೊಂಡು ಪುತ್ತೂರು ತಲಪಿದೆ ಎಂದರೂ ಹೆಚ್ಚಲ್ಲ.
ನೃತ್ಯ ಕರ್ನಾಟಕ
ಅಲ್ಲಿಗೆ ಹೋದಾಗ, ನಾನೂ ಶ್ರೀ ಕಾರಂತರ ಬಳಗವನ್ನು ಸೇರಿಕೊಳ್ಳಬಹುದು ಎಂದು ಶ್ರೀ ಶಾಸ್ತ್ರಿಯವರಿಂದ ತಿಳಿದುಬಂತು.
ಕಾರಂತರು, ಹಿನ್ನಲೆಯ ಹಾಡುಗಳಿಗೆ ತನ್ನದೇ ಆದ ವಿಶಿಷ್ಟ ನೃತ್ಯವೊಂದನ್ನು ಹೊಂದಿಸಿಕೊಳ್ಳುವ ಪ್ರಯೋಗ ಮಾಡುತ್ತಲಿದ್ದರು. ಆದರೆ, ಅವರ ಮನೋಧರ್ಮಕ್ಕೆ ತಕ್ಕಂತೆ ಕುಣಿಯುವವರು ಸಿಗದೆ ಪೇಚಾಟವಾಗುತ್ತಿತ್ತಂತೆ.
ನಮ್ಮ ಯಕ್ಷಗಾನ ನಾಟಕಗಳಲ್ಲಿ ನನ್ನ ಕೆಲವು ನಿಮಿಷದ ಕುಣಿತದ ತುಣುಕುಗಳನ್ನು ಕಂಡಿದ್ದ ಶ್ರೀ ಶಾಸ್ತ್ರಿಯವರು, ನಾನು ಶ್ರೀ ಕಾರಂತರ ನಿರ್ದೇಶನಕ್ಕೆ ತಕ್ಕಂತೆ ಕುಣಿಯಬಲ್ಲೆ ಎಂದು ತಿಳಿದರೋ ಏನೋ, ನನ್ನನ್ನು ಕರೆದೊಯ್ದ ಕಾರಂತರಿಗೆ ಪರಿಚಯ ಮಾಡಿಸಿದರು.
ನೃತ್ಯದ ಪ್ರಸ್ತಾಪ ನನ್ನನ್ನು ಆಕರ್ಷಿಸಿತ್ತು. ಅಂತೆಯೆ, ಕಾರಂತರು ಕಲಿಸಹೊರಟ ನೃತ್ಯವೂ ನನಗೆ ಬೇಡವಾಗಿರಲಿಲ್ಲ. ಒಂದೆರಡು ಸಣ್ಣ ಕಾರ್ಯಕ್ರಮಗಳಲ್ಲಿ ನನ್ನ ಸ್ವಂತ ಭಾವನೆಗಳನ್ನೂ ಪ್ರದರ್ಶಿಸಲು ಅವರು ನನಗೆ ಅವಕಾಶವಿತ್ತರು.
ಅಭ್ಯಾಸ ಸಾಗತೊಡಗಿತು.
ಪುತ್ತೂರಿನ ದಸರಾ ಕಾರ್ಯಕ್ರಮದಲ್ಲಿ ಪ್ರಥಮ ಪ್ರದರ್ಶನ ನಡೆಯಿತು. ನೃತ್ಯ ಪದ್ಧತಿ ಹೊಸದಾಗಿದ್ದು ನೋಡಿದ ಜನರೂ ಮೆಚ್ಚಿದರು.
ಕಾರ್ಯಕ್ರಮ ಮುಗಿದ ತರುವಾಯ, ಕಾರಂತರು ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು “ನೃತ್ಯ ಕರ್ನಾಟಕ” ಎಂಬ ಹೆಸರಿನಿಂದ ಪ್ರವಾಸ ಹೊರಡಲಿರುವಗಾಗಿ ತಿಳಿಯಿತು. ಮನೆಯಲ್ಲೇ ಕುಳಿತಿದ್ದು ಮೈಗೆ ಬೇರು ಬರಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದ ನಾನು ಅಂತಹದೊಂದು ಅವಕಾಶದಿಂದ ಸಂತೋಷಗೊಂಡೆ.
“ನೃತ್ಯ ಕರ್ನಾಟಕ”ದ ಜೊತೆಯಾಗಿ ಪ್ರವಾಸ ಹೊರಡುವ ಬಗೆಗೆ ನನ್ನ ಮನೆಯಿಂದ ಯಾವ ವಿರೋಧವೂ ತೋರಲಿಲ್ಲ. ಮನೆಯವಳಿಂದಲೂ ವಿರೋಧವಿರಲಿಲ್ಲ.
ಸಹಕಾರ
ಕಲಾವಿದನಾದವನಿಗಷ್ಟೇ ಏಕೆ, ಕಲಾವಿದನಾಗ ಬಯಸುವವನಿಗೂ ಮನೆಯೊಳಗೆ ಮನದ ನೆಮ್ಮದಿ ಭಂಗವಾಗಬಾರದು. ಮನೆಯ ಇತರರಿಗಿಂತಲೂ ಹೆಚ್ಚು ಕೈ ಹಿಡಿದವಳ ಸಹಾನುಭೂತಿ ಇರಬೇಕು. ಇಲ್ಲದಿದ್ದರೆ ಚಿತ್ತೈಕಾಗ್ರತೆ ಅಸಾಧ್ಯ ಎಂದೇ ಲೆಕ್ಕ. ಅನುಕಂಪದ ಅಭಾವವಿದ್ದರೆ ಅದು ಸದಾ ಬದುಕಿರುವ ಕಿರುಕುಳವಾಗಿಯೇ ಪರಿಣಮಿಸುತ್ತದೆ.
ಅಂತಹ ಅನುಭವ ನನಗೆ ದೊರೆತುದಾದರೂ ಕಲಾಸೇವೆಯ ಜೀವನದಲ್ಲಿ ಮುಕ್ಕಾಲು ಭಾಗ ಕಳೆದ ತರುವಾಯವೇ. ನನ್ನ ಹುಚ್ಚು ಹವ್ಯಾಸಗಳಿಗೆ ಆರಂಭದಲ್ಲಿ ಯಾರೂ ಅಡ್ಡಿ ಬರಲಿಲ್ಲ. ಯಕ್ಷಗಾನ ಮಂಡಳಿ ನಡೆಯುತ್ತಿದ್ದಾಗಲೇ ಮದುವೆ ಆಗಿದ್ದ ನಾನು, ಬಂದಾಗಿನಿಂದಲೇ ವರ್ಷದಲ್ಲಿ ಆರು ತಿಂಗಳು ಆಗಲಿರುವ ಅನುಭವವನ್ನು ನನ್ನಾಕೆಗೆ ಕೊಡತೊಡಗಿದ್ದೆ. ಆದರೆ ಅದಕ್ಕೆ ಯಾವ ರೀತಿಯಲ್ಲಾದರೂ ಗೊಣಗುಟ್ಟುವ ಗೋಜಿಗೆ ಅವಳು ಹೋಗದೆ, ನನ್ನ ರುಚಿಯೇ ಅವಳ ಅಭಿರುಚಿಯೆಂದು ಬಗೆದಳು. ನಾನು ಇಂದು “ಕಲಾವಿದನಾಗಿದ್ದೆ” ಎಂದು ಹೇಳಿಕೊಳ್ಳುವುದಿದ್ದರೆ, ಆ ಹೆಮ್ಮೆಯ ಅರ್ಧಪಾಲು ಅವಳಿಗೂ ಇದೆ.
ಮೊದಲ ನಾಲ್ಕು ವರ್ಷಗಳಲ್ಲಿ ಆಗುತ್ತಿದ್ದ ಅಗಲಿಕೆಯ ನೋವನ್ನು ಮರೆತು ಹಾಯಾಗಿರಬಹುದು ಎಂದು ಅವಳು ಭಾವಿಸಿಕೊಂಡಿದ್ದಾಗಲೇ ನೃತ್ಯ ಕರ್ನಾಟಕದ ಪ್ರವಾಸದ ಪ್ರಸ್ತಾವವಾಯಿತು.
“ಅದೆಷ್ಟು ತಿಂಗಳ ಕಾರ್ಯಕ್ರಮ?” ಎಂದು ಕೂಡಾ ವಿಚಾರಿಸದೆ, ಕೇಳಿದೊಡನೆ ನನ್ನವಳ ಒಪ್ಪಿಗೆ ದೊರೆಯಿತು. ಕಾರಂತರ ಜೊತೆಗೂಡಿ ಹೋಗುವವನಾದ ಕಾರಣ, ತಂದೆಯವರೂ “ಹೂಂ” ಎಂದರು.
ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮುಂಬಯಿಗಳಿಗೆ ನಾವು ಹೋಗಿ ಬಂದೆವು.
ಪ್ರದರ್ಶನಗಳು ಎಲ್ಲ ಕಡೆಗಳಲ್ಲೂ ಯಶಸ್ವಯಾಗಿಯೇ ನಡೆದುದಾಗಿ ಅಭಿಪ್ರಾಯವಿದ್ದಿತು.
ಕಿನ್ನರ ನೃತ್ಯ
ಅವರು (ಕಾರಂತರು) ಕಲ್ಪಿಸಿದ್ದ ನೃತ್ಯ ಪದ್ಧತಿಗೆ “ಕಿನ್ನರ ನೃತ್ಯ”ವೆಂದು ಕರೆಯಲಾಗುತ್ತಿತ್ತು. ಯಕ್ಷಗಾನದ ಹಾಡುಗಾರಿಕೆಯನ್ನು ಅದಕ್ಕೂ ಅಳವಡಿಸಲಾಗುತ್ತಿತ್ತು. ಪ್ರಸಂಗಗಳ ಕೆಲವು ಕಥಾಭಾಗಗಳನ್ನು ಆಯ್ದಕೊಂಡು, ಅಭಿನಯ ನೃತ್ಯಗಳೊಂದಿಗೆ ಪ್ರದರ್ಶಿಸಲಾಗುತ್ತಿತ್ತು.
ಅದಲ್ಲದೆ (ಸಾಮಾನ್ಯ ಅದೇ ಪದ್ಧತಿಯಲ್ಲಿ) ಇತರ ಕೆಲವು ಚಿಕ್ಕಪುಟ್ಟ ನೃತ್ಯಗಳನ್ನೂ ಪ್ರದರ್ಶಿಸುವ ಕಾರ್ಯಕ್ರಮ ಇರುತ್ತಿತ್ತು. “ಹಾವು- ಹಾವಾಡಿಗ” ಇತ್ಯಾದಿ ನೃತ್ಯಗಳೆಲ್ಲ ನನ್ನ ಪಾಲಿಗೆ ಬರುತ್ತಿದ್ದುವು.
“ಕಿರಾತಾರ್ಜುನೀಯ”, “ಚಿತ್ರಾಂಗದಾ” ಎಂಬಿತ್ಯಾದಿ ಕಥಾಭಾಗಗಳಲ್ಲಿ ಶ್ರೀಮಾನ್ ಕಾರಂತರು, ಶ್ರೀಮತಿ ಕಾರಂತರು ಮತ್ತು ನಾನು ಭಾಗವಹಿಸುತ್ತಿದ್ದೆವು.
ನನ್ನ ಪಾತ್ರಗಳನ್ನು ಸಮರ್ಪಕವಾಗಿ ಯಶಸ್ವಿಯಾಗಿಯೇ ನಿರ್ವಹಿಸಿದೆನೆಂಬ ಮೆಚ್ಚುಗೆಯ ಮಾತನ್ನು ಕಾರಂತರಿಂದ ಅಂದು ಕೇಳಿದೆ. ನಮ್ಮ ಪ್ರವಾಸ ಮುಗಿದು ಊರಿಗೆ ಹಿಂತೆರಳಿದಾಗಲೂ ಅವರು ಆ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಏನನ್ನೂ ಹೇಳಲಿಲ್ಲ. ಬರಿಯ ಕಣ್ಸವರುವ ಸಮಾಧಾನಕ್ಕಾಗಿ ಅವರು ಹಾಗೆ ಹೇಳಿರಲಾರರು ಎಂದೇ ಕಾರಂತರ ನಿರ್ದಾಕ್ಷಿಣ್ಯ ವಿಮರ್ಶೆಯ ಬಿಸಿಯನ್ನು ತಿಳಿದ ನಾನು ಇಂದಿಗೂ ಅಭಿಪ್ರಾಯವಿರಿಸಿಕೊಂಡಿದ್ದೇನೆ.
ಅವರೊಂದಿಗೆ ಕುಣಿಯುತ್ತಿದ್ದಾಗ, ಎಷ್ಟೋ ಬಾರಿ ಮಾತಿಲ್ಲದ ಅದು “ಮೂಕ ನೃತ್ಯ” ಎನಿಸಿತ್ತು.
ಯಕ್ಷಗಾನದಲ್ಲಾದರೆ ಅರ್ಥ ವಿವರಣೆ ಇದೆ. ಪಾತ್ರಧಾರಿಯ ಅಭಿನಯದಲ್ಲೂ ತಿಳಿಯಲಾಗದ, ಭಾಗವತರ ಹಾಡನ್ನೂ ಸರಿಯಾಗಿ ಕೇಳಿರದ ಪ್ರೇಕ್ಷಕನು, ಅರ್ಥ ಹೇಳಿದಾಗ ಸನ್ನಿವೇಶವನ್ನೂ ಪಾತ್ರಧಾರಿಯ ಭಾವನೆಗಳನ್ನೂ ಅರಿತುಕೊಳ್ಳುತ್ತಾನೆ. ಕಿನ್ನರ ನೃತ್ಯದಲ್ಲಿ ಆ ಅವಕಾಶವಿರಲಿಲ್ಲ.
ನಿಯಮಬದ್ಧ ಮುದ್ರೆಗಳೂ ಇರಲಿಲ್ಲ. ಕಾರಂತರ ಮನೋಧರ್ಮಕ್ಕೆ ಅನುಸಾರ, ಸಮಯ ಸ್ಫೂರ್ತಿಗೆ ಹೊಂದಿಕೊಂಡು ಮುದ್ರೆಗಳೂ ಬದಲಾಗುತ್ತಿದ್ದವು. ಕೆಲವು ಬಾರಿ ಪದಗತಿಯೂ ಬದಲಾಗಬೇಕಾಗುತ್ತಿತ್ತು. ಆ ಕ್ಷಣದ ಸ್ಫೂರ್ತಿಯಲ್ಲಿ ಅವರು ಕುಣಿಯುತ್ತಿದ್ದರು; ಸರಿ. ಆದರೆ, ನನಗೆ, ನಿಮಿಷಕ್ಕೆ ನಾಲ್ಕು ಬಾರಿ ಜಾಡು ಬದಲಿದರೂ ಆಗಬಹುದೆಂಬ ಮಾತು ಸರಿ ಕಾಣುತ್ತಿರಲಿಲ್ಲ.
ಬರಿಯ ಮುದ್ರೆಗಳನ್ನೇ ಅವಲಂಬಿಸಿಕೊಂಡು ಪ್ರೇಕ್ಷಕರು ನೃತ್ಯವನ್ನೂ ಕಥಾಭಾಗವನ್ನೂ ಅರಿತುಕೊಳ್ಳುವರೆಂಬ ಧೈರ್ಯ ನನಗಿರಲಿಲ್ಲ. ಆದರೂ ನಾವಿತ್ತ ಪ್ರದರ್ಶನಗಳ ಕಾರ್ಯಕ್ರಮಗಳು ಯಶಸ್ವಿಯಾಗಿದ್ದರೆ ಅದು ಕಾರಂತರ ವೈಯಕ್ತಿಕ ಆಕರ್ಷಣೆಯಿಂದಲೇ ಆಗಿರಬೇಕು. ಅವರ ಮಿಂಚಿನ ಬುದ್ಧಿ ಉಳಿದವರಲ್ಲೂ ಪ್ರತಿಬಿಂಬಿಸಿದುದರಿಂದಲೇ ಇರಬೇಕು ಎಂದೇ ನಾನು ನಂಬಿದ್ದೇನೆ.
ಕಹಿ- ಸಿಹಿ
ಅವೆಲ್ಲ ಕಾರಣಗಳಿಂದಾಗಿ, ಪ್ರವಾಸ ಮುಗಿಸಿ ಒಂದು ಬಾರಿಗೆ ಮನೆ ಸೇರಿದೆ ಎಂದಾದ ತರುವಾಯ, ಕಿನ್ನರ ನೃತ್ಯದ ವ್ಯವಸಾಯ ಮಾಡುವ ಅಪೇಕ್ಷೆಯನ್ನು- ಒಂದು ಬಾರಿ ಮೂಡಿತ್ತಾದರೂ- ಮರೆತೆ. ಕಾರಂತರೂ ಅನಂತರ ತಮ್ಮ ಪ್ರಯೋಗವನ್ನು ಮುಂದುವರಿಸಲಿಲ್ಲ.
ಯಕ್ಷನಂತೆ ಕಿನ್ನರನೂ ಕಾಣಿಸಿಕೊಳ್ಳಲಿಲ್ಲ. ಒಮ್ಮೆ ಮಾತ್ರ ಮೂಡಿ ಮರೆಯಾದ.
ಬಂದ ಮೇಲೆ ತಿರುಗಿ ಮೊದಲಿನಂತಾದೆ. ನಾಲ್ಕು ಊರುಗಳಲ್ಲಿ ಹೋಗಿ ಕುಣಿದು ಬಂದ ಒಂದು ನೆನಪನ್ನು ಮಾತ್ರವೇ ಉಳಿಸಿಕೊಂಡು ಉಳಿದೆ.
ಕರ್ಣನಿಂದಾಗಿ ಕಣ್ಣೀರು ಬಂತು
“ಅಡವಿ ಗಿಡ ಮರ ಕಲ್ಲು ನೋಡಿದರೆಯರಸಿನದ ಪುಡಿಯಂತೆ ತೋರುತಿದೆ ತಮ್ಮಾ! ಒಡಲೊಳುರಿ ತಾಪ ಬೇರ್ವಿಡಿದು ಜಠರಾಗ್ನಿಯಲಿ ನಡುಗುತಿದೆ ಕೈ ಕಾಲು ತಮ್ಮಾ” ಎಂದು ಸೀತೆಯನ್ನು ಕಳೆದುಕೊಂಡ ಶ್ರೀರಾಮ ಹಂಬಲಿಸುತ್ತಾನೆ. ಲಕ್ಷ್ಮಣನೊಡನೆ ಅಳಲನ್ನು ತೋಡಿಕೊಳ್ಳುತ್ತಾನೆ. ಪದ್ಯದ ತರುವಾಯ, ರಾಮನ ಉದ್ವೇಗದ ಸಂಪೂರ್ಣ ಚಿತ್ರಣವಾಗಬೇಕಾದರೆ- ತಾಳಮದ್ದಳೆಯ (ಕುಳಿತು ಮಾತನಾಡುವ- ವೇಷವಿಲ್ಲದ) ರಾಮ ಬಹಳ ಮಾತುಗಳನ್ನು ಖರ್ಚು ಮಾಡಬೇಕಾಗುತ್ತದೆ. ಭಾವನೆಗಳು ಮೂಡದೆ ಬರಿಯ ಮಾತುಗಳನ್ನೇ ಹೊರಡಿಸುವವನು ರಾಮನಾಗಿದ್ದರೆ, ಪ್ರೇಕ್ಷಕರಲ್ಲಿ ಪ್ರತಿಕ್ರಿಯೆ ಮೂಡಿಸುವ ಪ್ರಯತ್ನ ನಿರರ್ಥಕ ಎನಿಸುತ್ತದೆ,
ಶೃಂಗಾರ ರಸದ ನಿರೂಪಣೆ ಇರುವ ಪಾತ್ರಗಳಲ್ಲೂ ಅಂತಹುದೇ ಅನುಭವ. “ಕಾಮಸನ್ನಿಭ ಮಾತ ಕೇಳೂ! ನಿನ್ನೊಳ್! ಕಾಮಿಸಿ ಕಾಮಿಸಿ ಬಂದೆ ಕೃಪಾಳೂ!!” ಎಂದು ಮಾಯಾ ಶೂರ್ಪನಖಿಯು ಲಕ್ಷ್ಮಣನೊಡನೆ ನುಡಿದ ಸನ್ನಿವೇಶದಲ್ಲಿ ಬರಿ ಮಾತಿನ ಬರಡುತನವನ್ನೂ ಕಂಡುಕೊಳ್ಳುವಂತಾಗಿತ್ತು.
ಅತೃಪ್ತಿ
ವೀರರಸದ ಸಂದರ್ಭಗಳಲ್ಲೂ ಅದೇ ತೊಡಕು, ಒಂದೆರಡು ಸನ್ನೆಗಳು, ಎರಡು ಮೂರು ಮಾತುಗಳಲ್ಲಿ ಪರಿಣಾಮಕಾರಿಯಾಗಿ ಮಾಡಬಹುದಾದ ಕೆಲಸಕ್ಕೆ ಬಹಳ ಮಾತುಗಳನ್ನೇ ವೆಚ್ಚ ಮಾಡಿದ ತರುವಾಯವೂ ‘ಇದು ಸಾಕಾಗಲಿಲ್ಲ!’ ಎಂದು ಅತೃಪ್ತಿ.
“ಅರ್ಥ ಉದ್ದವಾಯಿತು.” ಎಂಬ ಮಾತು ಕೇಳಿ ಬಂದರೆ ಅದರಲ್ಲಿ ಆಶ್ಚರ್ಯವೇನು?
ಇಂತಹುದೇ ವಿಚಾರಗಳ ಚರ್ಚೆ ಜಿಜ್ಞಾಸೆಗಳು ಗೆಳೆಯರೊಂದಿಗೆ ಆಗಾಗ ನಡೆಯುತ್ತಿದ್ದವು.
‘ತಾಳ ಮದ್ದಳೆಗೆ ಅದರದೇ ಆದ ಆಕರ್ಷಣೆ ಇದೆ. ಶ್ರಾವಕರ ಕಲ್ಪನಾಶಕ್ತಿಗೂ ಸಾಕಷ್ಟು ಕೆಲಸ ಕೊಡುವ ಕಲೆ ಅದು. ಸಾಮಾನ್ಯ ಕೂಟದಲ್ಲೂ ಬೆಳಗಿನವರೆಗೆ ಕುಳಿತು ಆನಂದಿಸಬಹುದಾ ಆಕರ್ಷಣೆಯನ್ನು ಒದಗಿಸಲು ಸಾಧ್ಯ. ಸರಿಯಾದ ಹಿಮ್ಮೇಳವಿದ್ದರೆ, ತಾಳಮದ್ದಳೆಯಲ್ಲೇ ಬಹಳ ಮನರಂಜನೆ ಸಿಗುತ್ತದೆ’
ಎಂದು ವಾದಿಸುವ ಗೆಳೆಯರೂ ಇದ್ದರು.
ಆದರೆ ಮನರಂಜನೆ, ಕಲಾನುಭವದ ಸುಖ ಪಂಡಿತ ಪಾಮರಾದಿ ಸಕಲರಿಗೂ ದೊರಕಬೇಕಿದ್ದರೆ, ತನ್ನ ಮನಸ್ಸಿನಲ್ಲಿ ಮೂಡಿದ ಎಲ್ಲ ಭಾವನೆಗಳನ್ನೂ ಕಲಾವಿನು ಪ್ರದರ್ಶಿಸ ಬೇಕಾಗಿದ್ದರೆ, ಅದಕ್ಕೆ ‘ರಂಗಸ್ಥಳ’ವೇ ಸರಿಯಾದ ಸ್ಥಳವೆಂಬ ಭಾವನೆ ನನ್ನಲ್ಲಿ ಬಲಗೊಂಡಿತ್ತು.
ಆದುದರಿಂದ, ಯಕ್ಷಗಾನ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿ ಹಿಂದಿರುಗುವಾಗ, ಅತೃಪ್ತಿಯ ಹೊರೆ ನನ್ನ ಮೇಲೆ ಒತ್ತಡವನ್ನೇ ಹೇರುತ್ತಿತ್ತು.
ಕರ್ಣನ ರಥ
ದೀಪಾವಳಿಯ ಹಬ್ಬಕ್ಕೆ ಎರಡು ದಿನವಿತ್ತು. ಮನೆ ಬಳಿಯ ಕನ್ಯಾನದಲ್ಲಿ ಗೆಳೆಯರ ಕೂಟದವರು ತಾಳಮದ್ದಳೆ ಕೂಟವನ್ನು ಎಂದಿನಂತೆ ಏರ್ಪಡಿಸಿದ್ದರು.
ಅಂದಿನ ಪ್ರಸಂಗ ಕರ್ಣಪರ್ವ. ಸಾಮಾನ್ಯವಾಗಿ ಆಗಾಗ ಜರುಗುತ್ತಲಿದ್ದ ಕೂಟಗಳಿಂದ ಆ ದಿನದ ಕೂಟಕ್ಕೆ ಅದೇನೋ ಒಂದು ಹೆಚ್ಚಿನ ಆಕರ್ಷಣೆ- ಅಂದಿನ ಒಂದು ಹಬ್ಬದ ದಿನದಿಂದಾಗಿ ಬಂದಿತ್ತು. ನನಗಂದು ಕರ್ಣನ ಪಾತ್ರ ದೊರೆತಿತ್ತು. ಕರ್ಣನ ಸೇನಾಧಿಪತ್ಯದ ಮೊದಲ ದಿನ ಕಳೆದು, ರಾತ್ರಿಯಾದಾಗ “ಇರುಳಿನ ಒಡ್ಡೋಲಗ”ವನ್ನು ಕೌರವನು ಕರೆಯುವಂತಾದ ಪರಿಸ್ಥಿತಿ.‘ತಲೆಯ ಮುಸುಕಿನ! ಕೈಯ ಕದಪಿನ! ನೆಲನ ನೋಟದ! ಪೊತ್ತ ದುಗುಡದ’ ಅಂಗಾಧಿಪತಿಯ ಆ ದಿನದ ಸೋಲಿನ ದುಃಖವನ್ನು ಅನುಭವಿಸುತ್ತಾ ಮೌನದಿಂದ ನಿಂತಿದ್ದಾನೆ. ಮಾತನಾಡಿಸಲು ಬಂದ ಕೌರವನಿಗೆ ಉತ್ತರವನ್ನೀಯಲಾರ.
“ಏನಾಯಿತಿಂದಿ ನಾಹವದಿ ಕಲಿ ಕರ್ಣ?” ಎಂದು ಪ್ರಶ್ನಿಸಿದ ಕೌರವ. ಉತ್ತರವಿಲ್ಲ.
“ಮಾನನಿಧಿಗಳಿಗೇತಕೀಪರಿಯ ಮೌನ” ಎಂದರೂ ನಿರುತ್ತರ.
“ಧುರಧುರಂಧರರಿಂಗೆ ಬರಿದೆ ದುಗುಡವೇಕೆ? ನಿನ್ನ ವಿಕ್ರಮಕ್ಕೆ ಕುಂದು ಬರುವಂತಹ ವಿಚಾರವಾದರೂ ಏನು? ಮನೋವ್ಯಥೆಯನ್ನು ಬಿಡು. ನಿನಗಾಗಬೇಕಾದುದನ್ನು ನನ್ನೊಡನೆ ಹೇಳು” ಎನ್ನುತ್ತಾನೆ ಕೌರವ.
(ಕರ್ಣನ ಆಗಿನ ಅವಸ್ಥೆಯನ್ನು ಯಶಸ್ವಿಯಾಗಿ ನಿರೂಪಿಸಲು ಕೌರವನ ಮಾತುಗಳಿಂದ ಮಾತ್ರವಲ್ಲವೆ ಸಾಧ್ಯ?) ಮುಂದೆ- “ರಾಯ ಕೇಳಿಂದು ರಿಪುರಾಜೀವ ಕರಿಯೆಂಬ! ದಾಯತಕೆ ಕುಂದೆನಗೆ ಬಂದಿತೊಂದರಲಿ!! ಬಾಯಿಂದ ಪೇಳಿದರೆ ಬಪ್ಪುದೇ ಸಾರಥಿಗು! ಪಾಯವಿಲ್ಲದರಿಂದ ಪಿಸುಣ ನಾನಾದೆ” ಎಂದ ಕರ್ಣ, ಅನಂತರ “ಸಾರಥಿಯು ತನಗೋರ್ವ ಸಾಧ್ಯನಾದರೆ ನಾಳೆ! ಭೂರಿ ರಿಪುಬಲವೆಲ್ಲ ಭಂಗಿಸುವೆ ಕ್ಷಣದಿ” ಎಂದು ನುಡಿಯುತ್ತಾನೆ. ಶಲ್ಯನನ್ನು ತನಗೆ ಸಾರಥಿಯಾಗಿಸಿಕೊಡೆಂದು ಕೇಳುತ್ತಾನೆ. ಭಾರ್ಗವನಲ್ಲಿ, ತಾನು ಶಸ್ತ್ರ ವಿದ್ಯಾಭ್ಯಾಸ ಮಾಡಿದ ಹಿನ್ನೆಲೆಯ ಕುರಿತೂ ವಿವರಿಸುತ್ತಾನೆ.
(ಕಮಲಗಳಿಂದ ತುಂಬಿದ ಸರೋವರದಲ್ಲಿ ಮದ್ದಾನೆಯ ಚೆಲ್ಲಾಟ… ಬರಿ ಮಾತಿನಿಂದ ಅದನ್ನು ಹೇಗೆ ನಿರೂಪಿಸಿಲಿ?…ದುಂಬಿಯಾಗಿ ಬಂದ ದೇವೇಂದ್ರ ನನ್ನ ತೊಡೆಯನ್ನು ಕಡಿದ…ಸುರಿಯುತ್ತಿರುವ ರಕ್ತದ ಶೈತ್ಯದಿಂದ ತೊಡೆಯಲ್ಲಿ ತಲೆ ಇರಿಸಿ ಮಲಗಿದ ಗುರುವಿಗೆ ಎಚ್ಚರವಾದಾಗ ಲೋಕವೇ ಕುಸಿದಂತಾಯಿತು ನನಗೆ…. ನನ್ನ ಮಾನಸಿಕ ಯಾತನೆಯನ್ನು ಯಾವ ಮಾತಿನಲ್ಲಿ ಬಿಂಬಿಸಲಿ?)
ಪ್ರಸಂಗದುದ್ದಕ್ಕೂ ಇಂತಹುದೇ ತೊಳಲಾಟ ನನಗೆ ಬಂದೊದಗಿತ್ತು. ನಮ್ಮವರೇ ಆದರೂ, ಕ್ಷಮೆ ಕೊಡಲಾರದ ವಿಮರ್ಶಕ ವರ್ಗದವರಿಂದ ತುಂಬಿದ ಆ ಸಭೆಯಲ್ಲಿ ಭಾವಪೂರ್ಣವಾಗಿ ಪಾತ್ರ ನಿರ್ವಹಣೆ ಮಾಡಬೇಕಿತ್ತು.
ಎಷ್ಟೇ ಒದ್ದಾಟವಾದರೂ ತೋರಿಸಿಕೊಳ್ಳದೆ, ಅಂದು ಕರ್ಣನ ರಥವನ್ನು ಸಾಗಿಸಿದೆ. ಇಲ್ಲದ ತಳಮಳ- ಸಲ್ಲದ ಭಯಗಳಿಂದಾಗಿ ಮಾತುಗಳು ‘ನಾಟಕೀಯ’ ಮಟ್ಟಕ್ಕೆ ಹರಿದಿರಬೇಕು. ಕಥೆ ಮುಕ್ಕಾಲು ಭಾಗ ಕಳೆದರೂ ತೂಕಡಿಸುವವರಾಗಲೀ, ಸೋತು ಮಲಗಿರುವವರಾಗಲಿ ಕಂಡುಬರಲಿಲ್ಲ. ಆಸಕ್ತಿಯಿಂದ ಅರ್ಥ ಕೇಳುವವರೇ ಹೆಚ್ಚಾಗಿ ಕಾಣಿಸಿದರು. ಪಾತ್ರ ನಿರೂಪಣೆ ಸರಯಾಗಿಯೇ ಆಗುತ್ತಿರಬೇಕು ಎಂದುಕೊಂಡೆ.
ಕೊನೆಯಲ್ಲಿ-
“ಕವಚಕುಂಡಲಗಳನನು ಧಾರೆ ಎರೆದುಕೊಡಲು ನೀರು ಸಿಗದಿರುವಾಗ, ಎದೆಯ ಅಮೃತಕಲಶವನ್ನೇ ಬಗೆದುಕೊಡು” ಎಂದ ವೃದ್ಧ ಬ್ರಾಹ್ಮಣ, ಹರಿ ಎಂದು ತಿಳಿದು ಅವನನ್ನು ಸ್ತುತಿಸಿದಾಗ, ನನಗೆ ಅಂದು ವಿಶೇಷ ಸ್ಪೂರ್ತಿಯನ್ನಿತ್ತ ಪರಮಾತ್ಮನನ್ನೇ ನಾನು ಮನಸಾರೆ ವಂದಿಸಿದ್ದೆ.
ಕೇಳಿದವರು ಕೆಲವರು ಕಣ್ಣೊರಸಿಕೊಂಡುದನ್ನೂ ಅಂದು ಕಂಡೆ. ನನ್ನೆದೆಯಲ್ಲಿ ಅದುಮಿ ಹಿಡಿದಿದ್ದ ದುಃಖ ಅವರ ಕಣ್ಣುಗಳಿಂದ ಚಿಮ್ಮಿತ್ತು ಎಂದೇ ನನಗನ್ನಿಸಿತು.
ಕೂಟ ಚದರಿತ್ತು.
ಬೆಳಕು ಹರಿದ ಕೂಡಲೇ, ಮನೆಗಳಿಗೆ ಓಟ ಕೀಳಬೇಕಾದ ಪರಿಸ್ಥಿತಿ ಇಲ್ಲದ ಕೆಲವರು ಗೆಳೆಯರು ತಾಳಮದ್ದಳೆ ನಡೆದಲ್ಲೇ ಚಾಪೆಗಳಲ್ಲಿ ಕುಳಿತಿದ್ದೆವು. ಹತ್ತಿರದ ಹೋಟೆಲಿನಿಂದ ಕಾಫಿ-ತಿಂಡಿ ತರಿಸಿ ಹರಟೆಗಳನ್ನು ಕೊಚ್ಚಲು ಪ್ರಾರಂಭಿಸಿದ್ದೆವು.
ಒಂದೇ ದಾರಿ
“ವಿಠಲಣ್ಣನ ಅರ್ಥ ಬಹಳ ಒಳ್ಳೆಯದಿತ್ತು!” ಎಂದನೊಬ್ಬ ಗೆಳೆಯ. ಪ್ರಶಂಸೆ ನನಗೂ ಬೇಡವಾಗಿರಲಿಲ್ಲ. ಆದರೂ-
ವಿಮರ್ಶೆಯ ಮಾತೇನಾದರೂ ಬರುವುದೇ ? ಎಂದು ನಾನು ಇನ್ನೊಬ್ಬ ಗೆಳೆಯರಾದ ಕೆ. ಪಿ. ಗೋಪಾಲಕೃಷ್ಣ ಭಟ್ಟರ ಮುಖ ನೋಡಿದೆ. ನನ್ನ ನಿರೀಕ್ಷೆ ತಪ್ಪಾಗಿರಲಿಲ್ಲ.
“ಎಷ್ಟೆಂದರೂ, ಇದು ಅರ್ಧ ತೃಪ್ತಿಯ ಸಾಧನೆ” ಎಂದೇ ಅವರು ನುಡಿದರು. ಅಲ್ಲಿಗೇ ಆ ಮಾತು ಮುರಿದರು.
ಇತರರೆಲ್ಲ ಹೊರಟು ನಿಂತಾಗ, ನಾನು ಅಲ್ಲಿಂದ ಹೊರಟೆ. ಅವರೂ ನನ್ನೊಂದಿಗೆ ಸ್ಪಲ್ಪ ದೂರ ಬಂದರು.
‘ಕವಿಗಳು ಚಿತ್ರಿಸಿದ ಪಾತ್ರಗಳ ನಿಜ ವರ್ಣನೆ ಬರಿಯ ಅರ್ಥಗಾರಿಕೆಯಿಂದ ಆಗುವುದೊ? ಇಲ್ಲವೊ? ಎಂದು ಹೇಳುವ ಶಕ್ತಿ ಇದ್ದವನು ನಾನಲ್ಲ. ಆದರೆ, ಕವಿಗೆ ಅಪಚಾರವಾಗದಂತೆ ಪಾತ್ರಚಿತ್ರಣದ ಕೆಲಸವಾಗಬೇಕಾದರೆ, ತಾಳಮದ್ದಳೆ ಅದಕ್ಕೆ ಸಾಧನವೇ ಅಲ್ಲ’ ಎಂಬ ಮಾತುಗಳನ್ನು ಮತ್ತೂ ಒಂದು ಬಾರಿ ನನ್ನ ತಲೆಯಲ್ಲಿ ತುಂಬಿದರು.
“ನಾನು ಇನ್ನೇನು ತಾನೆ ಮಾಡಲು ಸಾಧ್ಯ?” ಎಂದೆ.
“ಇದಕ್ಕೆ ಇರುವುದು ಒಂದೇ ದಾರಿ. ಆ ದಾರಿಯಲ್ಲಿ ಹೋಗುವ ಧೈರ್ಯ ನಿನಗೆ ಇದೆಯೆ?”
“ಅದೇನು?”
“ಯಾವುದಾದರೂ ಮೇಳಕ್ಕೆ ಸೇರಿಕೊಳ್ಳುವುದು. ವೇಷಧಾರಿಯಾಗುವುದು.”
“ಹಾಂ!”
ನನ್ನ ಉದ್ಗಾರಕ್ಕೆ ಪ್ರಬಲವಾದ ಕಾರಣ ಇತ್ತು.
ಕುಣಿಯಲು ಕಲಿತವರೇ ಮೇಳದ ವೇಷಧಾರಿಗಳು
ನನ್ನ ಇನ್ನೊಬ್ಬ ಗೆಳೆಯರಾದ ಕೆ.ಪಿ. ಗೋಪಾಲಕೃಷ್ಣ ಭಟ್ಟರು ಸಲಹೆ ನೀಡುವವರೆಗೂ ಮೇಳಕ್ಕೆ ಸೇರಿ ವೃತ್ತಿಪರ ಕಲಾವಿದನಾಗುವ ಯೋಚನೆ ನನ್ನ ತಲೆಯಲ್ಲೇ ಸುಳಿದಿರಲಿಲ್ಲ.
ಕೆಲವೊಂದು ಕಡೆ ಆಟಗಳಿಂದ ಆಕರ್ಷಿತನಾದಾಗ, ಒಂದೆರಡು ವೇಷಗಳು ನನ್ನ ಮೇಲೆ ಪ್ರಭಾವ ಬೀರಿದಾಗ ‘ನಾನು ಹಾಗೆ ಕುಣಿಯಲಾಗುತ್ತಿದ್ದರೆ ?’ ಎಂದು ಕೊಂಡಿದ್ದೆ.
ಹೊರತು, ಆರು ತಿಂಗಳ ಕಾಲ ಎಡೆಬಿಡದೆ ಪ್ರತಿ ರಾತ್ರೆಯೂ ಗೆಜ್ಜೆ ಕಟ್ಟುವ ಯೋಚನೆ ಮಾಡಿರಲಿಲ್ಲ.
ಮೇಳಗಳ ನೇರ ಸಂಪರ್ಕವಿರಲಿಲ್ಲವಾದರೂ, ವೇಷ ಹಾಕುವವರು ಕೆಲವರ ಗುರುತಿತ್ತು. ವೇಷಧಾರಿಗಳ ಜೀವನದ ‘ಸೊಗಸು’ ಕಾಣಿಸಿತ್ತು.
ಅವರು ಯಾವ ದೇವಿಯ ವರಪ್ರಸಾದದಿಂದಾಗಿಯೇ ಕಲಾವಿದರಾಗಿರಲಿ, ಬೇರೇನೂ ಉದ್ಯೋಗ ದೊರೆಯದೆಯೇ ಆಟದ ಮೇಳ ಸೇರಲು ಬಂದವರು ಎನ್ನುವ ಭಾವನೆ ಜನರಲ್ಲಿ ಬೇರೂರಿತ್ತು. ಕೆಲವರಂತೂ, ಆ ಭಾವನೆಯನ್ನು ಮತ್ತೂ ಬೆಳೆಸಲು ಸಹಕರಿಸಿದ್ದರೆಂದರೆ ಹೆಚ್ಚಲ್ಲ.
ಆಟವಾಡುವ ರಾತ್ರಿಯ ಒಂದು ದಿನದ ಮಟ್ಟಿಗೆ, ಒಂದಷ್ಟು ಅನ್ನ ಬೇಯಿಸಿ ತಿಂದು, ಸಾಧ್ಯವಿದ್ದರೆ ಕೆಲವು ಗಂಟೆಗಳ ಕಾಲ ಮಲಗಿ ನಿದ್ರಿಸಲು ಒಂದು ‘ಬಿಡಾರ’ಕ್ಕೆ ಅವಕಾಶ ಕೊಡ ಬೇಕಾದರೆ, ಊರ ಜನ ಹಿಂದುಮುಂದು ನೋಡುವುದಿತ್ತು.
ವಾಹನ ವ್ಯವಸ್ಥೆಯೂ, ರಸ್ತೆ ದಾರಿಗಳೂ ಸರಿಯಾಗಿ ಇಲ್ಲದ ಆ ಕಾಲದಲ್ಲಿ ಒಂದು ಆಟವಾದ ನಂತರ ಇನ್ನೊಂದು ಆಗಬೇಕಾದರೆ 15-20 ಮೈಲುಗಳ ಕಾಲ್ನಡಿಗೆಯ ಪ್ರವಾಸವೂ ಬೇಕಾದ ಸಂದರ್ಭಗಳು.
ಮೇಳಗಳನ್ನು ವಹಿಸಿಕೊಂಡ ಭಾಗವತರನ್ನು ಬಿಟ್ಟರೆ, ಉಳಿದವರು ಹೆಚ್ಚಿನವರ ವಿದ್ಯೆ- ಸಂಸ್ಕಾರಗಳು ಪ್ರಶ್ನಾರ್ಹ.
ಒಬ್ಬಿಬ್ಬರು ವಿದ್ವಾಂಸರು ಕೂಡಾ, ಯಾವುದೋ ಆವ್ಯಕ್ತ ಆಕರ್ಷಣೆಯಿಂದ ವೇಷಗಳನ್ನು ಹಾಕುತ್ತಿದ್ದರಾದರೂ, ಆಟ ಆಡಿಸುವವರಿಗೆ ಬೇಕೆಂದಾದರೆ ಅವರನ್ನು ಕರೆಸಿಕೊಳ್ಳಬೇಕಾಗಿತ್ತು. ಅವರಾಗಿ ಯಾವ ಕಡೆಗೂ, ಕೆಲಸವನ್ನು ಅರಸಿಕೊಂಡು ಹೋಗುತ್ತಿರಲಿಲ್ಲ.
ನಿಕೃಷ್ಠ ಸ್ಥಿತಿಯ ಪರಮಾವಧಿಯಲ್ಲಿದ್ದ ಆ ಬದುಕನ್ನು ನೆನೆದೇ ನಾನು ‘ಹಾಂ!’ ಎಂದುದು.
“ಆ ಕುರಿತು ನೀನೇನೂ ಭಯ ಪಡಬೇಕಾಗಿಲ್ಲ. ನೀನು ಮಾಡಬೇಕಾದುದನ್ನು ಒಳ್ಳೆಯದಾಗಿ, ಒಳ್ಳೆಯವನಾಗಿ ಮಾಡು. ತಾನು ಒಳ್ಳೆಯವನಾದರೆ ಲೋಕವನ್ನೇ ಒಳ್ಳೆಯದಾಗಿಸಲು ಸಾಧ್ಯವಿದೆ” ಎಂದರು ಆ ಗೆಳೆಯರು.
ಆಟದ ಪೇಚಾಟವನ್ನು ಸರಿಯಾಗಿ ತಿಳಿದಿದ್ದ ತಂದೆಯವರನ್ನು ನೆನಪು ಮಾಡಿಕೊಂಡು-“ಮನೆಯಲ್ಲಿ?” ಎಂದೆ.
“ಮನೆಯ ಮಟ್ಟಿಗೆ ನೀನೇನೂ ಯೋಚನೆ ಮಾಡಬೇಡ. ಮೊದಲು ಯಾವುದಾದರೂ ಮೇಳಕ್ಕೆ ಸೇರಿಕೊ. ಸೇರಿಕೊಂಡ ನಂತರ ಅರ್ಧದಲ್ಲಿ ಬಿಡುವಂತಾದರೆ ಮರ್ಯಾದೆಗೆ ಕುಂದು ಎಂಬ ಮಾತೂ ಬರುತ್ತದೆ. ಅದೂ ಅಲ್ಲವಾದರೆ, ತಂದೆಯವರ ಕೈ ಕಾಲು ಹಿಡಿದಾದರೂ ನಾನು ಒಪ್ಪಿಸುತ್ತೇನೆ” ಎಂದು ಅವರು ಮತ್ತೂ ಹುರಿದುಂಬಿಸಿದರು.
ಕನ್ಯಾನದಿಂದ ಮುಂದೆ ನಾಲ್ಕು ಮೈಲುಗಳ ದೂರದವರೆಗೂ ಇದೇ ರೀತಿ ಮಾತು.
ಆರಂಭದಲ್ಲಿದ್ದ ಅಂಜಿಕೆ ಮಾಯವಾಗತೊಡಗಿತ್ತು. ಕೆಡುಕು ಇದ್ದರೇನಂತೆ? ಕೆಟ್ಟದನ್ನು ಒಳ್ಳೆಯದಾಗಿ ಮಾಡುವ ನಿಷ್ಠೆ ನಮ್ಮಲ್ಲಿ ಇದ್ದರೆ ಸಾಲದೆ? ಉಳಿದವರು ಹೇಗಿದ್ದರೂ ನಾವು ನಿಸ್ಪ್ಟಹರಾಗಬಾರದು ಎಂದಿದೆಯೆ? ಎಂದಾಯಿತು ನನ್ನ ಮನೋಸ್ಥಿತಿ.
“ಆಗಲಿ, ಯಾವುದಾದರೊಂದು ಮೇಳವನ್ನು ಸೇರುತ್ತೇನೆ” ಎಂದು ಅವರನ್ನು ಬೀಳ್ಕೊಂಡೆ.
ಯಾವ ಮೇಳಕ್ಕೆ ಸೇರಬಹುದು? ಎಂಬುದು ಮುಂದಿನ ಪ್ರಶ್ನೆ.
ಜನರು ಬರಲು ಹೇಸುತ್ತಿದ್ದರೂ, ದಶಾವತಾರ ಮೇಳಕ್ಕೆ ಕಲಾವಿದನಾಗಿಯೇ ಪ್ರವೇಶ ದೊರಕಿಸಿಕೊಳ್ಳುವ ಕೆಲಸ ಅಷ್ಟು ಸುಲಭವಾಗಿರಲಿಲ್ಲ.
ಸಣ್ಣ ಹುಡುಗರಾಗಿರುವಾಗ, ಮನೆಯಿಂದ ಹೇಳದೆ ಓಡಿ ಬಂದು, ಮೇಳದಲ್ಲಿ ಜೀತದಾಳುಗಳಂತೆ ಸೇರಿಕೊಳ್ಳಲು ಸಾಧ್ಯವಿರುತ್ತಿತ್ತು – ಅಷ್ಟೆ. ಪ್ರಾಯ ಬಂದವರಿಗೆ, ಅದೂ ಕಲೆಯ ಗಂಧ ಒಂದಷ್ಟು ಮೈ ಪೂಸಿದೆ ಎನ್ನುವವರಿಗೆ ಅವಕಾಶ ನಾಸ್ತಿಯಾಗಿರುತ್ತಿತ್ತು.
ಏನೂ ತಿಳಿಯದವರಿಗಾದರೆ, ಬಿಟ್ಟಿ ದುಡಿತದ ಮಹಿಮೆ ಗೊತ್ತಿರುವುದಿಲ್ಲ ಎಂಬುದೂ ಅದಕ್ಕೊಂದು ಕಾರಣವಾಗಿರಬೇಕು. ಆಗ ನನಗದು ಗೊತ್ತಿರಲಿಲ್ಲವೆನ್ನಿ.
ಅದೇ ಗುಂಗಿನಲ್ಲಿ, ಯೋಚಿಸುತ್ತಾ ಬರುತ್ತಿದ್ದಾಗ, ಮೇಳಗಳು ತಮ್ಮ ತಿರುಗಾಟವನ್ನು ಮರುದಿನವೇ ಪ್ರಾರಂಭ ಮಾಡಲಿವೆ ಎಂಬುದು ನೆನಪಿಗೆ ಬಂತು.
“ಕೂಡ್ಲು, ಕಟೀಲು, ಕದ್ರಿ….” ಎಂದು ಒಂದೊಂದಾಗಿ ಮೇಳಗಳ ಹೆಸರನ್ನು ಜ್ಞಾಪಿಸಿಕೊಳ್ಳುತ್ತಾ, ಮೇಳಗಳನ್ನು ವಹಿಸಿಕೊಂಡವರು ಯಾರು? ಎಂದು ನೆನಪು ಮಾಡಿಕೊಳ್ಳತೊಡಗಿದೆ.
ಕೂಡ್ಲು- ಶ್ರೀ ಪುತ್ತಿಗೆ ರಾಮಕೃಷ್ಣ ಜೋಯಿಸರಿಗೆ ಸೇರಿತ್ತು. ಕಟೀಲು?
ಕಲ್ಪನೆಯೇ ಆಹಾರ
ಕಟೀಲು ಮೇಳವನ್ನು ವಹಿಸಿಕೊಂಡ ಶ್ರೀ ಕಲ್ಲಾಡಿ ಕೊರಗಪ್ಪ ಶೆಟ್ಟಿಯವರ ಹೆಸರು ಮನಃಪಟಲದಲ್ಲಿ ಸುಳಿದ ಕೂಡಲೇ-
ಅವರನ್ನು ಕಾಣಬೇಕು, ಕೂಡಲೇ ಕಂಡು ಮಾತನಾಡಬೇಕು ಎಂದೇ ನಿರ್ಧರಿಸಿದೆ. ತಂದೆಯವರ ನಾಟಕ ಮಂಡಳಿಯಿಂದಾಗಿ ಅವರಿಗೆ ನನ್ನ ಮುಖ ಪರಿಚಯ ಆ ಮೊದಲೇ ಆಗಿತ್ತು. ನಿಮ್ಮ ಮೇಳವನ್ನು ಸೇರಿಕೊಳ್ಳುತ್ತೇನೆ ಎಂದರೆ ‘ಬೇಡ’ ಎನ್ನಲಾರರು ಎಂಬ ಧೈರ್ಯವೂ ಬಂದಿತ್ತು.
ರಸ್ತೆಯ ಬದಿಯಲ್ಲಿದ್ದ ಆನೆಕಲ್ಲಿನಲ್ಲೇ ಸಂಜೆಯವರೆಗೂ ಕಾದು, ಬಂದ ಬಸ್ಸನ್ನು ಏರಿ ಹೊರಟೆ.
ಅಷ್ಟರವರೆಗೂ, ನನ್ನನ್ನು ಸಾಕಷ್ಟು ಒದ್ದಾಡಿಸಿದ್ದ ಕಲ್ಪನೆಯೇ ನನ್ನ ಅಂದಿನ ಆಹಾರ.
ನಾಲ್ಕೂ ಸುತ್ತಿನಲ್ಲಿ ನದಿಯ ನೀರಿನಿಂದ ಕಾಲು ತೊಳೆಯಿಸಿಕೊಳ್ಳುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮುಂಭಾಗದಲ್ಲಿ ಬಸ್ಸಿನಿಂದ ಇಳಿದೆ. ಶ್ರೀ ದೇವಿಯ ಗರ್ಭಗುಡಿಗೆ ಪ್ರದಕ್ಷಿಣೆ ಬಂದ ತರುವಾಯ, ನಮ್ಮೂರಿನ ಸಮೀಪದವರೇ ಆಗಿದ್ದ ಆಗಲೇ ಪ್ರಸಿದ್ಧರೆನಿಸಿದ್ದ ಮಿತ್ರ ಶ್ರೀ ಅಳಿಕೆ ರಾಮಯ ರೈಗಳನ್ನು ಹುಡುಕಿಕೊಂಡು ಹೊರಟೆ.
ಅವರನ್ನು ಕಂಡು, ನಾನು ಅಲ್ಲಿಯವರೆಗೆ ಬಂದ ಕಾರಣವನ್ನು ಹೇಳಿದಾಗ- ಅವರು ಸ್ವಲ್ಪ ಹೊತ್ತು ಮೌನವಾಗಿಯೇ ಇದ್ದರು. ಆದರೆ, ಏಕೆ ? ಏನು? ಎಂಬ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಮೇಳದ ವ್ಯವಸ್ಥಾಪಕ ಶ್ರೀ ಕಲ್ಲಾಡಿ ಕೊರಗಪ್ಪ ಶೆಟ್ಟಿಯವರಿದ್ದಲ್ಲಿಗೆ ಕರೆದೊಯ್ದರು; ಶೆಟ್ಟರಿಗೆ ನನ್ನ ಪರಿಚಯ ಮಾಡಿಸಿದರು.
ನನ್ನ ಹೆಸರು ಅವರಿಗೆ ಗೊತ್ತಿತ್ತಾದರೂ ಬಣ್ಣ ಬಳಿಯದೆ ಇದ್ದ ಮುಖವನ್ನು ಅಷ್ಟು ಸಮೀಪದಿಂದ ಅವರು ನೋಡಿದುದು ಅದೇ ಮೊದಲಾಗಿರಬೇಕು.
ಉಪಚಾರ- ಉಪಾಹಾರ ಇತ್ಯಾದಿಗಳು ಕಳೆದ ಮೇಲೆ, ನನ್ನ ಮನದ ಬಯಕೆಯನ್ನು ಅವರಿಗೆ ತಿಳಿಸಿದೆ.
“ನಮ್ಮೊಂದಿಗೆ ಬರುತ್ತೀರಾ? ಆಗತ್ಯವಾಗಿ ಬನ್ನಿ” ಎಂದರು ಅವರು. ಕಷ್ಟಕಾರ್ಪಣ್ಯದ ಮಾತೆತ್ತಿ ನನ್ನನ್ನು ನಿರುತ್ಸಾಹ ಗೊಳಿಸಲಿಲ್ಲ. ಯಾವುದೇ ವಿಘ್ನ ವಿಡ್ಡೂರದ ಸುಳಿವು ಕೊಡಲಿಲ್ಲ. ನನ್ನ ನಾಟಕದ ಪಾತ್ರಗಳನ್ನು ಕಂಡಿದ್ದು, ಅವುಗಳಿಂದ ಆಕರ್ಷಿತರಾಗಿದ್ದುದಷ್ಟನ್ನೇ ಹೇಳಿದರು. ಅವರ ಯಕ್ಷಗಾನ ಮಂಡಳಿಗೆ ನಾನು ಬರುವುದಕ್ಕೆ ಸ್ವಾಗತವೆಂದರು.
ನನಗೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಡುವಂತೆ ತನ್ನವರಿಗೆ ಆದೇಶವಿತ್ತರು.
ಕುಣಿತವಿರಲಿ- ಬಿಡಲಿ, ವೇಷಧಾರಿ ಎಂದ ಮೇಲೆ ಪ್ರತಿಯೊಬ್ಬನೂ ಯಕ್ಷಗಾನದಲ್ಲಿ ಕಾಲಿಗೆ ಗೆಜ್ಜೆ ಕಟ್ಟಲೇಬೇಕು. ಕುಣಿಯಲು ಕಲಿತವರೇ ಮೇಳಕ್ಕೆ ವೇಷಧಾರಿಗಳಾಗಿ ಬರುವವರು, ನಾನೊಬ್ಬ ಆ ನಿಯಮಕ್ಕೆ ಅಪವಾದವಾಗಿ ಬಂದಿದ್ದರೆ, ನನಗಾಗಿ ಆ ನಿಯಮವನ್ನು ಮುರಿಯಬೇಕಾಗಿ ಬರಲಿಲ್ಲ. ಗೆಜ್ಜೆಯನ್ನೆತ್ತಿಕೊಳ್ಳಲು ನಾನೇ ಮುಂದಾಗಿದ್ದೆ.
ಶ್ರೀ ದೇವಿಯ ಸನ್ನಿಧಿಯಲ್ಲಿ – ಸಂಪ್ರದಾಯದಂತೆ ಅಂದು ಆಟದ ಸೇವೆ. ಚೌಕಿಯಲ್ಲಿ ಕುಳಿತು ಬಣ್ಣ ಬಳಿಯುವವರೆಲ್ಲ, ಬಣ್ಣಗಾರಿಕೆ ಆರಂಭಿಸುವಾಗ ಗೆಜ್ಜೆಗಳಿಗೆ ನಮಸ್ಕಾರ ಮಾಡಿ ಅವುಗಳನ್ನು ಎತ್ತಿಕೊಳ್ಳುವ ರೂಢಿ. ಕಣ್ಣು ಮುಚ್ಚಿ ದೇವರನ್ನು ಧ್ಯಾನಿಸುತ್ತಾ ಅವುಗಳನ್ನು ಕೈಗಳಲ್ಲಿ ಹಿಡಿದುಕೊಳ್ಳುವುದೂ ಇದೆ- ಒಂದೆರಡು ನಿಮಿಷ.
ನಾನಂತೂ, ವಿಶೇಷ ಪ್ರಾರ್ಥನೆ ಸಲ್ಲಿಸಿಯೇ ಗೆಜ್ಜೆಗಳನ್ನು ಎತ್ತಿಕೊಂಡಿದ್ದೆ.
ಸೇವೆಯಾಟದ ದಿನದ ಪ್ರಸಂಗ “ಅಶ್ವಮೇಧ” (ಜೈಮಿನಿ ಭಾರತದ ಪಾಂಡವಾಶ್ವಮೇಧದ ಕಥಾನಕ) ಎಂದು ಆ ಮೊದಲೇ ನಿಶ್ಚಯವಾಗಿತ್ತು.
ಗೆಳೆಯರಾದ ಅಳಿಕೆ ರಾಮಯ ರೈ ಅವರ ಮಾತಿನ ಮೇಲೆ ವಿಶ್ವಾಸವಿಟ್ಟು ನನಗೆ ಕೃಷ್ಣನ ಪಾತ್ರವನ್ನು ಕೊರಗಪ್ಪ ಶೆಟ್ಟಿಯವರು ಇತ್ತಿದ್ದರು. ಯಕ್ಷಗಾನ ನಾಟಕದ ಕೃಷ್ಣನಾಗಿ ಅವರೆದುರು ಸುಳಿದಿದ್ದುದೂ ಅವರ ಆಯ್ಕೆಗೆ ಒಂದು ಕಾರಣವಾಗಿದ್ದಿರಬಹುದು.
ಅಂತೂ, ಅವರ ಅಂದಿನ ಆಯ್ಕೆಯಿಂದಾಗಿ, ಯಕ್ಷಗಾನದಲ್ಲಿ ಹೊಸದೊಂದು ಪ್ರಯೋಗವನ್ನು ಮಾಡಿ ನೋಡುವ ಅವಕಾಶ, ನನಗೆ ಸುಲಭವಾಗಿ ದೊರೆಯಿತು.
ಆ ಪ್ರಯೋಗ, ವೇಷಭೂಷಣಕ್ಕೆ ಸಂಬಂಧಿಸಿದುದು.
ಹಳೆಯ ಪದ್ಧತಿಯ ಕೆಲವಂಶ ಅಳಿಯುತ್ತಾ ಬಂದಿದ್ದು, ಹೊಸತೆಂಬುದು ಇನ್ನೂ ಬಲವಾಗದಿದ್ದ ದಿನಗಳು ಅವು. ಬದಲುತ್ತಿದ್ದ ಕೆಲವೊಂದು ಪದ್ಧತಿಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯವೆನಿಸುತ್ತದೆ. ಆಟಗಳಲ್ಲಿ ಸೂತ್ರಧಾರಿಗಳೆನಿಸಿದ ಭಾಗವತರು, ಪ್ರಸಂಗದ ಪೀಠಿಕೆಯಾದೊಡನೆ ರಂಗದ ಬಳಿ ಬಂದವರು, ಮುಂಜಾನೆಯ ಮಂಗಳದವರೆಗೂ ಅಲ್ಲೇ ಉಳಿಯಬೇಕು. ಉಳಿಯುವುದು ಮಾತ್ರವೇ ಅಲ್ಲದೆ, ರಾತ್ರಿಯ ಹದಿನೆಂಟು ಘಳಿಗೆಯ ಕಾಲವೂ ನಿಂತೇ ಇರಬೇಕಾಗುತ್ತಿತ್ತು.
ಕೈಯಲ್ಲೊಂದು ಜಾಗಟೆಯನ್ನು ಮಾತ್ರವೇ ಹಿಡಿದು ನಿಂತಿರುವ ಅವರಿಗೆ ಅನ್ವಯಿಸುವ ನಿಯಮವೇ ಮದ್ದಳೆ-ಚೆಂಡೆಗಳನ್ನು ಕೊರಳಿನಿಂದ ಇಳಿಬಿಟ್ಟು, ನಿಲ್ಲಬೇಕಾದ ಮೃದಂಗವಾದಕರಿಗೂ ಚೆಂಡೆಗಾರರಿಗೂ ಅನ್ವಯಿಸುತ್ತಿತ್ತು.
ಭಾಗವತರಿಗೆ ಸಿಂಹಾಸನ
ಅದು ಹಿಂದಿನ ಮಾತು.
ನಾನು ವೇಷ ಹಾಕಲೆಂದು ಹೋಗುವ ದಿನಕ್ಕೆ ಈ ನಿಯಮದಲ್ಲಿ ತಕ್ಕಷ್ಟು ಬದಲಾವಣೆಯಾಗಿತ್ತು.
ಹಿಂದೆ ಒಬ್ಬರು ಭಾಗವತರು ತನ್ನ ವೈಯಕ್ತಿಕ (ಆರೋಗ್ಯದ) ಕಾರಣದಿಂದಾಗಿ ನಿಂತುಕೊಂಡೇ ರಾತ್ರಿಯೆಲ್ಲಾ ಪದ ಹೇಳಲು ತನಗೆ ಅಸಾಧ್ಯವಾಗಬಹುದು ಎಂದಾಗ- ವೇಷಧಾರಿಗಳ ಸಿಂಹಾಸನವಾಗಿಯೂ, ಸನ್ನಿವೇಶಕ್ಕೆ ತಕ್ಕಂತೆ ರಥವಾಗಿಯೂ ಉಪಯೋಗವಾಗುತ್ತಿದ್ದ ನಾಲ್ಕು ಕಾಲುಗಳಿಗೂ ಚಕ್ರ ಜೋಡಿಸಿದ ‘ರಥ’ವನ್ನು ಅವರು ಕುಳಿತುಕೊಳ್ಳಲೆಂದು ಕೊಡಲಾಯಿತಂತೆ.
(ಆಗಿನ ರಥಗಳೆಂದರೆ ಹಲವು ಬಿಡಿ ಹಲಗೆಗಳನ್ನುಒಟ್ಟಾಗಿ ಜೋಡಿಸಿ ಹಗ್ಗದಿಂದ ಕಟ್ಟಲಾಗುತ್ತಿತ್ತು. ರಥವನ್ನು ಕಟ್ಟುವ ಕೆಲಸವೂ ಕೆಲವರಿಗೆ ಮಾತ್ರ ಸಾಧಿಸಿದ್ದ ಕಲೆಯಾಗಿತ್ತು. ಒಯ್ಯವ ಅನುಕೂಲಕ್ಕಾಗಿಯೂ ಹಾಗೆ ಮಾಡಿರಬಹುದು ಎನಿಸುತ್ತದೆ.)
ವೇಷಧಾರಿಗಳಿಗೆ ‘ಸಿಂಹಾಸನ’ದ ಆಗತ್ಯ ಬಿದ್ದಾಗ, ರಥವನ್ನೇರಿ ಹೋಗುವ ಸನ್ನಿವೇಶಗಳಿಗೆ ಅವಶ್ಯವಾದಾಗ, ಭಾಗವತರು ತನ್ನ ಆಸನವನ್ನೇ ಬಿಟ್ಟುಕೊಡಬೇಕಾಗುತ್ತಿತ್ತು.
ರೇಖೆ: ಹರಿಣಿ – ಕೃಪೆ: ಪ.ರಾಮಚಂದ್ರ
ಒಂದೆರಡು ವರಷಗಳ ತರುವಾಯ ಹಾಗೆ ‘ಉಠ್-ಬೈಸ್’ ಮಾಡಿಸುವ ತಾಪತ್ರಯ ಬೇಡವೆಂದು, ರಥದ ಹಿಂಭಾಗದಲ್ಲಿ (ಎಲ್ಲಿಂದಲಾದರೂ ಬೇಡಿ ತಂದ) ಒಂದು ಮೇಜನ್ನು ಇರಿಸಿ, ಅದರ ಮೇಲೆಯೇ ಭಾಗವತರು ವಿರಾಜಮಾನರಾಗತೊಡಗಿದರು. ಅವರ ಬಲಕ್ಕೆ ಉಳಿದ ಖಾಲಿ ಜಾಗವನ್ನು ಅಂತೆಯೇ ಬಿಡಬಾರದೆಂದು, ಮೃದಂಗವಾದಕರು, ತನ್ನ ಮದ್ದಳೆಯನ್ನು ಅಲ್ಲಿ ಇರಿಸತೊಡಗಿದರು. (ಮೊದಲು ಮದ್ದಳೆ ಮಾತ್ರ ಮೇಜಿನ ಮೇಲೆ ಬರುತ್ತಿತ್ತು. ಅನಂತರ ಮದ್ದಳೆಗಾರರೂ ಬರತೊಡಗಿದರು.) ಅಷ್ಟು ಹೊತ್ತಿಗಾಗಲೇ, ಭಾಗವತರಿಗೆ ಶ್ರುತಿಯನ್ನು ಒದಗಿಸುತ್ತಿದ್ದ ‘ಶ್ರುತಿ ಬುರುಡೆ’ ಮಾಯವಾಗಿತ್ತು. ಅದರ ಬದಲಿಗೆ ‘ಪ್ಯಾರಿಸ್ ರೀಡ್ಸ್’-‘ಜರ್ಮನ್ ರೀಡ್ಸ್’ ಹಾರ್ಮೋನಿಯಮ್ ಗಳು ಬಂದಿದ್ದುವು.
ಅವುಗಳಿಗೂ ಸ್ಥಳ ಬೇಕಲ್ಲ! ಅವು ಭಾಗವತರ ಹಿಂಬದಿಯ ಸ್ಥಳವನ್ನು ಆಕ್ರಮಿಸಿಕೊಂಡವು.
ಅಂದಿನಿಂದ ಇಂದಿನವರೆಗೂ “ಕುಳಿತು ಬಾರಿಸಲು” ಸಾಧ್ಯವಾಗದವರೆಂದರೆ ಚೆಂಡೆಯವರು ಮಾತ್ರವೇ. ಆದ್ದರಿಂದ ಅವರ ಸ್ಥಾ ಭಾಗವತರ ಎಡಕ್ಕಾಯಿತು. ಅವರಿಂದ ಒಂದು ಮಾರು ದೂರವಾಗಿಯೇ ಇದ್ದು, ರಂಗಸ್ಥಳದ ಒಂದು ಕಂಬಕ್ಕೆ ಬೆನ್ನು ತಗಲಿಸಿಕೊಂಡು, ಕೊರಳಿಗೇರಿಸಿದ್ದ ಚೆಂಡೆಯನ್ನು ಅವರು ಬಾರಿಸುತ್ತಲೇ ಇರಬೇಕಾಯಿತು.
ಚೆಂಡೆಯ ಉಪಯೋಗ ಎಲ್ಲ, ಪದ್ಯಗಳಿಗೂ ಇಲ್ಲದಿರುವ ಕಾರಣ, ಅದನ್ನು ಕತ್ತಿನಿಂದ ಕೆಳಗೆ ಇಳಿಸಿ ಆಗಾಗ ವಿಶ್ರಾಂತಿ ಪಡೆಯಲು ಅವರಿಗೆ ತೊಂದರೆಯಾಗುತ್ತಿರಲಿಲ್ಲ.
ಇದೇ ರೀತಿ, ಮೊದಲು ದೀವಟಿಗೆ (ಹಿಲಾಲು)ಗಳ ಬೆಳಕಿನಲ್ಲಿ ಆಡಲಾಗುತ್ತಿದ್ದ ಆಟ, ಆಧುನಿಕ ಸಂಶೋಧನೆಯ ಉಪಯೋಗ ಪಡೆದುಕೊಂಡು ‘ಗ್ಯಾಸ್ ಲೈಟ್’ (ಪೆಟ್ರೋಮ್ಯಾಕ್ಸ್)ಗಳ ಬೆಳಕನ್ನು ರಂಗಕ್ಕೆ ತರತೊಡಗಿತ್ತು.
ಬಣ್ಣಗಾರಿಕೆಗಾಗಿ ಉಪಯೋಗವಾಗುತ್ತಿದ್ದ ವಸ್ತುಗಳಲ್ಲೂ ಹಾಗೆಯೇ ಕೆಲವೊಂದು ಬದಲಾವಣೆಗಳು ಕಾಣಿಸಿಕೊಳ್ಳಲೆ? ಎಂದು ಕೇಳುತ್ತಿದ್ದವು.
ನನ್ನ ಕೃಷ್ಣ ಯಾವ ರೀತಿಯಾಗಿ ಕಾಣಿಸಿಕೊಳ್ಳಬೇಕು? ಪದ್ಧತಿಯ ಪಗಡಿಯನ್ನಿರಿಸಿ ಬಯಲಾಟದಂತೆಯೇ ದೊಗಲೆ ಪೈಜಾಮ ಹಾಕಿಕೊಂಡು, ಇತರ ಎಲ್ಲಾ ವೇಷಭೂಷಣಗಳೊಂದಿಗೆ ಇರಬೇಕೆ?
ಕೃಷ್ಣನ ವೇಷ
ಸಂಗೀತ ನಾಟಕದ ಕೃಷ್ಣನಂತೆ (ಅಥವಾ ರವಿವರ್ಮನ ಚಿತ್ರದಂತೆ) ಶ್ಯಾಮಲಕಾಯನಾಗಿ, ಪೀತಾಂಬರಧಾರಿಯಾಗಿ, ವೇಣುವಾದಕನಾಗಿ ಕಾಣಿಸಿಕೊಳ್ಳಬೇಕೆ?
ಸ್ವಲ್ಪ ಹೊತ್ತು ಆ ರೀತಿಯ ಜಿಜ್ಞಾಸೆ ನಡೆಯಿತು.
ಕೊನೆಗೆ- ಕುಣಿತ ಹೇಗಾದರೂ ಇಲ್ಲ. ಕುಣಿತಕ್ಕೇ ಹೆಚ್ಚು ಅನುಕೂಲ ತೋರುವ, ನನಗೆ ಅಪರಿಚಿತವೇ ಆಗಿರುವ, ಆಟದ ವೇಷವೇಕೆ ? ನನ್ನ ಭಾವ ಪ್ರದರ್ಶನಕ್ಕೆ ಅವಕಾಶವೀಯುವ, ನೋಡಲೂ ಅಂದವಾಗ ಕಾಣುವ ನಾಟಕದ ವೇಷವೇ ಆಗಲಿ ಎಂದುಕೊಂಡೆ. ಒಂದು ವೇಳೆ ವ್ಯವಸ್ಥಾಪಕರು ಆ ವೇಷವನ್ನು ಒಪ್ಪದಿದ್ದರೂ ಅಂದಿನ ದಿನ ಕಳೆದ ತರುವಾಯ ತಾನೆ ಆ ಮಾತು! ಎಂಬ ಹುಸಿ ಧೈರ್ಯವೂ ಬಂದಿತು.
ನಾಟಕದ ಕೃಷ್ಣನಾಗಿಯೇ ರಂಗಸ್ಥಳಕ್ಕೆಕಾಲಿಟ್ಟೆ.
‘ಇದು ಯಾವ ಹೊಸ ಮುಖ?’ ಎಂಬ ಕುತೂಹಲದಿಂದ ಪ್ರೇಕ್ಷಕರು ನನ್ನನ್ನೇ ಹೆಚ್ಚಾಗಿ ಗಮನಿಸತೊಡಗಿದರು.
ಹಿಂದೆ ಎಷ್ಟೋ ಬಾರಿ ‘ಸಾವಿರ ಕಣ್ಣುಗಳ ನೋಟ’ಗಳನ್ನು ಎದುರಿಸಿದ್ದರಿಂದ, ಮನಸ್ಸಿನಲ್ಲಿ ಇದ್ದ ಅಳುಕನ್ನು ಹೊರಗೆ ತೋರಿಸದೆ ಇರಲು ಸಾಧ್ಯವಾಯಿತು. ಆದರೆ ನನ್ನ ಬಂಡವಾಳ ಉಳಿದವರಿಗೆ ಗೊತ್ತಿಲ್ಲವೆ!
ಮೇಳದಲ್ಲಿ ಪ್ರಸಿದ್ಧ ವೇಷಧಾರಿಗಳಾದ ಸರ್ವಶ್ರೀ ಅಳಿಕೆ ಮೋನಪ್ಪ ರೈ ಅವರ ಮಗ ರಾಮಯ ರೈ, (ಬಣ್ಣದ) ಕುಟ್ಯಪ್ಪನವರು, (ಸ್ತ್ರೀ ವೇಷದ) ಪುರುಷೋತ್ತಮ ಭಟ್ಟರು ಇವರೆಲ್ಲಾ ಇದ್ದರು. ಅವರೆದುರಲ್ಲೇ ಆ ಕಲಾಸಾಗರದಲ್ಲಿ ಈಜುವುದಾದರೂ ಹೇಗೆ?
ಅವರಲ್ಲಿ ಯಾರೂ ಟೀಕಿಸುವವರಲ್ಲ, ನಿಜ. ಆದರೆ, ನನ್ನ ಕೊರತೆಯನ್ನು ನನಗೇ ಕಂಡುಕೊಳ್ಳಲು ಸಾಧ್ಯವಿರುವಾಗ ಟೀಕಾಕಾರರಾದೂ ಏತಕ್ಕೆ?
ಶ್ರೀ ಕಾರಂತರು ಕೊಟ್ಟಿದ್ದ ತರಬೇತಿಯಿಂದಾಗಿ, ಅಂಗಾಭಿನಯ ನನಗೆ ಅಷ್ಟೊಂದು ಕಷ್ಟಕರವಾಗಿ ಕಾಣಲಿಲ್ಲ. ಕಣ್ಣು, ಮೂಗು, ಹುಬ್ಬು ಇತ್ಯಾದಿ ಪ್ರತಿಯೊಂದು ಅಂಗಗಳೂ (ಸಾಧ್ಯವಾದಲ್ಲೆಲ್ಲ ತಾಳಬದ್ಧವಾಗಿ) ಬಾವಪ್ರದರ್ಶನಕ್ಕೆ ಸಹಕರಿಸಿದುವು.
ಭಾಗವತರು ಪದ್ಯವನ್ನು ಹೇಳಿ ‘ಬಡಿತ’ಕ್ಕೆ ಜಾಗಟೆ ಎತ್ತಿದಾಗ, ಸಂವಾದದ ಸನ್ನಿವೇಶಗಳು ಬಂದಾಗ, ನಾಟ್ಯಶಾಸ್ತ್ರಿಯಲ್ಲದ ನನ್ನ ಕೊರತೆ ನನಗೇ ಸರಿಯಾಗಿ ಕಾಣಿಸಿಕೊಂಡಿತು. ಪದ್ಯದ ಮುಕ್ತಾಯದಲ್ಲೂ ಮೂರು ಹೆಜ್ಜೆ ಹಾಕಲಾರದ ನಾನು “ವೇಷಧಾರಿ” ಎಂದು ಕರೆಸಿಕೊಳ್ಳಲಾರೆ ಎನಿಸಿತು.
ಅಂದು, ಆ ರಂಗಸ್ಥಳದಲ್ಲೇ, ದಶಾವತಾರ ಆಟಕ್ಕೆ ನಾಟ್ಯವಿಲ್ಲದ ವೇಷವೆಂದರೆ “ಎಲ್ಲ ರುಚಿ ಸೇರಿದ್ದರೂ ಉಪ್ಪು ಇಲ್ಲದ ಅಡಿಗೆ” ಎಂಬ ಅಭಿಪ್ರಾಯಕ್ಕೆ ಬಂದೆ. (ಆ ಅಭಿಪ್ರಾಯ ಇಂದಿಗೂ ಉಳಿದಿದೆ.)
ಕುಣಿತವೂ ಇದ್ದಿದ್ದರೆ
ಅಂದಿನ ಆಟದಲ್ಲಿ ಮಯೂರಧ್ವಜನನ್ನು ಕೃಷ್ಣ ಗರಗಸದಿಂದ ಕೊಯಿಸಿದ್ದ. ಕೊಯಿಸಿದಾಗಲೂ “ಕಣ್ಣೀರೇಕೆ?” ಎಂದು ಕೆಣಕಿದ್ದ. ಕೃಷ್ಣನ ವೇಷ ಹಾಕಿದ್ದವನು ತನ್ನನ್ನು ತಾನೇ ಅತೃಪ್ತಿಯ ಗರಗಸದಿಂದ ಕೊಯಿಸಿಕೊಳ್ಳತೊಡಗಿದ. ಸೀಳಿದರೂ ಕಣ್ಣೀರು ಸುರಿಸುವಂತಿಲ್ಲ ಎಂದು ತಿಳಿದುಕೊಂಡ.
ಆಟ ಮುಗಿದ ತರುವಾಯ, ಪ್ರೇಕ್ಷಕರು ಕೆಲವರ ಪ್ರತಿಕ್ರಿಯೆಯನ್ನು ನಾನೂ ಸಂಗ್ರಹಿಸಿದೆ. ನನ್ನಷ್ಟೇ ಕುತೂಹಲವಿದ್ದ ವ್ಯವಸ್ಥಾಪಕರೂ ಸಂಗ್ರಹಿಸಿದ್ದರು.
ಮಾತನಾಡಿದವರೆಲ್ಲರ ಕೈಯಲ್ಲೂ ಕೇಳಲಾಗುತ್ತಿದ್ದ ಒಂದು ಮುಖ್ಯ ಪ್ರಶ್ನೆ- ಕುಣಿತದ ಅಭಾವಕ್ಕೆ ಸಂಬಂಧಿಸಿದುದು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.
“ಕುಣಿತ ನಿಮಗೆ ಗೊತ್ತಿಲ್ಲವೆಂದು ನಾವು ಯಾರೂ ಹೇಳುವಂತಿರಲಿಲ್ಲ” ಎಂದವರು ಒಬ್ಬಿಬ್ಬರು.
ಅವರಂತೆ, “ನಿಮ್ಮ ಕಾಲುಗಳ ಕಡೆಗೆ ನಮ್ಮ ಗಮನ ಹೋಗಲೇ ಇಲ್ಲ. ನೀವು ಕುಣಿಯುತ್ತಿದ್ದೀರೆಂದೇ- ನಿಮ್ಮ ದೇಹ ಚಲನೆಯನ್ನು ನೋಡಿ ನಾವು ಭಾವಿಸಿದ್ದೆವು” ಎಂದವರು ಕೆಲವರು.
(ಮುಂದಿನ ಕಂತು ಇದೆ)