ಬಂಟ್ವಾಳ

ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ಬಂಟ್ವಾಳದಲ್ಲಿ

ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಮೊದಲನೇ ರಾಜ್ಯ ಸಮ್ಮೇಳನ ಬಂಟ್ವಾಳ ತಾಲೂಕು ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ನವೆಂಬರ್ 24 ಮತ್ತು 25ರಂದು ನಡೆಯಲಿದೆ.

ಜಾಹೀರಾತು

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಪ್ರಮುಖರು ಮಾತನಾಡಿದರು

ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳು ಕಾರ್ಮಿಕ ವರ್ಗದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದು ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಪ್ಪಣ್ಣ ಹೇಳಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಇಡೀ ಕಾರ್ಮಿಕ ವರ್ಗವನ್ನೆ ಅಸಂಘಟಿತ ವಲಯಕ್ಕೆ ಸೇರಿಸುವ ತಂತ್ರಗಾರಿಕೆಯಗಳನ್ನು ನೋಡುತ್ತಿದ್ದೇವೆ. ಉದ್ಯೋಗ ಬಯಸಿ ಬರುತ್ತಿರುವ ಕಾರ್ಮಿಕರೆಲ್ಲರು ಅಸಂಘಟಿತ ವಲಯದಲ್ಲಿ ಕಂಡುಬರುತ್ತಿರುವುದರಿಂದ, ಅವರಿಗೆ ಸ್ಥಿರವಾದ ವೇತನ, ಉದ್ಯೋಗ ಭದ್ರತೆ, ಮತ್ತು ಸಾಮಾಜಿಕ ಭದ್ರತೆಗಳಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ, ಲಿಂಗ ಮತ್ತು ಜಾತಿ ತಾರತಮ್ಯ, ಪಿತೃಪ್ರಭುತ್ವ ಮತ್ತು ಜಾತಿ ಸಮುದಾಯದ ಅಸಮಾನತೆಗಳು ಹೊಸ ಹೊಸ ರೂಪಗಳಲ್ಲಿ ಹೊರಹೊಮ್ಮುತ್ತಿವೆ. ಸಮಾನ ವೇತನ ನಿರಾಕರಣೆ ಮತ್ತು ಅನ್ಯಾಯಯುತ ಕೆಲಸದ ಪರಿಸ್ಥಿತಿಗಳೇ ಇದಕ್ಕೆ ಸಾಕ್ಷಿಯಾಗಿವೆ. ಸ್ವಾತಂತ್ರ್ಯದ ನಂತರದ ಪ್ರಾರಂಭಿಕ ವರ್ಷಗಳಲ್ಲಿ ಸರ್ಕಾರಿ ಸೇವೆಗಳಲ್ಲಿ ಸುರಕ್ಷಿತ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಸ್ಥಾಪನೆಯ ಮೂಲಕ ಕಾರ್ಮಿಕ ಕಾನೂನು ಆಡಳಿತವನ್ನು ಅಳವಡಿಸಲು ಮಾಡಿದ ಪ್ರಯತ್ನಗಳು ಇಂದು ಹಿಂದೆ ಬಿದ್ದಂತೆ ಕಾಣುತ್ತವೆ. ಇದೀಗ, ಖಾಸಗಿ ವಲಯದಲ್ಲಿ ಕಾರ್ಮಿಕರ ಹಕ್ಕುಗಳು ಕಣ್ಮರೆಯಾಗುತ್ತಿವೆ. ಆರ್ಥಿಕ ಉದಾರೀಕರಣದ ಈ ಹೊಸ ಘಟ್ಟದಲ್ಲಿ, ಕಾರ್ಮಿಕರು ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳಿಗಾಗಿ ಹಾಗೂ ಖಾಸಗೀ ವಲಯದಲ್ಲಿ ಕಾರ್ಮಿಕ ಕಾನೂನನ್ನು ಬಲಪಡಿಸುವಂತೆ ಒತ್ತಾಯಿಸಲು ಸಮ್ಮೇಳನ ವೇದಿಕೆಯಾಗಲಿದೆ ಎಂದು ಅಪ್ಪಣ್ಣ ಹೇಳಿದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನ ನವೆಂಬರ್ 24ರ ಭಾನುವಾರ ಬೆಳಗ್ಗೆ 10 ಗಂಟೆಗೆ ಬಿ.ಸಿ.ರೋಡ್ ಕೈಕಂಬದಿಂದ ಶ್ರಮಜೀವಿಗಳ ಅಧಿಕಾರದತ್ತ’ ಜಾಥಾದಿಂದ ಶುರುವಾಗಲಿದ್ದು, ತದನಂತರ ಡಾ। ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ: ಮುಂದಿನ ದಾರಿ ಬಹಿರಂಗ ಸಭೆ ನಡೆಯಲಿದೆ.  ಪ್ರತಿನಿಧಿ ಅಧಿವೇಶನವು ಎರಡೂ ದಿನಗಳ ಕಾಲ ನಡೆಯಲಿದೆ. ಈ ಸಮ್ಮೇಳನಕ್ಕೆ ರಾಷ್ಟೀಯ ಕಾರ್ಯದರ್ಶಿ ರಾಜೀವ್ ದಿಮ್ರಿ , ರಾಷ್ಟ್ರೀಯ ಅಧ್ಯಕ್ಷರಾದ ಶಂಕರ್ ಹಾಗೂ ರಾಜ್ಯದ  ಮುಖಂಡರು ಭಾಗವಹಿಸಲಿದ್ದಾರೆ. ಜಾಥಾ ಮತ್ತು ಬಹಿರಂಗ ಸಭೆಗಳಲ್ಲಿ ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ, ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಎಐಸಿಸಿಟಿಯು ಸದಸ್ಯರಾದ ಪೌರಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆ ಕಾರ್ಮಿಕರು, ಬಿಸಿ ಊಟ ಕಾರ್ಮಿಕರು, ಆಟೋ ಚಾಲಕರು, ಬೀಡಿ ಕಾರ್ಮಿಕರು, ಎನ್.ಎ.ಎಲ್, ಡಿಆರ್ ಡಿಒ, ಐಟಿಐನಂಥ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ನೆಪಮಾತ್ರ ಗುತ್ತಿಗೆ ಪದ್ಧತಿ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು, ಹಾಗೂ ವಿವಿಧ ರಂಗದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಈ ಸಂದರ್ಭ ಅವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ನಾಗರಾಜ್ ಪೂಜಾರ್, ನ್ಯಾಯವಾದಿ ಮೈತ್ರೇಯಿ ಕೃಷ್ಣನ್, ದ.ಕ ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ವಿಟ್ಲ, ಕಾರ್ಯದರ್ಶಿ ಕೆ.ಇ ಮೋಹನ್, ನ್ಯಾಯವಾದಿ ತುಳಸೀದಾಸ್ ವಿಟ್ಲ ಇದ್ದರು

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.