ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ವಿರುದ್ಧ ದೂರು ನೀಡಿದರೂ ಎಫ್.ಐ.ಆರ್. ದಾಖಲಿಸಲು ಪೊಲೀಸ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿರುವುದು ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ನೀತಿಗಳ ವಿರುದ್ಧ ಬಿಜೆಪಿ ಯುವಮೋರ್ಚಾ ವತಿಯಿಂದ ಬಿ.ಸಿ.ರೋಡ್ ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಪಕ್ಷದ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ದಿನೇಶ್ ದಂಬೆದಾರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್, ಪಕ್ಷ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ ಸಹಿತ ಜಿಲ್ಲೆ, ತಾಲೂಕುಗಳ ಪ್ರಮುಖರು, ನಾನಾ ಮೋರ್ಚಾಗಳ ಪ್ರಮುಖರು ಹಾಜರಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭ ಮುಖಂಡರಾದ ವಿಕಾಸ್ ಪುತ್ತೂರು ಮಾತನಾಡಿ,ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಒಂದು ನಿಮಿಷವೂ ಮುಂದುವರಿಯುವ ಯೋಗ್ಯತೆ ಇಲ್ಲ. ಐವನ್ ಡಿಸೋಜ ಅವರ ಹಿಂಬಾಲಕರಾಗಿದ್ದು, ಸಿಎಂ ಅವರನ್ನು ಸಂಪ್ರೀತಗೊಳಿಸುವ ಭರದಲ್ಲಿ ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ದಕ್ಣಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಗೌರವವಿತ್ತು. ಕಾಂಗ್ರೆಸ್ ನ ಅಯೋಗ್ಯ ಜನಪ್ರತಿನಿಧಿಗಳಿಂದ ಜಿಲ್ಲೆಯ ಮಾನ ಹರಾಜಾಗುತ್ತಿದೆ. ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ರಾಜೇಶ್ ನಾಯ್ಕ್ ಇದ್ದರೆ, ಹೇಗಿರಬಾರದು ಎಂಬುದಕ್ಕೆ ಐವನ್ ಡಿಸೋಜ ಇದ್ದಾರೆ ಎಂದರು.