ಯೂಟ್ಯೂಬ್ ಲಿಂಕ್ ಗಳು:
https://www.youtube.com/watch?v=pfvSvQM6dOk
https://www.youtube.com/watch?v=RDT23xVl4Ks
ಫೊಟೋಗಳು:
ಮಂಗಳವಾರ ದಿನವಿಡೀ ಧಾರಾಕಾರ ಮಳೆಯಾಗಿದೆ. ಜನಜೀವನಕ್ಕೆ ಅಡಚಣೆ ಉಂಟಾಗಿದೆ. ಬಂಟ್ವಾಳ ಪೇಟೆಗೆ ಪ್ರವೇಶಿಸುವ ರಸ್ತೆಗಳೆಲ್ಲವೂ ನೆರೆವಿಮೋಚನಾ ರಸ್ತೆ ಹೊರತುಪಡಿಸಿ ಬಂದ್ ಆಗಿವೆ. ಪಾಣೆಮಂಗಳೂರಿನ ಆಲಡ್ಕದಲ್ಲಿ 20 ಮನೆಗಳು ಬಾಧಿತವಾದರೆ, ಬಂಟ್ವಾಳ ಪೇಟೆಯಲ್ಲೂ ಸರಿಸುಮಾರು ಅಷ್ಟೇ ಮನೆಗಳ ಬುಡದಲ್ಲಿ ನೀರು ಬರುತ್ತಿದೆ. ಅಂಗಡಿ ಮುಂಗಟ್ಟುಗಳು ತಮ್ಮ ಸರಂಜಾಮುಗಳನ್ನು ಜೋಪಾನವಾಗಿಟ್ಟುಕೊಳ್ಳಲು ಸಾಗಿಸುತ್ತಿದ್ದಾರೆ. ಸಂಜೆಯ ವೇಳೆ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಯಲ್ಲಿ ಮೊಣಕಾಲವರೆಗೆ ನೀರು ಬರಬಹುದು ಎಂಬ ಭೀತಿಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಇದು ಬಂಟ್ವಾಳ ಪೇಟೆಯ ಸ್ಥಿತಿಯಾದರೆ, ಇಡೀ ತಾಲೂಕಿನ ಅಲ್ಲಲ್ಲಿ ಭೂಕುಸಿತ, ರಸ್ತೆ ಸಂಚಾರಕ್ಕೆ ಅಡಚಣೆ, ತೋಟಗಳಿಗೆ ಹಾನಿ, ಗಾಳಿ, ಮಳೆಯಿಂದ ಶಾಲೆಗೆ ಸಮರ್ಪಕವಾಗಿ ರಜೆ ದೊರಕದೆ, ವಿದ್ಯಾರ್ಥಿಗಳಿಗೆ ಅಡಚಣೆ ಉಂಟಾದ ಘಟನಾವಳಿಗಳು ನಡೆದಿವೆ.ನಾವೂರಿನ ಕಡವಿನಬಳಿ ಎಂಬಲ್ಲಿ 10 ಮನೆಗಳಿಗೆ ನೀರು ನುಗ್ಗಿದೆ ಶಾಸಕ ರಾಜೇಶ್ ನಾಯ್ಕ್ ಇಡೀ ದಿನ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ತಹಸೀಲ್ದಾರ್ ಅರ್ಚನಾ ಭಟ್ ಸಹಿತ ಅಧಿಕಾರಿಗಳ ತಂಡ ಜತೆಗಿದ್ದು, ಪೂರಕ ವ್ಯವಸ್ಥೆಗೆ ಸಹಕರಿಸುತ್ತಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. . ಬೋಗೋಡಿಯಲ್ಲಿ 8 ಮನೆಗಳು, ಗುಡ್ಡೆಯಂಗಡಿಯಲ್ಲಿ 5 ಮನೆಗಳು ಮತ್ತು ಆಲಡ್ಕ ಭಾಗದಲ್ಲಿ 15ಕ್ಕೂ ಆಧಿಕ ಮನೆಗಳು ಮುಳುಗಡೆಯಾಗಿವೆ ಎಂದು ಸ್ಥಳೀಯ ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ತಿಳಿಸಿದ್ದಾರೆ. ಊಹೆಗೂ ನಿಲುಕದಂತೆ ಹೊಸ ಜಾಗಗಳಿಗೆ ನೀರು ನುಗ್ಗುತ್ತಿರುವ ಕಾರಣ, ಆಡಳಿತಕ್ಕೂ ಇದು ಸವಾಲಾಗಿ ಪರಿಣಮಿಸಿದೆ. ಸುಮಾರು ಆರು ವರ್ಷಗಳ ನಂತರ ಬಂಟ್ವಾಳಕ್ಕೆ ಇಂಥದ್ದೊಂದು ಸ್ಥಿತಿ ಎದುರಾಗಿದೆ. 2019ರಲ್ಲಿ ಬಂಟ್ವಾಳದಲ್ಲಿ ನೇತ್ರಾವತಿ ನದಿ ಉಕ್ಕಿ 11 ಮೀಟರ್ ವರೆಗೆ ಹರಿದಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಬಂಟ್ವಾಳದ ನೇತ್ರಾವತಿ ನದಿ ಅಪಾಯದ ಮಟ್ಟ 8.5 ಮೀಟರ್ ಮೀರಿ 10 ಮೀಟರ್ ಎತ್ತರದಲ್ಲಿ ಸಂಜೆ 6.30ಕ್ಕೆ ಹರಿಯುತ್ತಿತ್ತು. ಇದಿನ್ನೂ ಹೆಚ್ಚಾಗುವ ಸಂಭವವಿದೆ ಎನ್ನಲಾಗಿದ್ದು, ತಾಲೂಕಾಡಳಿತ ಕಟ್ಟೆಚ್ಚರ ವಹಿಸಿದೆ.