ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಸರಕಾರದ ಪಂಚಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬುಧವಾರ ಶಿಬಿರ ಆಯೋಜಿಸಲಾಗಿದ್ದು, ಇದಕ್ಕೆ ಪುರಸಭಾ ಸಭಾಂಗಣದಲ್ಲಿ ಚಾಲನೆ ನೀಡಲಾಗಿದೆ.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಬಂಟ್ವಾಳ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಸರಕಾರದ ಪಂಚಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವರು ಯೋಜನೆಯಿಂದ ಹೊರಗುಳಿದಿದ್ದು, ಇದರ ಕುರಿತು ಸಮರ್ಪಕ ಮಾಹಿತಿ ನೀಡುವ ಸಲುವಾಗಿ ತಾಲೂಕಿನಾದ್ಯಂತ ಶಿಬಿರಗಳನ್ನು ಆಯೋಜಿಸಲಾಗಿದ್ದು, ಅದರಂತೆ ಬಂಟ್ವಾಳ ಪುರಸಭೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಈಗಾಗಲೇ ಮಣಿನಾಲ್ಕೂರು ಗ್ರಾಪಂನಲ್ಲಿ ನಡೆದ ಶಿಬಿರದಿಂದ ಆ ವ್ಯಾಪ್ತಿಗೆ ಒಳಪಟ್ಟ ಜನತೆ ಶಿಬಿರದಿಂದ ಪ್ರಯೋಜನ ಪಡೆದಿದ್ದಾರೆ. ಸರಕಾರದ ಗ್ಯಾರಂಟಿಗಳು ಅರ್ಹರಿಗೆ ತಲುಪುವಂತೆ ಮಾಡುವುದೇ ಶಿಬಿರದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಸರಕಾರದ ಯೋಜನೆಗಳು ಅರ್ಹರಿಗೆ ದೊರಕಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ಪ್ರಯೋಜನ ಎಲ್ಲರಿಗೂ ಸಿಗಲಿ ಎಂದು ಹಾರೈಸಿದರು.
ಗ್ಯಾರಂಟಿ ಸಮಿತಿ ಸದಸ್ಯ ಕಾರ್ಯದರ್ಶಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಸರಕಾರದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು, ಜನರಿಗೆ ಅಗತ್ಯವುಳ್ಳ ಮಾಹಿತಿ ನೀಡಬೇಕಾಗಿದೆ ಎಂದರು.
ಈ ಸಂದರ್ಭ ಪುರಸಭಾ ಉಪಾಧ್ಯಕ್ಷ ಮೊನೀಶ್ ಆಲಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ನಾಯ್ಕ್, ಮೂಲ್ಕಿ ಅಧ್ಯಕ್ಷ ಆಲ್ವಿನ್ ಕುಟಿನ್ಹೊ, ಗ್ಯಾರಂಟಿ ಸಮಿತಿ ಸದಸ್ಯರಾದ ಐಡಾ ಸುರೇಶ್, ಸಿರಾಜ್ ಮಹಮ್ಮದ್, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಆಚಾರ್ಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಬಾಲಕೃಷ್ಣ ಅಂಚನ್, ರಾಜೇಶ್ ರೋಡ್ರಿಗಸ್, ಪುರಸಭೆಯ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು. ಉಮಾವತಿ ಸ್ವಾಗತಿಸಿ, ವಂದಿಸಿದರು. ಇದೇ ವೇಳೆ ಪುರಸಭಾ ಮುಖ್ಯಾಧಿಕಾರಿ ಕಾರ್ಯಕ್ರಮಕ್ಕೆ ಯಾಕೆ ಬಂದಿಲ್ಲ, ಎಂದು ಪುರಸಭಾ ಸದಸ್ಯರು ಪ್ರಶ್ನಿಸಿದರು. ಸರಕಾರ ಜಾರಿಗೊಳಿಸಿದ ಯೋಜನೆಯನ್ನು ಅನುಷ್ಠಾನ ಮಾಡುವ ವೇಳೆ ಪುರಸಭೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂಬುದು ವಿಷಾದನೀಯ, ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ವಾಸು ಪೂಜಾರಿ ಹೇಳಿದರು. ಇದೇ ವೇಳೆ ಉಪಾಧ್ಯಕ್ಷ ಮೊನೀಶ್ ಆಲಿ ದನಿಗೂಡಿಸಿ, ಇದು ಪುರಸಭೆ ಮೀಟಿಂಗ್ ನಲ್ಲಿ ಪ್ರಶ್ನಿಸಬೇಕಾದ ವಿಚಾರ ಎಂದರು. ಈ ವೇಳೆ ಮಾತನಾಡಿದ ತಾಪಂ ಇಒ ಸಚಿನ್ ಕುಮಾರ್, ಇದೊಂದು ಸರಕಾರಿ ಯೋಜನೆ ಅನುಷ್ಠಾನ ಕಾರ್ಯಕ್ರಮವಾಗಿದ್ದು, ಈ ಕುರಿತು ಕಾರಣ ಕೇಳಿ ಪತ್ರ ಬರೆಯಲಾಗುವುದು ಎಂದು ಹೇಳಿದರು.