ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ನೆರೆಯಿಂದ ತೊಂದರೆಗೊಳಗಾದ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾಜಿ ಸಚಿವ ಬಿ. ರಮಾನಾಥ ರೈ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಸರಪಾಡಿ ಬಳಿ ಅನೇಜಾ ತಿರುವಿನಲ್ಲಿ ರಸ್ತೆ ಕುಸಿತದ ಪ್ರದೇಶವನ್ನೂ ಸಚಿವರು ವೀಕ್ಷಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಾದ ಅಮ್ಮುಂಜೆ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಆಲಡ್ಕ, ಕಂಚಿಕಾರಪೇಟೆ, ನಾವೂರಿನ ಕಡವಿನಬಾಗಿಲು, ಅಜಿಲಮೊಗರು ಹಾಗೂ ಗೂಡಿನಬಳಿ ಗುಡ್ಡ ಕುಸಿತ ಪ್ರದೇಶಕ್ಕೆಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಆಲಡ್ಕದಲ್ಲಿ ಮನೆ ಮುಳುಗಡೆಯಾದ ಸಂತ್ರಸ್ತರು ಸಚಿವರ ಬಳಿ ಅಹವಾಲು ಮಂಡಿಸಿದರು. ಪರ್ಯಾಯ ಜಾಗದ ಸಮಸ್ಯೆ ಕುರಿತು ಮಾಜಿ ಸಚಿವ ಬಿ.ರಮಾನಾಥ ರೈ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ವಿವರಿಸಿದರು. ಸಮಸ್ಯೆ ಪರಿಹರಿಸುವಂತೆ ದ.ಕ.ಜಿಲ್ಲಾಕಾರಿ ಮುಲ್ಲೈ ಮುಗಿಲನ್ ಅವರಿಗೆ ಸಚಿವರು ಸೂಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಕುರಿತು ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.