ಮಾಜಿ ಸಚಿವ ಬಿ. ರಮಾನಾಥ ರೈ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ, ಹಿಂದೆ ಬಿಜೆಪಿಯೂ ಇಬ್ಬರು ಹೊಂದಾಣಿಕೆ ಮಾಡಿಕೊಂಡಿಲ್ಲವೇ ಎಂದು ಪ್ರಶ್ನಿಸಿದ್ದು, ಇದು ದಾರಿ ತಪ್ಪಿಸುವ ಹೇಳಿಕೆಯಾಗಿದ್ದು, ಬಿಜೆಪಿ ಇದುವರೆಗೂ ಬಂಟ್ವಾಳದಲ್ಲಿ ಅಂಥ ಕೆಲಸ ಮಾಡಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಮಾನಾಥ ರೈ ತನ್ನ ಅವಧಿಯನ್ನು ಉಲ್ಲೇಖಿಸಿದ್ದು, ಆದರೆ ಆ ಸಂದರ್ಭ ತಮಗೆ ಕಾಂಗ್ರೆಸ್ ನಿಂದ ಆಯ್ಕೆಯಾದ ಇಬ್ಬರು ಸದಸ್ಯರು ಮತ ನೀಡಿದರೇ ವಿನಃ ಮುಸ್ಲಿಂ ಲೀಗ್ ಬೆಂಬಲದಿಂದಲ್ಲ. ಆ ಸಂದರ್ಭ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಪಕ್ಷದಿಂದಲೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿದ್ದು , ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡು ಪುರಸಭಾ ಸದಸ್ಯರ ಬೆಂಬಲದಿಂದ ತಾನು ಪುರಸಭೆ ಅಧ್ಯಕ್ಷರಾಗಿದ್ದೆ. ಈ ಚುನಾವಣೆಯಲ್ಲಿ ಸ್ವತಃ ರಮಾನಾಥ ರೈ ಯವರು ಸಹ ಮತದಾನದಲ್ಲಿ ಭಾಗವಹಿಸಿದ್ದು ,ಇದು ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಅವಮಾನ ತಪ್ಪಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡಿದ ರೈ ಅವರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬನ್ನಿ ಅದನ್ನು ಹೊರತುಪಡಿಸಿ, ಎಸ್ ಡಿ ಪಿ ಐ ಜೊತೆ ಅಧಿಕಾರ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಕೇಡಿನ ವಿಚಾರ ಎಂದರು.
ಪಕ್ಷದ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರದಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಎ. ಗೋವಿಂದ ಪ್ರಭು, ಕಾರ್ಯದರ್ಶಿಗಳಾದ ಪ್ರಭಾಕರ ಪ್ರಭು, ಜನಾರ್ಧನ ಬೊಂಡಾಲ, ಕಚೇರಿ ಕಾರ್ಯದರ್ಶಿ ಪ್ರಣಾಮ್ ಅಜ್ಜಿಬೆಟ್ಟು, ಮಂಡಲದ ಮಾಧ್ಯಮ ಪ್ರಮುಖ್ ಪುರುಷೋತ್ತಮ್ ಶೆಟ್ಟಿ ವಾಮದಪದವು, ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು