ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ವತಿಯಿಂದ ಮೆರವಣಿಗೆ ಮತ್ತು ಪ್ರತಿಭಟನೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಬಿ.ಸಿ.ರೋಡಿನ ಪೊಳಲಿ ದ್ವಾರದಿಂದ ತಾಲೂಕು ಆಡಳಿತ ಸೌಧದವರೆಗೆ ರಾಜ್ಯಪಾಲರು ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ಹೆದ್ದಾರಿ ತಡೆ ನಡೆಸಿ, ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ರಮಾನಾಥ ರೈ, ರಾಜ್ಯಪಾಲರ ಮೂಲಕ ಸರಕಾರವನ್ನು ಅಸ್ಥಿರ ಮಾಡುವ ಕಾರ್ಯ ಮಾಡಲಾಗುತ್ತಿದೆ. ಕೋರ್ಟ್ ನಲ್ಲಿ ಸಾಬೀತು ಮಾಡಲಾಗದ ಹುರುಳಿಲ್ಲದ ಪ್ರಕರಣವಿದು ಎಂದರು.
ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಆರ್.ಪದ್ಮರಾಜ್ ಮಾತನಾಡಿ, ಬಿಜೆಪಿಯದ್ದು ಒಂದು ಮನೆ ಹದಿನೈದು ಬಾಗಿಲಾಗಿದೆ. ಬೆಳೆಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಸರಕಾರ ಉರುಳಿಸುವ ಕುತಂತ್ರ ಮಾಡಲಾಗಿದೆ. ರಾಜ್ಯಪಾಲರು ತಮ್ಮ ಹುದ್ದೆಯ ಘನತೆ ಕಾಪಾಡಬೇಕು ಎಂದರು.
ನಾಯಕರಾದ ಜಿ.ಎ.ಬಾವಾ ಮಾತನಾಡಿ, ಸಿದ್ಧರಾಮಯ್ಯ ವಿರುದ್ಧ ಆರೋಪವೇ ಹುರುಳಿಲ್ಲದ್ದು ಎಂದರು. ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪಾಣೆಮಂಗಳೂರು ಬ್ಲಾಕ್ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಪ್ರಮುಖರಾದ ಅಶ್ವನಿ ಕುಮಾರ್ ರೈ, ಪಿಯೂಸ್ ಎಲ್.ರೋಡ್ರಿಗಸ್, ಕೆ. ಸಂಜೀವ ಪೂಜಾರಿ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಜಯಂತಿ ಪೂಜಾರಿ, ವಿಲ್ಮಾ ಮೊರಾಸ್, ಪದ್ಮನಾಭ ರೈ, ಅಬ್ಬಾಸ್ ಆಲಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ ಮತ್ತಿತರ ನಾಯಕರು, ಪಕ್ಷದ ವಿವಿಧ ಜವಾಬ್ದಾರಿಯುಳ್ಳ ಮುಖಂಡರು, ಪುರಸಭಾ ಸದಸ್ಯರು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.