ಕವರ್ ಸ್ಟೋರಿ

1974ರ ಪ್ರವಾಹಕ್ಕೆ 50 ವರ್ಷದ ನೆನಪು – ಗಮನ ಸೆಳೆಯುತ್ತಿದೆ ಬಂಟ್ವಾಳದ ದಿ. ಡಾ. ನರೇಂದ್ರ ಆಚಾರ್ಯ ತೆಗೆದಿದ್ದ ಫೊಟೋ – 74ರ ಮಹಾನೆರೆಯ ಕಥೆ ಇಲ್ಲಿದೆ

CLICK BY: Dr. NARENDRA ACHARYA

 ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ 1923ರ ಮಾರಿಬೊಳ್ಳ (ಭೀಕರ ಪ್ರವಾಹ)ಕ್ಕೆ ಕಳೆದ ವರ್ಷ ನೂರು ವರ್ಷ ತುಂಬಿತ್ತು. ಇದೀಗ 1974ರಲ್ಲಿ ಕಾಣಿಸಿಕೊಂಡಿದ್ದ ಭೀಕರ ಪ್ರವಾಹಕ್ಕೆ ಈ ವರ್ಷ 50 ತುಂಬುತ್ತಿದೆ. ಅಂದು ಜುಲೈ 26ರಂದು ಶುಕ್ರವಾರ ಪ್ರವಾಹ ಕಾಣಿಸಿಕೊಂಡಿತ್ತು, ಇದೀಗ ಮತ್ತೆ ಜುಲೈ 26 ಕೂಡ ಶುಕ್ರವಾರವೇ ಬರುತ್ತಿರುವುದು ವಿಶೇಷ.

1923ರ ಪ್ರವಾಹದ ಕುರಿತು ಬಂಟ್ವಾಳ, ಪಾಣೆಮಂಗಳೂರು ಭಾಗದ ಕಟ್ಟಡಗಳಲ್ಲಿ ಮುಳುಗಿರುವ ಜಾಗಕ್ಕೆ ಹಾಕಿರುವ ಗುರುತುಗಳನ್ನು ಈಗಲೂ ಕಾಣಬಹುದು. ಅದೇ ಜಾಗದಲ್ಲಿ 1974ರ ಪ್ರವಾಹದ ಗುರುತುಗಳಿವೆ. ಅಂದು ನದಿ ನೀರು ಪೇಟೆಯತ್ತ ನುಗ್ಗಿದ್ದಾಗ, ಬಂಟ್ವಾಳ ಪೇಟೆ ಜನರಿಗೆ ಆಶ್ರಯ ನೀಡಿದ್ದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ

ಡಾ. ನರೇಂದ್ರ ಆಚಾರ್ಯ ಸೆರೆಹಿಡಿದಿದ್ದರು ಚಿತ್ರಗಳು:

ಈ ಕುರಿತು ಕೆಲ ದಿನಗಳ ಹಿಂದೆ 1974ರಲ್ಲಿ ಕ್ಲಿಕ್ ಮಾಡಿದ್ದ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಬಂಟ್ವಾಳದ ವೈದ್ಯರಾಗಿದ್ದ ಡಾ. ನರೇಂದ್ರ ಆಚಾರ್ಯ ಅವರು ನೆರೆ ಬಂದಿದ್ದ ವೇಳೆ ತೆಗೆದ ಕಪ್ಪು ಬಿಳುಪಿನ ಫೊಟೋಗಳು ಇದೀಗ 1974ರ ನೆರೆ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿವೆ. ಅದೀಗ ಅವರ ಪುತ್ರ ಡಾ. ನಿರಂಜನ ಆಚಾರ್ಯ ಸಂಗ್ರಹದಲ್ಲಿದೆ.

ಬೆಳಗ್ಗೆ ನೀರು ವೇಗವಾಗಿ ಏರತೊಡಗಿತ್ತು: ಬಾಳಿಗಾ

ಈ ಕುರಿತು ಮಾತನಾಡಿದ  ಉದ್ಯಮಿ ಲಕ್ಷ್ಮಣ ಅಚ್ಯುತ ಬಾಳಿಗಾ, ನನಗೆ ಈಗ 85 ವರ್ಷ. ಆದರೆ ಆ ಸಂದರ್ಭದ ನೆರೆ ಮತ್ತೆ ಬರಲಿಲ್ಲ. ಆ ಸಂದರ್ಭ ನಾನು ಬಂಟ್ವಾಳದ ದೇವಸ್ಥಾನದ ಪಕ್ಕ ಇದ್ದೆ, ನನ್ನ ಪತ್ನಿ ಈಗಿನ ಬೈಪಾಸ್ ಬಳಿ ಮನೆಯಲ್ಲಿದ್ದರು. ಆದ ದೂರವಾಣಿ ಬಂದದಷ್ಟೇ. ಕರೆ ಮಾಡಿ ಪತ್ನಿಗೆ ತಿಳಿಸಿ, ಪಕ್ಕದ ಸಂಬಂಧಿಕರ ಮನೆಗೆ ತೆರಳಲು ತಿಳಿಸಿದ್ದೆ. ಅದರಂತೆ ಅವರು ಮಕ್ಕಳೊಂದಿಗೆ ತೆರಳಿದ ನೆನಪು ಇನ್ನೂ ಹಸಿರಾಗಿಯೇ ಇದೆ. ಆ ಸಂದರ್ಭ ಇಡೀ ಬಂಟ್ವಾಳ ಪೇಟೆಯವರಿಗೆ ಆಶ್ರಯತಾಣವಾಗಿದ್ದು, ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ. ತಮ್ಮ ದನಕರುಗಳು ಸಾಮಾನು ಸರಂಜಾಮುಗಳೊಂದಿಗೆ ವೆಂಕಟರಮಣ ಹಾಗೂ ಇನ್ನು ಕೆಲವರು ಮಹಾಲಿಂಗೇಶ್ವರ ದೇವಳದಲ್ಲಿ ಆಶ್ರಯ ಪಡೆದರು. ಕೆಲವರು ಪ್ರವಾಸಿ ಮಂದಿರ ಹಾಗೂ ಬೋರ್ಡ್ ಶಾಲೆಗಳನ್ನು ಆಶ್ರಯ ತಾಣವಾಗಿಸಿದರು.

ಮಂಜೇಶ್ವರ ಗಣೇಶ ಮಲ್ಯರು ತಮ್ಮ ಗೋದಾಮಿನಲ್ಲಿದ್ದ ಅವಲಕ್ಕಿ ಮೂಟೆಗಳು ನೆರೆ ನೀರಿನಿಂದ ನಷ್ಟವಾಗದಂತೆ ಎಚ್ಚರ ವಹಿಸಿ ಅವೆಲ್ಲವನ್ನೂ ಹಂಚಿ ಅವರ ಹಸಿವನ್ನು ಇಂಗಿಸಿದರು. ಯುವಕರ ತಂಡವೊಂದು ವೃದ್ಧರು, ಅಶಕ್ತರು, ಮಕ್ಕಳು, ಗರ್ಭಿಣಿ ಯರಿಗೆ ರಕ್ಷಣೆ ಒದಗಿಸಿತ್ತು. ಇಡೀ ಪೇಟೆಯಲ್ಲಿ ರಸ್ತೆಯಲ್ಲಿ ವಾಹನಗಳು ಬಂದಂತೆ ನೆರೆ ನೀರು ನುಗ್ಗಿತ್ತು!!

 ಗೋರೂರು ಹೇಳಿದ್ದು ಕಡಲತಡಿಯ ನೆನಪಿನ ಅಲೆಗಳು ಕೃತಿಯಲ್ಲಿ ಉಲ್ಲೇಖ

ಈ ನೆರೆಯು ಉಂಟುಮಾಡಿದ ಅನಾಹುತದ ಕುರಿತು ಡಾ| ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹೇಳಿದ್ದು ‘ ವಾಮನ ರಾವ್ ಅವರ ‘ಕಡಲ ತಡಿಯ ನೆನಪಿನ ಅಲೆಗಳು’ ಕೃತಿಯಲ್ಲಿ ಉಲ್ಲೇಖವಾಗಿದೆ ಎನ್ನುತ್ತಾರೆ ನಿವೃತ್ತ ಪ್ರೊಫೆಸರ್ ಪ್ರೊ.ರಾಜಮಣಿ ರಾಮಕುಂಜ.

“ಹೃದಯ ಕಲಕುವ ದೃಶ್ಯ ಕಂಡೆ. ಇವರ ನೆರವಿಗೆ ವಿಳಂಬ ಖಂಡಿತ ಸಲ್ಲದು. ಯುದ್ಧದಿಂದ ಜರ್ಝರಿತ ನಾಡಿನಂತಾಗಿದೆ ಬಂಟ್ವಾಳ, ಉಪ್ಪಿನಂಗಡಿ, ಪಾಣೆಮಂಗಳೂರು. ತ್ವರಿತ ಗತಿಯ ಸಹಾಯ ಅಗತ್ಯ” ಎನ್ನುತ್ತಾರೆ. ಈ ನೆರೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಕೆ.ಅರೋರ, ಪೊಲೀಸ್ ಅಧಿಕಾರಿ ಆರ್.ಎಸ್ ಛೋಪ್ರಾ ತಾವು ಅಪಾಯದ ಅಂಚಿನಲ್ಲಿದ್ದೇವೆ ಎಂಬುದನ್ನೂ ಮರೆತು ಕೈಯಲ್ಲಿ ಹುಟ್ಟು ಹಾಕುವ ಸಾಮಾನ್ಯ ಸಣ್ಣ ದೋಣಿಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವರೊಂದಿಗೆ ಪಂಚಾಯತ್ ಕಛೇರಿಯ ಮೇಲಿನಿಂದ ದೋಣಿಯಲ್ಲಿ ಪ್ರವಾಸಿ ಮಂದಿರದತ್ತ ಧಾವಿಸಿದ್ದರು. ಆ ಕಾಲದಲ್ಲೇ ೫೦ ಲಕ್ಷ ರೂ ನಷ್ಟ, ಹತ್ತು ಸಾವಿರ ಮನೆಗಳು ಧರಾಶಾಯಿಯಾಗಿ 50 ಸಾವಿರ ಮಂದಿ ಅನಾಥಗಿದ್ದರು ಎಂಬ ಉಲ್ಲೇಖ ಪುಸ್ತಕದಲ್ಲಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ