ಬಂಟ್ವಾಳ: ಮಕ್ಕಳ ಸಾಹಿತ್ಯ ಸಮ್ಮೇಳನ , ಮಕ್ಕಳ ಕಲಾಲೋಕ ಬಂಟ್ವಾಳ ಹಾಗೂ ಕಡೇಶಿವಾಲಯ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಲಹರಿ ಬಿಡುಗಡೆ ಕಡೇಶಿವಾಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಎಸ್.ವಿ.ಎಸ್ ಟೆಂಪಲ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಕೆ.ಎನ್. ಗಂಗಾಧರ ಆಳ್ವ ಬಿಡುಗಡೆಗೊಳಿಸಿದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಉದಾತ್ತವಾದ ಲೇಖನಗಳು ಈ ಸ್ಮರಣ ಸಂಚಿಕೆಯಲ್ಲಿದೆ, ಕೇವಲ ಲೇಖನಗಳಿಗೆ ಸೀಮಿತವಾಗದೆ ಈ ಊರಿಗೆ ಉಪಯೋಗವಾಗುವ ಸ್ಮರಣ ಸಂಚಿಕೆ ರಚನೆಯಾಗಿದೆ ಎಂದು ತಿಳಿಸಿದರು.
ಸ್ಮರಣ ಸಂಚಿಕೆಯ ಗೌರವ ಸಂಪಾದಕ, ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಮಾತನಾಡಿ ನಾವು ಮಾಡುವ ಕೆಲಸಗಳು ದಾಖಲೆಯಾಗಬೇಕು. ಮುಂದಿನ ತಲೆಮಾರಿಗೆ ಅವುಗಳನ್ನು ತಿಳಿಸಬೇಕಾದರೆ ಇಂತಹ ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದರು. ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕಿಟ್ಟಣ ಶೆಟ್ಟಿ ವಹಿಸಿ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ವಿಂದ್ಯಾ ಎಸ್. ರೈ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಡೇಶಿವಾಲಯ ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ರಾವ್., ಮಕ್ಕಳ ಕಲಾಲೋಕದ ಅಧ್ಯಕ್ಷ ರಮೇಶ್ ಎಂ. ಬಾಯಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸ್ಮರಣ ಸಂಚಿಕೆಯ ಸಂಪಾದಕ , ಸ್ವಾಗತ ಸಮಿತಿಯ ಸಂಚಾಲಕ ಮಾಧವ ರೈ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ದಿವ್ಯಾ ಜಿ. ಸನ್ಮಾನ ಪತ್ರ ವಾಚಿಸಿದರು. ಮುಖ್ಯ ಶಿಕ್ಷಕ ಬಾಬು ಪೂಜಾರಿ ವಂದಿಸಿದರು, ಪ್ರೇಮ ಕಾರ್ಯಕ್ರಮ ನಿರೂಪಿಸಿದರು.