ಬುಧವಾರ ರಾತ್ರಿಯಾಗುತ್ತಿದ್ದಂತೆ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ ಕಾಣಲಾರಂಭಿಸಿದೆ. ರಾತ್ರಿ 7 ಮೀಟರ್ ಎತ್ತರಕ್ಕೆ ನೀರು ಹರಿಯುತ್ತಿದೆ ಎಂದು ಕಂದಾಯ ಇಲಾಖೆಯ ಪ್ರಾಕೃತಿಕ ವಿಕೋಪ ಘಟಕ ಮಾಹಿತಿ ನೀಡಿದೆ.
ದಿನವಿಡೀ ಮಳೆ, ನೀರಿನ ಹರಿವು ಹೆಚ್ಚಳದಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಲಾರಂಭಿಸಿದೆ. ಬಂಟ್ವಾಳದಲ್ಲಿ ಬೆಳಗ್ಗೆ 6.2, ಸಂಜೆಯ ವೇಳೆ 6.5 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನದಿ, ಹೊತ್ತು ಕಳೆಯಲಾರಂಭಿಸಿದಂತೆ 6.7 ಮೀಟರ್ ಎತ್ತರಕ್ಕೆ ಏರಿಕೆ ಕಂಡಿತು. ರಾತ್ರಿ ಮತ್ತೂ ಏರಿಕೆ ಕಂಡಿದೆ. ಘಟ್ಟ ಪ್ರದೇಶದಲ್ಲಿ ಮಳೆಯಾದರೆ ಹಾಗೂ ಪ್ರವಾಹ ಜಾಸ್ತಿಯಾದರೆ, ನೀರಿನ ಮಟ್ಟ ಇನ್ನಷ್ಟು ಎತ್ತರಕ್ಕೆ ಏರುವ ಸಾಧ್ಯತೆಯೂ ಇದೆ. ತಾಲೂಕಾಡಳಿತ ಪ್ರವಾಹ ಎದುರಿಸಲು ಸನ್ನದ್ಧವಾಗಿದ್ದು, ಅಪಾಯದ ಮಟ್ಟ 8.5 ಮೀಟರ್ ಬಂದರೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಹಿನ್ನೆಲೆಯಲ್ಲಿ ನದಿ ತೀರದ ಜನರಿಗೆ ಎಚ್ಚರಿಕೆ ಸೂಚಿಸಲಾಗಿದೆ.