ಬಂಟ್ವಾಳ: ಏರ್ಯ ಲಕ್ಷ್ಮೀನಾರಾಯಣ ಆಳ್ವರು ಎಂದಿಗೂ ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಅಂಟಿಸಿ ಕೊಂಡವರಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದುಕೊಂಡರೂ ಕಳಂಕರಹಿತವಾಗಿ ಬದುಕಿರುವುದು ಅವರ ಯೋಗ್ಯತೆಗೆ ಸಂದ ಗೌರವ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಹೇಳಿದರು.
ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್, ಬಂಟ್ವಾಳ ಇದರ ಆಶ್ರಯದಲ್ಲಿ ಏರ್ಯಬೀಡುವಿನಲ್ಲಿ ಭಾನುವಾರ ನಡೆದ ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂತಹ ಸಾಹಿತ್ಯಿಕ ವಾತವರಣವನ್ನು ಕಲ್ಪಿಸಿಕೊಟ್ಟಾಗ ಯುವ ಸಮುದಾಯ ಉತ್ತಮ ದಾರಿಯಲ್ಲಿ ಸಾಗಲು ಸಾಧ್ಯವಿದೆ ಎಂದರು.
ಗೌರವ ಉಪಸ್ಥಿತರಿದ್ದ ಏರ್ಯ ಬೀಡು ಬಾಲಕೃಷ್ಣ ಹೆಗ್ಡೆ ಮಾತನಾಡಿ ಏರ್ಯರು ಓದಾಟ ಮತ್ತು ಓಡಾಟ ಮಾಡಿಕೊಂಡು ಸಾಹಿತ್ಯ ರಚಿಸಿದವರು. ಗ್ರಾಮೀಣ ಭಾಗದ ಈ ಪರಿಸರ ಅವರ ಸಾಹಿತ್ಯ ರಚನೆಗೆ ಪೂರಕವಾಗಿತ್ತು ಎಂದು ತಿಳಿಸಿದರು.
ಏರ್ಯಬೀಡುವಿನ ಆನಂದಿ ಎಲ್. ಆಳ್ವ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಏರ್ಯಬೀಡುವಿನ ರಾಜರಾಂ ರೈ, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜ, ಹೊಟೇಲ್ ಉದ್ಯಮಿ ಚಂದ್ರಹಾಸ ಶೆಟ್ಟಿ, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಏರ್ಯರ ನೆನೆಪು ಮತ್ತು ಓದುವ ಹವ್ಯಾಸದ ಬಗ್ಗೆ ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಕಥೆ ರಚನೆಯ ಬಗ್ಗೆ ತುಳಸಿ ಕೈರಂಗಳ, ಕವಿತೆ ರಚನೆಯ ಬಗ್ಗೆ ಜಯರಾಮ ಪಡ್ರೆ ವಿದ್ಯಾರ್ಥಿಗಳಿಗೆ ಕಾರ್ಯಗಾರ ನಡೆಸಿಕೊಟ್ಟರು.
ಕಾರ್ಯಕ್ರಮ ಸಂಯೋಜಕ ದಾಮೋರ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು. ಕೇಶವ ಎಚ್.ಕಟೀಲು ಕಾರ್ಯಕ್ರಮ ನಿರೂಪಿಸಿದರು.