ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಗ್ರಾಮದ ಸಿದ್ಧಕಟ್ಟೆ ಸಮೀಪ ಕೊಡಂಗೆ ಎಂಬಲ್ಲಿ ಕಳೆದ ವರ್ಷ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತವಾದ ವೀರ ವಿಕ್ರಮ ಜೋಡುಕರೆಯಲ್ಲಿ ನವೆಂಬರ್ 23ರಂದು ಕಂಬಳಕೂಟ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಕಂಬಳ ಸಮಿತಿ ಗೌರವಾಧ್ಯಕ್ಷರಾದ ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ಈ ಶನಿವಾರ ಅದ್ದೂರಿಯಾಗಿ ಕಂಬಳಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ತಿಳಿಸಿದ್ದಾರೆ.
ಎರಡನೇ ವರ್ಷದ ವೀರ ವಿಕ್ರಮ ಜೋಡು ಕರೆ ಕಂಬಳ ಇದಾಗಿದ್ದು, 23ರಂದು ಬೆಳಗ್ಗೆ 7.30ಕ್ಕೆ ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಆಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯರ ಅಧ್ಯಕ್ಷತೆಯಲ್ಲಿ, ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಕಂಬಳ ಉದ್ಘಾಟನೆ ನೆರವೇರಿಸುವರು. ಈ ಸಂದರ್ಭ ಕುಡುಂಬೂರುಗುತ್ತು ಕ್ಷೇತ್ರದ ಮೊಕ್ತೇಸರ ಗುತ್ತಿನಾರ್ ಜಯರಾಮ ಶೆಟ್ಟಿ, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ಟಿಸ್, ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಹಿರಿಯ ವೈದ್ಯರಾದ ಡಾ.ಪ್ರಭಾಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಜೈನ್, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮತ್ತಿತರ ಗಣ್ಯರು ಭಾಗವಹಿಸುವರು. ಅಂದು ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸುವರು ಎಂದವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಎಸ್ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಿತ ಅವಿಭಜಿತ ಜಿಲ್ಲೆಯ ಎಲ್ಲ ಶಾಸಕರು ಪ್ರಮುಖ ಗಣ್ಯರು ಭಾಗವಹಿಸುವರು ಎಂದರು.
ಇಲ್ಲಿನ ಸುಸಜ್ಜಿತ ಹೊಸ ಜೋಡುಕರೆಯಲ್ಲಿ ಇದೇ ಪ್ರಥಮ ಬಾರಿಗೆ ಒಂದು ವರ್ಷದೊಳಗೆ 3 ನೇ ಕಂಬಳ ನಡೆಯುತ್ತಿದೆ. ಕಳೆದ ಮಾ.16 ರಂದು ಪ್ರಥಮ ಕಂಬಳ ಮತ್ತು ಅ.19ರಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ಕೂಟ ನಡೆದಿದ್ದು, ಇದೀಗ ನ.23 ರಂದು ಮತ್ತೆ 2ನೇ ವರ್ಷದ ಕಂಬಳ ನಡೆಯುತ್ತಿದೆ.
ಪ್ರಥಮ ಕಂಬಳದಲ್ಲಿ ಒಟ್ಟು 99 ಜೋಡಿ, ರೋಟರಿ ಆಯೋಜಿಸಿದ ಕಂಬಳದಲ್ಲಿ ಸಬ್ ಜ್ಯೂನಿಯರ್ ವಿಭಾಗದ ಒಟ್ಟು 85 ಜೋಡಿ ಕೋಣಗಳು ಭಾಗವಹಿಸಿದ್ದು, ಈ ಬಾರಿ 200 ಕ್ಕೂ ಮಿಕ್ಕಿ ಜೋಡಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು. ವರ್ಷವಿಡೀ ಕುದಿ ಕಂಬಳ (ತರಬೇತಿ) ನಡೆಯುತ್ತಿದ್ದು, ಈ ಬಾರಿ ವಾಹನ ನಿಲುಗಡೆಗೆ ಪ್ರತ್ಯೇಕ 4 ಎಕರೆ ಜಮೀನು ಮತ್ತು ಕೋಣಗಳ ವಿಶ್ರಾಂತಿಗೆ ಮೂರೂವರೆ ಎಕರೆ ಜಮೀನು ಸಮತಟ್ಟುಗೊಳಿಸಲಾಗಿದೆ. ಮಳೆಗಾಲದಲ್ಲಿ ಗುಡ್ಡದ ನೀರು ಕಂಬಳ ಕರೆಗೆ ಹರಿದು ಬಾರದಂತೆ ತಡೆಯಲು ಸುತ್ತಲೂ ಸುಮಾರು 30 ಸಿಮೆಂಟ್ ಪೈಪ್ ಅಳವಡಿಸಲಾಗಿದ್ದು, ಬೇಸಿಗೆಯಲ್ಲಿ ಕೂಡಾ ಕಂಬಳ ಕರೆಗೆ ನಿರಂತರ ನೀರಿನ ಸಂಪರ್ಕ ಅಳವಡಿಸಲಾಗಿದೆ. ಕಂಬಳ ಕರೆ ಸುತ್ತಲೂ ಇರುವ ಪ್ರಕೃತಿದತ್ತ ಮರ ಗಿಡಗಳ ನೆರಳು ಓಟದ ಕೋಣಗಳಿಗೆ ಅನುಕೂಲಕರವಾಗಿದೆ ಎಂದವರು ಹೇಳಿದರು.
ಸಂಗೀತ ನಿರ್ದೇಶಕ ಗುರುಕಿರಣ್ ಸಹಿತ ಚಿತ್ರನಟರಾದ ಜಗ್ಗೇಶ್, ವಿಜಯ ರಾಘವೇಂದ್ರ, ರಾಜ್ ಬಿ.ಶೆಟ್ಟಿ, ಭೋಜರಾಜ ವಾಮಂಜೂರು, ನಿರೀಕ್ಷಾ ಶೆಟ್ಟಿ ಮತ್ತಿತರ ನಟ ನಟಿಯರು ಭಾಗವಹಿಸುವರು ಎಂದು ಕಂಬಳ ಸಮಿತಿ ಅಧ್ಯಕ್ಷ ಪೊಡುಂಬ ಸಂದೀಪ್ ಶೆಟ್ಟಿ ವಿವರ ನೀಡಿದರು ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಗೌರವ ಸಲಹೆಗಾರರಾದ ವಸಂತ ಶೆಟ್ಟಿ ಕೇದಗೆ, ಸುರೇಶ ಶೆಟ್ಟಿ ಸಿದ್ಧಕಟ್ಟೆ, ಕಿರಣ್ ಕುಮಾರ್ ಮಂಜಿಲ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ ಉಪಸ್ಥಿತರಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…