ಕವರ್ ಸ್ಟೋರಿ

ಪುಟ್ಟ ಬಾಲಕಿಯ ಹೆಜ್ಜೆಗಾರಿಕೆಗೆ ಭೇಷ್ ಎಂದ ಯಕ್ಷಗಾನಪ್ರಿಯರು

ಜಾಹೀರಾತು

ಕಶ್ವಿ ರೈ

ಮಾತನಾಡಿಸಲು ಹೊರಟರೆ, ಮುದ್ದುಮುದ್ದಾಗಿ ಹಾಯ್ ಹೇಳುವ ಈ ಪುಟಾಣಿ ಎಲ್ಲರಂತೆ ತನ್ನ ವಯಸ್ಸಿನ ಮಕ್ಕಳೊಂದಿಗೆ ಆಟವಾಡಿಕೊಂಡಿರುತ್ತಾಳೆ. ಆದರೆ ಬಣ್ಣ ಹಚ್ಚಿ, ಯಕ್ಷಗಾನದ ರಂಗಸ್ಥಳಕ್ಕೆ ಎಂಟ್ರಿ ಆದಳೆಂದರೆ, ಹಿರಿಯ ಕಲಾವಿದರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕು!! ಹಾಗೆ ಹೆಜ್ಜೆ ಹಾಕುತ್ತಾಳೆ. ಚೆಂಡೆ, ಮದ್ದಳೆಯ ಪೆಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೋಳಂತೂರಿನ ನಾಲ್ಕೂವರೆ ವರ್ಷದ ಕಶ್ವಿ ರೈ ಪ್ರಬುದ್ಧಳಂತೆ ನೃತ್ಯ ಮಾಡುವುದನ್ನು ನೋಡುವುದೇ ಚೆಂದ.

ಹೀಗೆ ಕಾಸರಗೋಡು ಜಿಲ್ಲೆಯ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಕ್ಷಗುರುಗಳಾದ ಹಿರಿಯ ಹಿಮ್ಮೇಳ ಕಲಾವಿದ ಗಣೇಶ್ ಪಾಲೆಚ್ಚಾರ್ ಅವರ ಬೋಳಂತೂರು ಇರಾ ಸೋಮನಾಥೇಶ್ವರ ಯಕ್ಷಗಾನ ತಂಡದಲ್ಲಿದ್ದ ಕಶ್ವಿ ರೈ ನಾಟ್ಯ ಮಾಡುವುದನ್ನು ನೋಡಿ, ಪ್ರೇಕ್ಷಕರೊಬ್ಬರು ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಖುಷಿಯಿಂದ ಶೇರ್ ಮಾಡಿದ್ದರು. ಅದೀಗ ಸಹಸ್ರಾರು ಯಕ್ಷಗಾನ ಅಭಿಮಾನಿಗಳನ್ನು ತಲುಪಿದೆ. ಕಶ್ವಿ ರೈ ಯಾರು ಎಂದು ಆಕೆಯ ಬಗ್ಗೆ ತಿಳಿದುಕೊಳ್ಳುವವರೆಗೆ ಪುಟಾಣಿ ಕುರಿತ ಕ್ರೇಝ್ ಹಬ್ಬಿದೆ.

ಅಪ್ಪ, ಅಮ್ಮ ಯಕ್ಷಗಾನ ಕಲಾವಿದರಲ್ಲ:

ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಇನ್ನೂ ಐದು ವರ್ಷ ಪೂರ್ತಿಯಾಗದ ಕಶ್ವಿ ರೈ ಎಂಬ ಮುದ್ದುಮಾತಿನ ಪುಟ್ಟ ಬಾಲಕಿ ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಯಕ್ಷಕಿನ್ನರಿ. ಈಕೆ ಬೋಳಂತೂರಿನ ರೂಪಾ ಮತ್ತು ಮೋಹನ ರೈ ಅವರ ಮಗಳು. ಗಮನಾರ್ಹವೆಂದರೆ, ತಂದೆ, ತಾಯಿ ಯಕ್ಷಗಾನ ಕಲಾವಿದರಲ್ಲದೇ ಇದ್ದರೂ ಪುಟ್ಟ ಮಗು ಅದರ ಆಕರ್ಷಣೆಗೆ ಒಳಗಾಗಿದ್ದು ವಿಶೇಷ.

ಅಕ್ಕನೊಂದಿಗೆ ಬಂದವಳು ಹೆಜ್ಜೆ ಹಾಕಿದಳು

ಕಟೀಲು ಮೇಳದ ಪ್ರಸಿದ್ಧ ಕಲಾವಿದ ಗಣೇಶ್ ಪಾಲೆಚ್ಚಾರ್ ಹಲವೆಡ ಯಕ್ಷಗಾನ ತರಬೇತಿಗಳನ್ನು ನಡೆಸಿಕೊಡುತ್ತಾರೆ. ಅವುಗಳಲ್ಲಿ ಬೋಳಂತೂರಿನಲ್ಲಿ ಶ್ರೀ ಇರಾ ಸೋಮನಾಥೇಶ್ವರ ಯಕ್ಷಗಾನ ಕಲಾಸಂಘವೂ ಒಂದು. ಇಲ್ಲಿ ತರಗತಿ ನಡೆಸುವ ವೇಳೆ ಮೋಹನ ರೈ, ರೂಪಾ ದಂಪತಿಯ ಪುತ್ರಿ ಹರ್ಷಿಕಾ ರೈ ತರಬೇತಿಗೆ ಸೇರ್ಪಡೆಗೊಳ್ಳುತ್ತಾಳೆ. ಅವಳೊಂದಿಗೆ ಕ್ಲಾಸಿಗೆ ಮೂರುವರೆ ವರ್ಷದ ಅವಳ ತಂಗಿಯೂ ಬರುತ್ತಾಳೆ. ಅಕ್ಕನಿಗೆ ಹಾಗೂ ಅವಳೊಂದಿಗಿದ್ದ ಇತರರಿಗೆ ಗಣೇಶ್ ಪಾಲೆಚ್ಚಾರ್ ಹೆಜ್ಜೆಗಾರಿಕೆ ಕಲಿಸುವ ವೇಳೆ ಪುಟ್ಟ ಬಾಲೆಯೂ ಹೆಜ್ಜೆಹಾಕುತ್ತಾಳೆ. ಎಷ್ಟರವರೆಗೆ ಎಂದರೆ ಮೂಗಿನಮೇಲೆ ಬೆರಳಿಟ್ಟುಕೊಳ್ಳುವಷ್ಟರ ವರೆಗೆ ಆಕೆಯ ಹೆಜ್ಜೆಗಾರಿಗೆ ಅಷ್ಟೊಂದು ಪರ್ಫೆಕ್ಟ್ ಇತ್ತು ಎನ್ನುತ್ತಾರೆ ಗುರುಗಳಾದ ಗಣೇಶ್ ಪಾಲೆಚ್ಚಾರ್. ಅಕ್ಕ ಹರ್ಷಿಕಾಳ ಮುದ್ದಿನ ತಂಗಿ ಕಶ್ವಿಯ ಕಲಿಯುವ ತುಡಿತ ಗಮನಿಸಿದ ಗಣೇಶ್ ಪಾಲೆಚ್ಚಾರ್, ಹೆಜ್ಜೆಗಳನ್ನು ಶಾಸ್ತ್ರೀಯವಾಗಿ ಹೇಗೆ ಹಾಕುವುದು ಎಂಬ ಕುರಿತು ತಿದ್ದಿ ಹೇಳಿಕೊಟ್ಟರು. ಇನ್ನೂ ಅಕ್ಷರಾಭ್ಯಾಸವನ್ನೇ ಸರಿಯಾಗಿ ಕಲಿಯಲು ಆರಂಭಿಸಬೇಕಾಗಿದ್ದ ಈ ಪುಟ್ಟಿ, ಯಕ್ಷಗಾನದ ನಾಟ್ಯ ರೂಢಿಸಿಕೊಂಡಳು.

ಕಶ್ವಿ ರೈ ಯಕ್ಷಪಯಣ ಹೀಗಿದೆ:

ರಂಗದ ಮೇಲಿನ ಆಸಕ್ತಿಯನ್ನು ಗಮನಿಸಿದ ಗಣೇಶ್, ಉಳಿದ ಮಕ್ಕಳೊಂದಿಗೆ ಕಶ್ವಿಗೂ ಪುಟ್ಟ ಪಾತ್ರ ನೀಡಿ, ತರಬೇತುಗೊಳಿಸಿದರು. ಬೋಳಂತೂರಿನ ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಮಕ್ಕಳ ಯಕ್ಷಗಾನದಲ್ಲಿ ಮೊಟ್ಟಮೊದಲ ಬಾರಿಗೆ ಕೃಷ್ಣನಾಗಿ ಮಿಂಚಿದಳು. ನಂತರ ಪುತ್ತೂರು ಜಾತ್ರಾ ಮಹೋತ್ಸವದಲ್ಲಿ  ತನ್ನ ಗುರುಗಳ ಜೊತೆಗೆ ವನಪಾಲಕ ವೇಷ, ಬೋಳಂತೂರಿನ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ತುಳಸೀವನ ಆಯೋಜಿಸಿದ್ದ  ಶ್ರೀ ಕೃಷ್ಣ ಜನ್ಮ – ಶ್ರೀ ಕೃಷ್ಣ ಲೀಲೆ – ಗುರುದಕ್ಷಿಣೆ ಎಂಬ ಯಕ್ಷಗಾನದಲ್ಲಿ ಬಾಲಕೃಷ್ಣನಾಗಿ ಮತ್ತು ವನಪಾಲಕನಾಗಿ ವೇಷ, ಕಾಸರಗೋಡು ಸಿರಿಬಾಗಿಲಿನಲ್ಲಿ ಶ್ರೀ ವೆಂಕಪ್ಪಯ್ಯ ಪ್ರತಿಷ್ಠಾನ ಆಯೋಜಿಸಿದ್ದ, ಕಾಸರಗೋಡು ಯಕ್ಷವೈಭವ ಕಾರ್ಯಕ್ರಮದಲ್ಲಿ ಬಾಲಕೃಷ್ಣನಾಗಿ ಹಾಗೂ ಸಾಂದೀಪನಿ ಮುನಿಯ ಪುತ್ರ ಮಣಿಕರ್ಣಿಕನ ವೇಷ ಮಾಡಿದ್ದಾಳೆ. ಇವಳಿಗೆ ತಂಡದ ಇತರ ಕಲಾವಿದರ ಅಕ್ಕರೆಯ ಬೆಂಬಲವೂ ಇದೆ. ಕಲ್ಲಡ್ಕದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಯು.ಕೆ.ಜಿ.ಕಲಿಯುತ್ತಿರುವ ಈಕೆ ನೃತ್ಯವಿದುಷಿ ವಸುಧಾ ಜಿ.ಎನ್.ಅವರ ಬಳಿ ಭರತನಾಟ್ಯವನ್ನೂ ಕಲಿಯುತ್ತಿದ್ದಾಳೆ.

ಅಕ್ಕನೊಟ್ಟಿಗೆ ಕ್ಲಾಸಿಗೆ ಬರುತ್ತಿದ್ದ ಇವಳ ಆಸಕ್ತಿಯನ್ನು ಗುರುತಿಸಿ, ಹೆಜ್ಜೆಗಾರಿಕೆ ಹೇಳಿಕೊಟ್ಟೆ. ಯಕ್ಷಗಾನದ ಮೇಲೆ ಅದಮ್ಯ ಪ್ರೀತಿ ಆಕೆಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಅಲ್ಲದೆ, ಬೋಳಂತೂರು ಮಾಡದ ಮುಖ್ಯಸ್ಥರಾದ ಸೀತಾರಾಮ ಅಡ್ಯಂತಾಯರು ದೇವರ ನಡೆಯಲ್ಲಿ ಬೋಳಂತೂರು ಯಕ್ಷಗಾನ ಸಂಘ ಲೋಕಪ್ರಸಿದ್ಧಿಯಾಗಲಿ ಎಂದು ಮಾಡಿದ ಪ್ರಾರ್ಥನೆ ಫಲಿಸಿದೆ. ತಂಡದ ಎಲ್ಲಾ ಸಹಪಾಠಿಗಳ ಅಕ್ಕರೆಯ ಪ್ರೋತ್ಸಾಹ ಕಶ್ವಿಗೆ ಇದೆ ಎನ್ನುತ್ತಾರೆ ಆಕೆಯ ಗುರು, ಮಾರ್ಗದರ್ಶಕ ಗಣೇಶ್ ಪಾಲೆಚ್ಚಾರ್.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.