ಬಂಟ್ವಾಳ: ಬಿಜೆಪಿ ಪಕ್ಷವನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಸಲು ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಸಭೆಯ ಉದ್ಘಾಟಿಸಿ ಮಾತನಾಡಿದರು. ಕಾರ್ಯಕರ್ತರ ನಿರಂತರವಾದ ಶ್ರಮ ಮತ್ತು ತ್ಯಾಗದ ಫಲವಾಗಿ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಎಂ.ಎಲ್.ಸಿ.ಎಲ್.ಬೋಜೇಗೌಡ ಅವರನ್ನು ಅಭಿನಂದಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ, ಪಕ್ಷ ಬಲಿಷ್ಠಗೊಳಿಸಲು ಬಂಟ್ವಾಳದ ಕೊಡುಗೆ ಅಪಾರವಾಗಿದೆ ಎಂದರು.
ಈ ಜಿಲ್ಲೆಯ ಮೂಲಭೂತವಾದ ಅಭಿವೃದ್ಧಿ ದೃಷ್ಟಿಯಿಂದ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುಂದುವರಿಸುವ ಭರವಸೆ ನೀಡುತ್ತೇನೆ. ಅನುಷ್ಠಾನ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪೂರ್ತಿಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವಯುಗ ,ನವಪಥ ಎಂಬ ಯೋಜನೆಯನ್ನು ಚುನಾವಣಾ ಪೂರ್ವದಲ್ಲಿ ಹಾಕಿಕೊಂಡಿದ್ದು, ಕೇಂದ್ರದ ಸಚಿವರ ಸಹಕಾರದೊಂದಿಗೆ ಯೋಜನೆಗಳಿಗೆ ಸಂಬಂಧಿಸಿದಂತೆ ಪುಷ್ಟಿ ನೀಡುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು. ಭ್ರಷ್ಟಾಚಾರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ಮಿಗೆ ಕಾಂಗ್ರೆಸ್ ನಿಂತಿರುವುದು ನಾಚಿಕೆಯ ವಿಚಾರ. ಕಾನೂನು ಬಾಹಿರವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡಿ, ಬಾಂಗ್ಲಾದೇಶದ ರೀತಿಯಲ್ಲಿ ರಾಜ್ಯಪಾಲರ ಭವನಕ್ಕೆ ನುಗ್ಗುತ್ತೇವೆ ಎಂಬ ಐವನ್ ಡಿಸೋಜ ಅವರ ಹೇಳಿಕೆಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಬಿ.ಎಲ್.ಬೋಜೇಗೌಡ ಮಾತನಾಡಿ, ಎಲ್ಲರ ಧ್ವನಿಯಾಗಿ ಪರಿಷತ್ ಒಳಗೆ ಮತ್ತು ಹೊರಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು. ಅವಿಭಜಿತ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪಕ್ಷನಿಷ್ಠೆಯುಳ್ಳವರು ಹಾಗಾಗಿ ಸದಾ ಭದ್ರಕೋಟೆಯಾಗಿಯೇ ಉಳಿದಿದೆ ಎಂದು ಅವರು ತಿಳಿಸಿದರು. ಶಿಕ್ಷಣ ಕ್ಷೇತ್ರಕ್ಕೆ ನ್ಯಾಯವನ್ನು ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಬಿಜೆಪಿ ಮಂಡಲದ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಸಂಘಟನಾ ಪರ್ವದ ಸಂಚಾಲಕ ದೇವದಾಸ ಶೆಟ್ಟಿ, ಬೂತ್ ಚಲೋ ಕಾರ್ಯಕ್ರಮದ ಸಂಚಾಲಕ ಸಂದೇಶ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ನಂದನ್ ಮಲ್ಯ , ಸಂಘಟನಾ ಪರ್ವದ ಪ್ರಭಾರಿ ಜಗದೀಶ್ ಶೇಣವ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಮತ್ತಿತರರು ಉಪಸ್ಥಿತರಿದ್ದರು. ಪಕ್ಷ ಪ್ರಮುಖರಾದ ವಿಕಾಸ್ ಪುತ್ತೂರು ಅಭಿನಂದನಾ ಭಾಷಣ ಮಾಡಿದರು.
ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮಂಡಲದ ಕಾರ್ಯದರ್ಶಿ ರಶ್ಮಿತ್ ಶೆಟ್ಟಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯ ಅಂಗವಾಗಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಬಳಿಕ ಬಿಜೆಪಿ ಪ್ರಮುಖರಾದ ಡೊಂಬಯ್ಯ ಅರಳ ಅವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಬಗ್ಗೆ ಪ್ರಧಾನ ಭಾಷಣ ಮಾಡಿದರು.