ಮಹಾತ್ಮರ ಆದರ್ಶ ಪಾಲನೆ ಮೂಲಕ ಅವರ ಸದ್ವಿಚಾರವನ್ನು ಮೈಗೂಡಿಸಿಕೊಳ್ಳುವುದು ಜಯಂತಿ ಆಚರಣೆ ಮಾಡುವ ಉದ್ದೇಶವಾಗಿದೆ ಎಂದು ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಮಟ್ಟದ ಗಾಂಧಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವವರು ಮಹಾತ್ಮಾ ಗಾಂಧೀಜಿಯವರ ಆದರ್ಶ ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಅಗತ್ಯವಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ ಮಾತನಾಡಿ, ಅಹಿಂಸಾ ಮಾರ್ಗದಲ್ಲಿ ಹೋರಾಡಿದ ಮಹಾತ್ಮಾ ಗಾಂಧೀಜಿ, ಸರಳ ಉಡುಪಿನಲ್ಲಿ ಜೀವನಪೂರ್ತಿ ಬದುಕುವ ಮೂಲಕ ಮಾರ್ಗದರ್ಶಿಯಾದವರು ಎಂದರು.
ಈ ಸಂದರ್ಭ ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ದಿವಾಕರ ಮುಗುಳ್ಯ, ನರೇಂದ್ರನಾಥ ಮಿತ್ತೂರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ ಸಹಿತ ನಾನಾ ಇಲಾಖೆಗಳ ಅಧಿಕಾರಿಗಳು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷುಕುಮಾರ್ ಸಹಿತ ಸಿಬಂದಿ ಹಾಜರಿದ್ದರು. ಇದಕ್ಕೂ ಮುನ್ನ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.