ಬಂಟ್ವಾಳ: ಜೇಸಿ ಜೋಡುಮಾರ್ಗ ನೇತ್ರಾವತಿ ವತಿಯಿಂದ ಜೇಸಿ ಸಪ್ತಾಹದ ಸಮಾರೋಪದ ಹಿನ್ನೆಲೆಯಲ್ಲಿ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಷೋಡಶಾವಧಾನ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾದ 9ನೇ ತರಗತಿ ವಿದ್ಯಾರ್ಥಿ ಅನ್ವೇಶ್ ಅಂಬೆಕಲ್ಲು ಅವರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಪೈ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉದ್ಯಮಿ ಹಾಗೂ ಲಯನ್ಸ್ ಕ್ಲಬ್ ವಲಯ ಸಹಸಂಯೋಜಕ ಸುಧಾಕರ ಆಚಾರ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ, ಜೋಡುಮಾರ್ಗ ಜೇಸಿ ವ್ಯಕ್ತಿತ್ವ ವಿಕಸನದೊಂದಿಗೆ ಪ್ರತಿಭಾ ಪ್ರೋತ್ಸಾಹ ಮೂಲಕ ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದು, ತನ್ನ ಚಟುವಟಿಕೆಗಳ ಮೂಲಕ ಮಾದರಿಯಾಗಿದೆ ಎಂದು ಶುಭ ಹಾರೈಸಿದರು.
ಹದಿನಾರು ಮಂದಿ ಕೊಟ್ಟ ಹದಿನಾರು ವಿಷಯಗಳನ್ನು ಏಕಕಾಲಕ್ಕೆ ಕೇಳಿ, ಗಮನಿಸಿ, ಸ್ಮರಣಶಕ್ತಿಯೊಳಗೆ ದಾಖಲಿಸಿ, ಪ್ರದರ್ಶನ ನೀಡುವ ಕಲೆ ಕರಗತ ಮಾಡಿಕೊಂಡಿರುವ ಅನ್ವೇಶ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮೂಲಕ ದಾಖಲೆ ಬರೆದಿದ್ದ ಹಿನ್ನೆಲೆಯಲ್ಲಿ ಕಲಾಶ್ರೀ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭ ಅನ್ವೇಶ್ ತಂದೆ ಮಧುಸೂಧನ ಅಂಬೆಕಲ್ಲು ,ತಾಯಿ ತೇಜಸ್ವಿ ಅಂಬೆಕಲ್ಲು, ಜೋಡುಮಾರ್ಗ ಜೇಸಿ ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಕಾರ್ಯದರ್ಶಿ ಡಾ. ಧೀರಜ್ ಹೆಬ್ರಿ, ಮಹಿಳಾ ಜೇಸಿ ಸಂಯೋಜಕಿ ಸೌಮ್ಯಾ ಹರಿಪ್ರಸಾದ್, ಕಾರ್ಯಕ್ರಮ ಸಂಯೋಜಕ ಡಾ. ವಿನಾಯಕ ಕೆ.ಎಸ್. ಉಪಸ್ಥಿತರಿದ್ದರು. ಇದೇ ವೇಳೆ ಡ್ಯಾನ್ಸ್ ಧಮಾಕಾ ಕಾರ್ಯಕ್ರಮ ನಡೆಯಿತು.
ಜೇಸಿ ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿದರು. ರವೀಂದ್ರ ಕುಕ್ಕಾಜೆ ಡ್ಯಾನ್ಸ್ ಧಮಾಕಾ ಕಾರ್ಯಕ್ರಮ ನಡೆಸಿಕೊಟ್ಟರು. ತೀರ್ಪುಗಾರರಾಗಿ ವಸುಧಾ, ಸಾಕ್ಷಿ ಮತ್ತು ಶ್ರೀನಿಧಿ ಭಾಗವಹಿಸಿದ್ದರು. ಪ್ರಥಮ ಬಹುಮಾನ ವೈಯಕ್ತಿಕ ವಿಭಾಗದಲ್ಲಿ ಜೀವಿತಾ ಗಳಿಸಿದರೆ, ದ್ವಿತೀಯ ಬಹುಮಾನವನ್ನು ಸಾನ್ವಿಕಾ ಪೂಜಾರಿ ಪಡೆದರು. ತೃತೀಯ ಬಹುಮಾನವನ್ನು ವೈಭವಿ ಪಡೆದರು. ಸಮೂಹ ನೃತ್ಯದಲ್ಲಿ ಬಿ.ಸಿ.ರೋಡಿನ ಎಕ್ಸ್ ಟ್ರೀಮ್ ಡ್ಯಾನ್ಸ್ ಕ್ರೂ ಪ್ರಥಮ, ಪುತ್ತೂರಿನ ಮುರಳಿ ಬ್ರದರ್ಸ್ ದ್ವಿತೀಯ ಹಾಗೂ ವಿಟ್ಲದ ಡೀಮ್ ಡಾಟ್ ತೃತೀಯ ಬಹುಮಾನ ಪಡೆದರು. ವಿಶೇಷ ಗೌರವ ಬಹುಮಾನವನ್ನು ಪಲ್ಲವಿ ಆಚಾರ್ಯ ಮತ್ತು ತಂಡ ಪಡೆದುಕೊಂಡರು.