ಬಂಟ್ವಾಳ: ಮೊಡಂಕಾಪುವಿನಲ್ಲಿರುವ ದೀಪಿಕಾ ಪ್ರೌಢಶಾಲೆಗೆ 60 ವರ್ಷಗಳಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊಡಂಕಾಪು ವಿದ್ಯಾಭಿವೃದ್ಧಿ ಸಮಿತಿ ಸೆ.29ರಂದು ಭಾನುವಾರ 10.30ಕ್ಕೆ ಪ್ರೌಢಶಾಲಾ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ, ಪೋಷಕರ, ನಿವೃತ್ತ ಶಿಕ್ಷಕರ ಹಾಗೂ ಸಮಾಜದ ಎಲ್ಲರನ್ನೂ ಸೇರಿಸಿಕೊಂಡು ಪೂರ್ವಭಾವಿ ಸಭೆಯನ್ನು ಆಯೋಜಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರೌಢಶಾಲೆಯ ಸಂಚಾಲಕ ಹಾಗೂ ವಿದ್ಯಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಂ.ಫಾ.ವಲೇರಿಯನ್ ಡಿಸೋಜ ತಿಳಿಸಿದರು.
60ರ ಸಂಭ್ರಮಾಚರಣೆ, ಹಿಂದೆ ಮಾಡಿದ ಸಾಧನೆ ಜೊತೆ, ವಿದ್ಯಾಸಂಸ್ಥೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಸಮಾಜದ ಎಲ್ಲ ವರ್ಗಗಳ ಜನರ ಸಹಕಾರದೊಂದಿಗೆ ಸಂಸ್ಥೆಯನ್ನು ಮುನ್ನಡೆಸುವುದು, ಡಿಸೆಂಬರ್ 12ರಂದು ಶಾಲಾ ವಾರ್ಷಿಕೋತ್ಸವ ಹಾಗೂ ವಜ್ರಮಹೋತ್ಸವ ಆಚರಣೆ, ಅದಕ್ಕೂ ಪೂರ್ವಭಾವಿಯಾಗಿ ವಿವಿಧ ಸಮಿತಿ ರೂಪಿಸಿಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಆಟೋಟ ಸ್ಪರ್ಧೆ ಸಹಿತ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಹಿರಿಯ ವಿದ್ಯಾರ್ಥಿಗಳು ಸಭೆಗೆ ಆಗಮಿಸಿ, ಸಲಹೆ ಸೂಚನೆ ನೀಡಬೇಕು ಎಂದು ಅವರು ವಿನಂತಿಸಿದರು.
ಅಮೇರಿಕಾಕ್ಕೆ ಯಕ್ಷಗಾನ ಕೊಂಡೊಯ್ದ ಕೀರ್ತಿ: 1964ರಲ್ಲಿ ಆರಂಭಗೊಂಡ ದೀಪಿಕಾ ಹೈಸ್ಕೂಲು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕಾರ್ಕಡ ಶ್ರೀನಿವಾಸ ಉಡುಪ ಮುಖ್ಯ ಶಿಕ್ಷಕರಾಗಿದ್ದ ಸಂದರ್ಭ ಶಾಲಾ ಯಕ್ಷಗಾನ ತಂಡವನ್ನು ಕಟ್ಟಿ ದೂರದ ಅಮೇರಿಕಾವರೆಗೆ ಕರೆದುಕೊಂಡು ಹೋಗಿ ಪ್ರದರ್ಶನ ನೀಡಿ, ಶಾಲೆಯ ಕೀರ್ತಿಯನ್ನು ದೇಶ, ವಿದೇಶಗಳ ಉದ್ದಗಲಕ್ಕೆ ಹರಡಿದ್ದಾರೆ. ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಈಶ್ವರ ಭಟ್ ಸಹಿತ ಪ್ರಮುಖರು ಶಾಲೆಯ ಅಬಿವೃದ್ಧಿಗೆ ಶ್ರಮಿಸಿದವರು. ವಿದ್ಯಾಭಿಮಾನಿ ಸಮಿತಿ ಆಡಳಿತದಲ್ಲಿ ಅಂದು ಅಂದಿನ ಧರ್ಮಗುರು ವಂ.ಫಾ.ಇ.ಎ.ಕ್ಯಾಸ್ಟಲಿನೊ, ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ಉದ್ಯಮಿ ವಿಕ್ಟರ್ ರಸ್ಕಿನ್ಹ, ಹಾಗೂ ಪ್ರಮುಖರಾದ ಗುಂಡಿಲ ಮಂಜಪ್ಪ ಶೆಟ್ಟಿ ಮೊದಲಾದವರ ಮುತುವರ್ಜಿಯಲ್ಲಿ ಹೈಸ್ಕೂಲ್ ಸ್ಥಾಪಿಸಿದ್ದು, ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿದೆ. ಇಂದಿಗೂ ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದೆ ಎಂದರು,
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ, ನೋಟರಿ ಅಶ್ವನಿ ಕುಮಾರ್ ರೈ, ಮುಖ್ಯೋಪಾಧ್ಯಾಯ ಸಾಧು, ಪ್ರಮುಖರಾದ ಮಹಮ್ಮದ್ ವಳವೂರು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಜೇಶ್, ಹಿರಿಯ ಶಿಕ್ಷಕ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.