ಬಂಟ್ವಾಳ: ಕೃಷಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೃಷಿ ಜಮೀನುಗಳ ಪಹಣಿಗಳಿಗೆ ಆಧಾರ್ ಮಾಹಿತಿಯನ್ನು ಜೋಡಣೆ ಮಾಡುವ ಮಾನ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಪ್ರಗತಿಯಲ್ಲಿದ್ದು, ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಆಧಾರ್ ಸೀಡಿಂಗ್ ಕಾರ್ಯ ನಡೆಯುತ್ತಿದೆ. ಯೋಜನೆಯ ಅನುಷ್ಠಾನದಲ್ಲಿ ಪ್ರಗತಿ ಸಾಧಿಸಲು ಕೃಷಿ ಭೂಮಿ ಹೊಂದಿರುವ ಎಲ್ಲಾ ರೈತರೂ ತಮ್ಮ ತಮ್ಮ ಆಧಾರ್ ಕಾರ್ಡ್, ಪಹಣಿ ಪತ್ರ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಗಳ ಜೊತೆ ಕೂಡಲೇ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವುದು ಮತ್ತು ಜಂಟಿ ಖಾತೆ ಹೊಂದಿದ್ದಲ್ಲಿ, ಎಲ್ಲಾ ಖಾತಾದಾರರ ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗುವುದು ಅಗತ್ಯವಾಗಿರುತ್ತದೆ ಎಂದು ತಾಲೂಕಾಡಳಿತ ಪ್ರಕಟಣೆ ತಿಳಿಸಿದೆ.
ಬಂಟ್ವಾಳ ತಾಲೂಕಿನಲ್ಲಿ ಪಹಣಿಗೆ ಆಧಾರ್ ಜೋಡಿಸುವ ಕಾರ್ಯಕ್ಕೆ ಸಂಬಂಧಪಟ್ಟಂತೆ ಒಂದು ವಾರದ ಆಂದೋಲನ ಹಮ್ಮಿಕೊಳ್ಳಲಾಗಿರುತ್ತದೆ. ಸೆ.8ರೊಳಗಾಗಿ ಎಲ್ಲಾ ಕೃಷಿಕರೂ ಕಡ್ಡಾಯವಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಸದ್ರಿ ಆಂದೋಲನ ಯಶಸ್ವಿಯಾಗುವಲ್ಲಿ ಸಹಕರಿಸಬೇಕಾಗಿ ಕೋರಿದೆ. ತಮ್ಮ ಪರಿಚಿತರಿಗೆ, ಬೇರೆ ಊರುಗಳಲ್ಲಿ ವಾಸಿಸುತ್ತಿರುವ ಕುಟುಂಬಸ್ಥರಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಕೃಷಿಕರಿಗೂ ಈ ಬಗ್ಗೆ ಮಾಹಿತಿ ನೀಡಿ ಶೇಕಡಾ ನೂರರಷ್ಟು ಪ್ರಗತಿ ಸಾಧಿಸುವಲ್ಲಿ ಕೈ ಜೋಡಿಸಬೇಕಾಗಿ ತಿಳಿಸಿದೆ.