ಬಂಟ್ವಾಳ ತಾಲೂಕಿನಾದ್ಯಂತ ಶುಕ್ರವಾರವೂ ಮಳೆ ಮುಂದುವರಿದಿದ್ದು, ಗಾಳಿ, ಸಿಡಿಲು ಗುಡುಗು ಸಹಿತ ಮಳೆಗೆ ಹಲವೆಡೆ ಹಾನಿಯೂ ಸಂಭವಿಸಿದೆ. ಬಂಟ್ವಾಳ ತಾಲೂಕಿನಲ್ಲಿ ಹರಿಯುವ ಜೀವನದಿ ನೇತ್ರಾವತಿ ಬಂಟ್ವಾಳ ಪೇಟೆಯ ತಗ್ಗು ಪ್ರದೇಶ, ಪಾಣೆಮಂಗಳೂರಿನ ಆಲಡ್ಕ ಸಹಿತ ಕೆಲವು ಭಾಗಗಳಲ್ಲಿ ರಸ್ತೆ, ಮನೆ, ಅಂಗಡಿ ಮುಂಗಟ್ಟುಗಳನ್ನು ಪ್ರವೇಶಿಸಿದ್ದು, ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಬೆಳಗಿನ ಹೊತ್ತಿಗೆ ನೇತ್ರಾವತಿ ಅಪಾಯದ ಮಟ್ಟ 8.5 ಮೀಟರ್ ಸನಿಹ ಬಂದಿದ್ದು, ಮಧ್ಯಾಹ್ನದ ವೇಳೆ ಅಪಾಯದ ಮಟ್ಟ ದಾಟಿ ಹರಿಯಲಾರಂಭಿಸಿತು. ಬಿ.ಸಿ.ರೋಡ್, ಬಂಟ್ವಾಳ ಪಾಣೆಮಂಗಳೂರುಗಳ ತಗ್ಗು ಪ್ರದೇಶ ಹಾಗೂ ಪ್ರತಿ ಬಾರಿಯೂ ಮಳೆ ಬಂದಾಗ ನೀರು ನುಗ್ಗುವ ಜಾಗಗಳಾದ ಬಡ್ಡಕಟ್ಟೆಯ ಬಸ್ ನಿಲ್ದಾಣ, ಜಕ್ರಿಬೆಟ್ಟು, ಪಾಣೆಮಂಗಳೂರಿನ ಆಲಡ್ಕ, ಗೂಡಿನಬಳಿಯ ಕಂಚಿಕಾರಪೇಟೆ ಸಹಿತ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದವು. ಬಡ್ಡಕಟ್ಟೆ ಬಸ್ ನಿಲ್ದಾಣಕ್ಕೆ ಬಸ್ಸುಗಳು ಮೊದಲೇ ಬರುವುದಿಲ್ಲ. ನದಿಯನ್ನು ಸೇರುವ ತೋಡು ಸನಿಹವೇ ಇರುವ ಕಾರಣ ನೀರು ಸುಲಭವಾಗಿ ಒಳನುಗ್ಗಿತು. ಬಸ್ತಿಪಡ್ಪು ಪ್ರದೇಶಕ್ಕೂ ಸಂಜೆಯ ವೇಳೆ ನೀರು ಹರಿಯಲಾರಂಭಿಸಿದ್ದು, ರಸ್ತೆಗೆ ನುಗ್ಗಿದೆ. ಮುಂಜಾಗರೂಕತಾ ಕ್ರಮವಾಗಿ ತಾಲೂಕಾಡಳಿತ ಕಂಚಿಕಾರಪೇಟೆಯ ರಸ್ತೆಯನ್ನು ವಾಹನ ಸಂಚಾರಕ್ಕೆ ನಿರ್ಬಂಧಿಸಿದ್ದು, ಆದರೂ ಹೊರಭಾಗಗಳಿಂದ ಅಲ್ಲಿಗೆ ಆಗಮಿಸಿದ ಜನರು ಫೊಟೋ ತೆಗೆಯುವುದರಲ್ಲಿ ತಲ್ಲೀನರಾಗಿದ್ದ ದೃಶ್ಯಗಳು ಕಂಡುಬಂದವು. ಇಂದಿನ ಚಿತ್ರಗಳಿಗೆ ಮುಂದೆ ಓದಿರಿ.