ನಮ್ಮೂರು

ಮಕ್ಕಳ ಸಾಹಿತ್ಯದಿಂದ ಆಧ್ಯಾತ್ಮದವರೆಗೆ – ಎಳೆಯರ ಗೆಳೆಯ ಮುಳಿಯರ ಸಾಹಿತ್ಯ ವೈವಿಧ್ಯ

  • ಹರೀಶ ಮಾಂಬಾಡಿ

ದಶಕಗಳ ಹಿಂದೆ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ ಕವನಗಳಲ್ಲಿ ಎಳೆಯರ ಗೆಳೆಯ ಎಂಬ ಹೆಸರು ಹೆಚ್ಚಾಗಿ ಕಾಣಸಿಗುತ್ತಿತ್ತು. ನವಿರಾದ ನಿರೂಪಣೆಯೊಂದಿಗೆ ಮಕ್ಕಳಿಗೆ ಸ್ಫೂರ್ತಿಯುಕ್ಕಿಸುವ ಕವನ ರಚನೆ ಮಾಡುತ್ತಿರುವ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಹಿಡಿತ ಬಲಗೊಳ್ಳುವಂತೆ ಮಾಡಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಮುಳಿಯ ಶಂಕರ ಭಟ್. ಸದ್ಯ ಬಂಟ್ವಾಳ ತಾಲೂಕಿನ ಅಳಿಕೆ ಸಮೀಪ ಮುಳಿಯದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ನಿವೃತ್ತ ಅಧ್ಯಾಪಕ ಮುಳಿಯ ಶಂಕರ ಭಟ್ ಅವರಿಗೆ 72ರ ಹರೆಯ. ಸುದೀರ್ಘ ಕಾಲ ಮಂಜೇಶ್ವರದಲ್ಲಿರುವ ಎಸ್.ಎ.ಟಿ. ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಬಳಿಕ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುವ ಎಳೆಯರ ಗೆಳೆಯ ಮುಳಿಯ ಈಗಲೂ ಸಾಹಿತ್ಯ ರಚನೆಯಲ್ಲಿ ನಿರತರು. ಹಿಂದೆ ಮಕ್ಕಳ ಸಾಹಿತ್ಯವನ್ನು ಹೆಚ್ಚಾಗಿ ಬರೆಯುತ್ತಿದ್ದವರು, ಈಗ ಧಾರ್ಮಿಕ, ಆಧ್ಯಾತ್ಮಕ್ಕೆ ಸಂಬಂಧಿಸಿದ ಬರೆಹಗಳನ್ನು ಬರೆಯುತ್ತಿದ್ದಾರೆ. ಒಡಿಯೂರು ಕ್ಷೇತ್ರದಲ್ಲಿ ಪ್ರಕಟಿತ ಕೃತಿಗಳೂ ಸೇರಿದಂತೆ ಹಲವು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಅವರು ನೀಡಿದ್ದಾರೆ.

ಜಾಹೀರಾತು

ಕೃಷ್ಣ ಭಟ್ ಮತ್ತು ಶಂಕರಿ ಅಮ್ಮ ಅವರ ಪುತ್ರರಾಗಿ 1952, ಫೆ.19ರಂದು ಜನಿಸಿದ ಮುಳಿಯ ಶಂಕರ ಭಟ್ ಪ್ರಾಥಮಿಕ ಶಿಕ್ಷಣವನ್ನು ಕೆದಿಲ ಹಿ.ಪ್ರಾ.ಶಾಲೆ, ಮುಚ್ಚಿರಪದವು ಪ್ರಾಥಮಿಕ ಶಾಲೆಯಲ್ಲಿ ನಡೆಸಿದ್ದಾರೆ. ಕನ್ಯಾನ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ನಡೆಸಿರುವ ಅವರು, ಸಂಸ್ಕೃತ ವಿಶಾರದ, ಕನ್ನಡದಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಹಿಂದಿ ಸಾಹಿತ್ಯರತ್ನ, ಹಿಂದಿಯಲ್ಲಿ ಎಂ.ಎ, ಹಿಂದಿ ಶಿಕ್ಷಣಪಾರಂಗತ ಪದವಿಯನ್ನು ಬಿಇಡಿಯಲ್ಲಿ ಮಾಡಿದ್ದಾರೆ.

ವೃತ್ತಿಜೀವನ:

ಆರಂಭದಲ್ಲಿ ಪತ್ರಕರ್ತರಾಗಿ ವೃತ್ತಿಜೀವನ ನಡೆಸಿದ ಶಂಕರ ಭಟ್, ನವಭಾರತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದವರು. ಬಳಿಕ ಅಧ್ಯಾಪನ ವೃತ್ತಿಗೆ ತೊಡಗಿಸಿಕೊಂಡು, ಮೊಂಟೆಪದವು ಪ್ರಾಥಮಿಕ, ಪ್ರೌಢಶಾಲೆ, ಮುಡಿಪು ಜ್ಯೂನಿಯರ್ ಕಾಲೇಜು, ಕಪಿತಾನಿಯೋ ತರಬೇತಿ ಶಾಲೆಗಳಲ್ಲಿ 1976ರಿಂದ 1985ರವರೆಗೆ ಕೆಲಸ ಮಾಡಿದರು. ಬಳಿಕ 1986ರಿಂದ 2007ರವರೆಗೆ ಮಂಜೇಶ್ವರದ ಎಸ್.ಎ.ಟಿ. ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಒಂದು ವರ್ಷ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದರು. ಕೇರಳ ಸರಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸಂಪನ್ಮೂಲ ವ್ಯಕ್ತಿಯಾಗಿ 12 ವರ್ಷ ಅವರು ಭಾಗಿಯಾಗಿದ್ದರು.

ಹವ್ಯಾಸ:

ಗಮಕ ವ್ಯಾಖ್ಯಾನದ ಮೂಲಕ ಗಮನ ಸೆಳೆದಿರುವ ಮುಳಿಯ ಶಂಕರ ಭಟ್, ತಾಳಮದ್ದಳೆ ಅರ್ಥಧಾರಿ. ನಾಟಕ ರಚನೆ, ನಿರ್ದೇಶನ, ನಟನೆಯಲ್ಲೂ ಗುರುತಿಸಿಕೊಂಡವರು. ಕಥೆ, ಕವನ ಬರೆಯುವುದು ಮುಖ್ಯ ಹವ್ಯಾಸಗಳಲ್ಲಿ ಪ್ರಮುಖ.

ಪ್ರಕಟಿತ ಕೃತಿಗಳು 19:

ದೇಶಪ್ರೇಮ ಮತ್ತು ಇತರ ಕವನಗಳು, ನಗೆಮಿಂಚು, ಭಕುತಿಕುಸುಮ, ಪುಷ್ಪಾಂಜಲಿ, ಚಿಣ್ಣರ ಚಿಲುಮೆ, ಚಿಣ್ಣರ ಗಿಣ್ಣು, ಚಿಣ್ಣರ ಲೋಕ, ಭಾವಗಂಗೆ, ಧನ್ವಂತರಿ ಮಹಾತ್ಮೆ, ಸಚಿತ್ರ ಗುರುಚರಿತಾಮೃತ, ಪಾತ್ರಕ್ಷೇತ್ರ, ದತ್ತಾವಧೂತ, ಗುರುದೇವಾನಂದ ದೃಷ್ಟಿ, ಸೃಷ್ಟಿ, ಅವಧೂತನ ಅಂತರಂಗ ಭಾಗ 1 ಮತ್ತು ಅವಧೂತನ ಅಂತರಂಗ ಭಾಗ 2, ವಚನವೇದ, ಗುರುವಚನಾಮೃತ, ಅನುಭವಾಮೃತೊ (ತುಳು), ಅನುಭವಾಮೃತ.  ಹೀಗೆ ಮಕ್ಕಳ ಕವನಗಳಿಂದ ತೊಡಗಿ, ಕವನ ಸಂಕಲನ, ಆಧ್ಯಾತ್ಮ, ಧಾರ್ಮಿಕ ಸಹಿತ 19 ಕೃತಿಗಳು ಪ್ರಕಟವಾಗಿವೆ. 

ಅನುವಾದಿತ ಕೃತಿಗಳು 2, ವ್ಯಕ್ತಿಚಿತ್ರಗಳು 2:

ಎರಡು ಕೃತಿಗಳಾದ ಗುರೂಜಿ ಮತ್ತು ಶ್ಯಾಮಲಾ ದಂಡಕ ಅನುವಾದಿತ ಕೃತಿಗಳು. ಸಾಹಸಿ –ಸಾಧಕ ಮತ್ತು ಪುನರೂರು ಯಶೋಗಾನ ವ್ಯಕ್ತಿಚಿತ್ರಗಳು.

ಸಂಪಾದಿತ ಕೃತಿಗಳು 3:

ಯಕ್ಷಶಾಂತಲಾ, ಯಕ್ಷವಲ್ಲರಿ, ಬಣ್ಣ ಬಣ್ಣದ ಹೂವುಗಳು ಇವರ ಸಂಪಾದಿತ ಕೃತಿಗಳು.

ಅಪ್ರಕಟಿತ ನಾಟಕಗಳು: ಮುಳಿಯ ಶಂಕರ ಭಟ್ಟರು ಈಗಲೂ ಕೃತಿರಚನೆಯಲ್ಲಿ ತೊಡಗಿಸಿಕೊಂಡವರು. ಅವರ ಹಲವು ಕೃತಿಗಳು ಪ್ರಕಟಣೆಗೆ ಬಾಕಿ ಉಳಿಸಿವೆ. ಅವರೇ ಹೇಳುವಂತೆ 6 ಪೌರಾಣಿಕ, 4 ತುಳು ನಾಟಕಗಳು, 12 ನೃತ್ಯರೂಪಕಗಳು , 4 ಕಿರುಕಾವ್ಯ ಕೃತಿಗಳು ಪ್ರಕಟಣೆಗೆ ಬಾಕಿ ಉಳಿದಿವೆ.

ಎಳೆಯರ ಗೆಳೆಯ ಹೆಸರಲ್ಲಿ ಪ್ರಸಿದ್ಧ:

ಮುಳಿಯ ಶಂಕರ ಭಟ್ ಯಾರು ಎಂದು ಫಕ್ಕನೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ, ಎಳೆಯರ ಗೆಳೆಯ ಮುಳಿಯ ಯಾರು ಎಂದು ಕೇಳಿದರೆ ಎಲ್ಲರೂ ನಾನವರ ಕೃತಿ ಓದಿದ್ದೇನೆ ಎನ್ನುತ್ತಾರೆ. ಶ್ರೀಮುಳಿಯ ರಜತಾದ್ರಿ, ಗೌರೀಶಂಕರ, ಗುರುಶರಣ ರಜತಾದ್ರಿ, ಎಳೆಯರ ಗೆಳೆಯ ಮುಳಿಯ, ನಾಗಭೂಷಣ, ಶ್ರೀಶೈಲ, ರಜತಾದ್ರಿವಾಸ, ಮಂಕ, ಬೆಳ್ಳಿಬೆಟ್ಟ ಕಾವ್ಯನಾಮಗಳ ಮೂಲಕ ಅವರು ಕವನ, ಅಂಕಣ ಬರೆಹಗಳನ್ನು ಬರೆಯುತ್ತಿದ್ದಾರೆ.

ಪ್ರಶಸ್ತಿ, ಸನ್ಮಾನ, ಗೌರವಗಳು:

2002ರಲ್ಲಿ ಪುತ್ತೂರಿನಲ್ಲಿ ನಡೆದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಅವರು, ಒಡಿಯೂರಿನಲ್ಲಿ 2006ರಲ್ಲಿ ನಡೆದ ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. 2021ರಲ್ಲಿ ಮಂಚಿಯಲ್ಲಿ ನಡೆದ ತಾಲೂಕು ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು, ಅಳಕೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

1998ರಲ್ಲಿ ಒಡಿಯೂರಿನಲ್ಲಿ ಕಾವ್ಯಕಲಾವಿಶಾರದ ಪ್ರಶಸ್ತಿ, 1999ರಲ್ಲಿ ಕೊಲ್ಯ ಕ್ಷೇತ್ರದಲ್ಲಿ ಸನ್ಮಾನ, 2002ರಲ್ಲಿ ಕಟೀಲಿನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, 2003ರಲ್ಲಿ ಮುಂಬಯಿಯಲ್ಲಿ ನಡೆದ ಹೊರನಾಡ ಕನ್ನಡಿಗ ಸನ್ಮಾನ, 2003ರಲ್ಲಿ ಮೂಡುಬಿದಿರೆ ನುಡಿಸಿರಿಯಲ್ಲಿ ಸನ್ಮಾನ, ನಂದಾವರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಮಂಜೇಶ್ವರದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, 2011ರಲ್ಲಿ ಬೆಂಗಳೂರು ಬಸವ ಸಮಿತಿ ವತಿಯಿಂದ ರಾಜ್ಯಮಟ್ಟದ ಕವಿ ಪ್ರಶಂಸಾಪತ್ರ, 2015ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, 2015ರಲ್ಲಿ ತುಳು ಸಾಹಿತ್ಯ ಸಮ್ಮೇಳನದಲ್ಲಿ ತುಳುಸಿರಿ ಪ್ರಶಸ್ತಿ, 2016ರಲ್ಲಿ ಪೆರಡಾಲದಲ್ಲಿ ನಡೆದ ತುಳುವೆರ ಆಯನೊದಲ್ಲಿ ಸನ್ಮಾನ, 2015ರಲ್ಲಿ ಬೆಂಗಳೂರಲ್ಲಿ ನಡೆದ ಅಖಿಲ ಕರ್ನಾಟಕ ಗಮಕ ಸಮ್ಮೇಳನದಲ್ಲಿ ಸನ್ಮಾನ, 2019ರಲ್ಲಿ ಯಕ್ಷ ಕೌಸ್ತುಭ ಪ್ರಶಸ್ತಿ ಸಹಿತ ಸುಮಾರು 14ರಷ್ಟು ಪ್ರಶಸ್ತಿ, ಸನ್ಮಾನಗಳು ಸಂದಿವೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

View Comments

  • ನನ್ನ ತಂದೆಯವರನ್ನು ಮತ್ತು ಅವರ ಸಾಹಿತ್ಯ ಸೇವೆ ಹಾಗೂ ಕೃತಿ ಕೊಡುಗೆಗಳನ್ನು ಪರಿಚಯಿಸಿದ ತಮಗೆ ಕೃತಜ್ಞತೆಗಳು. ಪ್ರಶಸ್ತಿಗಳ ಹುಡುಕಾಟ ಮಾಡುವ ಮತ್ತು ಪ್ರಶಸ್ತಿಯನ್ನು ಮಾತ್ರ ಲೆಕ್ಕಿಸಿ ಬರೆಯುವ ಬರೆಹಗಾರರು ಇರುವ ಇಂದಿನ ಕಾಲ ಘಟ್ಟದಲ್ಲಿ ಸ್ವಾಂತ ಸುಖಕ್ಕೆ ಮತ್ತು ಇತರರ ಕುತೂಹಲಕ್ಕೆ, ಮಿಗಿಲಾಗಿ ಪ್ರಯೋಗ ಪರಿಣತಿಗಾಗಿ ದಿನವೂ ಬರೆಯುವ, ಓದುವ ನನ್ನಪ್ಪ ಇತರರಿಗೂ ಆದರ್ಶವಾಗಬಲ್ಲರು. ಮತ್ತೊಮ್ಮೆ ಕೃತಜ್ಞತೆಗಳು