ಬಂಟ್ವಾಳ

ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಪ್ರೇಕ್ಷಾ

ಬಂಟ್ವಾಳ: ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ವತಿಯಿಂದ ನಡೆಯುವ ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಶಂಭೂರು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಿರ್ಮಿಸಲಾಗುವ ರಾಮಚಂದ್ರ ರಾವ್ ಸಭಾಂಗಣದ ವಿ.ಮ ಭಟ್ ವೇದಿಕೆಯಲ್ಲಿ ನವೆಂಬರ್ 19ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಪ್ರೇಕ್ಷಾ ಆಯ್ಕೆಯಾಗಿರುತ್ತಾರೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮಚಂದ್ರ ಭಂಡಾರದಮನೆ ಮತ್ತು ಪ್ರಧಾನ ಕಾರ್ಯದರ್ಶಿ ಜಯರಾಮ ಡಿ ಪಡ್ರೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರೇಕ್ಷಾ ಇವರು ಶಂಭೂರು ಗ್ರಾಮದ ಸೀನೆರೆ ಪಾಲು ಮೋಹಿನಿ ಮತ್ತು ಸುಣ್ಣಾಜೆ ದಿನೇಶ್ ಅವರ ದ್ವಿತೀಯ ಪುತ್ರಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯ ನಟ್ಟಿಬೈಲು ವೇದಶಂಕರ ನಗರದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿರುವರು. ಪ್ರಸ್ತುತ ಶಂಭೂರು ಶಾಲೆಯಲ್ಲಿ ಐದನೇ ತರಗತಿಯಿಂದ ಕಲಿಕೆ ಮುಂದುವರಿಸುತ್ತಿದ್ದಾರೆ.

ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಇವರು ಯಕ್ಷಗಾನದಲ್ಲಿಯೂ ವೇಷ ಮಾಡಿದ ಅನುಭವ ಗಳಿಸಿದ್ದಾರೆ. ಭಕ್ತಿಗೀತೆ ಮತ್ತು  ದೇಶಭಕ್ತಿ ಗೀತೆಗಳ ಗಾಯನ ಇವರ ಮೆಚ್ಚಿನ ಹವ್ಯಾಸ. ಪ್ರತಿಭಾ ಕಾರಂಜಿಯ ಕವನ ವಾಚನ ಸ್ಪರ್ಧೇಯಲ್ಲಿ ಭಾಗವಹಿಸಿ ಕಳೆದೆರಡು ವರ್ಷಗಳಿಂದ ಬಹುಮಾನಿತರಾಗುತ್ತಿದ್ದಾರೆ. ಇವರು ಶಂಭೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ. ಕಡೆಶಿವಾಲಯದಲ್ಲಿ ಜರಗಿದ 17ನೇ  ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಇವರು ರಚಿಸಿದ ಕವನ “ಬೆಳೆಸಿ ಉಳಿಸಿ” ಕವನವು ಆ ವರ್ಷದ ಸ್ಮರಣ ಸಂಚಿಕೆ “ಲಹರಿ” ಯಲ್ಲಿ ಪ್ರಕಟವಾಗಿದೆ. ಶಾಲಾ ಪ್ರತಿಭಾ ದಿನೋತ್ಸವ, ಕ್ರೀಡಾ ಕೂಟಗಳಲ್ಲಿ ಇವರು ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಬಹುಮಾನ ಪಡೆಯುತ್ತಿರುವ ಸಾಧನಾಮುಖಿ. ಸಾಹಿತ್ಯದಲ್ಲಿ ಬೆಳೆಯಬೇಕಂಬ ಹಂಬಲ ಪ್ರೇಕ್ಷಾ ಅವರಿಗಿದೆ. ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ ಬಾಯಾರು, ಕಾರ್ಯದರ್ಶಿ ಪುಷ್ಪಾ ಎಚ್ ಇವರು ಪ್ರೇಕ್ಷಾ ಇವರನ್ನು ಅಭಿನಂದಿಸಿದ್ದು ಅವರ ಸರ್ವಾಧ್ಯಕ್ಷತೆಯಲ್ಲಿ ಶಂಭೂರಿನಲ್ಲಿ ಜರಗುವ ತಾಲೂಕು ಮಟ್ಟದ ಮಕ್ಕಳ ಹದಿನೆಂಟನೇ ಸಾಹಿತ್ಯ ಸಮ್ಮೇಳನವು ಯಶಸ್ಸುಗಳಿಸಲಿ ಎಂದು ಹಾರೈಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts