ಬಂಟ್ವಾಳ: ದಿವ್ಯಾಂಗ ಮಕ್ಕಳೆಂದು ಹೆತ್ತವರು ಬೇಸರಿಸದೆ, ಸರಿಯಾದ ತರಬೇತಿಯನ್ನು ನೀಡಿದರೆ, ಮಕ್ಕಳು ಸಬಲರಾಗುತ್ತಾರೆ ಎಂದು ಮಕ್ಕಳ ತಜ್ಞ ವೈದ್ಯೆ ಡಾ. ಅನುರಾಧಾ ಕಾಮತ್ ಹೇಳಿದರು.
ಬಂಟ್ವಾಳ ತಾಲೂಕಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಕೆಲಸ ಮಾಡುವ ವಿಕಾಸಂ ಸೇವಾ ಫೌಂಡೇಶನ್ ನ ಬಿ.ಸಿ.ರೋಡ್ ಕಚೇರಿಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಕ್ಷಮ ಕರ್ನಾಟಕದ ದಕ್ಷಿಣ ಪ್ರಾಂತ ಪ್ರಮುಖ್ ಡಿ. ಕೇಶವ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿವ್ಯಾಂಗರಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ, ಅವರು ಸಮಾಜದ ವೈವಿಧ್ಯತೆಯ ಪ್ರತೀಕವಾಗಿದ್ದಾರೆ, ಅವರ ಅಭಿವೃದ್ಧಿಯ ಮೂಲಕ ಸಮಾಜವೂ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ವಿಕಾಸಂ ಸೇವಾ ಫೌಂಡೇಶನ್ ನ ಆಡಳಿತ ನಿರ್ದೇಶಕ ಗಣೇಶ್ ಭಟ್ ವಾರಣಾಸಿ ಪ್ರಾಸ್ತಾವಿಕ ನುಡಿಗಳಲ್ಲಿ ವಿಕಾಸಂ ಸೇವಾ ಫೌಂಡೇಶನ್ ಕಳೆದೊಂದು ವರುಷದಲ್ಲಿ ದಿವ್ಯಾಂಗ ಮಕ್ಕಳಿಗೆ ವಿವಿಧ ತರಬೇತಿಗಳನ್ನು ನೀಡಿ ಸಮನ್ವಯ ಶಿಕ್ಷಣಕ್ಕೆ ಅವರನ್ನು ಅಣಿಗೊಳಿಸುತ್ತಿರುವ ರೀತಿ, ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಕ್ಕಳಲ್ಲಿ ಆರಂಭಿಕ ಹಂತದಲ್ಲಿರುವ ವೈಕಲ್ಯತೆಯನ್ನು ಕಂಡುಹಿಡಿಯುವ ಕುರಿತಾಗಿ ಸಂಸ್ಥೆ ತರಬೇತಿಯನ್ನು ಕೊಡುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಮಕ್ಕಳಿಗೆ ವಿವಿಧ ವಿನೋದ ಆಟಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಿರಿಯ ಶಿಕ್ಷಕಿ ರೇಣುಕಾ ವಂದನಾರ್ಪಣೆ ನಡೆಸಿದರು. ಎಮ್ ಎಸ್ ಡಬ್ಲ್ಯು ವಿದ್ಯಾರ್ಥಿನಿ ಮಾನಸ ಕಾರ್ಯಕ್ರಮ ನಿರೂಪಿಸಿದರು.