ಬಂಟ್ವಾಳ: ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘ, ಹಾಗೂ ಪ್ರೌಢಶಾಲೆ ಸಹಯೋಗದಲ್ಲಿ ನಡೆಯಲಿರುವ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ವಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಸಾಹಿತ್ಯ ಸಮ್ಮೇಳನವೆಂದರೆ ಅದು ಅವಿಸ್ಮರಣೀಯವಾಗಿ ಉಳಿಯುವಂಥದ್ದಾಗಿದೆ. ಹೋಬಳಿ, ತಾಲೂಕು, ಜಿಲ್ಲೆ ಅಥವಾ ಅಖಿಲ ಭಾರತ ಸಮ್ಮೇಳನವೆಂದು ತಾರತಮ್ಯ ಮಾಡಬೇಕಿಲ್ಲ. ಎಲ್ಲೆಡೆಯ ಸಾಹಿತ್ಯ ಪ್ರತಿಭೆಗಳಿಗೆ ಅವಕಾಶವೆಂಬ ವೇದಿಕೆ ಸಿದ್ಧವಾಗಬೇಕಾಗಿದೆ ಎಂದರು.
23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಮಿತಿಯನ್ನು ರಚನೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಉದ್ಯಮಿ ಲಯನ್ ಹಾಜಿ ಸುಲೈಮಾನ್ ನಾರ್ಶಮೈದಾನ, ಅಧ್ಯಕ್ಷರಾಗಿ ಸತೀಶ್ ಆಳ್ವ ಬಾಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಉಪನ್ಯಾಸಕ ಎಂ. ಡಿ. ಮಂಚಿ, ಕೋಶಾಧಿಕಾರಿಯಾಗಿ ಹಾಜಿ ಸುಲೈಮಾನ್ ಜಿ ಸುರಿಬೈಲು ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿಶ್ವನಾಥ್ ಬಂಟ್ವಾಳ, ಕೋಶಾಧಿಕಾರಿ ಡಿ ಬಿ ಅಬ್ದುಲ್ ರಹಿಮಾನ್, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಜಿ ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಕೊಳ್ನಾಡು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಮತ್ತು ಉಪನ್ಯಾಸಕರಾದ ಎಂ ಡಿ ಮಂಚಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ವಂದಿಸಿದರು. ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಘಟಕದ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು