ಬಂಟ್ವಾಳ

ಕಾಂಗ್ರೆಸ್ ಸರಕಾರ ತೊಲಗಿಸಲು ರಾಷ್ಟ್ರಪತಿಗೆ ಮನವಿ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬಂಟ್ವಾಳ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನಿಷ್ಕ್ರಿಯವಾಗಿದ್ದು, ಸರಕಾರವನ್ನು ವಜಾಗೊಳಿಸಬೇಕು ಎಂದು ಸದ್ಯದಲ್ಲೇ ರಾಷ್ಟ್ರಪತಿಗಳಿಗೆ ಬಿಜೆಪಿ-ಜೆಡಿಎಸ್ ನಿಯೋಗ ಮನವಿ ಮಾಡಲಿದೆ.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಂಟರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿದ್ಧರಾಮಯ್ಯ ಸರಕಾರ ಭ್ರಷ್ಟಾಚಾರದ ಹಗರಣಗಳಿಂದ ಮುಳುಗಿದ್ದು, ಸರಕಾರ ಬದುಕಿದ್ದೂ ಸತ್ತಂತೆ. ಒಂದು ಕ್ಷಣವೂ ಈ ಸರಕಾರ ಉಳಿಯಲು ನೈತಿಕತೆ ಇಲ್ಲ, ಹೀಗಾಗಿ ರಾಜ್ಯ ಸರಕಾರ ವಜಾ ಮಾಡಬೇಕು ಎಂದು ಮನವಿ ಮಾಡಲಿದ್ದೇವೆ ಎಂದರು.

ಸೋಲಿನ ಹಾದಿಯಲ್ಲಿ ಕಾಂಗ್ರೆಸ್:

ಹರಿಯಾಣದಲ್ಲಿ ಗೆಲ್ಲುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದ ಸಂದರ್ಭ‌ ಕಾಂಗ್ರೆಸ್ ಪಕ್ಷಕ್ಕೆ  ಸೋಲಾಯಿತು. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ. ಕಾಂಗ್ರೆಸ್ ಇಂದು ಸೋಲಿನ ಹಾದಿಯಲ್ಲಿದೆ ಎಂದರು.

ಭ್ರಷ್ಟಾಚಾರ ಕುರಿತು ಮಾತಾಡ್ತಾರೆ:

ಹಲವು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, ಇಂದು ಭ್ರಷ್ಟಾಚಾರದಿಂದಾಗಿ ನಲುಗಿ ಹೋಗಿದೆ. ಕರ್ನಾಟಕದಲ್ಲಿ  ಸಿಎಂ ಬಗ್ಗೆ ಜನ ಭ್ರಷ್ಟಾಚಾರ ಕುರಿತು ಮಾತಾಡುವಂತಾಗಿದೆ. ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ, ಅಹಿಂದ ಸಮುದಾಯಕ್ಕೇ ಅನ್ಯಾಯ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣದ ಮೂಲಕ ಹಣ ದುರುಪಯೋಗ ಆಗಿರುವುದು ಸಾಬೀತಾಗಿದೆ ಎಂದರು.

ಮೂಡ ಹಗರಣ, ಬಿಜೆಪಿ ಹೋರಾಟದ ಫಲವಾಗಿ ಬೆಳಕಿಗೆ ಬಂದಿದೆ. ತನಗೆ ಸೈಟ್ ಹಿಂದುರಿಗಿಸಬೇಕು ಎಂದಿದ್ದರೆ, ಪರಿಹಾರ ಬೇಕು ಎನ್ನುತ್ತಿದ್ದ ಮುಖ್ಯಮಂತ್ರಿ, ಇದೀಗ ಯಾವುದೇ ಪರಿಹಾರ ನಿರೀಕ್ಷೆ ಮಾಡದೆ ಹಿಂದಿರುಗಿಸಿದ್ದು, ತಪ್ಪು ಒಪ್ಪಿಕೊಂಡಂತಾಗಿದೆ ಎಂದರು.

25ರಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾಗಿದ್ದವರ ಮೇಲಿನ ಕೇಸು ಹಿಂಪಡೆಯುವುದು ಅಕ್ಷಮ್ಯ ಅಪರಾಧ. ಈ ಕುರಿತು ಅ.25ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ ವಿಜಯೇಂದ್ರ, ರಾಜ್ಯದಲ್ಲಿ ಯಾವುದೇ ಹೊಸ ಯೋಜನೆ ಘೋಷಣೆ ಆಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಗೆ ಯಾವುದೇ ಅನುದಾನ ದೊರಕುತ್ತಿಲ್ಲ ಎಂಬುದನ್ನು ಆಡಳಿತ ಪಕ್ಷದ ಶಾಸಕರೇ ಹೇಳುತ್ತಾರೆ. ಅಭಿವೃದ್ಧಿಶೂನ್ಯ, ಅಲ್ಪಸಂಖ್ಯಾತ ತುಷ್ಟೀಕರಣದ ಸರಕಾರವಿಂದು ಕಾರ್ಯಾಚರಿಸುತ್ತಿದ್ದು, ದೇಶದ್ರೋಹಿಗಳನ್ನು ರಕ್ಷಿಸಲು ಸರಕಾರ ಹೊರಟಿದೆ ಎಂದರು. ಇದೇ ವೇಳೆ ಪ್ರೇರಣಾ ಟ್ರಸ್ಟ್ ಕುರಿತು ಕಾಂಗ್ರೆಸ್ ಮಾಡಿದ ಆಪಾದನೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಆಧಾರರಹಿತ ಆರೋಪವಾಗಿದೆ ಎಂದರು.

ದೋಸ್ತಿ ಪಕ್ಷ ನಿರ್ಧಾರ ಮಾಡುತ್ತೆ;

ಉಪಚುನಾವಣೆ ಕುರಿತು ಬಿಜೆಪಿಯ ಸಿ.ಪಿ.ಯೋಗೀಶ್ವರ್, ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ ಹೆಸರುಗಳು ಕೇಳಿಬರುತ್ತಿದ್ದು, ಈ ಕುರಿತು ಯಾವುದೇ ಗೊಂದಲಗಳಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ಜೆಡಿಎಸ್, ಬಿಜೆಪಿ ವರಿಷ್ಟರು ನಿರ್ಧರಿಸುತ್ತಾರೆ ಎಂದರು.

ಈ ಸಂದರ್ಭ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಾ.ಸುಧಾಕರ ರೆಡ್ಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಪ್ರತಿಪಕ್ಷ ಉಪನಾಯಕ ವಿ.ಸುನಿಲ್ ಕುಮಾರ್, ಶಾಸಕರಾದ ರಾಜೇಶ್ ನಾಯ್ಕ್,  ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಪ್ರತಾಪ್ ಸಿಂಹ ನಾಯಕ್, ಪ್ರಭಾರಿ ಕ್ಯಾ.ಗಣೇಶ್ ಕಾರ್ಣಿಕ್, ಸಹಪ್ರಭಾರಿ ಉದಯಕುಮಾರ ಶೆಟ್ಟಿ, ರಾಜೇಶ್ ಕಾವೇರಿ, ಪ್ರಮುಖರಾದ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.