ಬಂಟ್ವಾಳ: ರಾತ್ರಿ ಸಮಯದಲ್ಲಿ ಕರ್ತವ್ಯದಲ್ಲಿರುವಾಗಲೇ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮಜ್ಜೋನಿ ನಿವಾಸಿ ಜಯರಾಮ ಮೂಲ್ಯ (45) ಮೃತಪಟ್ಟವರಾಗಿದ್ದಾರೆ. ಅವರು ಕಳೆದ ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರಾತ್ರಿ ಕಚೇರಿಯ ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ ವೇಳೆ ನಿಧನರಾಗಿರಬಹುದು ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಸುಮಾರು 6.30 ವರೆಯವರೆಗೂ ಇಲಾಖೆಯ ಬಾಗಿಲು ಮುಚ್ಚಿಕೊಂಡಿದ್ದನ್ನು ಕಂಡು ಇಲಾಖೆಯ ಚಾಲಕರು ಕಿಟಕಿ ಬಾಗಿಲು ತೆರದು ನೋಡಿದಾಗ ಟೇಬಲ್ ಮೇಲೆ ಬಿದ್ದ ಸ್ಥಿತಿಯಲ್ಲಿ ಜಯರಾಮ ಇದ್ದಿರುವುದು ಕಂಡು ಬಂದಿದೆ.ಅವರು ತಾಯಿ ಹಾಗೂ ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.