ಕತೆಗಾರ ಜೋಗಿ ಅವರ 100ನೇ ಕೃತಿ ಇಳಂಗೋವನ್ ಬಿಡುಗಡೆಯಾಗಿದೆ. ಸಾಹಿತ್ಯ ಓದುಗ ವಲಯ ಸಹಿತ ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ, ನಿರೀಕ್ಷೆ ಹುಟ್ಟಿಸಿದ ಕೃತಿ ಇದು. ಈ ಕುರಿತು ಅವರ ಸ್ನೇಹಿತ, ಕತೆಗಾರ ಗೋಪಾಲಕೃಷ್ಣ ಕುಂಟಿನಿ facebookನಲ್ಲಿ ಬರೆದದ್ದು ಹೀಗೆ.
+++++
ಗೆಳೆಯ ನೂರನೇ ಪುಸ್ತಕ ತನಕ ಬರುತ್ತಾನೆ ಎಂದು ನಾನಂತೂ ನಂಬಿದ್ದೆ. ಇವನನ್ನು ಹೀಗೇ ಬಿಟ್ಟರೆ ಮುನ್ನೂರಂತೂ ಮೀರುವುದು ಖಂಡಿತ.
ಹಾಗೇ ನೋಡಿದರೆ ಇದು ಇವನ ನೂರಾಎಂಟನೇ ಪುಸ್ತಕ. ಸಂಜೆವಾಣಿಗೆ ಇಂವ ದೈನಿಕ ಧಾರಾವಾಹಿ ಕಾದಂಬರಿ ಬರೆಯುತ್ತಿದ್ದ. ಒಂದಲ್ಲ ಎರಡಲ್ಲ ಎಂಟು ಬರೆದಿದ್ದ. ಈಗ ನೋಡಿದರೆ ಅದು ಒಂದೂ ಇಲ್ಲ. ಹುಡುಕಿ ಕೊಡುತ್ತಾರೆ ಎಂದರೆ ರಾಜಾ ಚೆಂಡೂರ್ ಕೂಡಾ ಇಲ್ಲ.
ನೂರನೇ ಪುಸ್ತಕ ಮುದ್ರಣಕ್ಕೆ ಹೋಗುವ ಮುನ್ನ ಓದಲು ಕೊಟ್ಟ. ಓದಿದೆ. ಹೇಗಿದೆ ಎಂದು ನಾನೀಗ ನಿಮಗೆ ಹೇಳಬೇಕು. ಅದಕ್ಕಾಗಿ ನಾನು ಮಾಡಿಕೊಂಡ ಟಿಪ್ಪಣಿಗಳನ್ನು ವಿಸ್ತರಿಸಿ ಬರೆದಿದ್ದೇನೆ,
ಈ ಕೃತಿ ಅರ್ಧ ಫಿಕ್ಷನ್ ಮತ್ತರ್ಧ ನಾನ್ ಫಿಕ್ಷನ್. ಹೀಗಾಗಿ ಇದನ್ನು ಕತೆಯಂತೆಯೂ ಮೀಮಾಂಸೆಯಂತೆಯೂ ಓದಿಕೊಳ್ಳಬಹುದು. ಹೇಗೆ ಓದಿಕೊಂಡರೂ ನೀವು ಮರಳಿ ಬರುವುದು ಅವನ ಬಳಿಗೇ. ಅವನು ಎಂದರೆ ಇಳಂಗೋವನ್.
ಇಳಂಗೋವನ್ ಒಬ್ಬ ಅವಧೂತ. ಅವನ ಬಳಿಗೆ ಇವನನ್ನು ಕರೆದೊಯ್ದದ್ದು ಇವನ ಅಣ್ಣ. ಆಮೇಲಾಮೇಲೆ ಅಣ್ಣನಿಗೆ ಇಳಂಗೋವನ್ ಮೇಲೆ ಆಸಕ್ತಿ ಹೊರಟು ಹೋಗಿರಬೇಕು. ಇವನೊಬ್ಬನೇ ಇಳಂಗೋವನ್ ನನ್ನು ಹುಡುಕಿಕೊಂಡು ಸೈಕಲ್ ತುಳಿಯುತ್ತಾ ಹೋಗಿ ಬರುತ್ತಿದ್ದ.
ಹೀಗೇ ಶುರುವಾಗುತ್ತದೆ ಈ ಅಲೌಕಿಕ ಪ್ರಯಾಣ.
ಮೂವತ್ತೆರಡು ವರ್ಷದ ವೃತ್ತಿ ಮುಗಿಸಿ ಬಂದು ಗಾಳಿಗುಡ್ಡದ ಬುಡದಲ್ಲಿ ಕಮ್ಮಾರಿಕೆ ಮಾಡಿಕೊಂಡು ಜೀವಿಸುತ್ತಿದ್ದ ಇಳಂಗೋವನ್ ಗೆ ತಾನು ಕಂಡ, ವಿಧಿಸಲ್ಪಟ್ಟ, ನಿರ್ವಹಿಸಿದ ಸಾವುಗಳೇ ದಾರ್ಶನಿಕತೆಯನ್ನು ತುಂಬಿಕೊಟ್ಟಿದ್ದವು.
ನಿವೃತ್ತಿಯಾಗಿ ಹೊರಟಾಗ ತನ್ನೊಳಗಿದ್ದವನನ್ನು ಅಲ್ಲೇ ಬಿಟ್ಟು ಬಂದಿದ್ದ ಇಳಂಗೋವನ್. ಈಗ ಅವನೊಳಗೆ ಅವನಲ್ಲದೇ ಬೇರೆ ಯಾರೂ ಇಲ್ಲ.
ಇಳಂಗೋವನ್ ಇದ್ದಲ್ಲಿಗೆ ಸುಣ್ಣಬಣ್ಣ ಹೊಡೆಯುವ ಕೆಲಸಕ್ಕೆ ಬಂದಿದ್ದ ಹಿರಣ್ಯನ್ ಹೊರಜಗತ್ತಿನ ಸಹವಾಸ ಸಾಕುಸಾಕಾಗಿ ಮಾರುವೇಷ ಧರಿಸಿ ಅಲ್ಲೇ ಇದ್ದುಬಿಟ್ಟ. ಅವನನ್ನು ಗುರುತಿಸಿ ಹಿಡಿದ ಅಧಿಕಾರಿಗಳು ಅವನನ್ನು ಹೊರದಬ್ಬಲು ಹೊರಟಾಗ ಆತ ಅಧಿಕಾರಿಗಳ ಕಾಲಿಗೆ ಬಿದ್ದು ಈ ಪ್ರಕರಣದಲ್ಲಿ ತನ್ನನ್ನು ಅಲ್ಲೇ ಇರುವಂತೆ ಮಾಡಿ ಎಂದು ಬೇಡಿಕೊಂಡಿದ್ದ.
ಒಳಗಿದ್ದು ಹೊರಗೆ ಬಂದವನು ಮತ್ತು ಹೊರಗಿದ್ದು ಒಳಗೆ ಹೋಗಬಯಸುವವನು ಎಂಬ ಎರಡು ಪ್ರಸ್ತುತಿಗಳು, ಎರಡು ಮನಸ್ಥಿತಿಗಳು ಇಡೀ ದಾರ್ಶನಿಕತೆಯ ಮೂಲರೂಪಗಳು.
ಮನಸ್ಸಿಗಿಂತ ದೊಡ್ಡ ಜೈಲು ಬೇರೆ ಇಲ್ಲ ಎಂದು ಇಳಂಗೋವನ್ ಕೊನೆಗೊಮ್ಮೆ ಹೇಳುತ್ತಾನೆ.
ಇಳಂಗೋವನ್ ಬಳಿ ತಾನೂ ಅಧ್ಯಾತ್ಮವಾದಿಯಾಗಬೇಕು ಎಂದು ಕೇಳಿದರೆ ಅವನು ಹೇಳುತ್ತಾನೆ, ಆಧ್ಯಾತ್ಮ ಮತ್ತು ಅಲೌಕಿಕತೆ ಒಂದು ದೊಡ್ಡ ಶಾಪ.ಅದು ತೀರದ ವ್ಯಾಮೋಹ. ಅದು ನೆಮ್ಮದಿಯಾಗಿರಲು ಬಿಡುವುದಿಲ್ಲ. ಈ ಆಧ್ಯಾತ್ಮ ಮತ್ತು ಅಲೌಕಿಕತೆಯನ್ನು ಅಮ್ಮನ ನಿಟ್ಟುಸಿರು,ಅಪ್ಪನ ಮುಗುಳ್ನಗು,ಹುಡುಗಿಯ ಕಣ್ನೋಟ, ಗೆಳೆಯನ ಒಡನಾಟ ಹೇಳಿದಷ್ಟು ಸೊಗಸಾಗಿ ಬೇರೆ ಯಾರೂ ಹೇಳಲಾರರು.ಹಾಗಾಗಿ ನಾವು ಇರಬೇಕಾಗಿರುವುದು ಅವರ ಜೊತೆ, ಇವರ ಜೊತೆಗಲ್ಲ.
ಇಳಂಗೋವನ್ ಬಳಿಗೆ ಹೋಗುವ ಮುನ್ನ ಸಾವನ್ನು ಕೃತಿಕಾರ ಕಾಣುವ ರೀತಿ ಹೀಗಿದೆ,
ಮಿಂಚುಳ್ಳಿ ಒಂದು ಹಾರಿ ಬಂದು ಕೆರೆಯಲ್ಲಿ ಮೀನನ್ನು ಹಿಡಿದು ಮೇಲಕ್ಕೆ ಹಾರಿ ನುಂಗುತ್ತದೆ. ನಾನಲ್ಲಿ ಕುಳಿತು ನೋಡಿದ್ದರಿಂದ ನನಗೆ ಅದು ಗೊತ್ತಾಯಿತೇ ಹೊರತು ಇಲ್ಲದಿದ್ದರೆ ಹೊರಜಗತ್ತಿಗೆ ಈ ವಿದ್ಯಮಾನ ನಡೆದಿರುವುದು ಗೊತ್ತೇ ಆಗದು. ಮೀನಿಗೂ ತನ್ನ ಮೇಲಾದ ಆಕ್ರಮಣ, ತಾನು ಗಾಳಿಯಲ್ಲಿ ತೇಲಿದ್ದು, ಬೆಚ್ಚನೆಯ ಗಂಟಲೊಳಗೆ ಇಳಿದದ್ದು ಗೊತ್ತೇ ಆಗುವುದಿಲ್ಲ.ಅಷ್ಟೊತ್ತಿಗಾಗಲೇ ಅದು ಸತ್ತಿರುತ್ತದೆ. ಮೀನಿನ ಮೇಲೆ ಮಿಂಚುಳ್ಳಿ ಗಬಕ್ಕನೆ ಎರಗಿದಂತೆ ಯಾವುದೋ ಶಕ್ತಿ ಒಂದು ನಮ್ಮ ಮೇಲೆ ಎರಗುತ್ತದೆ,ಹೊತ್ತೊಯ್ಯುತ್ತದೆ.ಅಲ್ಲಿ ತನಕ ಕಾಯುವುದು ಬದುಕು.
ಈಗ ಈ ಸರಣಿಗೆ ಇಳಂಗೋವನ್, ಹಿರಣ್ಯನ್ ಜೊತೆ ಕೃತಿಕಾರ ಬಂದು ಕುಳಿತಂತಾಯಿತು.
ಸಾವಿನ ಮೂಲಕ ಅಲೌಕಿಕತೆಯ ಅನ್ವೇಷಣೆ ಶುರುವಾಗುತ್ತದಾ? ಖಂಡಿತಕ್ಕೂ ಹೌದು. ಸಾವು ಎಂಬುದು ಒಂದು ಇರದೇ ಹೋಗಿದ್ದರೆ ಯಾರೂ ದಾರ್ಶನಿಕರಾಗುತ್ತಿರಲಿಲ್ಲ,ಯಾರೂ ಗುರುಗಳಾಗುತ್ತಿರಲಿಲ್ಲ, ಯಾರೂ ಉಪದೇಶ ಮಾಡುತ್ತಿರಲಿಲ್ಲ, ಯಾರೂ ಪ್ರವಚನದ ಗೊಡವೆಗೆ ಹೋಗುತ್ತಿರಲಿಲ್ಲ, ಯಾರೂ ಧ್ಯಾನ ಪೂಜೆಗೆ ಹೊರಡುತ್ತಿರಲಿಲ್ಲ. ತತ್ವಜ್ಞಾನದ ಹೆಸರೇ ಇರುತ್ತಿರಲಿಲ್ಲ.ಹಾಗಾದರೆ ನಾವೆಲ್ಲರೂ ಸಾವಿಗೆ ಹೆದರುತ್ತಿದ್ದೇವಾ? ಸೆಂಟ್ ಪರ್ಸೆಂಟ್. ಅದನ್ನು ಮೀರುವುದಕ್ಕೆ ಯತ್ನಿಸುತ್ತಿರುವುದರ ಒಟ್ಟೂ ಫಲ ಇದೆಲ್ಲಾ. ಸಾವು ಬರುತ್ತದೆ ಎಂದು ಗೊತ್ತಿದೆ, ಸಾವು ನಮ್ಮನ್ನು ಮುಗಿಸುತ್ತದೆ ಎಂದು ಗೊತ್ತಿದೆ. ಆದರೆ ನಾವು ಮುಗಿದುಹೋಗುವದಕ್ಕೆ ಸಿದ್ಧರಿಲ್ಲ. ಕಳೆದುಕೊಳ್ಳುವುದಕ್ಕೆ ಒಪ್ಪುವವರಲ್ಲ. ನಾವು ಸದಾ ಒದ್ದಾಡುತ್ತಲೇ ಇರುತ್ತೇವೆ. ನಮ್ಮ ಒದ್ದಾಟವನ್ನು ನೋಡಿ ಅದರಿಂದ ನಮ್ಮನ್ನು ಪಾರು ಮಾಡಲು ಈ ಮಹಾಮಂದಿ ಬರುತ್ತಾರೆ, ಅವರೂ ಸಾವಿಗೆ ಹೆದರಿದವರೇ.
ರಮಣಮಹರ್ಷಿ, ಯೂಜಿ, ಪುತ್ತೂರು ಅಜ್ಜ, ಜಾರತ್ರುಷ್ಟರನ್ನು ನೋಡಿ. ಇವರೆಲ್ಲರೂ ಸಾವಿನ ಮೂಲಕ ಮತ್ತೆ ಹುಟ್ಟಿದವರು. ಲೌಕಿಕವನ್ನು ಸಾಯಿಸಿ ಅಲೌಕಿಕವನ್ನು ಹುಟ್ಟಿಸಿಕೊಂಡವರು.
ಅಲೌಕಿಕ ಎನ್ನುವುದು ಲೌಕಿಕರಿಗೆ ಹೇಗೆ ಅನುಭವ ಆಗುತ್ತದೆ ಎಂದರೆ ಇದೊಂದು ಥರ ಲಾಟರಿ ಬಹುಮಾನದ ಹಾಗೇ. ಕೇರಳದ ಮೆಕಾನಿಕ್ ಗೆ ಇಪ್ಪತ್ತೈದು ಕೋಟಿ ರೂಪಾಯಿ ಲಾಟರಿ ಹೊಡೆಯಿತು ಎಂದಾಗ ಬಡವನೊಬ್ಬನಿಗೆ ರೋಮಾಂಚನ ಆಗುತ್ತದೆ ನೋಡಿ , ಅದುವೇ. ಯಾರದ್ದೋ ಅಲೌಕಿಕ ಆನಂದ ಕೇಳಿ ನಾವೂ ರೋಮಾಂಚನಗೊಳ್ಳುತ್ತೇವೆ ಅಷ್ಟೇ, ನಮಗೆ ದಕ್ಕುವ ರೀತಿಯೇ ಅಷ್ಟು ಎನ್ನುತ್ತಾನೆ ಕೃತಿಕಾರ. ಅಲೌಕಿದ ಜಾಡು ಹಿಡಿದು ಹೊರಟ ಕೃತಿಕಾರನಿಗೆ ಸಿಕ್ಕವನು ಇಳಂಗೋವನ್. ಅವನೇ ಕೃತಿಕಾರ, ಕೃತಿಕಾರನೇ ಅವನು.
ದೇಹವನ್ನು ಎಷ್ಟೇ ರಕ್ಷಣೆ ಮಾಡಿದರೂ ಪ್ರಾಣ ಅದರಲ್ಲಿ ಉಳಿಯುವುದಿಲ್ಲ.ಜೀವಾತ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಷ್ಟೇ ಎನ್ನುತ್ತಾನೆ ಇಳಂಗೋವನ್. ಇದಕ್ಕಿಂತ ದೊಡ್ಡ ಸತ್ಯ ಬೇರೆಲ್ಲಿದೆ? ಕೃತಿಕಾರ ಹೇಳುತ್ತಾನೆ, ಎಲ್ಲಿಗೋ ಪ್ರಯಾಣ ಹೊರಟಿದ್ದೇವೆ ಎಂಬಂತೆ ಸಾವನ್ನು ಸ್ವೀಕರಿಸಬೇಕು. ಯಾವಾಗ ಸಾವು ಬರುವುದು ಖಚಿತವಾಗುತ್ತದೆಯೋ ಆಗ ಇದು ಮುಗಿಯುತ್ತದೆ ಎಂದು ಗೊತ್ತಾಗಿ ಎಷ್ಟು ದೂರ ಬೇಕಾದರೂ ಹೋಗಬಹುದು.
ಸಾವನ್ನು ಗೆಲ್ಲುವ ಪ್ರಯತ್ನಗಳ ಫಲವೇ ಅಲೌಕಿಕತೆಯ ಹುಡುಕಾಟ. ಆಗ ಅಲ್ಲಿ ಧಾರ್ಮಿಕತೆ, ದೈವಿಕತೆಯ ಪ್ರವೇಶವಾಗುತ್ತದೆ. ಪರವಶವಾಗುವುದಕ್ಕಿಂತ ದೊಡ್ಡ ಅಲೌಕಿಕತೆ ಬೇರೆ ಇಲ್ಲ.ಕೃತಿಕಾರ ಸಕ್ಕೂಬಾಯಿಯ ಕತೆ ಉದಾಹರಿಸುತ್ತಾನೆ. ಸತಿ ಸಕ್ಕೂಬಾಯಿ ಮನೆಯಲ್ಲಿ ಹೆಣ್ಣಿನ ವೇಷ ಹಾಕಿ ಪಾಂಡುರಂಗ ಬಂದು ಕೆಲಸ ಮಾಡುತ್ತಾನೆ, ಆಗ ಸಕ್ಕೂಬಾಯಿ ಪಂಡರಾಪುರದಲ್ಲಿ ಪಾಂಡುರಂಗನನ್ನು ನೋಡಲು ಹೋಗುತ್ತಾಳೆ, ಪಂಡರಾಪುರದಲ್ಲಿ ಈಗ ಪಾಂಡುರಂಗನಿಲ್ಲ. ಹಾಗಾದರೆ ಸಕ್ಕೂಬಾಯಿ ನೋಡಿದ್ದು ಪಾಂಡುರಂಗನಿಲ್ಲದ ಮೂರ್ತಿಯನ್ನು ಮಾತ್ರಾ ಎಂದಾಯಿತು. ಅಂದರೆ ಪರವಶತೆಗೆ ದೇವರು ಬೇಕಿಲ್ಲ.
ಇಂಥ ಹುಡುಕಾಟಗಳ ನಡುವೆ ಇಳಂಗೋವನ್ ಜೊತೆ ಮಾತಿಗೆ ಕುಳಿತ ಕೃತಿಕಾರ ತನ್ನ ನೋಟಗಳನ್ನು ಒಂದೊಂದಾಗಿ ಪುಟಪುಟಗಳಲ್ಲಿ ಹರಡಿಕೊಳ್ಳುತ್ತಾನೆ. ಆ ವೇಳೆ ಅವನಿಗೆ ತಾನು ಕಂಡ, ಭೇಟಿ ಮಾಡಿದ, ಕೇಳಿದ, ಓದಿದ, ಹುಡುಕಿದ ಮಂದಿ ನೆನಪಾಗುತ್ತಾರೆ. ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಅಲ್ಲಮಪ್ರಭು, ಒಮರ್ ಖಯ್ಯಾಮ್, ಬುದ್ಧ, ಓಶೋ, ರಮಣಮಹರ್ಷಿ, ಯೂಜಿ,ಅಂಬರೀಷವರ್ಮ, ಪುತ್ತೂರು ಅಜ್ಜ,ಜಿಡ್ಡು ಕೃಷ್ಣಮೂರ್ತಿ, ಆರ್ಥರ್ ಶಾಫೆನ್ ಹೋವರ್, ಇಮ್ಯಾನುವೆಲ್ ಕಾಂಟ್, ಫ್ರೆಡರಿಕ್ ನೀಷೆ, ಮಾರ್ಕಸ್ ಅರೇಲಿಯಸ್, ಕೃಷ್ಣ, ಕುವೆಂಪು..
ಮುಂದಿನ ವಿವರಗಳನ್ನು ನೀವು ಪುಸ್ತಕ ಓದಿ ಪಡೆಯಬೇಕು, ಎಲ್ಲವನ್ನೂ ನಿಮ್ಮೊಳಗೆ ಅನುಭವಿಸಿಕೊಳ್ಳಬೇಕು. ನಿಮ್ಮ ಓದಿಗೆ ನೂರಾರು ಹಾದಿಗಳಿವೆ, ಎಲ್ಲೂ ನಿಲ್ಲದೇ ಮುಂದುವರಿಯುತ್ತಿರಿ.
ಇಳಂಗೋವನ್ ಓದುತ್ತಿದ್ದ ನನಗೆ ಹಿರಿಯರೊಬ್ಬರು ಹೇಳಿದ ಕತೆ ಹೊತ್ತಿಗೆ ನೆನಪಾಯಿತು. ಆ ಕತೆ ಹೀಗಿದೆ,
ಒಬ್ಬ ರಾಜನಿದ್ದ. ಅವನಿಗೆ ಒಮ್ಮೆ ತಾನು ಸಾಯಲೇಬಾರದು ಎಂದನಿಸಿತು. ಅವನು ಡಂಗುರ ಸಾರಿಸಿದ. ರಾಜ ಸಾಯಬಾರದು.ಅಂಥದ್ದೊಂದು ಔಷಧಿ, ಮಂತ್ರ ತಂತ್ರ ತರುವವರಿಗೆ ಅರ್ಧರಾಜ್ಯ ಕೊಡಲಾಗುವುದು.ತಪ್ಪಿದರೆ ತಲೆದಂಡ.
ಈ ಡಂಗುರದೊಳಗೊಂದು ಸೂಕ್ಷ್ಮವಿತ್ತು. ರಾಜ ಸಾಯಲೇಬಾರದು, ಆತ ಚಿರಂಜೀವಿ ಆಗಿರಬೇಕು ಎಂದು ಮಂತ್ರವೋ ತಂತ್ರವೋ ಔಷಧಿಯೋ ಅಂತ ಕೊಡಲು ಬಂದವನೂ ಚಿರಂಜೀವಿಯೇ ಆಗಬೇಕು ತಾನೇ?
ಅನೇಕರು ಬಂದರು. ತಲೆ ಹಾರಿತು.
ಕೊನೆಗೊಮ್ಮೆ ಒಬ್ಬ ಬಂದ. ತನ್ನ ಬಳಿ ಒಂದು ದಿವ್ಯನಾದ ಎಣ್ಣೆ ಇದೆ ಎಂದ. ರಾಜನಿಗೆ ಕೊಟ್ಟ. ಇದನ್ನು ನಿತ್ಯವೂ ರಾತ್ರಿ ಮಲಗುವ ಹೊತ್ತಿಗೆ ತಲೆಗೆ ಹಚ್ಚುತ್ತಿರು. ನಲುವತ್ತೆಂಟು ದಿನ ಹಚ್ಚಿದ ಮೇಲೆ ನೀನು ಚಿರಂಜೀವಿಯಾಗುವೆ ಎಂದ.
ಅಷ್ಟೇ ತಾನೇ ಎಂದ ರಾಜ.
ಆದರೆ ಒಂದು ಶರತ್ತು ಇದೆ.
ಏನದು?
ಎಣ್ಣೆ ಹಚ್ಚಿಕೊಳ್ಳುವ ಹೊತ್ತಿಗೆ ಕೋತಿಯ ನೆನಪಾಗಬಾರದು ಅಷ್ಟೇ,ಹಾಗೇನಾದರೂ ನೆನಪಿಸಿಕೊಂಡು ಹಚ್ಚಿಕೊಂಡರೆ ಕೂಡಲೇ ಮರಣ.
ಸರಿ ಆಯ್ತು ಎಂದ ರಾಜ.
ಇರುಳಾಯಿತು,ರಾಜ ಮಲಗಲು ಹೊರಟ. ತಲೆಗೆ ಎಣ್ಣೆ ಹಚ್ಚಿಕೊಳ್ಳಲು ಪಾತ್ರೆಯಿಂದ ಎಣ್ಣೆ ಕೈಗೆ ಸುರಿದುಕೊಳ್ಳುತ್ತಲೇ ಕೋತಿಯ ನೆನಪಾಯಿತು.
ರಾಜ ಕೈ ತೊಳೆದುಕೊಂಡು ಬಂದು ಮಲಗಿದ.
ಮರುದಿನವೂ ಇದೇ.
ಮೂರನೇ ದಿನವೂ ಡಿಟ್ಟೋ.
ನಲುವತ್ತೆಂಟು ದಿನ ಕಳೆದವು. ಎಣ್ಣೆ ಪಾತ್ರೆ ಖಾಲಿಯಾಯಿತು.
ಹ್ಯಾಪಿ ರೀಡಿಂಗ್.