ಬಂಟ್ವಾಳ: ಬಿ.ಸಿ.ರೋಡಿನ ರೈಲ್ವೆ ಸೇತುವೆ ಬಳಿ ನೇತ್ರಾವತಿ ನದಿಯ ಬದಿ ಇರುವ ಪೊದೆಗಳಲ್ಲಿ ಕೆಲ ದಿನಗಳಿಂದ ಕೊಳೆತ ತ್ಯಾಜ್ಯ ಕಂಡುಬಂದಿದ್ದು, ಇದರಿಂದ ಸುತ್ತಲಿನ ಸುಮಾರು ಐವತ್ತಕ್ಕೂ ಅಧಿಕ ಮನೆಗಳಲ್ಲಿ ವಾಸಿಸುವವರು ದುರ್ವಾಸನೆಯುಕ್ತ ಗಾಳಿ ಸೇವನೆಯಿಂದ ಆತಂಕಕ್ಕೆ ಒಳಗಾಗಿದ್ದರೆ.
ವೃದ್ಧರು, ಮಕ್ಕಳ ಸಹಿತ ನೂರಕ್ಕೂ ಅಧಿಕ ಮಂದಿ ವಾಸಿಸುವ ಕೈಕುಂಜ ಪೂರ್ವ ಬಡಾವಣೆಯ ರೈಲ್ವೆ ಸೇತುವೆ ಬದಿಯ ಭಾಗದ ರೈಲ್ವೆ ಜಾಗದಲ್ಲಿ ಮೀನು ಸಹಿತ ತುಂಡರಿಸಿದ ಮಾಂಸದ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಇದು ಕೊಳೆತು ವಾತಾವರಣದ ಗಾಳಿಯೊಂದಿಗೆ ಸೇರಿ ಸುತ್ತಮುತ್ತಲಿನ ಭಾಗಗಳಲ್ಲಿ ದುರ್ವಾಸನೆ ಹರಡುತ್ತಿದ್ದು, ಸಮೀಪದ ಮನೆಗಳಲ್ಲಿ ಮಾಸ್ಕ್ ಹಾಕಿ ವಾಸಿಸುವಂತಾಗಿದೆ. ಬಿ.ಸಿ.ರೋಡಿನ ರೈಲ್ವೆ ಸ್ಟೇಶನ್ ಗೆ ತಿರುಗುವ ಭಾಗದಿಂದ ರೈಲ್ವೆ ಸೇತುವೆವರೆಗಿನ ರೈಲ್ವೆ ಜಾಗದಲ್ಲಿ ರಸ್ತೆ ಇದ್ದು, ಇಲ್ಲಿ ರಾತ್ರಿ ಹಗಲೆನ್ನದೆ ಅಪರಿಚಿತರು ಆಗಮಿಸಿ ಎಲ್ಲೆಂದಲ್ಲಿ ತ್ಯಾಜ್ಯ ಸುರಿಯುವುದನ್ನು ಮಾಡುತ್ತಿರುವುದಾಗಿ ಆಪಾದಿಸಲಾಗಿದೆ. ಬಂಟ್ವಾಳ ಪುರಸಭೆಯ ತ್ಯಾಜ್ಯ ಸಾಗಾಟದ ವಾಹನಗಳು ಕೈಕುಂಜ ಪೂರ್ವ ಬಡಾವಣೆಯಲ್ಲಂತೂ ಪ್ರತಿನಿತ್ಯವೂ ಆಗಮಿಸುತ್ತಿದ್ದು, ಬಹುತೇಕ ಸ್ಥಳೀಯರು ಆ ವಾಹನಗಳಿಗೆ ತ್ಯಾಜ್ಯ ನೀಡುತ್ತಿದ್ದಾರೆ. ಈ ಭಾಗಕ್ಕೆ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಕೆಲವರು ತ್ಯಾಜ್ಯವನ್ನು ತಂದು ಎಸೆದು ಹೋಗುತ್ತಿರುವ ಅನುಮಾನಗಳು ವ್ಯಕ್ತವಾಗಿದ್ದು, ಈ ಕುರಿತು ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ.