ಬಂಟ್ವಾಳ

ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ – ಎಸ್.ಡಿ.ಪಿ.ಐ. ಆಡಳಿತ, ಅಧ್ಯಕ್ಷರಾಗಿ ಕಾಂಗ್ರೆಸ್ ನ ವಾಸು ಪೂಜಾರಿ, ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ ಆಯ್ಕೆ

ಎಡಚಿತ್ರದಲ್ಲಿ ಎಸ್.ಡಿ.ಪಿ.ಐ. ನ ಮುನೀಶ್ ಆಲಿ ಉಪಾಧ್ಯಕ್ಷರಾಗಿ ಹಾಗೂ ಬಲದಲ್ಲಿ ಕಾಂಗ್ರೆಸ್ ನ ಬಿ.ವಾಸು ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಂಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿ.ವಾಸು ಪೂಜಾರಿ

 

ಮುನೀಶ್ ಆಲಿ

ಬಂಟ್ವಾಳ: ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ ಲೊರೆಟ್ಟೊ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ ಆಯ್ಕೆಯಾಗಿದ್ದಾರೆ.

ಒಟ್ಟು 27 ಸದಸ್ಯರ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಗಂಗಾಧರ ರಾಜೀನಾಮೆ ನೀಡಿದ್ದು, ಸ್ಥಾನಬಲ 26ಕ್ಕೆ ಕುಸಿದಿತ್ತು. ಕಾಂಗ್ರೆಸ್ ನಿಂದ 11, ಬಿಜೆಪಿಯಿಂದ 11, ಎಸ್.ಡಿ.ಪಿ.ಐ.ನಿಂದ 4 ಮಂದಿ ಸದಸ್ಯರು ಇದ್ದು, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಲೋಕಸಭೆ ಮತ್ತು ವಿಧಾನಸಭೆ ಸದಸ್ಯರ ಮತವೂ ಸೇರಿ ಬಿಜೆಪಿ 13, ಕಾಂಗ್ರೆಸ್ 11 ಮತ್ತು ಎಸ್.ಡಿ.ಪಿ.ಐ. 4 ಮತಗಳು ಇದ್ದವು. ಆಯ್ಕೆ ಪ್ರಕ್ರಿಯೆ ಸಂದರ್ಭ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ಪರಸ್ಪರ ಪೂರಕವಾಗಿ ಹೊಂದಾಣಿಕೆಯಿಂದ ಮತ ಚಲಾಯಿಸಿದ ಪರಿಣಾಮ ಉಭಯ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರ ಪರಿಣಾಮ, ಕಾಂಗ್ರೆಸ್-ಎಸ್.ಡಿ.ಪಿ.ಐ. ಅಭ್ಯರ್ಥಿಗಳಿಗೆ 15, ಬಿಜೆಪಿ ಅಭ್ಯರ್ಥಿಗಳಿಗೆ 13 ಮತಗಳು ಲಭಿಸಿದವು.

ಕಣಕ್ಕಿಳಿದವರು ಯಾರು?

ನಾಮಪತ್ರ ಸಲ್ಲಿಕೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ, ಎಸ್.ಡಿ.ಪಿ.ಐ.ನ ಇದ್ರೀಸ್ ಹಾಗೂ ಬಿಜೆಪಿಯ ಎ.ಗೋವಿಂದ ಪ್ರಭು ಸ್ಪರ್ಧೆಗಿಳಿದಿದ್ದರು.  ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಕಾದು ನೋಡುವ ತಂತ್ರ ಅನುಸರಿಸಿತು. ಎಸ್.ಡಿ.ಪಿ.ಐ. ಮೊನೀಶ್ ಆಲಿ ಮತ್ತು ಬಿಜೆಪಿ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿತು. ನಾಮಪತ್ರ ಹಿಂಪಡೆಯುವ ವೇಳೆ ಎಸ್.ಡಿ.ಪಿ.ಐ.ನ ಇದ್ರೀಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿತನದಿಂದ ಹಿಂದಕ್ಕೆ ಸರಿದರು. ಈ ವೇಳೆ ಕಾಂಗ್ರೆಸ್ ನ ಅಧ್ಯಕ್ಷ ಅಭ್ಯರ್ಥಿ, ಎಸ್.ಡಿ.ಪಿ.ಐ.ನ ಉಪಾಧ್ಯಕ್ಷ ಅಭ್ಯರ್ಥಿ ಹಾಗೂ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಇದ್ದು, ವೇದಿಕೆ ಕಾಂಗ್ರೆಸ್ – ಎಸ್..ಡಿ.ಪಿ.ಐ. ಜಂಟಿ ಆಯ್ಕೆಗೆ ಸಿದ್ಧಗೊಂಡಿತ್ತು. ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಎಸ್.ಡಿ.ಪಿ.ಐ, ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಕಾಂಗ್ರೆಸ್ ಮತ ಚಲಾಯಿಸುವುದರ ಮೂಲಕ ಜಂಟಿಯಾಗಿ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಡಿ.ಅರ್ಚನಾ ಭಟ್ ಕಾರ್ಯನಿರ್ವಹಿಸಿದ್ದರು.

ಈ ಬಾರಿಯೂ ನಿರ್ಣಾಯಕವಾಗಿದ್ದ ಎಸ್.ಡಿ.ಪಿ.ಐ.

ಕಳೆದ ಬಾರಿ ಕಾಂಗ್ರೆಸ್ ನ ಮಹಮ್ಮದ್ ಶರೀಫ್ ಮತ್ತು ಜೆಸಿಂತಾ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಂದರ್ಭ ಎಸ್.ಡಿ.ಪಿ.ಐ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ಆ ಸಂದರ್ಭ ಕಾಂಗ್ರೆಸ್ ಎಸ್.ಡಿ.ಪಿ.ಐ. ಜೊತೆ ತಾನು ಹೊಂದಾಣಿಕೆ ಮಾಡಿಕೊಂಡಿಲ್ಲ, ಅವರೇ ನಮ್ಮನ್ನು ಬೆಂಬಲಿಸಿದರು ಎಂದು ಹೇಳಿತ್ತು. ಆಗ ಎಸ್.ಡಿ.ಪಿ.ಐ. ಹೇಗೆ ನಿರ್ಣಾಯಕವಾಗಿದ್ದೋ ಈ ಬಾರಿಯೂ ಅದೇ ಪುನರಾವರ್ತನೆ ಆಯಿತು. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಮತ ಹಾಕುವ ಮೂಲಕ ಆ ಪಕ್ಷಕ್ಕೆ ಬೆಂಬಲ ನೀಡಿದಂತಾಗಿದೆ.

ಎಸ್.ಡಿ.ಪಿ.ಐ.ಮುಷ್ಠಿಗೊಳಗೆ ಕಾಂಗ್ರೆಸ್ – ಚೌಟ

ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೆಸ್ ಪಕ್ಷದ ನೈಜತೆ ಗೊತ್ತಾಗಿದ್ದು, ಎಸ್.ಡಿ.ಪಿ.ಐ.ನ ಮುಷ್ಠಿಯೊಳಗೆ ಸಿಲುಕಿದೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ. ಮೈತ್ರಿಯಿಂದಾಗಿ ಬಿಜೆಪಿ 13 ಮತಗಳಿದ್ದರೂ ಸೋಲು ಕಂಡಿದ್ದು, ಈ ಮೂಲಕ ಕಾಂಗ್ರೆಸ್ ಏನು ಎಂದು ಗೊತ್ತಾಗಿದೆ ಎಂದರು. ಶಾಸಕ ರಾಜೇಶ್ ನಾಯ್ಕ್, ಪಕ್ಷದ ಕ್ಷೇತ್ರಾಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಜತೆಗಿದ್ದರು.

ಅಭಿವೃದ್ಧಿ ಕಾರ್ಯ ನಡೆಸುವೆ – ವಾಸು ಪೂಜಾರಿ

ನೂತನ ಅಧ್ಯಕ್ಷ ವಾಸು ಪೂಜಾರಿ, ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿ ಕಾರ್ಯಕ್ಕೆ ತನ್ನ ಆದ್ಯತೆ ಇದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ತಾನು ಇಂದು ಅಧ್ಯಕ್ಷನಾಗಿ ಆಯ್ಕೆಯಾಗುವುದು ಸಾಧ್ಯವಾಗಿದೆ. ಕಳಂಕರಹಿತ ಆಡಳಿತ ನೀಡುವೆ ಎಂದರು. ಈ ಸಂದರ್ಭ ಕಾಂಗ್ರೆಸ್ ಪುರಸಭಾ ಸದಸ್ಯರು, ಪಕ್ಷ ಪ್ರಮುಖರಾದ ಪಿಯೂಸ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮತ್ತಿತರ ನಾಯಕರು ಜತೆಗಿದ್ದರು.

ಭ್ರಷ್ಟಾಚಾರರಹಿತ ಆಡಳಿತ – ಮುನೀಶ್ ಆಲಿ

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಉಪಾಧ್ಯಕ್ಷ ಮುನೀಶ್ ಆಲಿ, ತಾನು ಒಂದು ಪೈಸೆ ಭ್ರಷ್ಟಾಚಾರಕ್ಕೂ ಅವಕಾಶ ನೀಡದಂತೆ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ಪುರಸಭೆ ಭ್ರಷ್ಟಾಚಾರಮುಕ್ತವಾಗಿ ಆಡಳಿತ ಮಾಡಬೇಕು ಎಂಬ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ ಎಂದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ