ಇಂದು ಹಿರಿಯರು ನಮಗೆ ಒದಗಿಸಿದ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಉಪಯೋಗಿಸಿಕೊಳ್ಳದೆ, ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು, ಅದನ್ನು ಉಳಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದೇಶದ ಏಕತೆಗೆ ಭಂಗ ತರುವ ಹೇಳಿಕೆ, ಕೃತ್ಯಗಳನ್ನು ಎಸಗುವ ಮೂಲಕ ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಮಾಡುವುದು ಸಲ್ಲದು. ವಿದ್ಯಾರ್ಥಿಗಳು, ಸಾರ್ವಜನಿಕರು ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದು ಭವ್ಯ ಭಾರತ ನಿರ್ಮಾಣದತ್ತ ಗಮನ ಹರಿಸಬೇಕು ಎಂದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಯುವಜನರು ರಾಷ್ಟ್ರನಿರ್ಮಾಣದ ಶಕ್ತಿಗಳಾಗಿದ್ದಾರೆ. ಇತಿಹಾಸವನ್ನು ಅರಿಯುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಪರಿಶ್ರಮಗಳನ್ನು ಗುರುತಿಸಿ, ಗೌರವಿಸಿ, ಸತ್ಪ್ರಜೆಗಳಾಗಿ ಬಾಳ್ವೆ ಮಾಡಬೇಕು, ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿ ದೇಶಕ್ಕೆ ಉತ್ತಮ ಹೆಸರು ತರುವ ಕಾರ್ಯವನ್ನು ಮಾಡಬೇಕು. ನಮಗೆ ನೀಡಿದ ಹಕ್ಕು, ಅಧಿಕಾರವನ್ನು ಸದುಪಯೋಗಪಡಿಸಿಕೊಂಡು, ದೇಶದ ಹಿತಕ್ಕಾಗಿ ಶ್ರಮಿಸಬೇಕು ಎಂದರು.
ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ, ದೇಶದ ಏಕತೆ, ಅಖಂಡತೆಗಳನ್ನು ಕಾಯ್ದುಕೊಳ್ಳಲು ಸಲಹೆ ನೀಡಿದರು. ಸಿದ್ಧಕಟ್ಟೆ ಸರಕಾರಿ ಶಾಲೆ ವಿದ್ಯಾರ್ಥಿನಿ ಲಿಖಿತಾ ಸ್ವಾತಂತ್ರ್ಯೋತ್ಸವ ಕುರಿತು ಭಾಷಣ ಮಾಡಿದಳು.
ನಾನಾ ಇಲಾಖೆಗಳ ಅಧಿಕಾರಿಗಳಾದ ಜೋ ಪ್ರದೀಪ್ ಡಿಸೋಜ, ಲೀನಾ ಬ್ರಿಟ್ಟೊ, ಮಮ್ತಾಜ್, ಪ್ರಫುಲ್ ರೈ, ಡಾ.ಅಶೋಕ್ ಕುಮಾರ್ ರೈ, ಜಯಶ್ರೀ, ಕವಿತಾ, ನಗರ ಪೊಲೀಸ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ವಂದಿಸಿದರು. ಈ ಸಂದರ್ಭ ನಾನಾ ಇಲಾಖೆಗಳ ಸಿಬಂದಿಗಳನ್ನು ಗೌರವಿಸಲಾಯಿತು. ವಿವರಗಳನ್ನು ಸಿಬಂದಿ ಶ್ರೀಕಲಾ ಕಾರಂತ ವಾಚಿಸಿದರು. ಉಪತಹಸೀಲ್ದಾರ್ ನವೀನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಆರಂಭದಲ್ಲಿ ಪೊಲೀಸ್ ಸಿಬಂದಿಗಳಿಂದ ಪಥಸಂಚಲನ, ಧ್ವಜವಂದನೆ ನಡೆಯಿತು.