ಬಂಟ್ವಾಳ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ, ರಾಜ್ಯ ಸಂಘದ ಕಾರ್ಯಕಾರಿಣಿ ಸಭೆ ನಿರ್ಣಯದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯಾದ್ಯಂತ ಆಯೋಜಿಸಿದ್ದು, ಅದರಂತೆ ಬಂಟ್ವಾಳದಲ್ಲೂ ಗುರುವಾರ ಮುಷ್ಕರ ನಡೆಯಿತು.
ಈ ಸಂದರ್ಭ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಅವರ ಮೂಲಕ ಕಂದಾಯ ಸಚಿವರಿಗೆ ಮನವಿಯನ್ನು ಸಂಘದ ವತಿಯಿಂದ ಸಲ್ಲಿಸಲಾಯಿತು.
ಇಲಾಖೆಯಿಂದ ಅಭಿವೃದ್ಧಿಪಡಿಸಿರುವ 21 ವೆಬ್ ತಂತ್ರಾಂಶಗಳ ನಿರ್ವಹಣೆ ಇರುವ ಕಾರಣ, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನೀಡಬೇಕು, ಗ್ರಾಮಾಡಳಿತ ಕಚೇರಿಗೆ ಮೂಲಸೌಕರ್ಯ, ಡಿಜಿಟಲ್ ತಂತ್ರಜ್ಞಾನ ಅವಶ್ಯ, ಸೇವಾ ವಿಷಯಕ್ಕೆ ಸಂಬಂಧಿಸಿ ಸೌಲಭ್ಯ ಕಲ್ಪಿಸದೆ ಸಕಾಲಕ್ಕೆ ಕೆಲಸವಾಗಿಲ್ಲ ಎಂದು ಅಮಾನತುಗಳನ್ನು ತಕ್ಷಣವೇ ರದ್ದುಗೊಳಿಸಬೇಕು, ಕರ್ತವ್ಯ ಸಲ್ಲಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮಾಡಳಿತ ಅಧಿಕಾರಿಗಳ ಸಾವುನೋವುಗಳು ಆಗುತ್ತಿದ್ದು, ಕೆಲಸ ಆಗುತ್ತಿಲ್ಲ ಎಂದು ಹಲ್ಲೆಗಳೂ ನಡೆದಿದ್ದು, ರಕ್ಷಣೆ ಅವಶ್ಯ ಎಂದು ಈ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕೆ. ಪೂಜಾರಿ ಹೇಳಿದರು.
ಈ ಸಂದರ್ಭ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ ಗ್ರಾಮಾಡಳಿತ ಅಧಿಕಾರಿಗಳ ಬೇಡಿಕೆಗೆ ಪೂರಕವಾಗಿ ಸಂಘ ನಿಲ್ಲುತ್ತದೆ ಎಂದರು.
ಮುಷ್ಕರಕ್ಕೆ ಬೆಂಬಲವಾಗಿ ಕಂದಾಯ ಇಲಾಖಾ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೇಶ್ ನಾಯ್ಕ್, ರಾಜ್ಯ ಗ್ರಾಮಾಡಳಿತಾಧಿಕಾರಿಗಳ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜೆ.ಜನಾರ್ದನ, ಎನ್.ಪಿ.ಎಸ್. ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ್ ಸಹಿತ ನಾನಾ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದರು. ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಉಪಾಧ್ಯಕ್ಷ ಕರಿಬಸಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಪ್ರತಿನಿಧಿ ಪ್ರಕಾಶ್ ಮತ್ತಿಹಳ್ಳಿ, ಖಜಾಂಚಿ ವೈಶಾಲಿ, ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಸಹಿತ ಗ್ರಾಮಾಡಳಿತ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡರು,