ದಕ್ಷಿಣ ಕನ್ನಡ ಜಿಲ್ಲೆಯ ಭೂಮಾಪನ ಇಲಾಖೆಯ ಇಬ್ಬರಿಗೆ ಶುಕ್ರವಾರ (ಸೆ.27) ಬೆಳಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ನಡೆಯುವ ಅಭಿನಂದನಾ ಸಭೆಯಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುತ್ತದೆ.
ಸರಕಾರಿ ಭೂಮಾಪಕರ ಪೈಕಿ ರಾಜ್ಯದ 31 ಮಂದಿಗೆ ಈ ಗೌರವ ಲಭಿಸಿದ್ದು, ಅವರಲ್ಲಿ ಬಂಟ್ವಾಳದ ನಿಶಾಂತ್ ಅವರಿಗೆ ಅವಕಾಶ ದೊರಕಿದೆ. ಅಂತೆಯೇ ಪರವಾನಗಿ ಭೂಮಾಪಕರ ಪೈಕಿ 33 ಮಂದಿಗೆ ಗೌರವ ಲಭಿಸಿದ್ದು, ಅವರಲ್ಲಿ ದಕ್ಷಿಣ ಕನ್ನಡದ ಮಂಗಳೂರಿನ ಪುಟ್ಟೇಗೌಡ ಕೆ.ಎಂ. ಸೇರಿದ್ದಾರೆ. ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಚಟುವಟಿಕೆಗಳ ಪೈಕಿ, ಮೋಜಿಣಿ ತಂತ್ರಾಂಶದಲ್ಲಿ ವಿಲೇಯಾದ ಪ್ರಗತಿ, ಆಕಾರಬಂದ್ ಗಣಕೀಕರಣ, ದಾಖಲೆಗಳ ಪುನರ್ ನಿರ್ಮಾಣ, ಕೆರೆ ರಾಜಾಕಾಲುವೆ, ಅರಣ್ಯ ಜಮೀನು ಸಹಿತ ಸರಕಾರಿ ಜಮೀನು ಅಳತೆ ಕೆಲಸ, ಆರ್ ಸಿ ಸಿ ಎಂ ಎಸ್ ಪ್ರಗತಿ ಇವುಗಳ ಬಗ್ಗೆ ಸಾಧಿಸಿರುವ ಪ್ರಗತಿಯನ್ನು ಮಾನದಂಡವಾಗಿರಿಸಿ ಇವರನ್ನು ಸರಕಾರ ವತಿಯಿಂದ ಅಭಿನಂದಿಸಲಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.