ಬಂಟ್ವಾಳ

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಮಾನವ ಸರಪಳಿ – ಯಶಸ್ಸುಗೊಳಿಸಲು ಪೂರ್ವಭಾವಿ ಸಭೆ

ಬಂಟ್ವಾಳ: ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ ಸೆ. 15ರಂದು ಬೆಳಗ್ಗೆ ರಾಜ್ಯಾದ್ಯಂತ ಮಾನವ ಸರಪಳಿ ರಚನೆಗೊಳ್ಳಲಿದ್ದು, ಬಂಟ್ವಾಳ ತಾಲೂಕು ಮಟ್ಟದ ಮಾನವ ಸರಪಳಿ ರಚನೆಯ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಪೂರ್ವಭಾವಿ ಸಭೆ ಮಂಗಳವಾರ ಬಂಟ್ವಾಳ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್ ನೇತೃತ್ವದಲ್ಲಿ ನಡೆಯಿತು.

ಬಂಟ್ವಾಳ ತಾಲೂಕು ಮಟ್ಟದ ಮಾನವ ಸರಪಳಿಯು ಫರಂಗಿಪೇಟೆಯಿಂದ ಮಿತ್ತೂರುವರೆಗೆ ಸುಮಾರು ೨೧ ಕಿ.ಮೀ.ಗಳ ಅಂತರದಲ್ಲಿ ರಚನೆಗೊಳ್ಳಲಿದ್ದು, ಕಿ.ಮೀ.ಗೆ ೮೦೦ ಮಂದಿ ಪಾಲ್ಗೊಳ್ಳಬೇಕಾಗುತ್ತದೆ. ಈ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿ ಕೂಡ ನಡೆಯುತ್ತಿರುವುದರಿಂದ ಆ ಭಾಗಗಳಲ್ಲಿ ವಾಹನ ರ್‍ಯಾಲಿ ನಡೆಸುವುದಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಟೋ ಸಂಘಟನೆಯವರು ರ್‍ಯಾಲಿಗೆ ಸಹಕಾರ ನೀಡಬೇಕು.ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ಉದ್ಘಾಟನೆ, ೯.೪೫ಕ್ಕೆ ಸಿಎಂ ಭಾಷಣ, ೧೦ಕ್ಕೆ ಸಂವಿಧಾನ ಪೀಠಿಕೆ ಭೋದನೆ ಹಾಗೂ ಮಾನವ ಸರಪಳಿ ರೂಪಿಸುವುದು, ೧೦.೧೫ಕ್ಕೆ ಗಿಡ ನೆಡುವ ಕಾರ್ಯ ನಡೆಯಲಿದೆ. ಫರಂಗಿಪೇಟೆಯಿಂದ ಬ್ರಹ್ಮರಕೂಟ್ಲುವರೆಗೆ ಗಿಡ ನೆಡುವುದಕ್ಕೆ ಈಗಾಗಲೇ ಸ್ಥಳೀಯ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬ್ಯಾಂಕ್ ಸಿಬಂದಿ, ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಹಶೀಲ್ದಾರ್ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು.

ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ಸಭೆ ನಡೆಯಿತು.

ಸರಕಾರದ ಆದೇಶದಂತೆ ಪ್ರತಿ ೧೦೦ ಮೀ.ಗೆ ಒಬ್ಬ ಸೆಕ್ಷನ್ ಅಧಿಕಾರಿ, ೧ ಕಿ.ಮೀ.ಗೆ ತಾಲೂಕು ಮಟ್ಟದ ಅಧಿಕಾರಿ ಹಾಗೂ ೫ ಕಿ.ಮೀ.ಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನಿಯೋಜಿಸಬೇಕಿದೆ. ಜತೆಗೆ ತಾಲೂಕು ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಪ್ರತಿಯೊಬ್ಬ ಸರಕಾರಿ ಅಧಿಕಾರಿ, ನೌಕರ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದ್ದು, ಪ್ರತಿಯೊಬ್ಬ ನಾಗರಿಕ, ಕಾಲೇಜು ವಿದ್ಯಾರ್ಥಿ, ಸಂಘ ಸಂಸ್ಥೆಗಳನ್ನು ಸಕ್ರೀಯಗೊಳಿಸಿ ಆಯಾಯ ಭಾಗದಲ್ಲಿ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ತಹಶೀಲ್ದಾರ್ ಸೂಚನೆ ನೀಡಿದರು.

ಸಭೆಯಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ, ಕಂದಾಯ ನಿರೀಕ್ಷಕರಾದ ಜನಾರ್ದನ್ ಜೆ, ವಿಜಯ್ ಆರ್, ಪುರಸಭಾ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ