ಬಂಟ್ವಾಳ

ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು, ಕಾಂಗ್ರೆಸ್ ಪಕ್ಷ ಬಲಿಷ್ಠಗೊಳಿಸುವುದೇ ನಮ್ಮ ಗುರಿ – ರಮಾನಾಥ ರೈ

ಜಾಹೀರಾತು

ಬಂಟ್ವಾಳ: ಬಿಜೆಪಿಯದ್ದು ಹಿಪೋಕ್ರಸಿ ರಾಜಕಾರಣವಾಗಿದ್ದು, ಆ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು, ಕಾಂಗ್ರೆಸ್ ಪಕ್ಷ ಬಲಿಷ್ಠಗೊಳಿಸುವುದೇ ನಮ್ಮ ಗುರಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ನೂತನ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮ ಹಾಗೂ ಕಿಸಾನ್ ಘಟಕ, ಎನ್.ಎಸ್.ಯು.ಐ. ಘಟಕದ ಪದಗ್ರಹಣ ಕಾರ್ಯಕ್ರಮ ಬಿ.ಸಿ.ರೋಡ್ ಸಮೀಪ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಖಾಸಗಿ ಸಭಾಂಗಣದಲ್ಲಿ ನಡೆದಿದ್ದು, ಈ ಸಂದರ್ಭ ಉದ್ಘಾಟಿಸಿ ಮಾತನಾಡಿದ ರೈ, ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ಡಿಎನ್ಎ ಬಗ್ಗೆ ಮಾತನಾಡುವವರಿಗೆ ಹಿಂದೆ ಇದೇ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಹೊಂದಾಣಿಕೆ ಮಾಡಿಕೊಂಡಾಗ ನೆನಪಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಪಕ್ಷವನ್ನು ಬಲಿಷ್ಠಗೊಳಿಸುವ ಕೆಲಸವಾಗಬೇಕು, ಹೊಂದಾಣಿಕೆಯ ರಾಜಕಾರಣ ಮಾಡಬಾರದು, ಬಂಟ್ವಾಳ ಕ್ಷೇತ್ರಕ್ಕೆ ಗಟ್ಟಿ ನೆಲೆ ಇದೆ ಎಂದು ರೈ ಕಿವಿಮಾತು ಹೇಳಿದರು.

ವಿಧಾನಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್ ನ ಎಲ್ಲಾ ಮುಂಚೂಣಿಯ ಘಟಕಗಳು ಹೊಂದಾಣಿಕೆಯಿಂದ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಬ್ಲಾಕ್ ಕಾಂಗ್ರೆಸ್ ನ್ನು ಬಲಗೊಳ್ಳಲು ಸಾಧ್ಯ ತಿಳಿಸಿದರು.

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ ಆರ್. ಪೂಜಾರಿ ಮಾತನಾಡಿ, ಕಡಿಮೆ ಮತ ಗಳಿಸಿದ ಬೂತ್ ಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಕಾರ್ಯವನ್ನು ಮಾಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ತನಗೆ ಉಳಿಗಾಲವಿಲ್ಲ ಎಂಬ ಹೆದರಿಕೆಯಿಂದ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಮೇಲೆ ಬಿಜೆಪಿ, ಜೆಡಿಎಸ್ ಆಪಾದನೆಗಳನ್ನು ಮಾಡುತ್ತಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಶುಭ ಹಾರೈಸಿದರು. ಪುರಸಭೆ ಅಧ್ಯಕ್ಷ ಬಿ.ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಪಿಯೂಸ್ ಎಲ್.ರೋಡ್ರಿಗಸ್, ಎಂ.ಎಸ್.ಮಹಮ್ಮದ್, ಬಿ.ಎಚ್.ಖಾದರ್, ಪದ್ಮಶೇಖರ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಪದ್ಮನಾಭ ರೈ, ಮೋಹನ ಗೌಡ ಕಲ್ಮಂಜ, ಜಯಂತಿ ಆರ್. ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಸುಹಾನ್ ಆಳ್ವ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ವಿಲ್ಮಾ ಮೊರಾಸ್, ಸುರೇಶ್ ಜೋರಾ, ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ ನವಾಝ್, ಸುದರ್ಶನ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾಗಿ  ಚಂದ್ರಶೇಖರ ಭಂಡಾರಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾಗಿ ಬಾಲಕೃಷ್ಣ ಅಂಚನ್ ಎನ್.ಎಸ್.ಯು.ಐ. ಅಧ್ಯಕ್ಷ ಮಹಮ್ಮದ್ ಸಫ್ವಾನ್ ಅವರ ಪದಗ್ರಹಣ ಈ ಸಂದರ್ಭ ನಡೆಯಿತು. ಕಿಸಾನ್ ಘಟಕದ ಸುಧಾಕರ ಶೆಣೈ ನೇತೃತ್ವದ ತಂಡ, ಕಾರ್ಮಿಕ ಘಟಕಾಧ್ಯಕ್ಷರಾಗಿ ಚಂದ್ರಶೇಖರ ಆಚಾರ್ಯ ಮತ್ತು ತಂಡ ಅಧಿಕಾರ ಸ್ವೀಕರಿಸಿತು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ನಿರ್ಗಮನ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts