ಬಂಟ್ವಾಳ: ಬಂಟ್ವಾಳ ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆ ವತಿಯಿಂದ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಅಂಬೇಡ್ಕರ್ ಭವನದಲ್ಲಿ ಬುಧವಾರ ಉಚಿತ ಜೇನು ತರಬೇತಿ ಕಾರ್ಯಕ್ರಮ ನಡೆಯಿತು.
ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆ ಅಧ್ಯಕ್ಷ ಕೆ. ಸತೀಶ್ ಅರಳ ಇಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶ ಪಾಲನೆಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಂದು ಅವರು ನೀಡಿದ ಧೈರ್ಯದಿಂದಾಗಿ ಇಂದು ಸಮುದಾಯದ ಜನರಿಗೆ ಶಕ್ತಿ ಬಂದಿದೆ. ಈ ಹಿನ್ನೆಲೆಯಲ್ಲಿ ಜೇನು ಕೃಷಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಮಾತನಾಡಿ, ಎರಡು ದಿನಗಳ ಕಾಲ ತರಬೇತಿ ನಡೆಯುತ್ತದೆ. ಜೇನಿನ ಕುರಿತ ಮಾಹಿತಿ ನೀಡಲಾಗುತ್ತಿದ್ದು, ಪ್ರಾಯೋಗಿಕವಾಗಿಯೂ ತರಬೇತಿ ಕೊಡಲಾಗುತ್ತದೆ. ಉಚಿತ ಜೇನು ಪೆಟ್ಟಿಗೆಯನ್ನು ಅರ್ಜಿ ಸಲ್ಲಿಸಿದವರಿಗೆ ವಿತರಿಸಲಾಗುತ್ತದೆ. ತೋಟಗಾರಿಕಾ ಇಲಾಖೆಯಿಂದ ಸಾಕಷ್ಟು ರೀತಿಯಲ್ಲಿ ಸಹಾಯಧನಗಳು ಪರಿಶಿಷ್ಟ ಜಾತಿ, ಪಂಗಡದವರಿಗೆ ಲಭ್ಯವಿದೆ ಎಂದರು.
ಜೇನು ಕೃಷಿ ತರಬೇತಿಯನ್ನು ರಾಧಾಕೃಷ್ಣ ಬೆಟ್ಟಂಪಾಡಿ ಹಾಗೂ ಕೆ.ಲಕ್ಷ್ಮಣ ಗೌಡ ಅಮ್ಟಾಡಿ ನೀಡಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.